ಕಟ್ಟಡ ಕೆಲಸಕ್ಕೆ ಬೆಂಗಳೂರಿಗೆ ಬಂದವನು ಜೈಲು ಸೇರಿ ಹುಚ್ಚನಾದ ಕತೆ!
PRISON STORIES

ಕಟ್ಟಡ ಕೆಲಸಕ್ಕೆ ಬೆಂಗಳೂರಿಗೆ ಬಂದವನು ಜೈಲು ಸೇರಿ ಹುಚ್ಚನಾದ ಕತೆ!

Summary

ಜೈಲು ಎಂಬುದು ಹೊರಜಗತ್ತಿನ ಪಾಲಿಗೆ ಕುತೂಹಲ ಮೂಡಿಸುವ ಸ್ಥಳ. ಹಾಗಂತ ಅಲ್ಲಿಗೆ ಭೇಟಿ ಕೊಡುವ ಹಾಗಿಲ್ಲ; ಒಳಗೆ ಹೋಗುವ ಮನಸ್ಸು ಇರುವುದಿಲ್ಲ. ಯಾಕೆಂದರೆ, ‘ಜೈಲು’ ಎಂಬ ಪದವೇ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ರೀತಿಯ ಟ್ಯಾಬೂ- ಆಚರಣೆಯಲ್ಲಿರುವ ನಿಷೇಧಿತ ಸ್ಥಳ ಎನ್ನಬಹುದು. ಇದು ಸಾಮಾನ್ಯ ಜನರ ಪಾಲಿಗಾದರೆ ಅಪರಾಧ ಸುದ್ದಿಗಾರರ ಪಾಲಿಗೆ ಜೈಲು ಮಾಹಿತಿಯ ಮೂಲ. ಅದರೊಳಗಿಂದ ಸಿಗುವ ಸ್ಪೋಟಕ ಮಾಹಿತಿ ಹೊರಜಗತ್ತಿನಲ್ಲಿ ದೊಡ್ಡದೊಂದು ‘ಸ್ಟೋರಿ’ಯನ್ನು ಸೃಷ್ಟಿಸಲು ಸಹಾಯ ಮಾಡಿರುತ್ತದೆ. ಆದರೆ, ಜೈಲಿನ ಒಳಗೇ ಇರುವ ‘ಸ್ಟೋರಿ’ಗಳು? ಕನ್ನಡದ ಮಾಧ್ಯಮಗಳ ಪಾಲಿಗಂತೂ ಜೈಲಿನ ಕತೆಗಳು ಅತ್ಯಂತ ವಿರಳ. ಜೈಲಿನೊಳಗಿನ ಮಾನವೀಯ ಕತೆಗಳಿಗೂ ಹೊರಜಗತ್ತಿಗೂ ದೊಡ್ಡದೊಂದು ಗೋಡೆಯೇ ಬೆಳೆದು ನಿಂತಿದೆ; ಪರಪ್ಪನ ಅಗ್ರಹಾರ ಜೈಲಿನ ಬೃಹತ್ ಗೋಡೆಯಂತದ್ದು.

ಹೀಗಾಗಿ, ‘ಸಮಾಚಾರ’ ಜೈಲಿನ ಒಳಗಿನ ಕತೆಗಳನ್ನು ನಿಮ್ಮ ಮುಂದಿಡುವ ವಿನೂತನ ಪ್ರಯತ್ನವೊಂದನ್ನು ಆರಂಭಿಸುತ್ತಿದೆ. ಇದು ಆಗಾಗ್ಗೆ ಬರುವ, ಅನಿಯತಕಾಲಿಕ ಸರಣಿ ವರದಿಗಳ ಗುಚ್ಚ ಎಂದುಕೊಳ್ಳಬಹುದು; ‘ಕಂಬಿ ಹಿಂದಿನ ಕತೆ’. ಇಲ್ಲಿ ಬರುವ ಪಾತ್ರಗಳ ಹೆಸರನ್ನು ಅವರ ಸುರಕ್ಷತೆ ಕಾರಣಕ್ಕೆ ಬದಲಿಸಲಾಗುತ್ತದೆ. ಮಾಹಿತಿ ಮೂಲಗಳನ್ನೂ ನಿಗೂಢವಾಗಿಯೇ ಇಡುತ್ತಿದ್ದೇವೆ. ಅವುಗಳನ್ನು ಹೊರತು ಪಡಿಸಿದರೆ, ಉಳಿದ ಅಷ್ಟೂ ಘಟನೆಗಳು ನೈಜ ಬದುಕಿನಲ್ಲಿ ನಡೆದ ವಿವರಗಳೇ ಆಗಿರುತ್ತವೆ. ಅಂದಹಾಗೆ, ಜೈಲಿನ ಒಳಗೆ ಕೆಲಸ ಮಾಡುವ ಸರಕಾರೇತರ ಸಂಸ್ಥೆಗಳು, ಜೈಲಿನೊಳಗೆ ಶಿಕ್ಷೆಯನ್ನು ಅನುಭವಿಸುತ್ತಿರುವವರು, ಪೆರೋಲ್ ಮೇಲೆ ಹೊರಗೆ ಇರುವವರು ಹಾಗೂ ಜೈಲು ವಾಸ ಮುಗಿಸಿ ಬಂದವರ ಮಾಹಿತಿಯ ಆಧಾರ ಮತ್ತು ದಾಖಲೆಗಳು ಈ ಮಾಲಿಕೆಯ ಮೂಲದ್ರವ್ಯಗಳು; ಒಟ್ಟಾರೆ, ಇದು ‘ಕಂಬಿ ಹಿಂದಿನ ಕತೆ’.

ಮೊದಲಿಗೆ, ನಾವು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಿಂದಲೇ ಮಾಲಿಕೆಯನ್ನು ಆರಂಭಿಸುತ್ತಿದ್ದೇವೆ. ರಾಜ್ಯದ 9 ಕೇಂದ್ರ ಕಾರಾಗೃಹಗಳ ಪೈಕಿ ಅತ್ಯಂತ ದೊಡ್ಡ ಕಾರಾಗೃಹ ಪರಪ್ಪನ ಅಗ್ರಹಾರ. ಇಲ್ಲಿರುವ ಸುಮಾರು 4. 5 ಸಾವಿರ ಕೈದಿಗಳ ಪೈಕಿ ಈತ ಕೂಡ ಒಬ್ಬ; ಹೆಸರು ಧರ್ಮೇಶ್ (ಹೆಸರು ಬದಲಿಸಲಾಗಿದೆ).

ಧರ್ಮೇಶ್ ಆರೇಳು ವರ್ಷದ ಕೆಳಗೆ ಬೆಂಗಳೂರಿಗೆ ಬಂದ ಸಾಮಾನ್ಯ ಕುಟುಂಬದ ಯುವಕ. ಅವರ ತಂದೆ ಪಶ್ಮಿಮ ಬಂಗಾಳದ ಹಳ್ಳಿಯೊಂದರಲ್ಲಿ ಕೃಷಿ ಮಾಡುತ್ತಿದ್ದರು. ಕೃಷಿಯಿಂದ ಬರುತ್ತಿದ್ದ ಆದಾಯ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಕೊನೆಗೆ ಉದ್ಯೋಗ ಅರಸುತ್ತಾ ಉತ್ತರ ಭಾರತದ ಬಡವರು, ಕೂಲಿ ಕಾರ್ಮಿಕರು ಉದ್ಯಾನ ನಗರಿಗೆ ವಲಸೆ ಬರುತ್ತಿದ್ದ ಕಾಲದಲ್ಲಿ ಧರ್ಮೇಶ್ ಬೆಂಗಳೂರು ರೈಲು ಹತ್ತಿದ. 10ನೇ ತರಗತಿವರೆಗೆ ಶಾಲೆಗೆ ಹೋಗಿದ್ದ ವಿದ್ಯಾರ್ಹತೆ ಜತೆಗಿತ್ತು. ಹಾಗೆ ಬಂದವ ಕಟ್ಟಡ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡ. ಬೆಂಗಳೂರಿಗೆ ಬಂದು ವರುಷಗಳು ಉರುಳಿದವು.

ತನ್ನ ದುಡಿಮೆಯಲ್ಲಿ ಪ್ರತಿ ತಿಂಗಳೂ ಧರ್ಮೇಶ್ ಮನೆಗೆ ಹಣ ಕಳಿಸುತ್ತಿದ್ದ. ಮಗನ ದುಡಿಮೆಯಲ್ಲಿ ಸಂಸಾರ ತಕ್ಕ ಮಟ್ಟಿಗೆ ಒಳ್ಳೆಯ ದಿನಗಳು ಕಾಣುತ್ತಿತ್ತು. ಮೂವರು ಮಕ್ಕಳಲ್ಲಿ ಇನ್ನಿಬ್ಬರೂ ದುಡಿಮೆ ಮಾಡುತ್ತಿದ್ದರು. ಹೇಗೂ ಅನುಕೂಲವಾಗಿದ್ದರಲ್ಲ, ಧರ್ಮೇಶನ ಮನೆಯಲ್ಲಿ ಮದುವೆಗೆ ನಿಧಾನವಾಗಿ ಮಾತುಕತೆಗಳು ಆರಂಭವಾಗಿದ್ದವು; ಅವರ ಪಾಲಿಗೆ ಸಂಭ್ರಮದ ದಿನಗಳವು. ಆದರೆ ಆ ಸಂಭ್ರಮಕ್ಕೆ ಕೊಳ್ಳಿ ಇಡುವ ಘಟನೆ ನಡೆಯಲು ಹೆಚ್ಚು ಸಮಯ ಬೇಕಾಗಲಿಲ್ಲ.

ಗಟ್ಟಿ ಮುಟ್ಟಾದ, ಚಿಗುರು ಮೀಸೆಯ ಹುಡುಗ ಧರ್ಮೇಶ್ ಮೈ ಬಗ್ಗಿಸಿ ಸರಿ ರಾತ್ರಿಯವರೆಗೆ ದುಡಿಯುತ್ತಿದ್ದ. ಅದೊಂದು ದಿನ ಕಟ್ಟಡ ಕೆಲಸ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ತನ್ನ ಮೂವರು ಗೆಳೆಯರೊಂದಿಗೆ ಬೊಮ್ಮನಹಳ್ಳಿ ಸಮೀಪದ ತನ್ನ ವಾಸಸ್ಥಳಕ್ಕೆ ಹೊರಟ್ಟಿದ್ದ. ಸರಿ ರಾತ್ರಿಯಲ್ಲಿ ನಿರ್ಜನ ಪ್ರದೇಶದಲ್ಲಿ ನಾಲ್ಕು ಜನ ಯುವಕರನ್ನು ಕಂಡ ಬೀಟ್ ಪೊಲೀಸರು ಅವರನ್ನು ಹಿಡಿದು ಒಳಕ್ಕೆ ಹಾಕಿಕೊಂಡರು. ಅವರ ಮೇಲೆ ‘ಡಕಾಯಿತಿ ಪ್ರಯತ್ನ’ದ ಕೇಸ್ ಜಡಿಯಲಾಯಿತು. ಕಾನೂನಿನಲ್ಲಿ 10 ವರ್ಷಗಳ ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಅಪರಾಧವದು.

ಹಾಗೆ ನಾಲ್ವರೂ ಪರಪ್ಪನ ಅಗ್ರಹಾರ ಜೈಲು ಸೇರಿದರು. ಧರ್ಮೇಶ್ ಜೊತೆಗಿದ್ದ ಉಳಿದ ಮೂವರ ಪರವಾಗಿ ಊರಿನಿಂದ ಜಾಮೀನು ನೀಡಲು ಜನ ಬಂದು ಬಿಡಿಸಿಕೊಂಡು ಹೋದರು. ಆದರೆ ಈತ ಮಾತ್ರ ಜೈಲಿನಲ್ಲೇ ಉಳಿದು ಬಿಟ್ಟ. ಆತನನ್ನು ಬಿಡಿಸಿಕೊಂಡು ಹೋಗಲು ಆತನ ಊರಿನಿಂದ ಯಾರೂ ಬರಲಿಲ್ಲ. ಧರ್ಮಶ್ ಒಂದೆರಡು ಸಲ ಜೈಲಿನಿಂದಲೇ ಮನೆಗೆ ಪತ್ರ ಬರೆದ. ಅವರ ಊರಿನಲ್ಲಿ ಜೈಲಿಗೆ ಹೋದವರನ್ನು ಅಸಹ್ಯವಾಗಿ ನೋಡುತ್ತಾರಂತೆ. ಜೈಲು ಎಂಬುದು ಅವರ ಹಳ್ಳಿಯ ಪಾಲಿಗೆ ಸಾಮಾಜಿಕ ಅನಿಷ್ಟ. ಅವನ ಕುಟುಂಬದವರೂ ಆತನನ್ನು ಹತ್ತಿರ ಬಿಟ್ಟುಕೊಳ್ಳಲಿಲ್ಲ. ಆತನನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಹೋಗಲು ಅವರು ಸಿದ್ಧವಿರಲಿಲ್ಲ. ಇತ್ತ ಬೆಂಗಳೂರಿನಲ್ಲೂ ಆತನಿಗೆ ಜಾಮೀನು ನೀಡಲು ಯಾರೂ ಇರಲಿಲ್ಲ. ಹಾಗೆ ಕಾಲ ಕಳೆದು ಹೋಯಿತು.

ಜೈಲಿನೊಳಗೆ ಧರ್ಮೇಶ್ ನಿಧಾನಕ್ಕೆ ಖಿನ್ನತೆ ಕಡೆಗೆ ಸಾಗತೊಡಗಿದ; ಆತ ಹುಚ್ಚನಾಗುತ್ತಾ ಬಂದ. ಮೆಂಟಲ್ ಬ್ಲಾಕಿನಲ್ಲಿ ಆತನಿಗೆ ಚಿಕಿತ್ಸೆ ನೀಡಲಾಯಿತು. ಫಲ ನೀಡಲಿಲ್ಲ; ಪೂರ್ತಿ ಹುಚ್ಚನೇ ಆಗಿ ಬಿಟ್ಟ. ಹಾಗಂಥ ಧರ್ಮೇಶ್ ಉಗ್ರ ಹುಚ್ಚನೂ ಅಲ್ಲ. ಕಿರುಚಾಡುವುದು, ಹೊಡೆಯುವುದು ಅಂಥಹದ್ದೆನ್ನೆಲ್ಲಾ ಮಾಡುವುದಿಲ್ಲ. ಆದರೆ ಸ್ನಾನ ಮಾಡುವುದಿಲ್ಲ, ಊಟ ಮಾಡುವುದಿಲ್ಲ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ, ಅಷ್ಟೆ.

“ಮಾತನಾಡಿಸಿದರೆ, ನನ್ನನ್ನು ಹೊರಗೆ ಕರೆದುಕೊಂಡು ಹೋಗಿ ಎನ್ನುತ್ತಾನೆ. ನಾವೂ ತುಂಬಾ ಸಲ ಆತನ ಬಿಡುಗಡೆಗೆ ಪ್ರಯತ್ನ ಪಟ್ಟೆವು. ಆತನಿಗಾಗಿ ಉಚಿತ ಕಾನೂನು ಸೇವೆಗೂ ವ್ಯವಸ್ಥೆ ಮಾಡಿದೆವು. ಸೆಲ್ಫ್ ಶ್ಯೂರಿಟಿ ಮೇಲೆ ಬಿಡುಗಡೆಗೆ ಪೊಲೀಸರು ಒಪ್ಪಿಕೊಂಡರು. ಆದರೆ ಆತನೊಂದಿಗಿದ್ದವರನ್ನು 50,000 ಭದ್ರತೆ ಮೇಲೆ ಬಿಡಿಸಿಕೊಂಡು ಹೋಗಿದ್ದರು. ಈತನಿಗೂ ಅಷ್ಟು ನೀಡಬೇಕಾಗುತ್ತದೆ ಎಂದರು ಪೊಲೀಸರು. ನಾವು ಅಷ್ಟನ್ನು ವ್ಯವಸ್ಥೆ ಮಾಡಲು ಆಗಲಿಲ್ಲ, ”
-ಧರ್ಮೇಶ್‌ನನ್ನು ಹತ್ತಿರದಿಂದ ನೋಡಿದ ಮಾಜಿ ಕೈದಿ.

ಸದ್ಯ ಈತ ಜೈಲಿಗೆ ಬಂದು ಎರಡೂವರೆ ವರ್ಷಗಳು ಕಳೆದು ಹೋಗಿವೆ. ಶಿಕ್ಷೆಯೇ ಇಲ್ಲದೇ ಕೇವಲ ವಿಚಾರಣಾಧೀನ ಖೈದಿಯಾಗಿ ದಿನ ದೂಡುತ್ತಿದ್ದಾನೆ. ಸುಪ್ರೀಂ ಕೋರ್ಟಿನ ತೀರ್ಪಿನಂತೆ ಒಟ್ಟು ಐದು ವರ್ಷ (ಗರಿಷ್ಠ ಶಿಕ್ಷೆ ಪ್ರಮಾಣದ ಅರ್ಧ ಭಾಗ) ಜೈಲು ವಾಸ ಪೂರ್ಣ ಗೊಳಿಸಿದರೆ ಆತ ಬಿಡುಗಡೆಯಾಗುತ್ತಾನೆ. ಅದಕ್ಕಿನ್ನೂ ಎರಡೂವರೆ ವರ್ಷಗಳ ಕಾಲಾವಕಾಶ ಬಾಕಿ ಇದೆ. ಅಷ್ಟೊತ್ತಿಗೆ ಧರ್ಮೇಶನ ಮಾನಸಿಕ ಆರೋಗ್ಯ ಸ್ಥಿತಿ ಏನಾಗಿರುತ್ತದೆ ಎಂಬುದು ಊಹಿಸಿಕೊಳ್ಳಬೇಕಷ್ಟೆ.

ಕಟ್ಟಡ ಕೆಲಸಕ್ಕೆ ಬೆಂಗಳೂರಿಗೆ ಬಂದವನು ಜೈಲು ಸೇರಿ ಹುಚ್ಚನಾದ ಕತೆ!
“ಹೊರ ರಾಜ್ಯಗಳವರು, ಬಡ ಕೈದಿಗಳು ಜೈಲಿನಲ್ಲಿ ಇದೇ ರೀತಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರನ್ನು ಬಿಡಿಸಿಕೊಂಡು ಹೋಗಲು ಕುಟುಂಬಸ್ಥರು ಬರುವುದು ತುಂಬಾ ಕಡಿಮೆ ಎನ್ನುತ್ತಾರೆ,”
-ಮಾಜಿ ಕೈದಿಯೊಬ್ಬರ ಮಾತು.
“ಇದು ಧರ್ಮೇಶನೊಬ್ಬನ ಕಥೆಯಲ್ಲ. ಜೈಲಿನಲ್ಲಿರುವ ಶೇಕಡಾ 10 ಜನ ಇಂಥವರೇ. ಇವರಿಂದ ಸರಕಾರಕ್ಕೂ ನಷ್ಟ, ವ್ಯಕ್ತಿಗೂ ನಷ್ಟ. ಇಂತಹ ಕೈದಿಗಳಿದ್ದ ಉಪಯೋಗವಾಗುವುದು ಜೈಲಿನಲ್ಲಿರುವ ‘ಡಾನ್’ ಖೈದಿಗಳಿಗೆ ಮಾತ್ರ. ಅವರು ಇವರ ಹೆಸರಿನಲ್ಲಿ ಜೈಲಿನೊಳಗೆ ಮನೆ (ಹೊಟೇಲ್) ಊಟ ತರಿಸಿಕೊಂಡು ತಿನ್ನಬಹುದು. ಅವರಿಗಷ್ಟೇ ಲಾಭ,”
-ಜೈಲಿನ ಬಗ್ಗೆ ಅಧ್ಯಯನ ನಡೆಸುತ್ತಿರುವವರೊಬ್ಬರ ಹೇಳಿಕೆ.

ನಿಜವಾಗಿಯೂ ಜೈಲು ಇರಬೇಕಾದುದು ಮನಪರಿವರ್ತನ ಕೇಂದ್ರವಾಗಿ. ಆದರೆ ಇಂಥಹ ಅಮಾಯಕರನ್ನು ಜೈಲಿಗೆ ಹಾಕುವುದರಿಂದ ಮುಂದೆ ಅವರು ನಿಧಾನಕ್ಕೆ ಕ್ರಿಮಿನಲ್ಗಳಾಗುತ್ತಾರೆ. ಜೈಲಿನಲ್ಲಿನ ಕ್ರಿಮಿನಲ್ಗಳ ಸಂಪರ್ಕ ಅವರನ್ನು ಆ ರೀತಿ ಮಾಡುತ್ತದೆ ಎನ್ನುತ್ತಾರೆ ಅಧ್ಯಯನ ನಡೆಸುತ್ತಿರುವವರು.

ಶೇಕಡಾ 10 -20 ಜನ ಜೈಲಿಗೆ ಬಂದ ನಂತರವೇ ಪೂರ್ಣಾವಧಿ ಕ್ರಿಮಿನಲ್ಗಳಾಗಿ ಬದಲಾಗಿದ್ದಾರೆ ಎಂಬುದಕ್ಕೆ ಅಂಕಿ ಅಂಶಗಳನ್ನು ಅವರು ನಮ್ಮ ಮುಂದಿಡುತ್ತಾರೆ; ಅದು ಬೇರೆಯದೇ ಕತೆ.

ಸದ್ಯ ಧರ್ಮೇಶನ ಪ್ರಕರಣದಲ್ಲಿ ಜಾಮೀನು ನೀಡಲು ಗತಿ ಇಲ್ಲದೆ, ಮಾನಸಿಕ ರೋಗಿಯಾಗಿ ಬದಲಾದ ಕೈದಿಯನ್ನು ನಮ್ಮ ಸರಕಾರ ಸಾಕುತ್ತಿದೆ. ಆತ ಎಸಗಿದ ಅಥವಾ ಎಸಗಿಲ್ಲ ಅಪರಾಧವನ್ನು ತೀರ್ಮಾನಿಸಬೇಕಾದ ನ್ಯಾಯಾಂಗ ವ್ಯವಸ್ಥೆ ತನ್ನದೇ ಬಂಧನದಲ್ಲಿ ಇಟ್ಟುಕೊಂಡಿದೆ. ಧರ್ಮೇಶನಿಗೆ, ಅಂತಹ ಕೈದಿಗಳಿಗೆ ಮುಕ್ತಿ ಸಿಗೋದು ಯಾವಾಗ?.

ಚಿತ್ರ: ಡೈಲಿ ಮೇಲ್.