samachara
www.samachara.com
ಶಾಸಕ ಜಾಧವ್‌ ರಾಜೀನಾಮೆ ಅಂಗೀಕಾರ; ಸಾರ್ವಜನಿಕವಾಗಿ ಸ್ಪೀಕರ್‌ ನಡೆಸಿದ ಪ್ರಕ್ರಿಯೆ ಹೇಗಿತ್ತು?
ಸುದ್ದಿ ಸಾರ

ಶಾಸಕ ಜಾಧವ್‌ ರಾಜೀನಾಮೆ ಅಂಗೀಕಾರ; ಸಾರ್ವಜನಿಕವಾಗಿ ಸ್ಪೀಕರ್‌ ನಡೆಸಿದ ಪ್ರಕ್ರಿಯೆ ಹೇಗಿತ್ತು?

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅದು ಅಂಗೀಕಾರವಾಗುವ ಮುನ್ನವೇ ಬಿಜೆಪಿಗೆ ಸೇರ್ಪಡೆಯಾದ ಉಮೇಶ್ ಜಾಧವ್ ಅವರ ಧೋರಣೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅಪಾಯಕ್ಕೆ ಗುರಿಯಾಗಲಿದೆ ಎಂಬ ಮಾತು ಕೇಳಿ ಬಂದಿತ್ತು.

Team Samachara

ಕಾಂಗ್ರೆಸ್‍ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿರುವ ಡಾ. ಉಮೇಶ್ ಜಾಧವ್ ಕಡೆಗೂ ನಿರಾಳರಾಗಿದ್ದಾರೆ. ಅವರು ತಮ್ಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಅಳೆದೂ ತೂಗಿ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಸೋಮವಾರ ಅಂಗೀಕರಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಡಾ. ಉಮೇಶ್ ಜಾಧವ್ ಕೆಲವು ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಅವರು ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲೇ ಅವರು ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಪೂರಕವಾಗಿ ಕೆಲವು ದಿನ ಅವರು ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು. ಆರು ವರ್ಷಗಳ ಕಾಲ ಯಾವ ಚುನಾವಣೆಯಲ್ಲೂ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಕೋರಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನ ಸಭಾಧ್ಯಕ್ಷರ ಮೊರೆ ಹೋಗಿದ್ದರು.

ಆದರೆ ಇದರ ನಡುವೆ ಪ್ರತ್ಯಕ್ಷರಾಗಿದ್ದ ಜಾಧವ್‌, ಅಧಿವೇಶನಕ್ಕೆ ಹಾಜರಾಗಿ ‘ತಾನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ’ ಎಂದಿದ್ದರು. ಹೀಗೆ ಹೇಳಿದವರೇ ಕೆಲವು ದಿನ ಬಿಟ್ಟು ಅಂದರೆ ಮಾರ್ಚ್‌ 4ರಂದು ಸ್ಪೀಕರ್‌ ರಮೇಶ್‌ ಕುಮಾರ್‌ ನಿವಾಸಕ್ಕೆ ತೆರಳಿ ರಾಜೀನಾಮೆ ನೀಡಿದ್ದರು.

ಮೊದಲೇ ಅನರ್ಹತೆ ಕೋರಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರು ಮನವಿ ಸಲ್ಲಿಸಿದ್ದರಿಂದ ಜಾಧವ್ ಅವರ ರಾಜೀನಾಮೆಯನ್ನು ಅಂಗೀಕರಿಸುವ ಮುನ್ನ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಪತ್ರಕರ್ತರು, ಸಾರ್ವಜನಿಕರು ಹಾಜರಿರಲು ಅವಕಾಶ ಮಾಡಿಕೊಟ್ಟಿದ್ದ ಸಭಾಧ್ಯಕ್ಷ ರಮೇಶ್ ಕುಮಾರ್, ‘ಯಾವ ಕಾರಣಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೀರಿ?’ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಈ ಮಧ್ಯೆ ವಿಚಾರಣೆಯ ಸಂದರ್ಭದಲ್ಲಿ ಹಾಜರಿದ್ದವರು, ‘ಯಾವ ಕಾರಣಕ್ಕೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಡಿ. ನಿಮ್ಮನ್ನು ನಂಬಿ ಮತ ಹಾಕಿದ್ದೇವೆ. ಈಗ ನಮ್ಮ ನಂಬಿಕೆಯನ್ನು ಹುಸಿಗೊಳಿಸಿ ನೀವು ರಾಜೀನಾಮೆ ಕೊಡುವುದು ಸರಿಯಲ್ಲ’ ಎಂದು ವಾದಿಸಿದ್ದರು.

ಹೀಗೆ ಪ್ರತಿರೋಧಗಳ ನಡುವೆ ವಿಚಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ತೀರ್ಪನ್ನು ಕಾಯ್ದಿರಿಸಿ ಆದೇಶ ಹೊರಡಿಸಿದ್ದರು.

ಇದೀಗ ಸೋಮವಾರ ತೀರ್ಪು ನೀಡಿರುವ ಅವರು, ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಹೇಳಿದ್ದಾರೆ. ಈ ಆದೇಶದಿಂದ ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರೆದುರು ಸ್ಪರ್ಧಿಸಿರುವ ಉಮೇಶ್ ಜಾಧವ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅದು ಅಂಗೀಕಾರವಾಗುವ ಮುನ್ನವೇ ಬಿಜೆಪಿಗೆ ಸೇರ್ಪಡೆಯಾದ ಉಮೇಶ್ ಜಾಧವ್ ಅವರ ಧೋರಣೆ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಅಪಾಯಕ್ಕೆ ಗುರಿಯಾಗಲಿದೆ ಎಂಬ ಮಾತು ಕೇಳಿ ಬಂದಿತ್ತು.

ಆದರೆ ಇದೀಗ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಉಮೇಶ್ ಜಾಧವ್ ರಾಜೀನಾಮೆಯನ್ನು ಅಂಗೀಕರಿಸುವುದರೊಂದಿಗೆ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಣಕ್ಕೆ ಹೊಸ ರಂಗು ಬಂದಂತಾಗಿದೆ.

ಚಿತ್ರ ಕೃಪೆ: ದಿ ಹಿಂದೂ

Also read: ಕಾಂಗ್ರೆಸ್‌ನ ಶಸ್ತ್ರಚಿಕಿತ್ಸಾ ತಜ್ಞನಿಗೇ ಬಿಜೆಪಿ ‘ಆಪರೇಷನ್’: ಯಾರಿವರು ಡಾ. ಜಾದವ್?