samachara
www.samachara.com
ಚಿತ್ರ ನಟಿ ಶ್ರೀದೇವಿ 
ಚಿತ್ರ ನಟಿ ಶ್ರೀದೇವಿ 
JUST IN

ಸಿನಿ ಬಾನಿಂದ ಮರೆಯಾದ ತಾರೆ ಶ್ರೀದೇವಿ; ಶಿವಕಾಶಿಯಿಂದ ಮುಂಬೈವರೆಗೆ…  

ವಿಶ್ವನಾಥ್ ಬಿ. ಎಂ

ವಿಶ್ವನಾಥ್ ಬಿ. ಎಂ

ಸೌಂದರ್ಯ, ನೃತ್ಯ ಮತ್ತು ಅಭಿನಯದಿಂದ ಸುಮಾರು ಎರಡು ದಶಕಗಳ ಕಾಲ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಚಿತ್ರ ಜಗತ್ತಿನ ಬಾನಿನಲ್ಲಿ ತಾರೆಯಾಗಿ ಮಿಂಚಿದ ಶ್ರೀದೇವಿ ದೂರದ ದುಬೈನಲ್ಲಿ ಮರೆಯಾಗಿದ್ದಾರೆ.

ಬಹುಭಾಷಾ ನಟಿ ಶ್ರೀದೇವಿ ತಮ್ಮ 54ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಂಬಂಧಿ ಮೋಹಿತ್‌ ಮಾರ್ವಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪತಿ ಬೋನಿ ಕಪೂರ್‌ ಮತ್ತು ಕಿರಿಯ ಮಗಳು ಖುಷಿ ಕಪೂರ್ ಜತೆಗೆ ಅವರು ದುಬೈಗೆ ಹೋಗಿದ್ದರು. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲೇ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.

1963ರ ಆಗಸ್ಟ್‌ 13ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ ಶ್ರೀದೇವಿ ಮುಂದೆ ಮುಂಬೈನ ಬಾಲಿವುಡ್‌ ಬಾನಿನಲ್ಲಿ ತಾರೆಯಾಗಿ ದಶಕಗಳ ಕಾಲ ಮಿನುಗಿದವರು. ಶ್ರೀದೇವಿ ಅವರ ತಂದೆ ಅಯ್ಯಪ್ಪನ್, ತಾಯಿ ರಾಜೇಶ್ವರಿ. ಅಯ್ಯಪ್ಪನ್ ವಕೀಲರಾಗಿದ್ದರು. 1969ರಲ್ಲಿ ತೆರೆಕಂಡ ‘ಥುನೈವನ್’ ತಮಿಳು ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ ಮುಂದೆ ಹಲವು ತಮಿಳು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿ ಚಿತ್ರರಂಗದ ದಿಗ್ಗಜರ ಮೆಚ್ಚುಗೆಗೆ ಪಾತ್ರರಾಗಿದ್ದರು.

1975ರಲ್ಲಿ ತೆರೆಕಂಡ ಹಿಂದಿ ಚಿತ್ರ ‘ಜೂಲಿ’ಯಲ್ಲಿಯೂ ಅವರು ನಟಿಸಿದ್ದರು. ಕನ್ನಡದ ‘ಭಕ್ತಕುಂಬಾರ’, ‘ಬಾಲಭಾರತ’, ‘ಸಂಪೂರ್ಣ ರಾಮಾಯಣ’, ‘ಯಶೋಧ ಕೃಷ್ಣ’ ಚಿತ್ರಗಳಲ್ಲಿ ನಾಲನಟಿಯಾಗಿ ನಟಿಸಿದ್ದ ಶ್ರೀದೇವಿ ‘ಹೆಣ್ಣು ಸಂಸಾರದ ಕಣ್ಣು’ ಎಂಬ ಚಿತ್ರದಲ್ಲಿ ನಾಯಕನ ಸೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಜನಿಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ ಚಿತ್ರದಲ್ಲಿ ಶ್ರೀದೇವಿ ನಾಯಕಿಯಾಗಿದ್ದರು.

ತಮಿಳು ಮತ್ತು ತೆಲುಗು ಚಿತ್ರರಂಗದ ಹಲವು ಹಿಟ್‌ ಸಿನಿಮಾಗಳಲ್ಲಿ ಶ್ರೀದೇವಿ ಅಭಿನಯಿಸಿದ್ದರು. ‘ಮೂಂಡ್ರು ಮುಡಿಚು’, ‘ಪದಿನಾರು ವಯಥಿನಿಲೆ’, ‘ಸಿಗಪ್ಪು ರೋಜಾಕ್ಕಳ್’, ‘ಮೀನ್ಡುಂ ಕೋಕಿಲಾ’, ‘ಮೂಂಡ್ರಮ್ ಪಿರೈ’, ‘ಪ್ರೇಮಾಭಿಷೇಕಂ’, ‘ಆಖರೀ ಪೋರಾಟಂ’, ‘ಜಗದೇಕ ವೀರುಡು ಅತಿಲೋಕ ಸುಂದರಿ’, ‘ಕ್ಷಣ ಕ್ಷಣಂ’ ಚಿತ್ರಗಳಲ್ಲಿ ಶ್ರೀದೇವಿ ನಟನೆಗೆ ಸಿನಿರಸಿಕರು ಮಾರು ಹೋಗಿದ್ದರು.

1979ರಲ್ಲಿ ಬಿಡುಗಡೆಯಾದ ಪಿ. ಭಾರತಿರಾಜ ನಿರ್ದೇಶಕನ ‘ಸೊಲ್ವಾ ಸಾವನ್’ ಶ್ರೀದೇವಿ ಅಭಿನಯದ ಮೊದಲ ಹಿಂದಿ ಚಿತ್ರ. ‘ಹಿಮ್ಮತ್ ವಾಲಾ’, ‘ಮಾವಾಲಿ’, ‘ತೋಫಾ’, ‘ಮಾಸ್ಟರ್‌ ಜಿ’, ‘ಕರ್ಮ’, ‘ಮಿಸ್ಟರ್ ಇಂಡಿಯಾ’, ‘ವಕ್ತ್ ಕಿ ಆವಾಜ್’, ‘ಚಾಂದನಿ’, ‘ಸದ್ಮಾ’, ‘ನಗೀನಾ’, ‘ಚಾಲ್ ಬಾಜ್’, ‘ಲಮ್ಹೆ’, ‘ಖುದಾ ಗವಾಹ್’, ‘ಗುಮ್ರಾಹ್’ ಶ್ರೀದೇವಿ ಅವರಿಗೆ ಯಶಸ್ಸು ತಂದುಕೊಟ್ಟ ಚಿತ್ರಗಳು. ಪ್ರತಿಭೆಯ ಜತೆಗೆ ಅದೃಷ್ಟವೂ ಅವರ ಕೈ ಹಿಡಿದು ಅವರು ಬಾಲಿವುಡ್‌ನಲ್ಲಿ ದೀರ್ಘ ಅವಧಿಯವರೆಗೆ ನಾಯಕ ನಟಿಯಾಗಿ ಇರುವಂತೆ ಮಾಡಿತ್ತು.

ಅತಂತ್ರ ವೈವಾಹಿಕ ಬದುಕು :

ಬಾಲಿವುಡ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಶ್ರೀದೇವಿ ವೈವಾಹಿಕ ಬದುಕು ಆ ವೇಳೆಗೆ ವಿವಾದಕ್ಕೆ ಸಿಲುಕಿತ್ತು. 1985ರಲ್ಲಿ ನಟ ಮಿಥುನ್‌ ಚಕ್ರವರ್ತಿ ಮತ್ತು ಶ್ರೀದೇವಿ ಗುಟ್ಟಾಗಿ ಮದುವೆಯಾಗಿದ್ದಾರೆಂಬ ಸುದ್ದಿ ಹರಿದಾಡಿತ್ತು. ಮಿಥುನ್‌ ಚಕ್ರವರ್ತಿ ಕೂಡಾ ತಾವು ಶ್ರೀದೇವಿ ಅವರನ್ನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದರು. ಮಿಥುನ್‌ ಚಕ್ರವರ್ತಿ ಶ್ರೀದೇವಿ ಅವರನ್ನು ವರಿಸುವ ವೇಳೆಗಾಗಲೇ ಮಿಥುನ್‌ಗೆ ಯೋಗಿತಾ ಬಾಲಿ ಅವರೊಂದಿಗೆ ಮದುವೆಯಾಗಿತ್ತು. ಗುಟ್ಟಾಗಿಯೇ ಇದ್ದ ಮಿಥುನ್‌- ಶ್ರೀದೇವಿ ಸಂಬಂಧ 3 ವರ್ಷಗಳಲ್ಲಿ ಕೊನೆಯಾಯಿತು. 1988ರಲ್ಲಿ ವಿಚ್ಛೇದನದೊಂದಿಗೆ ಮಿಥುನ್‌- ಶ್ರೀದೇವಿ ಸಂಬಂಧ ಕಡಿದು ಬಿದ್ದಿತ್ತು.

1996ರಲ್ಲಿ ಶ್ರೀದೇವಿ ಬಾಲಿವುಡ್ ನಿರ್ಮಾಪಕ ಬೋನಿ ಕಫೂರ್ ಅವರನ್ನು ಎರಡನೇ ಮದುವೆಯಾದರು. ಶ್ರೀದೇವಿ ಮದುವೆಯಾಗುವ ಮುನ್ನಾ ಬೋನಿ ಕಪೂರ್ ಮೋನಾ ಶೌರಿ ಅವರನ್ನು ವಿವಾಹವಾಗಿದ್ದರು. ಆ ವೇಳೆಗಾಗಲೇ ಬೋನಿ ಮತ್ತು ಮೋನಾಗೆ ಇಬ್ಬರು ಮಕ್ಕಳಿದ್ದರು. ಬಾಲಿವುಡ್‌ ನಟ ಅರ್ಜುನ್‌ ಕಪೂರ್ ಈ ದಂಪತಿಗೆ ಜನಿಸಿದ ಮಗ. ಮತ್ತೊಬ್ಬಳು ಮಗಳು ಅನ್ಶುಲಾ ಕಪೂರ್. ಶ್ರೀದೇವಿ ಅವರನ್ನು ಮದುವೆಯಾದ ಬೋನಿ ಕಪೂರ್‌ ಮೋನಾ ಶೌರಿ ಅವರಿಗೆ ವಿಚ್ಛೇದನ ನೀಡಿದರು. ಮೋನಾ 2012ರ ಮಾರ್ಚ್‌ 25ರಂದು ಮುಂಬೈನಲ್ಲಿ ನಿಧನರಾದರು.

ಬೋನಿ ಕಪೂರ್‌ ಮತ್ತು ಶ್ರೀದೇವಿ ಅವರ ಮಕ್ಕಳು ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್‌. ಜಾಹ್ನವಿ ನಟನೆಯ ಮೊದಲ ಚಿತ್ರ ‘ಧಡಕ್’ ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಮಗಳ ಮೊದಲ ಚಿತ್ರ ತೆರೆಕಾಣುವ ಮೊದಲೇ ಶ್ರೀದೇವಿ ಇಲ್ಲವಾಗಿದ್ದಾರೆ.

2012ರಲ್ಲಿ ತಮ್ಮ ಸಿನಿ ಬದುಕಿನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಶ್ರೀದೇವಿ ‘ಇಂಗ್ಲಿಷ್ ವಿಂಗ್ಲಿಷ್’ ಚಿತ್ರದ ಮೂಲಕ ಬಾಲಿವುಡ್‌ಗೆ ಮರುಪ್ರವೇಶ ಪಡೆದಿದ್ದರು. 2017ರಲ್ಲಿ ರವಿ ಉದ್ಯಾವರ್‌ ನಿರ್ದೇಶನದಲ್ಲಿ ನಿರ್ಮಾಣವಾದ ‘ಮಾಮ್’ ಶ್ರೀದೇವಿ ಅವರ ಕೊನೆಯ ಚಿತ್ರ.