ಹಿಂಸಾಚಾರ ಬಿಟ್ಟು ಶಾಂತಿ ಮಾರ್ಗ ಹಿಡಿದ ಕಿಮ್: ದಾಖಲೆ ಬರೆದ ದಕ್ಷಿಣ ಕೊರಿಯಾ ಭೇಟಿ
JUST IN

ಹಿಂಸಾಚಾರ ಬಿಟ್ಟು ಶಾಂತಿ ಮಾರ್ಗ ಹಿಡಿದ ಕಿಮ್: ದಾಖಲೆ ಬರೆದ ದಕ್ಷಿಣ ಕೊರಿಯಾ ಭೇಟಿ

“ಹೊಸ ಇತಿಹಾಸ ಈಗ ಪ್ರಾರಂಭ,” ಇದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಅತಿಥಿ ಪುಸ್ತಕದಲ್ಲಿ ದಾಖಲಿಸಿದ ವಾಕ್ಯ.

ಹೌದು, ಶುಕ್ರವಾರ ಬೆಳಿಗ್ಗೆ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೋಯ್ ಇನ್‌ರನ್ನು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಭೇಟಿ ಮಾಡುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದರು.

1953ರ ಕೊರಿಯಾ ಯುದ್ಧದ ಬಳಿಕ ಉತ್ತರ ಕೊರಿಯಾದ ಯಾವೊಬ್ಬ ನಾಯಕನೂ ದಕ್ಷಿಣ ಕೊರಿಯಾಗೆ ಕಾಲಿಟ್ಟಿರಲಿಲ್ಲ. ಇದಕ್ಕೆ ಕಾರಣ ಎರಡೂ ದೇಶಗಳ ಸಂಬಂಧ ಹಾವು-ಮುಂಗುಸಿಯಂತಿದ್ದಿದ್ದು. ಆದರೆ ಇದೀಗ ಕಿಮ್ ಜಾಂಗ್ ಉಭಯ ದೇಶಗಳ ಮಧ್ಯ ಶಾಂತಿ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೋಯ್ ಅವರನ್ನು ಗಡಿ ಪ್ರದೇಶದಲ್ಲಿ ಭೇಟಿ ಮಾಡಿದ ಅಪೂರ್ವ ಕ್ಷಣಗಳ ದೃಶ್ಯರೂಪ ಇಲ್ಲಿದೆ.

ಭೇಟಿಯ ಮೊದಲ ಕ್ಷಣಗಳು:

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳ ಗಡಿಯನ್ನು ಬೇರ್ಪಡಿಸುವ ಗಡಿ ರೇಖೆಯು ಉಭಯ ದೇಶಗಳ ನಾಯಕರ ಭೇಟಿಗೆ ಸಾಕ್ಷಿಯಾಯಿತು. ಉಭಯ ದೇಶಗಳ ಮಿಲಿಟರಿ ನಿಷೇಧಿತ ಗಡಿ ಪ್ರದೇಶದಲ್ಲಿ ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಪ್ರದೇಶದ ಗಡಿ ರೇಖೆ ದಾಟಿ ದಕ್ಷಿಣ ಕೊರಿಯಾ ದೇಶದ ನೆಲಕ್ಕೆ ಪಾದಾರ್ಪಣೆ ಮಾಡಿದರು. ನಂತರ ನಗುನಗುತ್ತ ಮೂನ್‌ ಜೇ–ಇನ್‌ ಅವರಿಗೆ ಹಸ್ತ ಲಾಘವ ಮಾಡಿದರು.

ಇದಾದ ಸ್ಪಲ್ಪ ಹೊತ್ತಿನ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ–ಇನ್‌, ಕಿಮ್ ಜಾಂಗ್ ಉನ್ ಅವರನ್ನು ತಮ್ಮ ಫ್ರೀಡಂ ಹೌಸ್‌ ಕಡೆಗೆ ಕರೆದೊಯ್ಯಲು ಮುಂದಾದಾಗ, ಕಿಮ್ ಜಾಂಗ್ ಉನ್ ಅವರು ಮೂನ್‌ ಜೇ–ಇನ್‌ ಅವರ ಕೈ ಹಿಡಿದು ಕರೆದುಕೊಂಡು ಹೋಗಿ ತಮ್ಮ ದೇಶದ ನೆಲಕ್ಕೆ ಪಾದಾರ್ಪಣೆ ಮಾಡಿಸಿದರು.

ವರ್ಷದ ಆರಂಭದಲ್ಲಿಯೇ ಅಮೆರಿಕದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಬೆದರಿಸಿದ್ದ ಕಿಮ್ ಜಾಂಗ್ ಉನ್ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿ ಕುತೂಹಲ ಸೃಷ್ಟಿಸಿದ್ದರು. ಅವರ ಈ ಭೇಟಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದೀಗ ದಕ್ಷಿಣ ಕೊರಿಯಾದ ಬೇಟಿಯೂ ಸಹಜವಾಗಿ ಕುತೂಹಲ ಕೆರಳಿಸಿದೆ. ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಲಿದೆ ಎನ್ನುತ್ತಿವೆ ವಿಶ್ಲೇಷಣೆಗಳು.

ಚಿತ್ರಕೃಪೆ: ಸಿಎನ್‌ಎನ್‌
ಚಿತ್ರಕೃಪೆ: ಸಿಎನ್‌ಎನ್‌

ಭೇಟಿಯ ಉದ್ದೇಶವಾದರೂ ಏನು?

ಕೊರಿಯಾದ ಪೆನಿನ್ಸುಲಾದಲ್ಲಿ ಅಣ್ವಸ್ತ್ರಗಳನ್ನು ನಾಶ ಮಾಡಿ, ಶಾಂತಿ ಕಾಪಾಡಿಕೊಳ್ಳುವ ಬಗ್ಗೆ ಕಿಮ್ ಜಾಂಗ್ ಉನ್ ಈ ಹಿಂದಿನ ತಮ್ಮ ಚೀನಾ ದೇಶದ ಭೇಟಿಯ ವೇಳೆಯಲ್ಲಿ ತಿಳಿಸಿದ್ದರು. ಅದರಂತೆ ಪೆನಿನ್ಸುಲಾದಲ್ಲಿ ಅಣ್ವಸ್ತ್ರ ನಾಶ ಮಾಡುವ ಹಾಗೂ ಉಭಯ ದೇಶಗಳ ಮದ್ಯೆ ಶಾಂತಿಗಾಗಿ ನಡೆದ ಭೇಟಿ ಇದಾಗಿದೆ.

ನಡೆದ ಮಾತುಕತೆಯಾದರೂ ಏನು?:

10:20ಕ್ಕೆ ಉಭಯ ದೇಶಗಳ ನಡುವಿನ ನಾಯಕರ ಮಾತುಕತೆ ಆರಂಭವಾಯಿತು. ಶೃಂಗಸಭೆಯ ‘ಪೀಸ್ ಹೌಸ್‌‘ ನಲ್ಲಿ ಕಿಮ್‌ ಜಾಂಗ್‌ ಉನ್‌ ಮಾತುಕತೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ‘ಹೊಸ ಇತಿಹಾಸ ಆರಂಭ’ ಎಂದು ಕಿಮ್ ಜಾಂಗ್ ಉನ್ ಅತಿಥಿ ಪುಸ್ತಕದಲ್ಲಿ ಬರೆಯುವ ಮೂಲಕ ಅಚ್ಚರಿ ಮೂಡಿಸಿದರು.

ಅಣ್ವಸ್ತ್ರ ನಿಷೇಧದ ಬಗ್ಗೆ, ಎರಡೂ ರಾಷ್ಟ್ರಗಳ ಮಧ್ಯದ ಶಾಂತಿ ಸಂಧಾನ ಹಾಗೂ ಸ್ನೇಹ ಸಂಬಂಧ ವೃದ್ಧಿಯ ಕುರಿತು ಉಭಯ ನಾಯಕರೂ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, “ನಾವು ಶಾಂತಿಗಾಗಿ ಮುಕ್ತ ಮಾತುಕತೆ ನಡೆಸೋಣ. ನಮ್ಮನ್ನು ನೋಡುತ್ತಿರುವ ಜಗತ್ತಿಗೆ ಹೊಸ ಸಂದೇಶ ನೀಡೋಣ,” ಎಂದು ಕಿಮ್ ಜಾಂಗ್ ಉನ್ ಹೇಳಿದರು. ಈ ಮೂಲಕ ಉಭಯ ರಾಷ್ಟ್ರಗಳ ಮಧ್ಯ ಸ್ನೇಹ ಬಾಂಧವ್ಯ ವೃದ್ಧಿಸುವ ಲಕ್ಷಣಗಳು ಕಾಣಿಸುತ್ತವೆ.

ಸ್ನೇಹ ಬಾಂಧವ್ಯವನ್ನು ವೃದ್ಧಿಸುವ ಭಾಗವಾಗಿ ಎರಡೂ ದೇಶಗಳ ಗಡಿ ರೇಖೆಯ ಮೇಲೆ ಫೈನ್ ಗಿಡ ನೆಡುವ ಮೂಲಕ ನಾಂದಿ ಹಾಡಿದರು. ಈ ಗಿಡಕ್ಕೆ ಎರಡೂ ದೇಶಗಳ ಮಣ್ಣು ಹಾಗೂ ನೀರನ್ನು ಹಾಕುವುದರ ಮೂಲಕ ರೂಪಕವಾಗಿ ತಮ್ಮ ದೇಶಗಳ ಮಧ್ಯದ ಸ್ನೇಹ ಸಂಬಂಧ ಬೆಳೆಯುತ್ತದೆ ಎನ್ನುವ ಸಂದೇಶ ಹೊರಡಿಸಿದರು.

ಚಿತ್ರಕೃಪೆ: ದಿ ನ್ಯೂಯಾರ್ಕ್‌ ಟೈಮ್ಸ್
ಚಿತ್ರಕೃಪೆ: ದಿ ನ್ಯೂಯಾರ್ಕ್‌ ಟೈಮ್ಸ್

ಆದರೆ “ಕೈ ಕುಲುಕಿಸಿರುವುದೇ ಸ್ನೇಹ ವೃದ್ಧಿಯಾಗಿದೆ ಎನ್ನುವ ಲಕ್ಷಣವಲ್ಲ. ಇಲ್ಲಿಯತನಕ ಉಭಯ ರಾಷ್ಟ್ರಗಳ ಯಾವುದೇ ಪಾಲಿಸಿ ಹಾಗೂ ಒಪ್ಪಂಧದಲ್ಲಿಯೂ ಬದಲಾವಣೆಯ ವರದಿಯಾಗಿಲ್ಲ. ಹೀಗಾಗಿ ಹೊರಗೆ ಇದು ಶಾಂತಿಗಾಗಿ ನಡೆದ ಮಾತುಕತೆ ಎಂದು ಕಂಡು ಬಂದಿದ್ದರೂ ಅಧಿಕೃತವಾಗಿ ಉಭಯ ದೇಶಗಳ ಮಧ್ಯೆ ಅಂತಹ ಬದಲಾವಣೆಯ ಯಾವುದೇ ಲಿಖಿತ ರೂಪದ ದಾಖಲೆ ಸದ್ಯಕ್ಕೆ ಲಭ್ಯವಿಲ್ಲ,” ಅಲ್‌ ಜಝೀರಾದ ಪತ್ರಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕಿಮ್ ಜಾಂಗ್ ಉನ್ ಬದಲಾವಣೆ?:

ಒಂದು ಸಂದರ್ಭದಲ್ಲಿ ಅಣ್ವಸ್ತ್ರಗಳಿಂದ ಇತರ ದೇಶಗಳಿಗೆ ಬೆದರಿಕೆ ಒಡ್ಡಿದ್ದ ಕಿಮ್ ಜಾಂಗ್ ಉನ್ ಈಗ ಬದಲಾಗಿದ್ದಾರೆಯೇ? ಇಂತಹ ಪ್ರಶ್ನೆಯೊಂದು ಸದ್ಯಕ್ಕೆ ಹುಟ್ಟಿಕೊಂಡಿದೆ. ಹೌದು, “ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾ ಮತ್ತು ಅಮೆರಿಕದ ನಾಯಕರೊಂದಿಗೆ ಮಾತುಕತೆಗೆ ತೆರೆದುಕೊಳ್ಳುವ ಸಾಧ್ಯತೆಯೂ ಇದೆ. ಈ ಮೂಲಕ ಅಮೇರಿಕದೊಂದಿಗೆ ವೈರತ್ವಕ್ಕೆ ಪೂರ್ಣ ವಿರಾಮ ಇಡುವ ಬಗ್ಗೆ ಸಿದ್ಧತೆ ನಡೆಯುತ್ತಿದೆ’ ಎಂದು ಚೀನಾ ಭೇಟಿಯ ಸಂದರ್ಭದಲ್ಲಿಯೇ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು.

ಅದರ ಪ್ರಕಾರ, “ಪರಮಾಣು ಅಸ್ತ್ರಗಳ ಮೂಲಕ ನಾನಾ ದೇಶಗಳನ್ನು ಬೆದರಿಸುವುದು ಉತ್ತರ ಕೊರಿಯಾಗೆ ಹಿತಕರ ನಡೆಯಂತೂ ಅಲ್ಲ. ಈ ಮೂಲಕ ಅದು ಅಂತರಾಷ್ಟ್ರೀಯ ಸಂಬಂಧಗಳನ್ನು ಕಳೆದುಕೊಂಡು ಏಕಾಂಗಿ ಆಗುವ ಸಾಧ್ಯತೆ ಹೆಚ್ಚಿದೆ,” ಎಂದು ಅರಿತು ಕಿಮ್ ಜಾಂಗ್ ಉನ್ ಬದಲಾಗಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಹಿಂಸಾಚಾರದ ಮಾರ್ಗ ಬಿಟ್ಟು ಶಾಂತಿಯ ಮಾತುಕತೆ ಮೂಲಕ ಕಿಮ್ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿರುವುದು ಅಂತರಾಷ್ಟ್ರ ಮಟ್ಟದಲ್ಲಿ ಅಭಿನಂದನೆಗೆ ಕಾರಣವಾಗಿದೆ.