samachara
www.samachara.com
ಕರ್ನಾಟಕ ರಾಜಕಾರಣದಿಂದ ನನ್ನನ್ನು ಹೊರಹಾಕಲು ಷಡ್ಯಂತ್ರ: ಎಸ್‌.ಎಂ. ಕೃಷ್ಣ
ಸುದ್ದಿ ಸಾರ

ಕರ್ನಾಟಕ ರಾಜಕಾರಣದಿಂದ ನನ್ನನ್ನು ಹೊರಹಾಕಲು ಷಡ್ಯಂತ್ರ: ಎಸ್‌.ಎಂ. ಕೃಷ್ಣ

ಬೆಂಗಳೂರು ನಗರದ ಅಭಿವೃದ್ಧಿ ಸಹಿಸದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದರು ಎಂದು ದೂರಿದ ಕೃಷ್ಣ, “ಕರ್ನಾಟಕ ರಾಜ್ಯ ರಾಜಕೀಯದಿಂದ ಒಂದಲ್ಲಾ ಒಂದು ರೀತಿ ನನ್ನನ್ನು ದೂರ ಇಡುವ ಪ್ರಯತ್ನ ನಡೆಯಿತು,” ಎಂದು ಬೇಸರ ತೋಡಿಕೊಂಡರು.

Team Samachara

ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಹಾಗೂ ಬೆಂಗಳೂರು ಅಭಿವೃದ್ಧಿ ತಡೆಗಟ್ಟುವ ಉದ್ದೇಶದಿಂದ ನನ್ನನ್ನು ಕರ್ನಾಟಕ ರಾಜ್ಯ ರಾಜಕೀಯದಿಂದಲೇ ಹೊರಹಾಕಲು ಷಡ್ಯಂತ್ರ ನಡೆಯಿತು ಎಂದು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಹೇಳಿದರು.

ಬುಧವಾರ ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, "2004ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿರಲಿಲ್ಲ. ನನ್ನ ನಾಯಕತ್ವದಲ್ಲಿ ಕಾಂಗ್ರೆಸ್‍ನ 65 ಶಾಸಕರು ಮಾತ್ರ ಆಯ್ಕೆಗೊಂಡಿದ್ದರು, ಈ ಸಂದರ್ಭ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ನನ್ನನ್ನೇ ಪುನಃ ನಾಯಕನಾಗಿ 62 ಶಾಸಕರು ಆಯ್ಕೆ ಮಾಡಿದ್ದರು. ಶಾಸಕರ ಬೆಂಬಲ ಇದ್ದರೂ ಮೈತ್ರಿ ಪಕ್ಷ ನನ್ನನ್ನು ಮುಖ್ಯಮಂತ್ರಿಯಾಗಿ ಮಾಡಲು ಒಪ್ಪಲಿಲ್ಲ," ಎಂದು ಅಳಲು ತೋಡಿಕೊಂಡರು.

“ಇದರ ಸುಳಿವು ದೊರೆಯುತ್ತಿದ್ದಂತೆ ನಾನು ಚೀನಾ ಪ್ರವಾಸ ಕೈಗೊಂಡೆ. ಇತ್ತ ಸರ್ಕಾರವೂ ರಚನೆಯಾಯಿತು. ಅಂದು ಕೇಂದ್ರ ಗೃಹ ಸಚಿವರಾಗಿದ್ದ ಶಿವರಾಜ್ ಪಾಟೀಲ್, ಪ್ರವಾಸದಲ್ಲಿದ್ದ ನನ್ನನ್ನು ಸಂಪರ್ಕಿಸಿ ತಕ್ಷಣವೇ ಭಾರತಕ್ಕೆ ಹಿಂತಿರುಗಿ ಮಹಾರಾಷ್ಟ್ರ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸುವಂತೆ ತಿಳಿಸಿದರು. ರಾಜ್ಯಪಾಲರ ಹುದ್ದೆ ಬೇಡ ಎಂದರೂ ನನ್ನನ್ನು ಬಲವಂತವಾಗಿ ಆ ಸ್ಥಾನದಲ್ಲಿ ಕೂರಿಸುವಲ್ಲಿ ಕಾಣದ ಕೈಗಳು ಯಶಸ್ವಿಯಾಗಿದ್ದಲ್ಲದೆ, ನನ್ನನ್ನು ಕರ್ನಾಟಕ ರಾಜಕೀಯದಿಂದ ಹೊರಗಿಟ್ಟು ಮೈತ್ರಿ ಸರ್ಕಾರ ನಡೆಸಲು ಹೊರಟರು,” ಎಂಬುದಾಗಿ 15 ವರ್ಷ ಹಿಂದೆ ನಡೆದ ಬೆಳವಣಿಗೆಯನ್ನು ಕೃಷ್ಣ ಬಿಡಿಸಿಟ್ಟರು.

ಇದರ ಮೂಲ ಉದ್ದೇಶ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯನ್ನು ಕುಂಠಿತಗೊಳಿಸುವುದು ಮತ್ತು ಬೆಂಗಳೂರು ಅಭಿವೃದ್ಧಿಯನ್ನು ತಡೆಯುವುದಾಗಿತ್ತು. ಮಾಹಿತಿ ತಂತ್ರಜ್ಞಾನ ಬೆಳವಣಿಗೆ ವಿಷಯದಲ್ಲಿ ನಾವು ಆಗಲೇ ವಿಶ್ವದಲ್ಲಿ ಮೊದಲ ಸ್ಥಾನಕ್ಕೆ ಮುಟ್ಟಿದ್ದೆವು. ನಾನು ಮತ್ತೊಂದು ಅವಧಿಗೆ ಆಡಳಿತ ನಡೆಸಿದ್ದರೆ ಬೆಂಗಳೂರು ನಗರದ ಚಿತ್ರಣವೇ ಬದಲಾಗುತ್ತಿತ್ತು ಎಂಬುದಾಗಿ ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಅಭಿವೃದ್ಧಿ ಸಹಿಸದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದರು ಎಂದು ದೂರಿದ ಕೃಷ್ಣ, "ಆ ನಂತರ ಕರ್ನಾಟಕ ರಾಜ್ಯ ರಾಜಕೀಯದಿಂದ ಒಂದಲ್ಲಾ ಒಂದು ರೀತಿ ನನ್ನನ್ನು ದೂರ ಇಡುವ ಪ್ರಯತ್ನ ನಡೆಯಿತು," ಎಂದು ಬೇಸರ ತೋಡಿಕೊಂಡರು.

ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಆಡಳಿತವನ್ನು ಕೊಂಡಾಡಿದ ಕೃಷ್ಣ, ವಂಶ ಪಾರಂಪರ್ಯ ಆಡಳಿತವನ್ನು ವಿರೋಧಿಸುವ ಏಕೈಕ ಕಾರಣಕ್ಕಾಗಿ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಬೇಕಾಯಿತು ಎಂದು ಸ್ಪಷ್ಟನೆ ನೀಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸದೆ, "ಬುದ್ಧಿ ಬೆಳೆಯದವರು, ಇತಿಹಾಸ ಉಳ್ಳ ಪಕ್ಷದ ನಾಯಕತ್ವ ವಹಿಸುವುದನ್ನು ನಾನು ಇಚ್ಛಿಸಲಿಲ್ಲ. ವಂಶ ಪಾರಂಪರ್ಯ ಆಡಳಿತವನ್ನು ಎಷ್ಟು ದಿನ ಸಹಿಸಿಕೊಳ್ಳುವುದು?" ಎಂಬುದಾಗಿ ಐದಕ್ಕೂ ಹೆಚ್ಚು ದಶಕಗಳನ್ನು ಕಾಂಗ್ರೆಸ್‌ನಲ್ಲಿ ಕಳೆದು, ವಿದೇಶಾಂಗ ಸಚಿವರಂತ ಉನ್ನತ ಹುದ್ದೆಯನ್ನು ಅನುಭವಿಸಿದ ಕೃಷ್ಣ ಪ್ರಶ್ನಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ನೋಟು ಬ್ಯಾನ್‌ ಹಾಗೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಾನು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ನಮ್ಮವರಿಗೆ ಸಹಿಸಲು ಸಾಧ್ಯವಾಗಲಿಲ್ಲ. "ಮೋದಿ ನಾಯಕತ್ವ ಗುಣವನ್ನು ಮೆಚ್ಚಿ ಬಿಜೆಪಿ ಸೇರಬೇಕಾಯಿತೇ ಹೊರತು, ಯಾವುದೇ ಅಧಿಕಾರದ ಲಾಲಸೆಯಿಂದಲ್ಲ," ಎಂಬುದಾಗಿ ಅವರು ವಿವರಿಸಿದರು.

"ನಾನು ಎಂದೂ ಹಿಂಬಾಗಿಲ ರಾಜಕೀಯ ಮಾಡಿಲ್ಲ. 1999ರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ, ನನ್ನ ನಾಯಕತ್ವದಲ್ಲಿ 132 ಶಾಸಕರು ವಿಧಾನಸಭೆಗೆ ಆಯ್ಕೆಗೊಂಡರು. ಮುಂಬಾಗಿಲಿನಿಂದಲೇ ಮುಖ್ಯಮಂತ್ರಿಯಾದೆ. ರಾತ್ರೋ ರಾತ್ರಿ ಮತ್ತೊಂದು ಪಕ್ಷ ಸೇರಿ ಅಧಿಕಾರ ಹಿಡಿದುಕೊಂಡಿದ್ದರೆ, ಅದು ಹಿಂಬಾಗಿಲಿನ ರಾಜಕೀಯ ಆಗುತ್ತಿತ್ತು. ನನ್ನ ವಯಸ್ಸಿನ ಇತಿಮಿತಿಯ ಅರಿವಿದೆ. ಅಧಿಕಾರಕ್ಕಾಗಿ ನಾನು ಬಿಜೆಪಿ ಸೇರಿಲ್ಲ," ಎಂಬುದಾಗಿ ಮತ್ತೊಮ್ಮೆ ಅವರು ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದರು.

ಜತೆಗೆ "ಇದ್ದಕ್ಕಿದ್ದಂತೆ ಬಿಜೆಪಿಯವರ ಜತೆ ಕೈ ಜೋಡಿಸಿ ರಾತ್ರೋ ರಾತ್ರಿ ಮುಖ್ಯಮಂತ್ರಿ ಆದವ ನಾನಲ್ಲ. ಅವರದ್ದು ಹಿಂಬಾಗಿಲ ರಾಜಕಾರಣ," ಎಂಬುದಾಗಿ ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

ಬಿಜೆಪಿ ಸೇರಿದ ನಂತರ ನನ್ನ ಅಳಿಯ ಸಿದ್ದಾರ್ಥ ಮನೆ ಮೇಲೆ ಐಟಿ ದಾಳಿ ನಡೆಸಲಾಯಿತು. ಇದು ನನಗೆ ಬಿಜೆಪಿ ಕೊಟ್ಟ ಬಳುವಳಿ. ಆದರೆ ಐಟಿ ದಾಳಿಗೂ ರಾಜಕಾರಣಕ್ಕೂ ಸಂಬಂಧ ಬೆರೆಸುವುದು ಸೂಕ್ತವಲ್ಲ ಎಂಬುದಾಗಿ ಅವರು ಸಂವಾದದಲ್ಲಿ ಪ್ರತಿಕ್ರಿಯಿಸಿದರು.

ಮೋದಿ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯಬೇಕು, ಇದರಿಂದ ಭಾರತ ಆರ್ಥಿಕವಾಗಿ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಅಭಿವೃದ್ಧಿ ಹೊಂದಲಿದೆ ಎಂದು ಕೃಷ್ಣ ಪ್ರತಿಪಾದಿಸಿದರು.

ಕುಟುಂಬ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮುಂದೆ ನನ್ನ ಕುಟುಂಬದ ಯಾರಾದರೂ ಸದಸ್ಯರು ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಅದು ಅವರ ಇಚ್ಛೆಗೆ ಬಿಟ್ಟಿದ್ದು. ಅವರೆಲ್ಲ ಪ್ರೌಢಾವಸ್ಥೆ ತಲುಪಿದ್ದಾರೆ. ಸ್ವಯಂ ನಿರ್ಧಾರ ತೆಗೆದುಕೊಳ್ಳಬಲ್ಲರು. ನನ್ನ ತಮ್ಮನ ಮಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದು ಸುಲಭದ ಮಾತೇನಲ್ಲ. ಅದಕ್ಕೆ ನನ್ನ ಹೆಸರನ್ನು ಬಳಕೆ ಮಾಡಿಕೊಂಡಿಲ್ಲ," ಎಂದು ವಿವರಿಸಿದರು.

ಮಂಡ್ಯದಲ್ಲಿ ನಿಮ್ಮ ನಿಲುವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಸಮ್ಮಿಶ್ರ ಸರ್ಕಾರದ ವಿರೋಧಿ, ಕಾಂಗ್ರೆಸ್ ವಿರೋಧಿ, ಜೆಡಿಎಸ್ ವಿರೋಧಿ. ಹಾಗಾಗಿ ಮಂಡ್ಯದಲ್ಲಿ ನಾನು ಯಾವ ನಿಲುವು ತೆಗೆದುಕೊಳ್ಳಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು," ಎಂದರು.

ಮೋದಿಯಿಂದಾಗಿ ಬಿಜೆಪಿಗೆ ಬಂದೆ:

ನರೇಂದ್ರ ಮೋದಿಯವರೇ ನಾನು ಬಿಜೆಪಿಗೆ ಸೇರಲು ಮೂಲ ಕಾರಣ. ನಾನು ಬಿಜೆಪಿ ಸೇರಿದಾಗಿನಿಂದ ಇದನ್ನು ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದೇನೆ. ಮೋದಿಯವರದ್ದು ಅನುವಂಶೀಯ ರಾಜಕೀಯ ಅಲ್ಲ. ಮೋದಿಯವರು ಗುಜರಾತಿನಿಂದ ಒಬ್ಬರೇ ಬಂದವರು. ಇದು ನನ್ನನ್ನು ಆಕರ್ಷಿಸಿತು. ಕಳೆದ ಐದು ವರ್ಷದಲ್ಲಿ ಮೋದಿಯವರು ಕಳಂಕರಹಿತ, ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟರು. ಇದರ ಆಧಾರದಲ್ಲಿ ಮತ್ತೆ ಮೋದಿಯವರನ್ನು ಗೆಲ್ಲಿಸಬೇಕಿದೆ ಎಂದರು.

"ಬಿಜೆಪಿ ಅಂದ್ರೆ ಮೋದಿ, ಮೋದಿ ಅಂದ್ರೆ ಬಿಜೆಪಿ. ಇಂದಿರಾ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ' ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತೇನೆ. ಒಂದೊಂದು ಕಾಲಘಟ್ಟದಲ್ಲಿ ಒಬ್ಬೊಬ್ಬ ನಾಯಕರು ಇರುತ್ತಾರೆ. ನೋಟು ಅಮಾನ್ಯೀಕರಣ ಆದಾಗ ಅದನ್ನು ನಾನು ಸ್ವಾಗತ ಮಾಡಿದ್ದೆ. ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಮಾತನ್ನ ಒಪ್ಪಿಕೊಳ್ಳಲಿಲ್ಲ. ಸರ್ಜಿಕಲ್ ಸ್ಟ್ರೈಕ್ ನ್ನ ಒಪ್ಪಿಕೊಂಡಿದ್ದೆ. ಪಾಕಿಸ್ತಾನಕ್ಕೆ ಇಂತಹ ಕ್ರಮದಿಂದಲೇ ಬುದ್ಧಿ ಹೇಳಬೇಕು," ಎಂದು ತಿಳಿಸಿದರು.