samachara
www.samachara.com
ಎರಡನೇ ಬಾರಿ ರೆಪೋ ದರ ಇಳಿಸಿದ ಆರ್‌ಬಿಐ; ಗ್ರಾಹಕರಿಗಿಲ್ಲ ಲಾಭ & ಮುಂದಿದೆ ಬೆಲೆ ಏರಿಕೆ ಬಿಸಿ
ಸುದ್ದಿ ಸಾರ

ಎರಡನೇ ಬಾರಿ ರೆಪೋ ದರ ಇಳಿಸಿದ ಆರ್‌ಬಿಐ; ಗ್ರಾಹಕರಿಗಿಲ್ಲ ಲಾಭ & ಮುಂದಿದೆ ಬೆಲೆ ಏರಿಕೆ ಬಿಸಿ

ಆರ್‌ಬಿಐ ಅಂಕಿ ಅಂಶಗಳ ಪ್ರಕಾರ ಮುಂದಿನ ದಿನಗಳು ‘ಬೆಲೆ ಏರಿಕೆಯ ದಿನಗಳು’ ಎಂಬುದನ್ನು ಅಂದಾಜು ಮಾಡಬಹುದಾಗಿದೆ.

Team Samachara

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಸತತ ಎರಡನೇ ಅವಧಿಗೆ ರೆಪೋ ದರಗಳನ್ನು ಕಡಿತಗೊಳಿಸಿದೆ. ಗುರುವಾರ ಆರ್‌ಬಿಐ ಬ್ಯಾಂಕುಗಳಿಗೆ ತಾನು ನೀಡುವ ಸಾಲದ ಮೇಲಿನ ಬಡ್ಡಿ ದರಗಳಲ್ಲಿ 25 ಮೂಲ ಅಂಕಗಳನ್ನು ಕಡಿತಗೊಳಿಸಿ ಶೇಕಡಾ 6ಕ್ಕೆ ಇಳಿಸಿದೆ.

ಶಕ್ತಿಕಾಂತ್‌ ದಾಸ್‌ ಆರ್‌ಬಿಐ ಗವರ್ನರ್‌ ಹುದ್ದೆಗೇರಿದ ನಂತರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಅಚ್ಚರಿಯ ರೀತಿಯಲ್ಲಿ ರೆಪೋ ದರಗಳನ್ನು ಇಳಿಕೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ಕೇಂದ್ರ ಬ್ಯಾಂಕ್‌ ಅದೇ ಹಾದಿ ತುಳಿದಿದೆ. ನಿಧಾನಗತಿಯ ಆರ್ಥಿಕ ಬೆಳವಣಿಗೆಯ ನಡುವೆ ಬ್ಯಾಂಕ್‌ ಈ ತೀರ್ಮಾನ ತೆಗೆದುಕೊಂಡಿದೆ.

ಈ ಹಿಂದೆ 43 ಹಣಕಾಸು ತಜ್ಞರನ್ನು ಬ್ಲೂಂಬರ್ಗ್‌ ಸಮೀಕ್ಷೆಗೆ ಒಳಪಡಿಸಿದಾಗ ಇದರಲ್ಲಿ 41 ಜನರು ಆರ್‌ಬಿಐ ರೆಪೋ ದರಗಳನ್ನು ಕಡಿತಗೊಳಿಸಲಿದೆ ಎಂದು ಹೇಳಿದ್ದರು. ಅವರ ಮಾತಿನಂತೆ ಇದೀಗ ಆರ್‌ಬಿಐ ರೆಪೋ ದರಗಳನ್ನು ಕಡಿತಗೊಳಿಸಿದೆ.

ಗ್ರಾಹಕರಿಗೆ ಲಾಭವಿಲ್ಲ:

ರೆಪೋ ದರ ಕಡಿತ ವಾಹನ ಸಾಲ ಮತ್ತು ಗೃಹ ಸಾಲದ ಮೇಲೆ ನೇರ ಪರಿಣಾಮ ಬೀಳುತ್ತವೆ. ಈ ಹಿನ್ನೆಲೆಯಲ್ಲಿ ರೆಪೋ ದರ ಕಡಿತಗೊಂಡ ತಕ್ಷಣ ಗ್ರಾಹಕರು ಲಾಭದ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಈ ಬಾರಿ ಆ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದೆ ಎಂಬುದಾಗಿ ‘ಲೈವ್‌ಮಿಂಟ್‌’ ವರದಿ ಮಾಡಿದೆ.

ಈ ಹಿಂದೆ ಫೆಬ್ರವರಿಯಲ್ಲಿ ರೆಪೋ ದರಗಳನ್ನು ಕಡಿತಗೊಳಿಸಿದಾಗಲೂ ಕೆಲವೇ ಬ್ಯಾಂಕ್‌ಗಳು ಮಾತ್ರ ಸಾಲಗಳ ಬಡ್ಡಿ ದರದಲ್ಲಿ 5-10 ಅಂಕಗಳಷ್ಟು ಇಳಿಕೆ ಮಾಡಿದ್ದವು. ಸದ್ಯಕ್ಕೆ ಹೆಚ್ಚು ಕಡಿಮೆ ಎಲ್ಲಾ ಬ್ಯಾಂಕ್‌ಗಳು ಬಿಕ್ಕಟ್ಟಿನ ದಿನಗಳನ್ನು ಎದುರಿಸುತ್ತಿರುವುದರಿಂದ ಈ ಬಾರಿಯ ದರ ಕಡಿತವನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ವಿರಳ ಎಂದು ಪತ್ರಿಕೆ ಹೇಳಿದೆ.

‘ಬ್ಯಾಂಕ್‌ಗಳಲ್ಲಿ ಠೇವಣಿ ಮೊತ್ತ ದೊಡ್ಡ ಮಟ್ಟಕ್ಕೆ ಕುಸಿದಿದೆ. ಜತೆಗೆ ಬ್ಯಾಂಕ್‌ಗಳು ಠೇವಣಿದಾರರನ್ನು ಆಕರ್ಷಿಸಲು ಪರಸ್ಪರ ಸ್ಪರ್ಧೆಗಿಳಿದಿವೆ’ ಎಂಬುದಾಗಿ ಉನ್ನತ ಬ್ಯಾಂಕಿಂಗ್‌ ಪ್ರತಿನಿಧಿಯೊಬ್ಬರು ರಾಯ್ಟರ್ಸ್‌ಗೆ ತಿಳಿಸಿದ್ದಾರೆ. ಇದು ಕೂಡ ರೆಪೋ ದರ ಇಳಿಕೆಯನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸದೇ ಇರಲು ಪ್ರಮುಖ ಕಾರಣವಾಗಲಿದೆ.

ಇದೇ ವೇಳೆ ರೆಪೋ ದರಗಳನ್ನು ಕಡಿತಗೊಳಿಸಿರುವ ಆರ್‌ಬಿಐ ಹಣಕಾಸು ನೀತಿಯಲ್ಲಿ ಯಥಾಸ್ಥಿತಿ ಕಾಪಾಡಲು ನಿರ್ಧರಿಸಿದೆ.

ಡಿಸೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಆರ್ಥಿಕ ಅಭಿವೃದ್ಧಿ ದರ ‘ಜಿಡಿಪಿ’ ಶೇಕಡಾ 6.6ಕ್ಕೆ ಕುಸಿದಿತ್ತು. ಮತ್ತು ಸದ್ಯಕ್ಕೆ ಚಿಲ್ಲರೆ ಹಣದುಬ್ಬರ ದರ ಶೇಕಡಾ 2.57ರಷ್ಟಿದೆ. ಡಿಸೆಂಬರ್‌ ಹೊತ್ತಿಗೆ ಇದು ಶೇಕಡಾ 3.9ಕ್ಕೆ ಏರಿಕೆಯಾಗಲಿದೆ ಎಂದು ಈ ಹಿಂದೆ ಆರ್‌ಬಿಐ ಅಂದಾಜಿಸಿತ್ತು. ಈ ಬಾರಿ ಬ್ಯಾಂಕ್‌f ಇದರಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ಮುಂದಿದೆ ಬೆಲೆ ಏರಿಕೆ:

2019ರ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಇರಲಿದೆ ಎಂಬುದಾಗಿ ‘ಹವಾಮಾನ ಮುನ್ಸೂಚನೆ’ ನೀಡುವ ಸ್ಕೈಮೆಟ್‌ ಗುರುವಾರ ವರದಿ ಮಾಡಿದೆ. ಜತೆಗೆ ಸದ್ಯಕ್ಕೆ ಅಂತರಾಷ್ಟ್ರೀಯ ತೈಲ ಬೆಲೆಯೂ ಐದು ತಿಂಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದ್ದು ಬ್ಯಾರಲ್‌ಗೆ 70 ಡಾಲರ್‌ ಇದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಮುಂದಿನ ದಿನಗಳು ಬೆಲೆ ಏರಿಕೆಯ ದಿನಗಳು ಎಂಬುದನ್ನು ಅಂದಾಜು ಮಾಡಬಹುದಾಗಿದೆ.