ಭೂ ಮಾಲೀಕರ ಕೆಂಗಣ್ಣಿಗೆ ಬಿದ್ದ ಟೀನೇಜ್ ಲವ್; ಜೈಲಿನಲ್ಲಿ ಕಮರಿದ ಅಂತರ್ಜಾತಿ ಪ್ರೀತಿ!
PRISON STORIES

ಭೂ ಮಾಲೀಕರ ಕೆಂಗಣ್ಣಿಗೆ ಬಿದ್ದ ಟೀನೇಜ್ ಲವ್; ಜೈಲಿನಲ್ಲಿ ಕಮರಿದ ಅಂತರ್ಜಾತಿ ಪ್ರೀತಿ!

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಅಪರಾಧಕ್ಕಾಗಿ ಗರಿಷ್ಟ ಶಿಕ್ಷೆಯಾದ ಹದಿನಾಲ್ಕು ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆಯನ್ನು ಹುಡುಗನಿಗೆ ವಿಧಿಸಿತು. ಆತ ಈಗಲೂ ಶಿಕ್ಷೆ ಅನುಭವಿಸುತ್ತಿದ್ದಾನೆ

ಅವನ ಪ್ರಾಯ 19 ವರ್ಷಗಳು.ರಾಯಚೂರು ಜಿಲ್ಲೆಯ ಒಂದು ಕುಗ್ರಾಮ ಆತನ ಊರು. ಆ ಹಳ್ಳಿಗೆ ನೇರ ಬಸ್ ಸೌಕರ್ಯವಿಲ್ಲ. ಪಕ್ಕದ ಊರಿನವರೆಗೆ ಬೆಳಿಗ್ಗೆ ಮತ್ತು ಸಂಜೆ ಕೇವಲ ಒಂದು ಬಸ್ ಬಂದು ಹೋಗುತ್ತದೆ. ಅಲ್ಲಿಂದ ಇವನ ಊರಿಗೆ ಮೂರು ಕಿಲೋ ಮೀಟರುಗಳ ದೂರ. ಈತನದು ಬಡ ರೈತ ಕುಟುಂಬ. ಮೂರು ಎಕರೆಯಷ್ಟು ಒಣ ಭೂಮಿ ಈತನ ಕುಟುಂಬಕ್ಕಿದೆ. ಬೆಳೆ ಕೈಗೆ ಬರುವುದು ಅಷ್ಟಕ್ಕಷ್ಟೆ. ದಕ್ಷಿಣ ಕರ್ನಾಟಕದ ಒಣ ಭೂಮಿಗೂ ರಾಯಚೂರು ಭಾಗದ ಒಣಭೂಮಿಗೂ ಅಜಗಜಾಂತರ ವ್ಯತ್ಯಾಸ. ಬೇರೆ ಭೂಮಾಲಿಕರ ಬಳಿ ಜೀತ ಮಾಡದಿದ್ದರೆ ಬದುಕು ಸಾಗುವುದಿಲ್ಲ. ಇವನಿಗೆ ಒಬ್ಬ ಅಣ್ಣ, ಇಬ್ಬರು ಅಕ್ಕಂದಿರು. ಅವರು ಯಾರೂ ಓದು ಬರಹ ಕಲಿತಿಲ್ಲ. ಅವರಿಗೆಲ್ಲಾ ಮದುವೆಯಾಗಿ ಮಕ್ಕಳಿವೆ. ಈ ಹುಡುಗ ಮಾತ್ರ ಓದು ಬರಹ ಕಲಿಯುವ ಅವಕಾಶ ಪಡೆದ. ಹತ್ತಿರ ಇರುವ ಪೇಟೆಗೆ ಹೋಗಿ ಕಾಲೇಜು ಮೆಟ್ಟಿಲು ಹತ್ತಿದ್ದ. ಅಪ್ಪ ಅಮ್ಮ ಇಬ್ಬರೂ ಜೀತ ಮಾಡುತ್ತಿದ್ದರು. ಅಣ್ಣನೂ ಅವರ ಜೊತೆಗೂಡಿದ್ದ. ಈ ಹುಡುಗ ಕೂಡ ಹೆಚ್ಚುವರಿ ಖರ್ಚಿಗೆ ಆಗುತ್ತದೆಂದು ಆಗಾಗ್ಗೆ ಕೂಲಿ ನಾಲಿಗೆ ಹೋಗುತ್ತಿದ್ದ.

ಮನೆಯಿತ್ತು. ಮನೆಯೆಂದರೆ ಗುಡಿಸಲು. ಅಡುಗೆ ಮಾಡುವುದು, ಮಲಗುವುದು ಎಲ್ಲಾ ಹೊರಗಡೆ. ಮಳೆಗಿಳೆ ಬಂದಾಗ ಮಾತ್ರ ಗುಡಿಸಲ ಒಳಗಡೆ ಮುದುಡಿ ಮಲಗಬೇಕು. ಮಳೆ ಸಾಮಾನ್ಯವಾಗಿ ಕಡಿಮೆಯೇ ಇರುತ್ತದೆ. ಆರೇಳು ವರ್ಷಗಳ ಹಿಂದೆ ಚಂಡಮಾರುತದ ಪ್ರಭಾವದಿಂದ ಭಾರಿ ಹಾನಿಗಳು ಈ ಭಾಗದಲ್ಲಿ ಆಗಿತ್ತು. ಇವರ ಗುಡಿಸಲೂ ಹಾರಿ ಹೋಗಿತ್ತು.

ಹರೆಯದ ಪ್ರಾಯ. ಮನುಷ್ಯ ಸಹಜವಾದ ಆಕರ್ಷಣೆ, ಬಯಕೆ ಇವನಲ್ಲೂ ಮೂಡಿದ್ದವು. ಪ್ರೀತಿ, ಪ್ರೇಮಗಳ ರಮ್ಯ ಕಲ್ಪನೆಗಳು ಗರಿಗೆದರಿದ್ದವು. ಕಾಲೇಜು ಮೆಟ್ಟಿಲು ಹತ್ತಿದ್ದರಿಂದ ಅವುಗಳಿಗೆ ಮತ್ತಷ್ಟು ಬಣ್ಣಗಳು ಸೇರಿತ್ತು. ಇವನ ಊರಿನಲ್ಲಿಯೇ ಇರುವ ಒಬ್ಬಳು ಹುಡುಗಿಯ ಪರಿಚಯವಿತ್ತು. ಬರಬರುತ್ತಾ ಅದು ಮೋಹ, ಆಕರ್ಷಣೆಗೆ ತಿರುಗಿತು. ನಂತರ ಅದು ಪ್ರೇಮವೆಂದು ಇಬ್ಬರೂ ಅಂದುಕೊಂಡರು. ಆಕೆಯೂ ಗುಡಿಸಲು ವಾಸಿಯೇ. ಅಮ್ಮ ಅಪ್ಪನ ಜೊತೆ ಕೂಲಿ ಮಾಡುತ್ತಿದ್ದಳು. ಇಬ್ಬರು ಅಕ್ಕಂದಿರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆಗಿತ್ತು. ಕಾಲೇಜು ಮೆಟ್ಟಿಲು ಹತ್ತಿದ್ದ ಈ ಹುಡುಗನ ಮೇಲೆ ಆಕರ್ಷಣೆಯಾಗಲು ಬೇರೆ ಕಾರಣ ಆಕೆಗೆ ಬೇಕಿರಲಿಲ್ಲ. ಆಕೆಗೆ ಇನ್ನೂ ಹದಿನೈದು ವರ್ಷ ತುಂಬಿರಲಿಲ್ಲ. ಈ ಭಾಗದಲ್ಲಿನ ಮದುವೆಗಳಿಗೆ ವಯಸ್ಸು ಒಂದು ಪ್ರಮುಖ ಮಾನದಂಡವಲ್ಲ. ಹನ್ನೆರಡು ವರ್ಷಕ್ಕೆ ಮದುವೆ ಮುಗಿಸುವುದು, ತೊಟ್ಟಿಲಲ್ಲಿಯೇ ಮದುವೆ ಮಾಡುವುದು ಈ ಭಾಗದಲ್ಲಿ ಮಾಮೂಲಿ ವಿಚಾರ. ಕಾನೂನಿನ ಪ್ರಕಾರ ಇವೆಲ್ಲಾ ಬಾಲ್ಯ ವಿವಾಹಗಳು. ಆದರೆ ಇವರಿಬ್ಬರು ತಮ್ಮ ವಯಸ್ಸಿನ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅವರ ಚಿಂತೆ ಒಂದು ಮಾತ್ರವಾಗಿತ್ತು. ಅದೆಂದರೆ  ತಮ್ಮ ಮದುವೆಗೆ ಮನೆಯವರ ಒಪ್ಪಿಗೆ ವಿಚಾರ. ಕಾರಣ ಇಬ್ಬರದೂ ಬೇರೆ ಜಾತಿ. ಈತ ಕುರುಬ, ಆಕೆ ಬೇಡ ಪಂಗಡದವಳು. ಮನೆಯವರ ಒಪ್ಪಿಗೆ ಸಿಗೋ ಪ್ರಶ್ನೆಯೇ ಇಲ್ಲ ಎನ್ನೋದು ಇಬ್ಬರಿಗೂ ಗೊತ್ತಿತ್ತು.ಅದನ್ನೆಲ್ಲಾ ಗಹನವಾಗಿ ಯೋಚಿಸುವಷ್ಟು ಪ್ರಬುದ್ಧತೆ ಬರುವ ವಯಸ್ಸು ಹಾಗೂ ವಾತಾವರಣ ಅವರದಾಗಿರಲಿಲ್ಲ

ಈ ರೀತಿಯ ಪ್ರೇಮಿಗಳು ಸರಳವಾಗಿ ಮಾಡುವಂತೆ ಊರು ಮನೆ ಬಿಟ್ಟು, ದೂರ ಎಲ್ಲಾದರೂ ಹೋಗಿ ಮದುವೆಯಾಗಿ ಸಂಸಾರ ಹೂಡುವ ಯೋಜನೆ ಅವರದು. ಅದೇ ರೀತಿ ಮಾಡಿದರು. ಇಬ್ಬರೂ ಮನೆಯವರಿಗೆ ಹೇಳದೆ ಊರು ಬಿಟ್ಟು ಹುಡುಗನ ಸ್ನೇಹಿತನೊಬ್ಬನ ಸಹಾಯದಿಂದ ಬೆಂಗಳೂರು ಸೇರಿಕೊಂಡರು. ವಾರದೊಳಗೆ ಮದುವೆ ಆಗಿ ಸಂಸಾರ ಶುರು ಆಯಿತು. ಹುಡುಗ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದರಲ್ಲಿ ಗಾರೆ ಸಹಾಯಕನಾಗಿ ಸೇರಿಕೊಂಡ. ವಾಸ ಸ್ನೇಹಿತನ ಪುಟ್ಟ ಶೆಡ್ಡಿನಲ್ಲಿ. ಉತ್ತರ ಕರ್ನಾಟಕದ ಬಡಪಾಯಿಗಳು ಬೆಂಗಳೂರಿಗೆ ಬಂದರೂ ಗುಡಿಸಲು ವಾಸ ಮಾತ್ರ ತಪ್ಪೋದಿಲ್ಲ. ಮನೆಯಿಂದ ಬರುವಾಗ ಹೊಂದಿಸಿಕೊಂಡು ಬಂದಿದ್ದ ಅಲ್ಪಹಣ ಈಗಾಗಲೇ ಕರಗಿತ್ತು.ಊರಿನಲ್ಲಿ  ಆಗಲೇ ಬೆಂಕಿ ಬಿದ್ದಿತ್ತು. ಗುಸುಗುಸು ಶುರುವಾಗಿ ಜಗಳ ಆರಂಭವಾಗಿತ್ತು. ಜಾತಿ ಪ್ರಶ್ನೆ ಬೇರೆ ಇದ್ದಿದ್ದರಿಂದ ತುಪ್ಪ ಸುರಿಯುವವರಿಗೆ ಸುಲಭವಾಗಿತ್ತು. ತನ್ನ ಮನೆಗೆ ಜೀತಕ್ಕೆ ಬರದೆ ಪಕ್ಕದ ಹಳ್ಳಿಯ ಜಮೀನ್ದಾರನ ಮನೆಗೆ ಜೀತಕ್ಕೆ ಹೋಗುತ್ತಿದ್ದ ಹುಡುಗನ ಮನೆಯವರ ಮೇಲೆ ಊರಿನ ದೊಡ್ಡ ಜಮೀನ್ದಾರ ಮೊದಲೇ ಗರಂ ಆಗಿದ್ದ. ಈ ಅವಕಾಶವನ್ನು ಆತ ಬಳಸಿಕೊಂಡ. ಹುಡುಗಿ ಮನೆಯವರು ಬೇರೆ ಇವನ ಮನೆಯಲ್ಲೇ ಜೀತಕ್ಕಿದ್ದರು. ಈ ಪ್ರೇಮ ಪ್ರಕರಣದಲ್ಲಿ ಹಲವಾರು ಕೈಗಳು ಆಡಲಾರಂಭಿಸಿದವು. ಪರಿಣಾಮ ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲು ಹತ್ತಿತು. ಹುಡುಗನ ಮನೆಯವರ ಮೇಲೆ ಅಪಹರಣ ಪ್ರಕರಣ ದಾಖಲಾಯಿತು. ಊರಿನ ದೊಡ್ಡ ಕೈ ಹುಡುಗಿ ಮನೆಯವರ ಪರವಿದ್ದುದರಿಂದ ಪೊಲೀಸರು ಹುಡುಗಿ ಹಾಗೂ ಆಕೆಯ ಮನೆಯವರ ಬಗ್ಗೆ ಬಹಳ ಕಾಳಜಿ ವಹಿಸುತ್ತಿರುವ ರೀತಿ ದೂರು ದಾಖಲಿಸಿಕೊಂಡರು. ಹುಡುಗನ ಅಪ್ಪ, ಅಮ್ಮ ಮತ್ತು ಅಣ್ಣನನ್ನು ಬಂಧಿಸಿ ಜೈಲಿಗೆ ತಳ್ಳಿದರು.

ಈ ಹುಡುಗ ಹುಡುಗಿ ಒಂದು ತಿಂಗಳವರೆಗೆ ತಮ್ಮ ಕಡೆಯ ಯಾರನ್ನೂ ಸಂಪರ್ಕಿಸಲಿಲ್ಲ. ನಂತರ ಏನನಿಸಿತೋ, ಮನೆಯವರ  ಹಾಗೂ ಊರಿನ ನೆನಪು ಕಾಡಿರಬೇಕು. ಊರಿನಲ್ಲಿ ಇದ್ದ ಹುಡುಗನ ಸಂಬಂಧಿಕರಿಗೆ ಫೋನ್ ಕರೆ ಮಾಡಿದರು. ಆಗಲೇ ಗೊತ್ತಾಗಿದ್ದು ಮನೆಯವರ ಬಂಧನವಾಗಿದೆ ಎಂದು. ಅದೇ ಸಮಯಕ್ಕೆ ಪೊಲೀಸರಿಗೂ ಇವರು ಬೆಂಗಳೂರಿನಲ್ಲಿ ಇರುವ ವಿಷಯ ಗೊತ್ತಾಗಿಬಿಟ್ಟಿತ್ತು. ಇಬ್ಬರನ್ನೂ ಹಿಡಿದು ರಾಯಚೂರಿಗೆ ಕರೆದೊಯ್ದರು. ಹುಡುಗನ ಮೇಲೆ ಈಗ ಅಪಹರಣದ ಜೊತೆಗೆ ಅತ್ಯಾಚಾರ ಪ್ರಕರಣ ಸೇರಿತು. ಹುಡುಗನಿಗೆ ಹೊಡೆದು ಜೈಲಿಗೆ ಕಳುಹಿಸಿದರು. ಹುಡುಗಿ ತನ್ನ ಮನೆಯವರ ಜೊತೆ ತೆರಳಲು ಒಪ್ಪದೇ ಇದ್ದುದರಿಂದ ಮಹಿಳಾ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಿದರು.

ಇವರು ನಮ್ಮ ಮದುವೆ ಆಗಿದೆ, ಪ್ರೀತಿಸಿದ್ದೇವೆ ಎಂದೆಲ್ಲಾ ಹೇಳಿದರೂ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕೇಳುವುದಕ್ಕೂ ಕಾನೂನು ಪ್ರಕಾರ ಸಾಧ್ಯವಿರಲಿಲ್ಲ.ಮೊದಲಿದ್ದ, ಪ್ರೀತಿ, ಪ್ರೇಮದ ಬಗೆಗಿನ ರಮ್ಯತೆ, ರೋಮಾಂಚನಗಳೆಲ್ಲಾ ಈಗ ಜರ್ರನೇ ಇಳಿದು ಬಿಟ್ಟಿತ್ತು. ಹುಡುಗಿ ಇನ್ನೂ ಎಳೇ ಬಾಲೆ. ಹಾಗಾಗಿ ಆಕೆಗೆ ಸಹಜವಾಗಿ ಇದನ್ನೆಲ್ಲಾ ತಾಳಿಕೊಳ್ಳೋದು ಬಹಳ ಕಷ್ಟವಾಯಿತು. ಅವರಿಬ್ಬರಿಗೂ ಇದೆಲ್ಲದರ ಕಲ್ಪನೆ ಕೂಡ ಇರಲಿಲ್ಲ. ಮೆಚ್ಚಿ ಮದುವೆಯಾದ ಹುಡುಗ ಜೈಲುಪಾಲು; ಹೊರಬರುತ್ತಾನೊ ಇಲ್ಲವೋ ಗೊತ್ತಿಲ್ಲ. ಮುಂದೆ ಹೇಗೆ ಬದುಕೋದು, ಎಲ್ಲಿ ಹೋಗೋದು, ಆಕೆಗೆ ಎಟುಕಲಾರದ ಪ್ರಶ್ನೆಗಳು. ಬೇರೆಯವರ ಬೆಂಬಲದ ಕಲ್ಪನೆ ಕೂಡ ಆಕೆಗಿಲ್ಲ. ಮನೆಯವರು ಬಿಟ್ಟರೆ ಬೇರೆ ಗತಿಯಿಲ್ಲದ ಸ್ಥಿತಿ. ತನ್ನ ಮನಸ್ಸಿನ ದುಗುಡಗಳನ್ನು ಹಂಚಿಕೊಂಡು ಸಲಹೆ ಪಡೆಯಲು ಕೂಡ ಯಾರೂ ಇಲ್ಲ. ಎಲ್ಲವೂ ಅಯೋಮಯ.

ಮನೆಯವರು ಮತ್ತು ಪೋಲಿಸರದು ನಿರಂತರ ಒತ್ತಡ ಬೇರೆ. ಹುಡುಗನೇ ಅಪಹರಣ ಮಾಡಿ ಅತ್ಯಾಚಾರ ಮಾಡಿದ ಎಂದು ಹೇಳಿಕೆ ನೀಡಲು ಒತ್ತಾಯ. ಅನಿವಾರ್ಯ ಸ್ಥಿತಿಯಿಂದಾಗಿ ಹುಡುಗಿ ಪೊಲೀಸರು ಹೇಳಿದಂತೆ ಹೇಳಿಕೆಗೆ ಹೆಬ್ಬೆಟ್ಟು ಒತ್ತಲು ತಯಾರಾದಳು. ಮನೆಯವರೊಂದಿಗೆ ತೆರಳಲು ಸಮ್ಮತಿಸಿದ್ದರಿಂದ ಸಂರಕ್ಷಣಾ ಕೇಂದ್ರದ ಬಂಧನದಿಂದ ಹೊರಬರಲು ಸಾಧ್ಯವಾಯಿತು. ಆಕೆಯ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲಾಯಿತು. ವಾಸ್ತವ ಸತ್ಯ ಮಾತ್ರ ಬೇರೆಯೇ ಉಳಿದು ಬಿಡಬೇಕಾಯಿತು.ಹುಡುಗನ ಮನೆಯವರು ಜೈಲು ಪಾಲಾಗಿದ್ದರಿಂದ ಆ ಮನೆಯ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಮನೆಯಲ್ಲಿ ಅತ್ತಿಗೆ ಹಾಗು ಪುಟ್ಟ ಮಕ್ಕಳು ಮಾತ್ರ. ನ್ಯಾಯಾಲಯದಲ್ಲಿ  ವಕೀಲರನ್ನು ನೇಮಿಸಿಕೊಂಡು ಜಾಮೀನಿಗೆ ಪ್ರಯತ್ನಿಸಲು ಹರಸಾಹಸ ಮಾಡಬೇಕಾಯಿತು. ಹತ್ತಾರು ಸಾವಿರ ಸಾಲದ ಹೊಸ ಹೊರೆ ತಲೆಯ ಮೇಲೆ ಬಿತ್ತು. ಕೊನೆಗೆ ಐದು ತಿಂಗಳು ಕಳೆದ ಮೇಲೆ ಹುಡುಗನ ಅಪ್ಪ, ಅಮ್ಮ ಹಾಗೂ ಅಣ್ಣನಿಗೆ ಜಾಮೀನು ದೊರೆತು ಹೇಗೋ ಮಾಡಿ ಜಾಮೀನುದಾರರನ್ನು ಹೊಂದಿಸಿ ಬಿಡುಗಡೆಯಾದರು. ಹುಡುಗನಿಗೆ ಜಾಮೀನು ನಿರಾಕರಿಸಲ್ಪಟ್ಟು ಆತ ಜೈಲಲ್ಲೇ ಇರಬೇಕಾಯಿತು.


       ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ರಾಯಚೂರು ಜಿಲ್ಲೆ ಹೈದರಾಬಾದ್ ಕರ್ನಾಟಕದ ಅತಿ ಹಿಂದಿಳಿದ ಭಾಗಗಳಲ್ಲಿ ಒಂದು. ಆರ್ಥಿಕತೆ, ಶಿಕ್ಷಣ, ಮೂಲ ಸೌಲಭ್ಯ, ನಾಗರಿಕ ಸೌಲಭ್ಯ, ಕೃಷಿ, ಕೈಗಾರಿಕೆ, ಉದ್ಯೋಗಾವಕಾಶ ಹೀಗೆ ಎಲ್ಲದರಲ್ಲೂ ಬಹಳ ಹಿಂದುಳಿದಿದೆ. ಸಾವಿರಾರು ಎಕರೆ ಭೂಮಿ ಹಿಡಿದಿಟ್ಟುಕೊಂಡಿರುವ ಭೂಮಾಲಿಕರು ಇಲ್ಲಿದ್ದಾರೆ. ಕನಿಷ್ಟ ಮೂರು ಹಳ್ಳಿಗಳಿಗೆ ಒಬ್ಬರಾದರೂ ನೂರಾರು ಏಕರೆ ಭೂಮಿ ಇಟ್ಟುಕೊಂಡಿರುವವರು ಸಿಗುತ್ತಾರೆ. ಇವರುಗಳೇ ಈ ಭಾಗದ ಆರ್ಥಿಕತೆ, ಸಾಮಾಜಿಕ ಹಾಗೂ ರಾಜಕೀಯಗಳನ್ನು ತೀರ್ಮಾನಿಸುವವರು. ಸಹಜವಾಗೆ ಇಲ್ಲಿ ಹಳೇ ಊಳಿಗಮಾನ್ಯ ಭೂ ಸಂಬಂಧಗಳಾದ ಜೀತಗಾರಿಕೆ, ವಸ್ತು ವಿನಿಮಯ ಪದ್ದತಿ, ಬಾಲ್ಯ ವಿವಾಹ, ಬಸವಿ ಬಿಡುವುದು, ಜಾತಿ ದೌರ್ಜನ್ಯಗಳು ಹೆಚ್ಚಾಗಿ ಇವೆ. ಭೂಹೀನ ರೈತರೆ ಇಲ್ಲಿ ಹೆಚ್ಚಿನವರು.ಹುಡುಗ ಆರಂಭದಲ್ಲಿ ತೀವ್ರ ಆಘಾತಕ್ಕೆ ಒಳಗಾಗಿದ್ದ. ಮೆಚ್ಚಿ ಮದುವೆಯಾದ ಹೆಂಡತಿ ಕೈ ಬಿಟ್ಟಿದ್ದನ್ನು ನೆನೆದು ಕಣ್ಣೀರಿಟ್ಟ. ಭವಿಷ್ಯದ ಕುರಿತು ಚಿಂತಿತನಾದ. ರಾಯಚೂರು ಜೈಲಿನಲ್ಲಿ ಇರುವ ನೂರೈವತ್ತು ಬಂಧಿಗಳಲ್ಲಿ ನೂರರಷ್ಟು ಜನ ಇದೇ ರೀತಿಯ ಪ್ರಕರಣಗಳಲ್ಲಿ ಸಿಲುಕಿರುವವರೆ ಎಂದು ತಿಳಿದಾಗ ಸ್ವಲ್ಪ ಸುಧಾರಿಸಿದ.

ಆ ಎಲ್ಲರ ಮೇಲೂ ಅಪಹರಣ ಹಾಗೂ ಅತ್ಯಾಚಾರದ ಪ್ರಕರಣಗಳು ದಾಖಲಾಗಿದ್ದವು. ಬಹುತೇಕರು ಇವನಷ್ಟೇ ವಯಸ್ಸಿನವರಾಗಿದ್ದರು. ಅದರಲ್ಲಿ ನಿಜವಾಗಿಯೂ ಅತ್ಯಾಚಾರ ಮಾಡಿ ಸಿಲುಕಿಕೊಂಡವನು ಒಬ್ಬ ಮಾತ್ರ. ಉಳಿದಂತೆ ಪ್ರೀತಿ ಪ್ರೇಮದ ಮದುವೆ ಗುಂಗಿನಲ್ಲಿ ಸಿಲುಕಿದವರಾಗಿದ್ದರು.ವಿಚಾರಣೆ ಮೂರು ವರ್ಷಗಳ ಕಾಲ ನಡೆಯಿತು. ಹುಡುಗಿಯ ಮನಸ್ಸಿನಿಂದ ಹುಡುಗ, ಮದುವೆ, ಗಂಡ ಎಂಬೆಲ್ಲಾ ವಿಚಾರಗಳು ಬಲು ದೂರ ಹೋಗಿ ಆಗಿತ್ತು. ಅಷ್ಟರಲ್ಲಿ ಆಗಲೇ ಕೃಷ್ಣ ನದಿಯಲ್ಲಿ ಸಾಕಷ್ಟು ನೀರೂ ಹರಿದಿತ್ತು. ಹಳ್ಳಿ ಈ ಘಟನೆಯನ್ನು ಮರೆಯಲಾರಂಭಿಸಿತ್ತು. ಹುಡುಗಿ ತಾನು ಹಿಂದೆ ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಗೆ ಅಂಟಿಕೊಂಡಳು. ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯವು ಹುಡುಗನ ತಂದೆ ತಾಯಿ ಹಾಗೂ ಅಣ್ಣನನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿತು. ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಅಪರಾಧಕ್ಕಾಗಿ ಗರಿಷ್ಟ ಶಿಕ್ಷೆಯಾದ ಹದಿನಾಲ್ಕು ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆಯನ್ನು ಹುಡುಗನಿಗೆ ವಿಧಿಸಿತು. ಆತ ಈಗಲೂ ಶಿಕ್ಷೆ ಅನುಭವಿಸುತ್ತಿದ್ದಾನೆ.