ಶಾಖೆ ತೆರೆಯಿರಿ, ವದಂತಿಗಳನ್ನು ತಡೆಯಿರಿ; ವಾಟ್ಸ್‌ಆಪ್‌ಗೆ ಸರಕಾರದ ಸೂಚನೆ
news

ಶಾಖೆ ತೆರೆಯಿರಿ, ವದಂತಿಗಳನ್ನು ತಡೆಯಿರಿ; ವಾಟ್ಸ್‌ಆಪ್‌ಗೆ ಸರಕಾರದ ಸೂಚನೆ

ಮಂಗಳವಾರ ವಾಟ್ಸ್‌ಆಪ್‌ ಕಂಪನಿಯ ಸಿಇಓ ಕ್ರಿಸ್‌ ಡೇನಿಯಲ್ಸ್‌ ಜತೆ ಮಾತಕತೆ ನಡೆಸಿರುವ ಸಚಿವ ರವಿಶಂಕರ್‌ ಪ್ರಸಾದ್‌, ವಂದತಿಗಳನ್ನು ತಡೆಯಲು ಹಲವಾರು ಕ್ರಮಗಳನ್ನು ಸೂಚಿಸಿದ್ದಾರೆ.

ವದಂತಿಗಳನ್ನು ಹಬ್ಬಿಸಲು ರಾಜ ಮಾರ್ಗ ಎಂಬಂತಾಗಿರುವ ವಾಟ್ಸ್‌ಆಪ್‌ ಕಂಪನಿ, ಭಾರತದಲ್ಲಿ ಹಿಂಸೆಗೆ ಕಾರಣವಾಗುವ ಸುಳ್ಳು ಸುದ್ದಿಗಳನ್ನು ತಡೆಯಲು ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಮಂಗಳವಾರ ತಿಳಿಸಿದ್ದಾರೆ.

ರವಿ ಶಂಕರ್‌ ಪ್ರಸಾದ್‌ ವಾಟ್ಸ್‌ಆಪ್‌ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್‌ ಡೇನಿಯಲ್ಸ್‌ ಜತೆ 45 ನಿಮಿಷಕ್ಕೂ ಹೆಚ್ಚು ಕಾಲ ಸಭೆ ನಡೆಸಿದ ಬಳಿಕ ಈ ಸುದ್ದಿಯನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವ ಮೂಲವನ್ನು ಹುಡುಕಲು ವಿಸ್ತೃತವಾದ ಯಾಂತ್ರಿಕತೆಯನ್ನು ಸಿದ್ಧಪಡಿಸುವಂತೆ ಕ್ರಿಸ್‌ ಡೇನಿಯಲ್‌ರ ಬಳಿ ಕೇಳಿರುವುದಾಗಿ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಸಂದೇಶವು ಎಲ್ಲಿಂದ ಬಂದಿದೆ ಎನ್ನುವುದನ್ನು ಹುಡುಕಲು ರಾಕೆಟ್‌ ತಂತ್ರಜ್ಞಾನದ ಅಗತ್ಯವಿಲ್ಲ ಎಂದಿರುವ ರವಿ ಶಂಕರ್‌ ಪ್ರಸಾದ್‌, ವಾಟ್ಸ್‌ಆಪ್‌ ಸಂಸ್ಥೆ ವದಂತಿಗಳನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳ ಜತೆ ಸೇರಿ ಕೆಲಸ ನಿರ್ವಹಿಸುತ್ತಿದೆ ಎಂದಿದ್ದಾರೆ. ಇದರ ಜತೆಗೆ ದೇಶದ ಕಾನೂನುಗಳಿಗೆ ಅನುಸಾರವಾಗಿ ನಡೆದುಕೊಂಡು, ಭಾರತದಲ್ಲಿ ಸ್ಥಳೀಯ ಶಾಖೆಯನ್ನು ತೆರೆಯುವಂತೆ ವಾಟ್ಸ್‌ಆಪ್‌ ಸಿಇಓ ಕ್ರಿಸ್‌ ಡೇನಿಯಲ್ಸ್‌ಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಇದು ತುಂಬಾ ಫಲಪ್ರದವಾದ ಭೇಟಿ ಎಂದಿರುವ ರವಿಶಂಕರ್‌ ಪ್ರಸಾದ್‌, “ವಾಟ್ಸ್‌ಆಪ್ ಭಾರತದಲ್ಲಿ ಹಲವಾರು ಉತ್ತಮ ಕೆಲಸಗಳನ್ನು ಮಾಡಿದೆ. ಶಿಕ್ಷಣ, ಆರೋಗ್ಯ ಮತ್ತು ಕೇರಳವನ್ನು ರಕ್ಷಿಸುವಲ್ಲಿ ವಾಟ್ಸ್‌ಆಪ್‌ನ ಕೆಲಸ ಕೂಡ ಮಹತ್ವದ್ದು. ಇವೆಲ್ಲವೂ ಸಕಾರಾತ್ಮಕ ಅಂಶಗಳು. ಜತೆಗೆ ಹಲವು ದೋಷಗಳಿವೆ. ವಾಟ್ಸ್‌ಆಪ್‌ ಸಂದೇಶಗಳಿಂದಾಗಿ ದೇಶದಲ್ಲಿ ಹಲವಾರು ಕೊಲೆ, ಹಿಂಸೆಗಳು ನಡೆದಿವೆ. ಜತೆಗೆ ಅಶ್ಲೀಲ ವಿಡಿಯೋಗಳೂ ಕೂಡ ಜನರ ಮಧ್ಯೆ ಹರಡಲ್ಪಡುತ್ತಿವೆ. ದೇಶದ ಕ್ರಿಮಿನಲ್‌ ಕಾನೂನುಗಳನ್ನು ಉಲ್ಲಂಘಿಸುವ ಕೃತ್ಯಗಳಿಗೆ ಮಾರ್ಗದಂತಾಗಿರುವ ವಾಟ್ಸ್‌ಆಪ್‌ ಈ ಎಲ್ಲಾ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಲೇಬೇಕಿದೆ,” ಎಂದು ತಿಳಿಸಿದ್ದಾರೆ.

ಕ್ರಿಸ್‌ ಡೇನಿಯಲ್ಸ್‌ಗೆ 3 ಸೂಚನೆಗಳನ್ನು ನೀಡಿರುವುದಾಗಿ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ. ಮೊದಲನೆಯದು ವಾಟ್ಸ್‌ಆಪ್‌ ಕಂಪನಿ ಭಾರತದಲ್ಲಿ ದೂರು ಅಧಿಕಾರಿಯನ್ನು ನೇಮಿಸಿಕೊಳ್ಳಬೇಕು. ಎರಡನೆಯದು, ಭಾರತದಲ್ಲಿ ಸಮಸ್ಯೆಗಳು ಉಂಟಾದಾಗ ಅಮೆರಿಕಾದಿಂದ ಉತ್ತರ ದೊರೆಯುವುದು ಸರಿ ಎನ್ನಿಸುವುದಿಲ್ಲ. ಆದ್ದರಿಂದ ವಾಟ್ಸ್‌ಆಪ್‌ ಕಂಪನಿ ಭಾರತದ ಕಾನೂನುಗಳಿಗೆ ಬದ್ಧವಾಗಿ ನಡೆಯಬೇಕು. ಮೂರನೆಯದು, ಭಾರತದ ಡಿಜಿಟಲ್‌ ಕ್ಷೇತ್ರದಲ್ಲಿ ವಾಟ್ಸ್‌ಆಪ್‌ನ ಪಾತ್ರ ಪ್ರಮುಖವಾದದ್ದು. ಇಷ್ಟು ದೊಡ್ಡ ಪಾತ್ರ ವಹಿಸುತ್ತಿರುವ ವಾಟ್ಸ್‌ಆಪ್‌ ಭಾರತದಲ್ಲೇ ಒಂದು ಸ್ಥಳೀಯ ಶಾಖೆಯನ್ನು ತೆರೆಯಬೇಕು. ಈ ಮೂರು ಸೂಚನೆಗಳಿಗೆ ಉತ್ತಮ ಪ್ರತಿಸ್ಪಂದನೆ ದೊರೆತಿದೆ ಎಂದು ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ವಾಟ್ಸ್‌ಆಪ್‌ ಸಿಇಓ ಕ್ರಿಸ್‌ ಡೇನಿಯಲ್ಸ್ ಮಂಗಳವಾರ ಭಾರತಕ್ಕೆ ಆಗಮಿಸಿದ್ದು, ಹಲವಾರು ಸರಕಾರಿ ಅಧಿಕಾರಿಗಳು ಮತ್ತು ವಾಟ್ಸ್‌ಆಪ್‌ ಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ವಾಟ್ಸ್‌ಆಪ್‌ ಮೂಲಕ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಯಲು ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚಿಸುವುದರ ಜತೆಗೆ ಭಾರತದಲ್ಲಿ ಹಣ ವರ್ಗಾವಣೆ ಸೇವೆಯನ್ನು ಉತ್ತೇಜಿಸಲು ಚಿಂತಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ತಿಂಗಳು ವಾಟ್ಸ್‌ಆಪ್‌ ಕಂಪನಿಯ ಚೀಫ್‌ ಆಪರೇಟಿಂಗ್‌ ಆಫೀಸರ್‌ ಮ್ಯಾಥ್ಯೂ ಐಡೆಮಾ ಸೇರಿದಂತೆ ಇನ್ನಿತರೆ ಮುಖ್ಯ ಅಧಿಕಾರಿಗಳು ಭಾರತದ ಐಟಿ ಕಾರ್ಯದರ್ಶಿ ಮತ್ತು ಸರಕಾರಿ ಅಧಿಕಾರಿಗಳನ್ನು ಭೇಟಿಯಾಗಿ, ವದಂತಿಗಳನ್ನು ತಡೆಯಲು ಕಂಪನಿ ಕೈಗೊಂಡಿರುವ ಹಲವಾರು ಕ್ರಮಗಳನ್ನು ವಿವರಿಸಿದ್ದರು.

ಕಳೆದ ಹಲವಾರು ತಿಂಗಳುಗಳಿಂದ ವಾಟ್ಸ್‌ಆಪ್‌ನಲ್ಲಿ ಹರಿದಾಡಿದ್ದ ಸುಳ್ಳು ಸುದ್ದಿಗಳು ಹಲವಾರು ಅಮಾಯಕರ ಪ್ರಾಣವನ್ನು ಬಲಿ ಪಡೆದಿದ್ದವು. ಫೇಸ್‌ಬುಕ್‌ ಮಾಲಿಕತ್ವದ ವಾಟ್ಸ್‌ಆಪ್‌ ಕಂಪನಿಗೆ ಈ ಕುರಿತು ಅಗತ್ಯವಾದ ಕ್ರಮಗಳನ್ನು ಶೀಘ್ರವೇ ಕೈಗೊಳ್ಳುವಂತೆ ಭಾರತದ ಸರಕಾರ 2 ನೋಟಿಸ್‌ಗಳನ್ನು ಜಾರಿ ಮಾಡಿತ್ತು. ಸರಕಾರ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲು ಮುಂದಾದ ತಕ್ಷಣವೇ ವಾಟ್ಸ್‌ಆಪ್‌ ಸಂಸ್ಥೆ ಭಾರತದ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಒಂದು ಪೂರ್ಣ ಪುಟದಷ್ಟು ಜಾಹಿರಾತು ನೀಡಿ, ಸುಳ್ಳು ಸುದ್ದಿಗಳನ್ನು ಗುರುತಿಸುವುದು ಹೇಗೆ ಎಂದು ತಿಳಿಸಿಲು ಪ್ರಯತ್ನಿಸಿತ್ತು.

ಜೂನ್‌ ತಿಂಗಳಲ್ಲಿ ವಾಟ್ಸ್‌ಆಪ್‌ ಮೆಸೇಜ್‌ಗಳ ಮೇಲೆ ಫಾರ್ವರ್ಡೆಡ್‌ ಎಂದು ಲೇಬಲ್‌ ಮಾಡುವ ಕ್ರಮ ಕೈಗೊಂಡಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಬಳೆಕೆದಾರರಿಗೆ ದೊರೆತ ಸಂದೇಶಗಳನ್ನು ಕೇವಲ 5 ಜನರಿಗಷ್ಟೇ ಫಾರ್ವರ್ಡ್‌ ಮಾಡಬಹುದಾದ ಅವಕಾಶವನ್ನು ಅಪ್‌ಡೇಟೆಡ್‌ ವರ್ಷನ್‌ನಲ್ಲಿ ಅಳವಡಿಸಿತ್ತು.

ಆದರೆ ವಾಟ್ಸ್‌ಆಪ್‌ ಸಂದೇಶಗಳ ಮೇಲೆ ನಿಗಾ ವಹಿಸುವುದು ಅಷ್ಟು ಸುಲಭದ ಕೆಲಸವೇನಲ್ಲ. ಹಲವಾರು ಭಾಷೆಗಳ ಜತೆಗೆ, ಸ್ಥಳೀಯ ಭಾಷೆಗಳ ಪದಗಳನ್ನು ಇಂಗ್ಲೀಷ್‌ ಲಿಪಿಯಲ್ಲಿ ಬರೆಯುವುದು ಬಹುಪಾಲು ಭಾರತೀಯರ ವಾಡಿಕೆಯಂತಾಗಿದೆ. ಅದನ್ನೂ ಕೂಡ ಓದುವುದು ಕಷ್ಟ. ಇದರ ಜತೆಗೆ ವೈಯಕ್ತಿಕ ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ಸಲುವಾಗಿ ವಾಟ್ಸ್‌ಆಪ್‌ ‘ಎಂಡ್‌-ಟು-ಎಂಡ್‌ ಎನ್‌ಸ್ಕ್ರಿಪ್ಷನ್‌’ ಎಂಬ ವ್ಯವಸ್ಥೆಯನ್ನು ಒಳಗೊಂಡಿದೆ. ಸಂದೇಶ ಕಳುಹಿಸಿದವರು ಮತ್ತು ಪಡೆದವರು ಮಾತ್ರವೇ ಸಂದೇಶಗಳನ್ನು ಓದಬಹುದು ಅಥವಾ ವಿಡಿಯೊ, ಆಡಿಯೋ ಮೆಸೇಜ್‌ಗಳನ್ನು ವೀಕ್ಷಿಸಿ ಆಲಿಸಬಹುದು. ಹೀಗಿದ್ದಾಗ ಸುಳ್ಳು ಸುದ್ದಿಗಳನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆ ದೊಡ್ಡದಾಗಿದೆ.