samachara
www.samachara.com
ಆರ್‌ಆರ್‌ ನಗರ ಮತದಾನ ಮೇ 28ಕ್ಕೆ ಮುಂದೂಡಿಕೆ; ಬದಲಾಗಲಿದೆಯೇ ಕ್ಷೇತ್ರದ ಚಿತ್ರಣ!
JUST IN

ಆರ್‌ಆರ್‌ ನಗರ ಮತದಾನ ಮೇ 28ಕ್ಕೆ ಮುಂದೂಡಿಕೆ; ಬದಲಾಗಲಿದೆಯೇ ಕ್ಷೇತ್ರದ ಚಿತ್ರಣ!

ಒಂದು ವೇಳೆ ಚುನಾವಣಾ ಅಕ್ರಮ ನಡೆಸಿರುವ ಅಭ್ಯರ್ಥಿ ಗೆಲುವು ಸಾಧಿಸಿದ್ದರೂ ತನಿಖೆಯಲ್ಲಿ ಅವರು ಅಕ್ರಮ ನಡೆಸಿರುವುದು ಸಾಬೀತಾರೆ ಶಾಸಕತ್ವ ರದ್ದಾಗುತ್ತದೆ. ಜತೆಗೆ 6 ತಿಂಗಳು ಜೈಲು, 6 ವರ್ಷ ಚುನಾವಣಾ ನಿಷೇಧಕ್ಕೂ ಒಳಗಾಗಬೇಕಾಗುತ್ತದೆ.

ಒಂಬತ್ತು ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತದಾನವನ್ನು ಚುನಾವಣಾ ಆಯೋಗ ಮೇ 28ಕ್ಕೆ ಮುಂದೂಡಿದೆ. ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ.

ಒಂದು ವೇಳೆ ಚುನಾವಣಾ ಅಕ್ರಮ ನಡೆಸಿರುವುದು ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಎಂಬುದು ಸಾಬೀತಾದರೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 8ರಡಿ ಅವರು 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಲ್ಲದೆ 6 ತಿಂಗಳಿಗೆ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ ವಿಧಿಸಲೂ ಕಾನೂನಿನಲ್ಲಿ ಅವಕಾಶವಿದೆ.

ರಾಜರಾಜೇಶ್ವರಿನಗರದ ಈ ಪ್ರಕರಣದಲ್ಲಿ ಈವರೆಗೂ ಕಾಂಗ್ರೆಸ್‌ ಮತ್ತು ಬಿಜೆಪಿ ತಮ್ಮ ಪಾತ್ರ ಇಲ್ಲ ಎಂದೇ ವಾದಿಸುತ್ತಿವೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಪ್ರತಿದೂರನ್ನೂ ಈ ಪಕ್ಷಗಳು ನೀಡಿವೆ. ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ತಾವು ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಚುನಾವಣಾ ಅಕ್ರಮ ಸಾಬೀತಾದರೆ ರಾಜರಾಜೇಶ್ವರಿನಗರದ ರಾಜಕೀಯ ಚಿತ್ರಣವೇ ಬದಲಾಗಲಿದೆ.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಫ್ಲ್ಯಾಟ್‌ನಲ್ಲಿ ಮೇ 8ರಂದು 9 ಸಾವಿರಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಹಾಗೂ ಮತದಾರರ ಪಟ್ಟಿಗಳು ಪತ್ತೆಯಾಗಿದ್ದವು. ಇದಲ್ಲದೆ ಟ್ರಕ್‌ ಒಂದರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರ ಭಾವಚಿತ್ರವಿದ್ದ 95 ಲಕ್ಷ ರೂಪಾಯಿ ಮೌಲ್ಯದ ಟಿ-ಷರ್ಟ್‌ ಮತ್ತಿತರ ವಸ್ತುಗಳು ಮೇ 6ರಂದು ಪತ್ತೆಯಾಗಿದ್ದವು. ಇದನ್ನು ಚುನಾವಣಾ ಅಕ್ರಮ ಎಂದು ಪರಿಗಣಿಸಿರುವ ಚುನಾವಣಾ ಆಯೋಗ ಮತದಾನ ದಿನಾಂಕವನ್ನು ಮುಂದೂಡಿದೆ.

ಈ ಪ್ರಕರಣದಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡಿ ಮತದಾರರನ್ನು ಸೆಳೆಯಲು ಯತ್ನಿಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದರಿಂದ ಚುನಾವಣೆಯನ್ನು ಮುಂದೂಡಲಾಗಿದೆ.

ಗುರುತಿನ ಚೀಟಿಗಳು ಪತ್ತೆಯಾದ ಫ್ಟ್ಯಾಟ್‌ನಲ್ಲೇ ಮತದಾರರ ಜಾತಿ, ಲಿಂಗ, ಸಂಪರ್ಕ ಸಂಖ್ಯೆಯ ಮಾಹಿತಿ ಹಾಗೂ ಭಾವಚಿತ್ರಗಳೂ ಪತ್ತೆಯಾಗಿದ್ದು ಇವುಗಳ ಆಧಾರದಲ್ಲಿ ಸಮೀಕ್ಷೆ ನಡೆಸಿರುವುದೂ ತನಿಖೆಯಿಂದ ಗೊತ್ತಾಗಿದೆ. ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಪೊಲೀಸ್‌ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಒಂದು ವೇಳೆ ಚುನಾವಣಾ ಅಕ್ರಮ ನಡೆಸಿರುವ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೂ ತನಿಖೆಯಲ್ಲಿ ಅವರು ಚುನಾವಣಾ ಅಕ್ರಮ ನಡೆಸಿರುವುದು ಸಾಬೀತಾರೆ ಅವರ ಶಾಸಕತ್ವ ರದ್ದಾಗುತ್ತದೆ. ಇದರ ಜತೆಗೆ 6 ತಿಂಗಳು ಜೈಲು ಹಾಗೂ 6 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿಷೇಧಕ್ಕೂ ಒಳಗಾಗಬೇಕಾಗುತ್ತದೆ.

ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್‌ ಅವರ ನಿಧನದಿಂದಾಗಿ ಜಯನಗರದ ಚುನಾವಣೆಯನ್ನೂ ಮುಂದೂಡಲಾಗಿದೆ. ಆದರೆ, ಜಯನಗರ ವಿಧಾನಸಭಾ ಕ್ಷೇತ್ರದ ಮತದಾನ ದಿನಾಂಕವನ್ನು ಚುನಾವಣಾ ಆಯೋಗ ಇನ್ನೂ ಘೋಷಿಸಿಲ್ಲ.