samachara
www.samachara.com
ಕರ್ನಾಟಕದಲ್ಲಿ ಮತದಾನಕ್ಕೆ ಕ್ಷಣಗಣನೆ: ಓಟ್ ಮಾಡುವ ಮುನ್ನ ಒಂದಿಷ್ಟು ಮಾಹಿತಿ
ಸುದ್ದಿ ಸಾರ

ಕರ್ನಾಟಕದಲ್ಲಿ ಮತದಾನಕ್ಕೆ ಕ್ಷಣಗಣನೆ: ಓಟ್ ಮಾಡುವ ಮುನ್ನ ಒಂದಿಷ್ಟು ಮಾಹಿತಿ

ಅಂಕಿ ಅಂಶಗಳತ್ತ ಕಣ್ಣಾಡಿಸಿದಾಗ 2009ರ ಚುನಾವಣೆಗಿಂತ 2014ರ ಚುನಾವಣೆಯಲ್ಲಿ ಮತದಾನ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿತ್ತು. ಈ ಬಾರಿ ಎಷ್ಟರ ಮಟ್ಟಿಗೆ ಜನರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

Team Samachara

ಮಾತಿನ ಭರಾಟೆ, ಆರೋಪಗಳ ಪ್ರತ್ಯಾರೋಪಗಳ ಮೇಲಾಟ, ಮೊನಚು ಮಾತುಗಳ ತಿವಿತ, ಭರ್ಜರಿ ಪ್ರಚಾರದ ನಂತರ ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್‌ 18ರಂದು ದೇಶದಲ್ಲಿ ಎರಡನೇ ಹಂತದಲ್ಲಿ 95 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದ 14 ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಏಪ್ರಿಲ್‌ 23ರಂದು ಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ಒಟ್ಟು 5 ಕೋಟಿಗೂ ಹೆಚ್ಚು ಮತದಾರರಿದ್ದು ಇದರಲ್ಲಿ 3 ಕೋಟಿಗೂ ಹೆಚ್ಚು ಜನ ಮೊದಲ ಹಂತದಲ್ಲಿ ಮತದಾನ ಮಾಡಲಿದ್ದಾರೆ. 28,48,705 ಮತದಾರರನ್ನು ಹೊಂದಿರುವ ರಾಜ್ಯದ ಅತಿ ದೊಡ್ಡ ಲೋಕಸಭಾ ಕ್ಷೇತ್ರ ಬೆಂಗಳೂರು ದಕ್ಷಿಣ ಹಾಗೂ 15,13,333 ಮತದಾರರನ್ನು ಹೊಂದಿರುವ ಅತಿ ಸಣ್ಣ ಕ್ಷೇತ್ರ ಉಡುಪಿ-ಚಿಕ್ಕಮಗಳೂರಿನಲ್ಲಿ ಕೂಡ ಗುರುವಾರವೇ ಮತದಾನ ನಡೆಯಲಿದೆ.

ರಾಜ್ಯದಲ್ಲಿ ಮತದಾನಕ್ಕಾಗಿ 58,225 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 11,992 ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ( ತುಮಕೂರು), ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (ಮಂಡ್ಯ), ದಿವಂಗತ ಚಿತ್ರನಟ ಅಂಬರೀಷ್ ಪತ್ನಿ ಸುಮಲತಾ ಅಂಬರೀಷ್‌ (ಮಂಡ್ಯ), ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ (ಬೆಂಗಳೂರು ಉತ್ತರ), ಸಚಿವ ಕೃಷ್ಣ ಬೈರೇಗೌಡ (ಬೆಂಗಳೂರು ಉತ್ತರ), ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ (ಚಿಕ್ಕಬಳ್ಳಾಪುರ), ಚಿತ್ರನಟ ಪ್ರಕಾಶ್‌ ರಾಜ್‌ (ಬೆಂಗಳೂರು ಕೇಂದ್ರ), ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (ಹಾಸನ), ಮಾಜಿ ಕೇಂದ್ರ ಸಚಿವ ಕೆ. ಎಚ್. ಮುನಿಯಪ್ಪ(ಕೋಲಾರ) ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಒಟ್ಟಾರೆ ಮೊದಲ ಹಂತದ ಚುನಾವಣೆಯಲ್ಲಿ 241 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕರ್ನಾಟಕದಲ್ಲಿ ಮತದಾನಕ್ಕೆ ಕ್ಷಣಗಣನೆ: ಓಟ್ ಮಾಡುವ ಮುನ್ನ ಒಂದಿಷ್ಟು ಮಾಹಿತಿ

ಅಂಕಿ ಅಂಶಗಳತ್ತ ಕಣ್ಣಾಡಿಸಿದಾಗ 2009ರ ಚುನಾವಣೆಗಿಂತ 2014ರ ಚುನಾವಣೆಯಲ್ಲಿ ಮತದಾನ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿತ್ತು. ಈ ಬಾರಿ ಎಷ್ಟರ ಮಟ್ಟಿಗೆ ಜನರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ಭದ್ರ ಮಾಡಿಕೊಳ್ಳಬೇಕಾದ ಅನಿವಾರ್ಯತೆ ದೋಸ್ತಿ ಪಕ್ಷಗಳಿಗಿದೆ. ಮೈತ್ರಿ ಪಕ್ಷವನ್ನು ಒಂದಂಕಿಗೆ ಇಳಿಸಿ ಮತ್ತೆ ಅಪರೇಷನ್ ಕಮಲದ ಮೂಲಕ ಸರ್ಕಾರ ರಚನೆ ಮಾಡುವ ಹವಣಿಕೆಯಲ್ಲಿ ಬಿಜೆಪಿ ಇದೆ. ಹೀಗಾಗಿ ಲೋಕಸಭಾ ಚುನಾವಣೆ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ.

ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಏಪ್ರಿಲ್‌ 23ರಂದು ನಡೆಯಲಿರುವ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸೇರಿ ಕೇವಲ ಮೂರು ದಿನಗಳು ಉಳಿದುಕೊಳ್ಳಲಿವೆ. ಹಾಗಾಗಿ ಈಗಾಗಲೇ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳತ್ತ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಮುಖ ಮಾಡಿದ್ದಾರೆ. ಇಲ್ಲಿ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿರುಸಿನ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ.