ಮಾಟಮಂತ್ರದ ಅನುಮಾನ; ಕಾರಾಗೃಹದಲ್ಲಿ ದಲಿತ ಕುಟುಂಬದ ಬದುಕಿನ ಪಯಣ!
PRISON STORIES

ಮಾಟಮಂತ್ರದ ಅನುಮಾನ; ಕಾರಾಗೃಹದಲ್ಲಿ ದಲಿತ ಕುಟುಂಬದ ಬದುಕಿನ ಪಯಣ!

ಅವರದ್ದು ಬಡ ರೈತ ಕುಟುಂಬ. ಜಾತಿ ಹಿನ್ನೆಲೆ ದಲಿತ. ಒಂದೆರಡು ಏಕರೆ ಒಣ ತುಂಡು ಭೂಮಿ ಇದೆ. ಹಾಸನ ಬಾಗದವರು. ಅವರದು ಎರಡು ಹೆಣ್ಣು ಮಕ್ಕಳು ಹಾಗೂ ಮೂರು ಜನ ಗಂಡು ಮಕ್ಕಳ ಕುಟುಂಬ. ಅವರಲ್ಲಿ ಎಲ್ಲರಿಗಿಂತ ಕೊನೆಯ ಮಗ ಮಾತ್ರ ಪಿಯುಸಿವರೆಗೆ ಕಲಿತವ. ಕೂಲಿನಾಲಿಯೇ ಪ್ರಧಾನ ಆದಾಯ. ಒಣ ಭೂಮಿಯಲ್ಲಿ ಕಷ್ಟಪಟ್ಟು ಗೇಯ್ದರೂ ಎಲ್ಲರ ಹೊಟ್ಟೆ ತುಂಬುವುದಿಲ್ಲ. ಇನ್ನು ಹಬ್ಬ, ಹರಿದಿನ, ಜಾತ್ರೆ, ಮದುವೆ, ಬಟ್ಟೆಬರೆ, ರೋಗ ರುಜಿನಗಳ ಕಡೆ ಗಮನ ಕೊಡಬೇಕೆಂದರೆ ಇಕ್ಕಟ್ಟು ಹಾಗೂ ಬಿಕ್ಕಟ್ಟಿನ ವಿಷಯ. ಸಾಮಾಜಿಕ ಮನ್ನಣೆ ದಲಿತರಿಗೆ ಹೇಗಿರುತ್ತದೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇವರ ಅಕ್ಕಪಕ್ಕ ಇರುವವರು ಕೂಡ ದಲಿತರೆ. ಅವರಲ್ಲಿ ಹಲವರು ಇವರಿಗೆ ನೆಂಟರೆ. ಇವರ ಮನೆಯ ಹೆಣ್ಣು ಮಕ್ಕಳಿಗೆ ಹೇಗೋ ಮದುವೆ ಮಾಡಿಸಿದ್ದರು.

ಇವರ ಮನೆಯವರಿಗೆ ತಮ್ಮ ಮೇಲೆ ಮಾಟಮಂತ್ರ ಮಾಡಿಸಲಾಗುತ್ತಿದೆ ಎಂಬ ಅನುಮಾನ ಅದ್ಯಾವಾಗ ಇವರ ತಲೆಹೊಕ್ಕಿತೊ ಗೊತ್ತಿಲ್ಲ. ಕಾರಣ ಇವರು ಮಾಡೊ ಕೆಲಸಕಾರ್ಯಗಳು ಯಾವುದೂ ಕೈ ಹಿಡಿಯುತ್ತಿರಲಿಲ್ಲವಂತೆ. ಮನೇಲಿ ಎಲ್ಲರಿಗೂ ಕಾಯಿಲೆ ಬರುತ್ತಿದ್ವಂತೆ. ಹೊಲದಲ್ಲಿ ಸರಿಯಾಗಿ ಬೆಳೆ ಬರದೇ ಇರಲು ಕೂಡ ಮಾಟ ಮಾಡಿರೋದೆ ಕಾರಣ ಅನ್ನೋದೆ ಇವರ ಬಲವಾದ ನಂಬಿಕೆ. ಅದನ್ನು ಮಾಡುತ್ತಿರುವವರು ಯಾರೆಂಬ ಬಗ್ಗೆ ಮೊದಲಿಗೆ ಇವರು ಅಂದಾಜು ಮಾಡಿರಲಿಲ್ಲ.

ನಂತರ ಪಕ್ಕದ ಮನೆಯವರೇ ಅನ್ನೋ ಗುಮಾನಿ ಶುರುವಾಯಿತು. ಇವರ ತಲೆಯಲ್ಲಿ ಅನುಮಾನದ ಹುಳ ಯಾವಾಗ ಹೊಕ್ಕಿತೋ ಅಲ್ಲಿಂದ ಶುರುವಾಯಿತು ಜಗಳಗಳು. ಯಾವುದೇ ಸಮಸ್ಯೆಗಳನ್ನು ಆರಂಭದಲ್ಲೇ ಸರಿಯಾಗಿ ಪರಿಹರಿಸದಿದ್ದರೆ ಅದು ಹೋಗೋದು ವಿಕೋಪಕ್ಕೆ. ಇಲ್ಲಿ ಅದು ಮಾಟಮಂತ್ರವೆಂಬ ಮೂಢನಂಬಿಕೆಯ ಹಿನ್ನೆಲೆ ಇದ್ದ ಕಾರಣ, ಪರಿಹಾರ ಅಷ್ಟು ಸುಲಭದ್ದಲ್ಲ. ಹಾಗಾಗಿ ಅದು ದಿನೇದಿನೇ ವಿಕೋಪಕ್ಕೆ ಹೋಗತೊಡಗಿತು. ಹೀಗೆ ಸಾಗಿದ ಜಗಳ ಬಡಿಗೆ, ಕತ್ತಿ ಹಿಡಿದು ಬಡಿದಾಡುವ ಹಂತಕ್ಕೆ ತಲುಪಿ ಮಾಟಮಂತ್ರ ಮಾಡುತ್ತಿದ್ದಾರೆಂಬ ಆರೋಪ ಹೊತ್ತುಕೊಂಡ ಕುಟುಂಬದ ಒಬ್ಬರ ಸಾವಿಗೆ ಕಾರಣವಾಯಿತು. ಆಕ್ರೋಶದ ಭರದಲ್ಲಿ ಇವರು ಹೊಡೆದ ಹೊಡೆತಕ್ಕೆ ಅವರ ಪ್ರಾಣವೇ ಹಾರಿಹೋಯಿತು.

ಇದುವರೆಗೆ ಇವರು ಅಂದುಕೊಂಡಿದ್ದು ಮಾಟಮಂತ್ರವೆಂಬ ಅನುಮಾನ. ಆದರೆ ಈಗ ನಿಜವಾದ ಕಾಟಗಳು ಆರಂಭವಾದವು. ಕೊಲೆ ದೂರು ದಾಖಲಾಗಿ ಇವರ ಮನೆಯ ಮೂರೂ ಗಂಡು ಮಕ್ಕಳು ಕಾರಾಗೃಹದ ಪಾಲಾದರು. ಮಾಟಮಂತ್ರದಿಂದ ಇವರಿಗೆ ಏನೇನಾಯಿತೋ ಗೊತ್ತಿಲ್ಲ. ಆದರೆ ಈಗ ಇವರ ಹೊಲ ಬೀಳು ಬಿಡಬೇಕಾದ ಸ್ಥಿತಿ, ಮನೆಯವರು ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಯಿಂದ ಕಕ್ಕಾಬಿಕ್ಕಿ.

ಹೀಗೆ ಕಾರಾಗೃಹ ಜೀವನದ ಆರಂಭವಾಯಿತು. ಮನೆಯಂಗಳದಷ್ಟು ಇದ್ದ ಜೈಲಿನ ಆವರಣದಲ್ಲಿ ಮಾತ್ರ ತಿರುಗಾಡಲು ಅವಕಾಶ. ಅದೂ ಒಂದೆರಡು ಗಂಟೆ ಮಾತ್ರ. ಉಳಿದಂತೆ ಹಗಲೂ ರಾತ್ರಿ ಅರೆಕತ್ತಲೆ ಕೋಣೆಯಲ್ಲೇ ಮುದುಡಿಕೊಂಡಿರಬೇಕು. ಕಾರಾಗೃಹದಲ್ಲಿ ನೀಡುವ ಊಟ ತಿಂಡಿಗಳನ್ನು ನಾಲಿಗೆಗೆ ಮುಟ್ಟಿಸಲೇ ಆಗುತ್ತಿರಲಿಲ್ಲ. ನಿದ್ರೆ, ನೆಮ್ಮದಿ, ಸಹಜತೆ ಇಲ್ಲದೆ ಒದ್ದಾಟ. ಮನೆ ಕತೆ ನೆನೆದು ದಿನದಿನವೂ ಗೋಳು, ಕಣ್ಣೀರು. ಹೊಟ್ಟೆಗೆ ಅನ್ನ ಸೇರುತ್ತಿಲ್ಲ. ಕಣ್ಣಿಗೆ ನಿದ್ರೆ ಹತ್ತುತ್ತಿಲ್ಲ .

ಕಷ್ಟ ಹಂಚಿಕೊಳ್ಳಲು ಆತ್ಮೀಯರೆನಿಸಿಕೊಂಡವರೂ ಇಲ್ಲ. ಗ್ರಾಮೀಣ ಹಿನ್ನೆಲೆಯಾದ್ದರಿಂದ ಸಂಕೋಚ, ಭಯ ಬೇರೆ. ಮನೆಯವರಿಗಿರುವ ಆತಂಕವೋ ಹತ್ತು ಹಲವು. ಒಬ್ಬ ದುಡಿಯುವ ಸದಸ್ಯನನ್ನು ಕಳೆದುಕೊಂಡು ಪಕ್ಕದ ಮನೆಯಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದ್ದರೆ, ಇದ್ದ ಗಂಡು ಮಕ್ಕಳೆಲ್ಲಾ ಜೈಲುಪಾಲಾಗಿರುವ ಸಂಕಟ ನೋವುಗಳಿಂದ ಇವರ ಮನೆಯಲ್ಲೂ ಸೂತಕದ ಛಾಯೆ. ನಗು, ಮಾತುಕತೆ ಎಲ್ಲಾ ಬಂದ್. ಇಲ್ಲಿ ಯಾರೂ ಯಾರ ಆಸ್ತಿಯನ್ನೂ ಹೊಡೆದಿರಲಿಲ್ಲ. ಮೋಸ ಕೂಡ ಮಾಡಿರಲಿಲ್ಲ. ಕೇವಲ ಮಾಟಮಂತ್ರ ಮಾಡುತ್ತಿದ್ದಾರೆಂಬ ಮೂಢನಂಬಿಕೆ ಈ ಎರಡೂ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಟಿತ್ತು.

ನ್ಯಾಯಾಲಯದಲ್ಲಿ ಏಳು ವರ್ಷಗಳ ಕಾಲ ವಿಚಾರಣೆ ನಡೆಯಿತು. ವಿಚಾರಣೆ ಅವಧಿಯಲ್ಲೂ ಜಾಮೀನು ಸಿಗದೇ ಇದ್ದುದರಿಂದ ಜೈಲಿನಲ್ಲೇ ಕಳೆಯಬೇಕಾಯಿತು. ನಿಜವಾಗಿ ಹೇಳೋದಾದರೆ ಕೊಳೆಯಬೇಕಾಯಿತು. ವಿಚಾರಣೆ ಮುಗಿದು ಈ ಮೂರು ಜನ ಸಹೋದರರಿಗೆ ಕೊಲೆ ಅಪರಾಧದಡಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟಿತು. ಈ ಏಳೂ ವರ್ಷಗಳೂ ಬಹಳ ನರಕ ಯಾತನೆಯದಾಗಿತ್ತು. ನ್ಯಾಯಾಲಯದ ಪ್ರಕ್ರಿಯೆಗಳಿಗಾಗಿ ಪೊಲೀಸರು ತಿಂಗಳಿಗೊಮ್ಮೆಯಾದರೂ ಇವರುಗಳನ್ನು ಅಕ್ಷರಶಃ ಕಟ್ಟಿ ಎಳಕೊಂಡು ಹೋಗುವಂತೆಯೇ ಇತ್ತು. ಕೈಗಳಿಗೆ ಕೋಳ, ಸರಪಳಿ ಹಾಕಿ ನ್ಯಾಯಾಲಯಕ್ಕೆ ಕರೆದುಕೊಂಡು ಹೊಗುವ ರೀತಿ ದನ ಜಾನುವಾರುಗಳನ್ನು ಹಿಡಿದುಕೊಂಡು ಹೋಗುವ ರೀತಿಗಿಂತ ಬೇರೆಯಾಗಿರಲಿಲ್ಲ.

ನ್ಯಾಯಾಲಯ ಹೊರತುಪಡಿಸಿ ಇತರ ಯಾರಿಗೂ ಮನುಷ್ಯರಿಗೆ ಕೋಳ, ಹಗ್ಗ, ಸರಪಳಿ ಹಾಕಿ ಕಟ್ಟುವ ಅಧಿಕಾರ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಇಲ್ಲ. ಆದರೂ ಪೊಲೀಸರು ಇದನ್ನೆಲ್ಲಾ ಸಹಜವೆಂಬಂತೆ ಮಾಡುತ್ತಾರೆ. ಈ ರೀತಿ ಮಾಡುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯವೇ ಸ್ಪಷ್ಟಪಡಿಸಿದ್ದರೂ, ಈಗಲೂ ನ್ಯಾಯಾಲಯದ ಮೂಗಿನಡಿಯಲ್ಲೇ ಇದೆಲ್ಲಾ ನಡೆಯುತ್ತದೆ. ಬಡಪಾಯಿಗಳು ಇದನ್ನೆಲ್ಲಾ ಪ್ರಶ್ನಿಸಲು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಧ್ಯವೂ ಇಲ್ಲ. ಬಂಧಿಗಳನ್ನು ಈಗಲೂ ಬ್ರಿಟೀಷ್ ಕಾಲದಲ್ಲಿದ್ದಂತೆ ಕ್ರೂರ ರೀತಿಯಲ್ಲೇ ನಡೆಸಲಾಗುತ್ತದೆ. ಮೇಲ್ಮಟ್ಟದ ಕೆಲವು ಬದಲಾವಣೆ ಆಗಿದ್ದು ಬಿಟ್ಟರೆ ಮೂಲಭೂತ ಪ್ರಜಾತಾಂತ್ರಿಕ ಬದಲಾವಣೆ ಇನ್ನೂ ಆಗಿಲ್ಲ ಅನ್ನೋದಕ್ಕೆ ಇವೆಲ್ಲಾ ಕೆಲವು ಸಾಕ್ಷಿಗಳು, ಅಷ್ಟೆ.

ಜೈಲು ಸಿಬ್ಬಂದಿಗಳಿಗೆ ನೀಡುತ್ತಿರುವ ತರಬೇತಿಗಳು ಕೂಡ ಪ್ರದಾನವಾಗಿ ಅದೇ ವಸಾಹತುಶಾಹಿ ನೀತಿಗಳ ಅನುಕರಣೆ ಬಿಟ್ಟರೆ ಮೂಲಭೂತ ಬದಲಾವಣೆ ಇನ್ನೂ ಬಂದಿಲ್ಲ. ನಮ್ಮ ಸಂವಿದಾನದತ್ತ ಮೌಲ್ಯಗಳಡಿ, ಪ್ರಜಾತಾಂತ್ರಿಕ ಮೌಲ್ಯಗಳಡಿ, ಮಾನವ ಹಕ್ಕು ಮೌಲ್ಯಗಳಡಿ ತರಬೇತಿಗಳನ್ನು ನೀಡುತ್ತಿಲ್ಲ. ಅದರಿಂದಾಗಿ ಜೈಲು ಅಧಿಕಾರಿ ಹಾಗೂ ಸಿಬ್ಬಂದಿಗಳು ಮಾನವೀಯ ಹಾಗೂ ಪ್ರಜಾತಾಂತ್ರಿಕ ನೀತಿಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ. ಬ್ರಟೀಷ್ ನಂತರದ ಆರು ದಶಕಗಳಿಗೂ ಹೆಚ್ಚುಕಾಲ ಗತಿಸಿದ್ದರೂ, ಅಂತಹ ತರಬೇತಿ ಹಾಗೂ ರಚನೆಗಳು ಅಸ್ತಿತ್ವಕ್ಕೆ ಬರದಿರುವುದನ್ನು ನೋಡಿದಾಗ, ಮನುಷ್ಯಜೀವಿಗಳನ್ನು ಕೂಡಿಹಾಕುವ ಈ ಕಾರಾಗೃಹ ವ್ಯವಸ್ಥೆ ಹೇಗಿದೆ ಎಂದು ಊಹಿಸಬಹುದು. ಆದರೆ ಇದು ಅನುಕೂಲಸ್ಥರು, ಕಾಳಸಂತೆಕೋರರು, ರಾಜಕೀಯ ನಾಯಕರುಗಳು, ಮಾಫಿಯಾ ಗ್ಯಾಂಗುಗಳಿಗೆ ಮಾತ್ರ ಆನ್ವಯಿಸುವುದಿಲ್ಲ ಎನ್ನೋದು ಈ ವ್ಯವಸ್ಥೆಯ ವ್ಯಂಗ್ಯವೇ ಸರಿ.

ಹಾಗಾಗಿ ಈ ಮೂರು ಜನ ಬಡಪಾಯಿಗಳು ಈ ಎಲ್ಲಾ ನರಕಯಾತನೆಗಳನ್ನು ಅನುಭವಿಸಲೇ ಬೇಕಾಯಿತು. ನ್ಯಾಯಾಲಯದಲ್ಲಿ ತಮ್ಮ ಪರವಾಗಿ ವಾದಿಸಲು ವಕೀಲರುಗಳನ್ನು ನೇಮಿಸಿಕೊಳ್ಳಲು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಯಿತು. ಜೀವಾವಧಿ ಶಿಕ್ಷೆ ಪ್ರಕಟವಾದ ಮೇಲೆ ಉಚ್ಚ ನ್ಯಾಯಾಲಯದ ಮೊರೆಹೋಗಲು ಅಲ್ಲಿನ ವಕೀಲರಿಗೆ ಲಕ್ಷಾಂತರ ಹಣ ಖರ್ಚು ಮಾಡಬೇಕಾಯಿತು. ಅಲ್ಲೂ ಶಿಕ್ಷೆ ಖಾಯಂ ಆಯಿತು. ಮುಂದೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವ ಶಕ್ತಿ ಇವರಲ್ಲಿ ಇರಲಿಲ್ಲ.

ಜೀವಾವಧಿ ಶಿಕ್ಷೆಗೆ ಗುರಿಯಾಗಿರುವವರನ್ನು ಜಿಲ್ಲಾ ಕಾರಾಗೃಹಗಳಲ್ಲಿ ಇರಿಸುವುದಿಲ್ಲ. ಅವರನ್ನು ಕೇಂದ್ರ ಕಾರಾಗೃಹಗಳಲ್ಲಿ ಇರಿಸಲಾಗುತ್ತದೆ. ಹಾಗಾಗಿ ಈ ಮೂವರನ್ನು ಮೈಸೂರು ಕೇಂದ್ರಕಾರಾಗೃಹಕ್ಕೆ ಕಳಿಸಲಾಯಿತು. ಅಲ್ಲಿಗೆ ಒಂದೆರಡು ವರ್ಷಗಳಲ್ಲೇ ಇವರ ಹಿರಿಯಣ್ಣ ಸಾವಿಗೀಡಾದರು. ಅವರಿಗೆ ಹಂಡತಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಸಾವಿಗೆ ಕಾರಣ ಚಿಂತೆ ಹಾಗೂ ಉಸಿರುಕಟ್ಟಿಸುವ ಜೈಲಿನ ವಾತಾವರಣ. ಅಲ್ಲಿಗೆ ಎರಡೂ ಮನೆಯ ತಲಾ ಒಬ್ಬೊಬ್ಬ ಸದಸ್ಯರು ಪ್ರಾಣ ಕಳೆದು ಕೊಂಡಂತಾಯಿತು. ಮನೆಯಲ್ಲಿ ಉಳಿದವರು ವಯಸ್ಸಾದ ತಾಯಿ ಇಬ್ಬರು ಸೊಸೆಯರು ಹಾಗೂ ಮೂರು ಪುಟ್ಟ ಮಕ್ಕಳು ಮಾತ್ರ. ಇವರುಗಳು ಜೈಲುಪಾಲಾದ ಒಂದು ವರ್ಷದೊಳಗೆ ತಂದೆ ವೃದ್ಧಾಪ್ಯ ಹಾಗೂ ಚಿಂತೆಯ ಕಾರಣದಿಂದ  ತೀರಿಕೊಂಡಿದ್ದರು.

ಜೀವಾವಧಿ ಶಿಕ್ಷೆ ಅನುಭವಿಸುತ್ತಾ ಈ ಅಣ್ಣ ತಮ್ಮರು ಈಗಾಗಲೇ ಹನ್ನೊಂದು ವರ್ಷಗಳನ್ನು ಕಳೆದಿದ್ದಾರೆ. ಈ ನಡುವೆ ಇವರಿಗಿರುವ ತುಂಡು ಭೂಮಿಯ ಮೇಲೂ ಬೇರೆಯವರ ಕಣ್ಣು ಬಿದ್ದು ಅದೀಗ ನ್ಯಾಯಾಲಯದ ಅಂಗಳಕ್ಕೆ ಹೋಗಿದೆ. ಇರೋದು ಸಾಲದು ಎಂಬಂತೆ ಅದನ್ನು ದಡಮುಟ್ಟಿಸುವ ಹೊಸ ಸವಾಲು ಬೇರೆ ಮನೆಯವರಿಗೆ. ಜೈಲಿನಿಂದ ತಿಂಗಳ ಪರೋಲ್ ಸೌಲಭ್ಯ ಪಡೆದು ಮನೆಕಡೆಯ ಕೆಲವು ಕೆಲಸಗಳನ್ನು ಮಾಡಬಹುದು ಎಂದುಕೊಂಡರೂ, ಅದಕ್ಕೆ ಹತ್ತಾರು ಸಾವಿರ ಲಂಚಕ್ಕೆ ಹಣ ಹೊಂದಿಸಬೇಕು. ಅದನ್ನು ಹೇಗಾದರೂ ಮಾಡಿ ಹೊಂದಿಸಿದರೂ ಯಾರಾದರೂ ಮೂಗರ್ಜಿ ಬರೆದು ತಕರಾರು ತೆಗೆದರೆ ಪರೋಲ್ ವಿಚಾರಕ್ಕೆ ಕಲ್ಲು ಬಿತ್ತೆಂದೆ ಅರ್ಥ.

ಹೀಗಾಗಿ ಈ ಅಣ್ಣತಮ್ಮರು ಅಸಹಾಯಕರಾಗಿ ಜೈಲಿನಲ್ಲಿ ನಿರಾಶೆ, ಹತಾಶೆಗಳಿಂದ ಕಾಲಕಳೆಯುತ್ತಿದ್ದಾರೆ. ಇವರಿಗಿರುವ ಒಂದೇ ಭರವಸೆ; ಸನ್ನಡತೆಯಡಿ ಸರ್ಕಾರ ವರ್ಷ ವರ್ಷ ಮಾಡುವ ಅಕಾಲಿಕ ಬಿಡುಗಡೆಗಳು. ಅದರ ನಿರೀಕ್ಷೆಯಲ್ಲಿ ಈಗ ಕಾಲ ನೂಕುತ್ತಿದ್ದಾರೆ.ಮೂಢನಂಬಿಕೆಯ ಹಿಂದೆ ಬಿದ್ದು ಎರಡು ಕುಟಂಬಗಳಿಗೆ ಆಗಿರುವ ದುರವಸ್ಥೆ ಇದು. ಜೊತೆಗೆ ವ್ಯವಸ್ಥೆಯಲ್ಲಿರುವ ಹಲವು ಕ್ರೂರವೆನಿಸುವ ಸಂಗತಿಗಳು ನೀಡಿರುವ ಕೊಡುಗೆಗಳು ಸೇರಿ ಎರಡು ಪ್ರಾಣಗಳ ಅಂತ್ಯ ಹಾಗೂ ಎರಡು ಕುಟುಂಬಗಳ ದುರಂತ ಕಷ್ಟಕೋಟಲೆಗಳ ಒಂದು ಸಣ್ಣ ಉದಾಹರಣೆ ಇದು. ನಮ್ಮ ದೇಶದಲ್ಲಿ ಮೂಢನಂಬಿಕೆ, ವಾಮಾಚಾರ, ಭವಿಷ್ಯ, ಅವೈಜ್ಞಾನಿಕತೆ, ಅಜ್ಞಾನಗಳಿಂದ ಇಂತಹ ಕೋಟ್ಯಾಂತರ ಕುಟುಂಬಗಳು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ.