samachara
www.samachara.com
ಮಿಷನ್‌ 22 + ಸಮ್ಮಿಶ್ರ ಸರಕಾರ ಪತನ: ಮುಂದುವರಿದ ಯಡಿಯೂರಪ್ಪ ಕನವರಿಕೆ
ಸುದ್ದಿ ಸಾರ

ಮಿಷನ್‌ 22 + ಸಮ್ಮಿಶ್ರ ಸರಕಾರ ಪತನ: ಮುಂದುವರಿದ ಯಡಿಯೂರಪ್ಪ ಕನವರಿಕೆ

“ಚುನಾವಣೆಗೂ ಮುನ್ನವೇ ಮೈತ್ರಿ ಪಕ್ಷಗಳ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿರುವುದಿಲ್ಲ.”

Team Samachara

Summary

ರಾಜ್ಯದಲ್ಲಿ 22 ಲೋಕಸಭಾಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮೈತ್ರಿ ಸರ್ಕಾರ ಆಂತರಿಕ ಕಚ್ಚಾಟದಿಂದ ಪತನವಾಗಲಿದೆ ಎಂದು  ಭವಿಷ್ಯ ನುಡಿದರು.

ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್‍ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫಲಿತಾಂಶದ ನಂತರ ಆಂತರಿಕ ಕಚ್ಚಾಟದಿಂದ ಮೈತ್ರಿ ಸರ್ಕಾರ ಉರುಳುತ್ತದೆ. 20-22ಕ್ಕೂ ಹೆಚ್ಚುಅತೃಪ್ತ ಶಾಸಕರು ತಾವಾಗಿಯೇ ಹೊರಗೆ ಬರುತ್ತಾರೆ. ನಾವೂ ಸಹ ಕಾದು ನೋಡುತ್ತಿದ್ದೇವೆ. ಕಾಂಗ್ರೆಸ್ ಶಾಸಕರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಹೊಸ ಸರ್ಕಾರದ ರಚನೆ ನಿಂತಿದೆ ಎಂದರು.

ಚುನಾವಣೆಗೂ ಮುನ್ನವೇ ಮೈತ್ರಿ ಪಕ್ಷಗಳ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿರುವುದಿಲ್ಲ ಎಂದು ವಿವರಿಸಿದರು.

ಮಿಷನ್‌ 22:

ಪ್ರಧಾನಿ ನರೇಂದ್ರ ಮೋದಿಯವರ ಐದು ವರ್ಷಗಳ ಸಾಧನೆ ಮತ್ತು ವರ್ಚಸ್ಸಿನಿಂದ ನಾವು ರಾಜ್ಯದಲ್ಲಿ 22 ಸ್ಥಾನಗಳಿಸಲಿದ್ದೇವೆ ಎಂದಿರುವ ಯಡಿಯೂರಪ್ಪ, “ಈಗಾಗಲೇ ರಾಜ್ಯ ಪ್ರವಾಸ ಮಾಡಿದ್ದೇನೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಮೋದಿಯವರ ಬಗ್ಗೆ ಇನ್ನೂ ಹೆಚ್ಚಿನ ಮೆಚ್ಚುಗೆ ಇದೆ. 2014 ಕ್ಕಿಂತ ಶೇ.15ರಷ್ಟು ಹೆಚ್ಚಿನ ಮತ ಪಡೆಯುತ್ತೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕಾಂಗ್ರೆಸ್‍ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಂ. ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ ಮತ್ತೆ ಲೋಕಸಭೆ ಪ್ರವೇಶಿಸುವುದಿಲ್ಲ,” ಎಂದ ಅವರು, ಚಿಕ್ಕಬಳ್ಳಾಪುರದಲ್ಲಿ ನಮಗೆ ಈಗಾಗಲೇ ಫಲಿತಾಂಶ ಬಂದಾಗಿದೆ. ಕಲಬುರಗಿಯಲ್ಲಿ ಖರ್ಗೆ ಮತ್ತು ಕೋಲಾರದಲ್ಲಿ ಮುನಿಯಪ್ಪ ಒಂದು ಲಕ್ಷಕ್ಕೂಹೆಚ್ಚು ಮತಗಳಿಂದ ಪರಾಭವಗೊಳ್ಳುತ್ತಾರೆ ಎಂದು ಹೇಳಿದರು.

ಜತೆಗೆ ಈ ಚುನಾವಣೆಯಲ್ಲಿ ಎನ್‍ಡಿಎ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳಿಸಿ, ಮತ್ತೆ ಮೋದಿ ಅವರ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂದು ತಿಳಿಸಿದರು.

ಸಂವಾದದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಅವರು, “ಮುಖ್ಯಮಂತ್ರಿಯಾದ ದಿನದಿಂದಲೂ ಎಚ್‌ಡಿಕೆ ನನ್ನ ಮೇಲೆ ಬ್ಲ್ಯಾಕ್‍ಮೇಲ್ ಆರೋಪ ಮಾಡುತ್ತಿದ್ದಾರೆ. ಬ್ಲ್ಯಾಕ್‍ಮೇಲ್ ಆರೋಪ ಮಾಡುವ ಬದಲು ಪುರಾವೆಗಳಿದ್ದರೆ ತನಿಖೆ ನಡೆಸಲಿ. ಅದನ್ನು ಬಿಟ್ಟು ರಾಜಕೀಯವಾಗಿ ತುಳಿಯಲು ಹೊರಟಿದ್ದಾರೆ. ಅದು ಅವರಿಂದ ಸಾಧ್ಯವಿಲ್ಲ,” ಎಂದರು.

ಕಾಂಗ್ರೆಸ್-ಜೆಡಿಎಸ್‍ನ ಮುಖಂಡರು ಮತ್ತು ಅವರ ಪರ ಉದ್ಯಮಿಗಳ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸುತ್ತಿರುವುದನ್ನುಸಮರ್ಥಿಸಿಕೊಂಡ ಯಡಿಯೂರಪ್ಪ, ‘ಪ್ರಾಮಾಣಿಕರಾಗಿದ್ದರೆ ಭಯಪಡುವ ಅಗತ್ಯವಿಲ್ಲ’ ಎಂಬ ಹಾರಿಕೆಯ ಉತ್ತರ ನೀಡಿದರು. ಅಲ್ಲದೆ, ನನ್ನ ಕುಟುಂಬದ ಮೇಲೂ ಈ ಹಿಂದೆ ಐಟಿ ದಾಳಿಯಾಗಿದೆ. ಅಷ್ಟೇ ಅಲ್ಲ ಸಂಸದ ಜಿ.ಎಂ. ಸಿದ್ದೇಶ್ವರ್,ಅಶ್ವತ್ಥನಾರಾಯಣ ಅವರ ಕುಟುಂಬ ಮತ್ತು ಉದ್ಯಮಿಗಳ ಮೇಲೂ ಐಟಿ ದಾಳಿ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯ ಬಿಜೆಪಿ ಘಟಕದ ಶಿಫಾರಸ್ಸಿನ ಮೇರೆಗೆ ದಾಳಿ ನಡೆಯುತ್ತಿದೆ ಎಂಬುದನ್ನು ಸಾರಾಸಗಟಾಗಿ ತಳಳಿ ಹಾಕಿದ ಅವರು, “ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಸಮಯವಿಲ್ಲ. ಇದರ ನಡುವೆ ಇಂಥಹ ಯೋಚನೆ ಯಾವಾಗ ಮಾಡುವುದು?” ಎಂದು ಪ್ರಶ್ನಿಸಿದರು.

ರಾಜ್ಯ ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರದಲ್ಲಿ ಸುಳ್ಳು ಭರವಸೆ ನೀಡಿದರು. ಆಲಮಟ್ಟಿ ಎತ್ತರವನ್ನು 523 ಮೀಟರ್ ಏರಿಸುವ ಬಗ್ಗೆ ಸಿದ್ದರಾಮಯ್ಯ ಸರ್ಕಾರವಾಗಲಿ, ಕುಮಾರಸ್ವಾಮಿ ಸರ್ಕಾರವಾಗಲಿ ಯೋಚಿಸಲಿಲ್ಲ. ‘ಕೃಷ್ಣೆಯ ಕಡೆಗೆ ಕಾಂಗ್ರೆಸ್ ನಡಿಗೆ’ ಕೈಗೊಂಡರು. ಆದ್ರೆ ಮಾಡಿದ್ದು ನಂಬಿಕೆ, ವಿಶ್ವಾಸ ದ್ರೋಹದ ಕೆಲಸ. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯೇ ಬಿಜೆಪಿಗೆ ಲಾಭ,” ಎಂದರು.

ಬಿಜೆಪಿ ವಿರೋಧಿಸುವವರನ್ನು ದೇಶ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ ಎಂಬ ಆಡ್ವಾಣಿ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಎಸ್‌ವೈ, “ಅಡ್ವಾಣಿ ಹೇಳಿಕೆ ನಮಗೆ ಮಾರ್ಗದರ್ಶನ. ಅವರ ಅಭಿಪ್ರಾಯ ಸ್ವಾಗತಿಸುತ್ತೇವೆ. ಆಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಹಿರಿಯರ ಮೂಲೆ ಗುಂಪು ಪ್ರಶ್ನೆಯೇ ಇಲ್ಲ. ಆ ಹಿರಿಯರ ಮಾರ್ಗದರ್ಶನ ನಮಗೆ ಇದ್ದೇ ಇರುತ್ತದೆ,” ಎಂದು ಹೇಳಿದರು.

ಕುಮಾರಸ್ವಾಮಿ ನೆಗೆದು ಬೀಳ್ತಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, “ನಾವು ಬಳಸುವ ಭಾಷೆ ಸರಿಯಾಗಿರಬೇಕು,” ಎಂದರು. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳಲು ನಿರಾಕರಿಸಿದ ಅವರು, ‘ಎಲ್ಲದಕ್ಕೂ ಕ್ರಮ ಕೈಗೊಳ್ಳಲು ಆಗೊಲ್ಲ. ಈಶ್ವರಪ್ಪನವರಿಗೆ ಸೂಕ್ಷ್ಮವಾಗಿ ಹೇಳ್ತೀನಿ’ ಎಂದರು.

ಬಿಜೆಪಿಯಲ್ಲಿನ ಟಿಕೆಟ್‌ ಹಂಚಿಕೆ ಗೊಂದಲದ ಬಗ್ಗೆ ಮಾತನಾಡಿದ ಅವರು, “28 ಲೋಕಸಭೆ ಕ್ಷೇತ್ರಗಳಿಗೆ ನಾವು ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿದ್ದೆವು. 26 ಕ್ಷೇತ್ರಗಳಲ್ಲಿ ನಾವು ಶಿಫಾರಸು ಮಾಡಿದವರಿಗೆ ಟಿಕೆಟ್ ನೀಡಲಾಗಿದೆ. ಉಳಿದ ಎರಡು ಕಡೆ ಮಾತ್ರ ಹೈಕಮಾಂಡ್ ಅಭ್ಯರ್ಥಿಗಳನ್ನು ಬದಲಿಸಿದೆ. ತೇಜಸ್ವಿನಿ ಅನಂತ್‍ ಕುಮಾರ್ ಹೆಸರನ್ನು ನಾವು ಕಳಿಸಿದ್ದೆವು. ಆದರೆ ಹೈಕಮಾಂಡ್ ನಾಯಕರು ಬದಲಿಸಿದ್ದಾರೆ. ತೇಜಸ್ವಿ ಸೂರ್ಯ ನಿಶ್ಚಿತವಾಗಿ ಗೆಲ್ಲುತ್ತಾರೆ. ತೇಜಸ್ವಿನಿ ಅನಂತ್‍ ಕುಮಾರ್‌ಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದ್ದೇವೆ. ಯಾವ ಭಿನ್ನಮತವೂ ಇಲ್ಲ. ಅಮಿತ್ ಶಾ ರೋಡ್ ಶೋನಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ,” ಎಂದು ಹೈಕಮಾಂಡ್‌ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ನಾವು ಈ ಹಿಂದೆ ಸರ್ಕಾರ ರಚನೆ ಮಾಡಿದಾಗ ಓರ್ವ ಮುಸ್ಲಿಮರನ್ನು ಮಂತ್ರಿ ಮಾಡಿದ್ದೆವು. ಆದರೆ ಈ ಚುನಾವಣೆಯಲ್ಲಿ ನಾವು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಮುಂದೆ ಜನರ ಆಶೀರ್ವಾದ ಇದ್ದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಓರ್ವ ಮುಸ್ಲಿಮರನ್ನು ಮತ್ತೆ ಮಂತ್ರಿ ಮಾಡುತ್ತೇವೆ,” ಎಂದು ಅವರು ಭರವಸೆ ನೀಡಿದರು.