samachara
www.samachara.com
ಜೈಲೊಳಗಿನ ಕಾನೂನಿನ ಕಟ್ಟಳೆಗಳ ಆಚೆಗೆ ಮೆರೆದ ಮಾನವೀಯ ಸಂಬಂಧಗಳು!
PRISON STORIES

ಜೈಲೊಳಗಿನ ಕಾನೂನಿನ ಕಟ್ಟಳೆಗಳ ಆಚೆಗೆ ಮೆರೆದ ಮಾನವೀಯ ಸಂಬಂಧಗಳು!

ಏನೇ ಅಂದರೂ ಮನುಷ್ಯ ಬಂದು ನಿಲ್ಲುವುದು ಸಂಬಂಧಗಳ ಕಡೆಗೆ; ಎಷ್ಟಾದರೂ ಸಂಘ ಜೀವಿ ಈತ.ಜೈಲಿನಲ್ಲಿರುವವರು ಸಮಾಜದ ಎಲ್ಲಾ ಸಂಬಂಧಗಳಿಂದ ದೂರ ಉಳಿದಿರುತ್ತಾರೆ ಎಂಬ ಭಾವನೆ ನಮ್ಮೆಲ್ಲರಲ್ಲಿದೆ. ಖೈದಿಗಳಿಗೆ ಭಾವನೆಗಳೇ ಅರ್ಥವಾಗುವುದಿಲ್ಲ ಎಂಬ ದೂರೂ ಇದೆ

ನಂದಕುಮಾರ್ ಕೆ. ಎನ್‌

ನಂದಕುಮಾರ್ ಕೆ. ಎನ್‌

ಏನೇ ಅಂದರೂ, ಮನುಷ್ಯ ಬಂದು ನಿಲ್ಲುವುದು ಸಂಬಂಧಗಳ ಕಡೆಗೆ; ಎಷ್ಟಾದರೂ ಸಂಘ ಜೀವಿ ಈತ.ಜೈಲಿನಲ್ಲಿರುವವರು ಸಮಾಜದ ಎಲ್ಲಾ ಸಂಬಂಧಗಳಿಂದ ದೂರ ಉಳಿದಿರುತ್ತಾರೆ ಎಂಬ ಭಾವನೆ ನಮ್ಮೆಲ್ಲರಲ್ಲಿದೆ. ಖೈದಿಗಳಿಗೆ ಭಾವನೆಗಳೇ ಅರ್ಥವಾಗುವುದಿಲ್ಲ ಎಂಬ ದೂರೂ ಇದೆ. ಆದರೆ ಇದೆಲ್ಲವನ್ನೂ ಸುಳ್ಳಾಗಿಸುವ ಕರಿಸುಬ್ಬುವಿನ ಈ ರೋಚಕ ಕತೆ. ಇದು ಕಂಬಿ ಹಿಂದಿನ ಕತೆಗಳ ಎರಡನೇ ಕಂತು.

ಆತನ ಹೆಸರು ಕರಿಸುಬ್ಬು; ಹಾಗೆಂದಿಟ್ಟುಕೊಳ್ಳಿ. ಬೆಂಗಳೂರಿನ ಲಗ್ಗೆರೆಯವನು. ಒಂದಷ್ಟು ಓದಿಕೊಂಡಿದ್ದ. ‘ಬಿಎಸ್ಎನ್ಎಲ್’ನಲ್ಲಿ ಲೈನ್ ಮ್ಯಾನ್ ಕೆಲಸ ಸಿಕ್ಕಿತು. ಧಾರವಾಡದಲ್ಲಿ ಕೆಲಸ ಮಾಡುತ್ತಿದ್ದ; ಖಾಯಂ ಕೂಡ ಆಗಿತ್ತು. ಸಂಪಾದನೆ ಇತ್ತು, ಹುಡುಗಿ ಸಿಕ್ಕಿ ಮದುವೆಯೂ ಆಯಿತು. ಎರಡು ಮಕ್ಕಳು ಹುಟ್ಟಿದವು. ಇಬ್ಬರೂ ಹೆಣ್ಣು ಮಕ್ಕಳು. ಬರುತ್ತಿದ್ದ ಸಂಬಳದಲ್ಲಿ ಸಂಸಾರ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿತ್ತು.

ಆದರೆ ಆತನಿಗೊಂದು ಅಕ್ರಮ ಸಂಬಂಧ ಇತ್ತು. ಇದು ಆತನ ಹೆಂಡತಿಗೆ ಗೊತ್ತಾಯ್ತು. ಇಬ್ಬರ ನಡುವೆ ಜಗಳ ಹತ್ತಿಕೊಂಡಿತು. ಕೊನೆಗೊಂದು ದಿನ ಆತ್ಮಹತ್ಯೆ ಮಾಡಿಕೊಂಡಳು. ಕರಿಸುಬ್ಬುವಿಗೆ ವಿಷಯ ಗೊತ್ತಾಯ್ತು. ಅಷ್ಟರಲಾಗಲೇ ಹೆಂಡತಿ ಅಣ್ಣ ಪೊಲೀಸರಿಗೆ ದೂರು ನೀಡಿಯಾಗಿತ್ತು. ಖಾಕಿಗಳು ಬಂದು ಕೋಳ ತೊಡಿಸಿ ಆತನನ್ನು ಕರೆದುಕೊಂಡು ಹೋದರು. ಅವತ್ತಿಗಿನ್ನೂ ಮಕ್ಕಳು ಸಣ್ಣವು; ಇಬ್ಬರಿಗೂ 5- 6 ವರ್ಷ. ಹೆಂಡತಿ ಅಣ್ಣನೇ ಆ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡ.

ಅದೇ ಮಕ್ಕಳ ಬಾಯಲ್ಲಿ ಹೆಂಡತಿ ಅಣ್ಣ ಸಾಕ್ಷಿ ಹೇಳಿಸಿದ್ದ. ಕೇಸು ಎರಡು ವರ್ಷ ನಡೆಯಿತು. ಕೊನೆಗೆ ಕರಿ ಸುಬ್ಬುವಿಗೆ ಸೆಕ್ಷನ್ 302ರ ಕೆಳಗೆ ಜೀವಾವಧಿ ಶಿಕ್ಷೆಯಾಯ್ತು.ಕರಿಸುಬ್ಬು ಪರಪ್ಪನ ಅಗ್ರಹಾರ ಸೇರಿದ. ಯಾವಾಗ ಈತನಿಗೆ ಶಿಕ್ಷೆ ಖಾಯಂ ಆಯ್ತೋ, ಹೆಂಡತಿಯ ಅಣ್ಣ ಪುಟ್ಟ ಮಕ್ಕಳಿಬ್ಬರನ್ನೂ ಮನೆಯಿಂದ ಹೊರಗಟ್ಟಿದ. ಮಕ್ಕಳು ಅನಾಥಾಶ್ರಮ ಪಾಲಾದರು. ನನ್ನ ವಿರುದ್ಧ ಸಾಕ್ಷಿ ಹೇಳಿದರಲ್ಲಾ ಎಂಬ ಯಾವ ಭಾವನೆಗಳೂ ‘ತಂದೆ’ ಕರಿ ಸುಬ್ಬುವಿಗೆ ಇರಲಿಲ್ಲ.

ಅಪ್ಪನ ಪ್ರೀತಿ, ಅಮ್ಮನ ಮಮತೆಯಿಂದಲೇ ಆತ ಮಕ್ಕಳನ್ನು ನೋಡುತ್ತಿದ್ದ. ಮಕ್ಕಳೆಲ್ಲಿ ಹೋಗಿರಬಹುದು ಎಂಬ ತಂದೆಯ ವೇದನೆ ಆತನಿಗೂ ಆಗುತ್ತಿತ್ತು. ಆದರೆ ಆತ ಜೈಲೊಳಗಿದ್ದ; ಮಕ್ಕಳನ್ನು ಹುಡುಕುವಂತೆ ಇರಲಿಲ್ಲ. ಕೊನೆಗೆ ಯಾರ್ಯಾರದ್ದೋ ಕೈಕಾಲು ಬಿದ್ದು, ದುಂಬಾಲು ಹಾಕಿ ಮಕ್ಕಳನ್ನು ಹುಡುಕಿಸಿದ. ಇದೀಗ ಮಕ್ಕಳನ್ನು ನೋಡುವ ತವಕ ಹುಟ್ಟಿಕೊಂಡಿತು. ಆ ದಿನ ಬಂದೇ ಬಿಟ್ಟಿತು. ಅವತ್ತು ಮಕ್ಕಳು ಜೈಲಿಗೆ ಅಪ್ಪನನ್ನು ನೋಡಲು ಬರುವುದೆಂದು ದಿನ ನಿಗದಿಯಾಗಿತ್ತು. ಅಪ್ಪ ಕರಿಸುಬ್ಬು ಕಾಯುತ್ತಾ ಕುಳಿತಿದ್ದ; ಆತನ ಕಣ್ಣುಗಳ ಮಕ್ಕಳನ್ನು ಎದುರುಗೊಳ್ಳಲು, ಕೈಗಳು ಬಿಗಿದಪ್ಪಲು ಸಿದ್ಧವಾಗಿದ್ದವು. ಕೊನೆಗಿಬ್ಬರೂ ಪುಟ್ಟ ಮಕ್ಕಳು ಬಂದರು.

ಆತ ನೋಡಿದ್ದಕ್ಕಿಂತ ಅವರಿಬ್ಬರೂ ದೊಡ್ಡದಾಗಿದ್ದರು. ಆತನಿಗೋ ಬಿಗಿದಪ್ಪಿ ಮಕ್ಕಳನ್ನು ಸಂತೈಸುವಾಸೆ. ಮಕ್ಕಳಿಗೋ ಎಳೆ ಪ್ರಾಯ, ಹೆತ್ತಮ್ಮನ ಸಾವಿಗೆ ಕಾರಣನಾದ ತಂದೆಯ ಮೇಲೆ ತೀರದ ದ್ವೇಷ. ‘ಅಪ್ಪ ನಮ್ಮ ಮೇಲೆ ಸಾಕ್ಷಿ ಹೇಳಿದ ದ್ವೇಷ ಇಟ್ಟುಕೊಂಡಿರಬಹುದಾ?’ ಎಂಬ ಭಯ ಅವುಗಳಿಗೆ.ಮಕ್ಕಳ ದ್ವೇಷ, ಸಿಟ್ಟನ್ನು ತಂದೆಯಾಗಿ ಸಹಿಸಿಕೊಂಡ. ಮಕ್ಕಳನ್ನು ಒಲಿಸಿಕೊಳ್ಳತೊಡಗಿದ. ತನ್ನಿಂದಾದ ಸಹಾಯವನ್ನು ಮಕ್ಕಳಿಗೆ ಮಾಡತೊಡಗಿದ. ಮಕ್ಕಳಿಗೂ ದಿನಕಳೆದಂತೆ ಅಪ್ಪನ ಮೇಲೆ ಮಮಕಾರ ಹುಟ್ಟಿತು. ನಿಧಾನಕ್ಕೆ ಜೈಲಿಗೆ ಬರುವುದು ಹೆಚ್ಚಾಯಿತು, ಹೀಗಿದ್ದೂ ಆ ಮಕ್ಕಳಿಬ್ಬರೂ ತಂದೆಯನ್ನು ಹತ್ತಿರ ಬಿಟ್ಟುಕೊಂಡಿರಲಿಲ್ಲ.

ಅದೊಂದು ದಿನ ಮಕ್ಕಳಿಬ್ಬರೂ ತಂದೆಯನ್ನು ನೋಡಲು ಜೈಲಿನ ಬಳಿಗೆ ಬಂದಿದ್ದರು. ಅವತ್ತು ಆ ಇಬ್ಬರೂ ಹುಡುಗಿಯರಿಗೆ ತಂದೆಯ ಮೇಲೆ ನಂಬಿಕೆ ಬಂದಿತ್ತು. ಬಂದವರೇ ಬಿಗಿದಪ್ಪಿ ಹಿಡಿದರು; ಆತನೂ ಅಷ್ಟೇ ಆನಂದ ತುಂದಿಲನಾಗಿ ಮಕ್ಕಳನ್ನು ಅಪ್ಪಿ ಮುದ್ದಿಸಿದ. ಅವುಗಳ ಎಳೆ ತೋಳುಗಳ ಮೇಲೆ ಕಣ್ಣಿರು ಸುರಿಸಿದ. ಅವರೂ ಕಣ್ಣಿರು ಸುರಿಸಿದರು. ನಿಧಾನಕ್ಕೆ ಸಂಬಂಧ ಗಾಢವಾಗುತ್ತಾ ಬಂತು.ದೂರು ದುಮ್ಮಾನಗಳು ಸಲ್ಲಿಕೆಯಾಗುವ ಮಟ್ಟಕ್ಕೆ ತಂದ-ಮಗಳ ಸಂಬಂಧ ಬೆಳೆಯಿತು. ಅವರಿದ್ದ ಅನಾಥಾಶ್ರಮದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದಾಗ ತಂದೆಯಾಗಿ ಸಂಕಟ ಪಟ್ಟ ಕರಿಸುಬ್ಬು.

ಕಡೆಗೆ ಯಾವುದೋ ಸ್ವಯಂ ಸೇವಾ ಸಂಸ್ಥೆ ಕೈ ಗೆ ಮಕ್ಕಳನ್ನು ಒಪ್ಪಿಸಿದ. ಅದಕ್ಕಾಗಿ ಪೊಲೀಸ್ ಅಧಿಕಾರಿಗಳ ಬಳಿಯೆಲ್ಲಾ ಗೋಗರೆದಿದ್ದ. ಜೈಲಿನ ಮಕ್ಕಳನ್ನು ನೋಡಿಕೊಳ್ಳಲೆಂದೇ ಒಂದಷ್ಟು ಸ್ವಯಂ ಸೇವಾ ಸಂಸ್ಥೆಗಳಿವೆ. ಅವುಗಳು ಮಕ್ಕಳ ಊಟ ವಸತಿಯನ್ನು ಭರಿಸುತ್ತವೆ. ಆದರೆ ಕಾಲೇಜು, ಶಾಲೆ ಫೀಸ್ ಭರಿಸುವುದು ಅವುಗಳಿಂದಲೂ ಸಾಧ್ಯವಿಲ್ಲ. ಆದರೆ ತಂದೆ ವಿರಮಿಸಲಿಲ್ಲ. ಮಕ್ಕಳ ಓದಿನ ಹೊಣೆ ಹೊತ್ತುಕೊಂಡ.ಜೈಲಿನಲ್ಲೇ ದುಡಿಮೆ ಆರಂಭಿಸಿದ. ನೈಟ್ ವಾಚ್ ಮ್ಯಾನ್ ಕೆಲಸಕ್ಕೆ ಸೇರಿಕೊಂಡ.

ಕೈದಿಗಳ ಬಗ್ಗೆ ನಿಗಾ ಇಡುವ, ಕಟ್ಟು ಮಸ್ತಾದ ನಂಬಿಕೆಯ ಖೈದಿಗಳಿಗಿರುವ ಕೆಲಸವದು. ಅವರಿಗೆ ಪ್ರಿಸನ್ ಆಫೀಸರ್ಸ್ ಎನ್ನುತ್ತಾರೆ. ಆದರೆ ಜೈಲಿನಲ್ಲಿ ಹೊರಗಿನಂತೆ ಸಂಪಾದನೆಗಳಿಲ್ಲ. ಇವತ್ತಿಗೂ ಕೊಡುವ ದಿನಗೂಲಿ 100 ರೂಪಾಯಿ. ಅದರಲ್ಲಿ ಊಟ ವಸತಿಗೆಂದು 50 ರೂಪಾಯಿ ಕಡಿತ ಮಾಡುತ್ತಾರೆ. ಅವತ್ತಿಗಿನ್ನೂ ಇಷ್ಟೂ ಸಂಬಳವಿರಲಿಲ್ಲ. ಆದರೆ ಆ ಸಂಪಾದನೆ ಪೂರ್ತಿ ಮಕ್ಕಳಿಗಾಗಿ ಎತ್ತಿಡುತ್ತಿದ್ದ. ಯಾರು ಯಾರ ಬಳಿಯೋ ಮಕ್ಕಳಿಗಾಗಿ ಸಹಾಯ ಎತ್ತುತ್ತಿದ್ದ. ಹೀಗೂ ಸಾಲದಾದಾಗ ಜೈಲಿನೊಳಗಿರುವ ಕ್ರಿಮಿನಲ್ಗಳ ಸೇವೆ ಮಾಡಿ ಅವರಿಂದ ಕಾಸು ಪಡೆದುಕೊಳ್ಳುತ್ತಿದ್ದ.ಮಕ್ಕಳಿಗಾಗಿ ಏನೂ ಮಾಡಲು ಸಿದ್ಧನಾಗಿದ್ದ ಅಪ್ಪ ಆತ. ಮೂರು ನಾಲ್ಕು ಕಡೆ ವಸತಿ ಬದಲಾಯಿಸಿ ಕಷ್ಟಪಟ್ಟಿದ್ದಕ್ಕೆ ಬೆಲೆ ಸಿಕ್ಕಿತು. ಇಬ್ಬರೂ ಯುವತಿಯರು ಉನ್ನತ ವ್ಯಾಸಾಂಗ ಮುಗಿಸಿದರು.

ಇದೀಗ ಇಬ್ಬರಿಗೂ ಮದುವೆ ವಯಸ್ಸಾಗುತ್ತಾ ಬಂದಿತ್ತು. ಬಾಳ ಸಂಗಾತಿಗಳನ್ನು ಅವರಿಬ್ಬರು ಆರಿಸಿಕೊಳ್ಳಬೇಕಾಗಿತ್ತು. ಅವರಿಗೆಂದು ಇದ್ದ ತಂದೆ ಜೈಲಿನಲ್ಲಿದ್ದರು. ಕೊನೆಗೆ ಅವರೇ ಹುಡುಕಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು. ಹಾಗೆ ಬಂದವರು ತಂದೆಯ ಬಳಿ ಸಂಭ್ರಮದ ವಾರ್ತೆ ಹಂಚಿಕೊಂಡರು. ತಂದೆಗೋ ಖುಷಿಯೋ ಖುಷಿ. ಮಕ್ಕಳ ಬಾಳ ಸಂಗಾತಿಗಳನ್ನು, ಅವರ ಮದುವೆಗಳನ್ನು ಕಣ್ತುಂಬಿಕೊಳ್ಳುವ ಸಂಭ್ರಮ ಹಾಗೇ ಮನಸ್ಸಲ್ಲಿ ಕಳೆಗಟ್ಟುತ್ತಿತ್ತು.

ಮಕ್ಕಳ ಶುಭ ಸುದ್ದಿ ತಲುಪಿದ ದಿನ ಆತನಗೆ ರಾತ್ರಿ ಇಡೀ ನಿದ್ದೆ ಬಂದಿರಲಿಲ್ಲ.ಮದುವೆ ಮುಹೂರ್ತ ನಿಗದಿಯಾಯಿತು. ಆದರೆ ಮಕ್ಕಳು ಉಲ್ಟಾ ನಿಂತು ಬಿಟ್ಟರು. ‘ಅಪ್ಪ ನೀನು ಬರುವುದು ಬೇಡ. ನೀವಿನ್ನೂ ಜೈಲಿನಲ್ಲಿರುವರು. ಬಂದರೆ ಅಭಿಪ್ರಾಯ ಬದಲಾಗುತ್ತದೆ ಎಂದೂ, ಹೀಗಾಗಿ ಮದುವೆಗೆ ಬರುವುದು ಬೇಡ ಎಂದು ಒತ್ತಾಯಿಸಿದರು. ಆತನೋ ಮಕ್ಕಳ ಮದುವೆ ನೋಡಲು ಕಾದು ಕುಳಿತಿದ್ದ. ದುಖಃ ಉಮ್ಮಳಿಸಿ ಬಂದಿತ್ತು. ಗಂಟಲು ಕಟ್ಟಿತು. ಪರಿಪರಿಯಾಗಿ ಕೇಳಿಕೊಂಡ. ಆದರೆ ಅವರು ಒಪ್ಪಲೇ ಇಲ್ಲ.

ಉಕ್ಕಿ ಬರುತ್ತಿದ್ದ ದುಖಃವನ್ನು ಹಾಗೇ ಗಂಟಲಲ್ಲಿ ಇಳಿಸಿಕೊಂಡು ತಲೆ ಅಲ್ಲಾಡಿಸಿದ. ಸದ್ಯ ಮದುವೆಯಾಗುತ್ತಿದ್ದಾರಲ್ಲ ಎಂಬ ಸಂಭ್ರಮದಲ್ಲಿ ತೀವ್ರ, ಸಂಕಟ, ವೇದನೆಯನ್ನು ಮರೆತ.ಇಬ್ಬರಿಗೂ ಮದುವೆಯಾಯಿತ. ಮದುವೆಯ ದಿನ ಆತ ಜೈಲಿನಲ್ಲಿದ್ದು ಮನಸ್ಸಲ್ಲೇ ಹಾರೈಸಿದ. ಆತನಿಗೆ ಬೇರೆ ಆಯ್ಕೆಗಳಿರಲಿಲ್ಲ. ಜೈಲಿನಲ್ಲಿದ್ದೇ ಅಮ್ಮನ ಪ್ರೀತಿ, ಅಪ್ಪ ಸಲುಗೆ ನೀಡಿ ಬೆಳೆಸಿದ್ದವನಿಗೆ ಮಗಳ ಮದುವೆ ನೋಡುವ ಸೌಭಾಗ್ಯ ಇರಲಿಲ್ಲ. ಹೀಗಿದ್ದೂ ಎಲ್ಲವನ್ನೂ ಆತ ಸಹಿಸಿಕೊಂಡ.ಮದುವೆ ಆದ ಆತನ ದುಖಃ ಹೆಚ್ಚಾಯಿತು.

ಗಂಡಂದಿರಿಗೆ ಗೊತ್ತಾಗುತ್ತೆ ಎನ್ನುವ ಭಯದಲ್ಲಿ ಮಕ್ಕಳು ಜೈಲಿಗೆ ಬರುವುದೂ ಕಡಿಮೆಯಾಯಿತು. ಅದು ಆತನ ಅತ್ಯಂತ ನೋವಿನ ದಿನಗಳು. ಕೊನೆಗೊಂದು ದಿನ ಅವರಿಬ್ಬರೂ ಗರ್ಭಿಣಿಯರಾದರು. ಸೀಮಂತ ಮಾಡಲು ಅಪ್ಪ ಜೈಲಿನಲ್ಲಿದ್ದರು. ಮಗುವೂ ಹುಟ್ಟಿತು; ನರ್ಸ್ ಮಗುವೆತ್ತಿ ಹೊರ ತಂದಾಗ ತಾತ ಮಾತ್ರ ಕಂಬಿಯ ಹಿಂದೆ ಇದ್ದರು.ತಂದೆ ಇಲ್ಲ ಎಂಬ ನಾಟಕ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಕೊನೆಗೊಂದು ದಿನ ಕಣ್ಣಾಮುಚ್ಚಾಲೆ ಆಟಗಳು ಅವರವರ ಗಂಡಂದಿರಿಗೆ ತಿಳಿಯಿತು. ಆದರೆ ಗಲಾಟೆ ಏಳಲಿಲ್ಲ. ಬದಲಿಗೆ ತಮ್ಮ ಮಾವನನ್ನು ನೋಡಲು ಗಂಡಂದಿರು ಹಾತೊರೆದರು.

ಪ್ರಯಾಶ್ಚಿತ ಮಾಡಿಕೊಳ್ಳುವವರಂತೆ ಮಕ್ಕಳ ನಾಮಕರಣಕ್ಕೆ ಕರೆದು ಆದರಾತಿಥ್ಯ ನೀಡಿದರು. ಅದಾಗಿ ಜೈಲಿಗೆ ಬಂದವನ ಮುಖ ಅರಳಿದ ತಾವರೆಯಂತಾಗಿತ್ತು. ಆತನ ಜೀವನದಲ್ಲಿ ಎಂದೂ ಇಲ್ಲದ ಸಂಭ್ರಮದಲ್ಲಿದ್ದ. ಉದ್ವೇಗದಲ್ಲಿ ಜೈಲಿನುದ್ದಕ್ಕೂ ಸಿಕ್ಕಸಿಕ್ಕವರ ಬಳಿ ತನ್ನ ಸಂಭ್ರಮ ಹಂಚಿಕೊಂಡ.ಹೀಗಿದ್ದ ಕರಿಸುಬ್ಬು ಮೊನ್ನೆ ಸ್ವಾತಂತ್ರ್ಯ ದಿನದಂದು 18 ವರ್ಷಗಳ ಜೈಲು ಶಿಕ್ಷೆಯ ನಂತರ ಬಿಡುಗಡೆಯಾದ.

ಹೊರ ಬಂದಾಗ ಆತನಿಗಾಗಿ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಕಾಯುತ್ತಾ ನಿಂತಿದ್ದರು. ಆದರೆ ಸ್ವಾಭಿಮಾನಿ ಕರಿಸುಬ್ಬು ಯಾರ ಮನೆಗೂ ಹೋಗಲಿಲ್ಲ, ತಾನು ತಾನಾಗೆ ಬದುಕುತ್ತೇನೆ ಎಂದು ಹೊರಟುಹೋದ.ಜೈಲು ಒಳಗೆ ಹೋದವರಿಗೆ ಸ್ವಾತಂತ್ರ್ಯಕ್ಕೆ ಕಡಿವಾಣ ಮಾತ್ರವೇ ಇರುವುದಿಲ್ಲ. ಖೈದಿಯೊಬ್ಬನ ಸಾಮಾಜಿಕ ಸಂಬಂಧಗಳಲ್ಲಿ ತಲ್ಲಣಗಳು ಏಳುತ್ತವೆ. ಅವೆಲ್ಲವೂ ಸುಖಾಂತ್ಯವೇ ಕಾಣುತ್ತವೆ ಎಂಬ ಗ್ಯಾರೆಂಟಿ ಏನಿಲ್ಲ.