samachara
www.samachara.com
ಮಂಡ್ಯದಲ್ಲಿ ನಿಖಿಲ್‌ ನಂಬರ್‌ 1; ನಾಮಪತ್ರ ವಿವಾದಕ್ಕೆ ಸಿಗದ ತಿರುವು
ಸುದ್ದಿ ಸಾರ

ಮಂಡ್ಯದಲ್ಲಿ ನಿಖಿಲ್‌ ನಂಬರ್‌ 1; ನಾಮಪತ್ರ ವಿವಾದಕ್ಕೆ ಸಿಗದ ತಿರುವು

ನಿಖಿಲ್‍ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರ ಕಾನೂನು ಬದ್ಧವಾಗಿದೆ ಎಂದು ಚುನಾವಣಾ ಆಯೋಗ ಕ್ಲೀನ್‍ ಚಿಟ್ ನೀಡಿದೆ.

Team Samachara

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‍ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರ ಕಾನೂನು ಬದ್ಧವಾಗಿದೆ ಎಂದು ಚುನಾವಣಾ ಆಯೋಗ ಕ್ಲೀನ್‍ ಚಿಟ್ ನೀಡಿದೆ.

ಈ ಮೂಲಕ ಕಳೆದ ಒಂದು ವಾರದಿಂದ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಕುರಿತಂತೆ ಉಂಟಾಗಿದ್ದ ವಿವಾದಗಳಿಗೆ ಕೊನೆಗೂ ತೆರೆ ಬಿದ್ದಿದೆ.

ಈ ಹಿಂದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಅವರ ಚುನಾವಣಾ ಏಜೆಂಟ್ ಮದನ್ ಕುಮಾರ್ ಅವರುಗಳು ನಿಖಿಲ್‍ ಕುಮಾರಸ್ವಾಮಿ ನಾಮಪತ್ರ ಸಿಂಧುಗೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ನಮೂನೆ ಸಂಖ್ಯೆ 26ರಲ್ಲಿ ನಿಖಿಲ್ ಕುಮಾರಸ್ವಾಮಿ ಕಾನೂನು ಬಾಹಿರವಾಗಿ ತಿದ್ದುಪಡಿ ಮಾಡಿದ್ದಾರೆ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಇಲ್ಲಿನ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರು.

ಅಲ್ಲದೆ ಚುನಾವಣಾಧಿಕಾರಿ ಮಂಜುಶ್ರೀ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಏಜೆಂಟ್‍ರಂತೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದರು.

ಹೀಗೆ ನಿಖಿಲ್‍ ಕುಮಾರಸ್ವಾಮಿ ನಾಮಪತ್ರ ದಿನಕ್ಕೊಂದು ವಿವಾದ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ ಕುಮಾರ್ ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಇಬ್ಬರು ವೀಕ್ಷಕರಿಗೆ ಸೂಚಿಸಿದ್ದರು. ಮಂಜುಶ್ರೀ ಅವರ ಬಗ್ಗೆಯೂ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆ ನಡೆಸಿ ವರದಿ ನೀಡಲು ಐಎಎಸ್ ಅಧಿಕಾರಿಗಳಾದ ರಂಜಿತ್‍ ಕುಮಾರ್ ಮತ್ತು ರಾಣಿ ನಾಗರಿಕ್ ಅವರುಗಳನ್ನು ವೀಕ್ಷಕರನ್ನಾಗಿ ನೇಮಿಸಿದ್ದರು.

ಸಂಜೀವ್‍ಕುಮಾರ್ ನಿರ್ದೇಶನದ ಹಿನ್ನೆಲೆಯಲ್ಲಿ ವಿಶೇಷ ವೀಕ್ಷಕರಾದ ರಂಜಿತ್‍ ಕುಮಾರ್ ಮತ್ತು ನಾಗರಿಕ್ ಅವರುಗಳು ಭಾನುವಾರ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸುಮಲತಾ ಅವರ ಚುನಾವಣಾ ಏಜೆಂಟ್ ಮದನ್‍ ಕುಮಾರ್, ನಿಖಿಲ್‍ ಕುಮಾರಸ್ವಾಮಿ ಅವರ ಚುನಾವಣಾ ಏಜೆಂಟ್ ಹಾಗೂ ಚುನಾವಣಾಧಿಕಾರಿ ಮಂಜುಶ್ರೀ ಮತ್ತಿತರ ಸಮ್ಮುಖದಲ್ಲಿ ನಾಮಪತ್ರವನ್ನು ಪರಿಶೀಲನೆ ನಡೆಸಿದರು.

ಪರಿಶೀಲನೆ ನಂತರ ಸೋಮವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ ಕುಮಾರ್ ಅವರಿಗೆ ನಾಲ್ಕು ಪುಟಗಳ ವರದಿ ನೀಡಿರುವ ವೀಕ್ಷಕರು, ‘ನಿಖಿಲ್‍ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರದಲ್ಲಿ ಯಾವುದೇ ಲೋಪದೋಷ ಕಂಡು ಬಂದಿಲ್ಲ. ಎಲ್ಲವೂ ಕಾನೂನುಬದ್ದವಾಗಿ ನಡೆದಿದೆ. ಮಂಜುಶ್ರೀ ಅವರು ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರವನ್ನು ಸಿಂಧುಗೊಳಿಸಿರುವುದು ಸರಿಯಾಗಿದೆ’ ಎಂದು ಹೇಳಿದ್ದಾರೆ.

ವಿಡಿಯೋಗ್ರಾಫರ್ ಯಡವಟ್ಟು:

ನಿಖಿಲ್‍ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ವೇಳೆ ವಿಡಿಯೋಗ್ರಾಫರ್ ಮಾಡಿರುವ ಯಡವಟ್ಟಿನಿಂದಾಗಿ ಈ ಪ್ರಮಾದ ಉಂಟಾಗಿದೆ. ಒಟ್ಟು ನಾಲ್ಕು ಬಾರಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಆದರೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಅದನ್ನು ಚಿತ್ರೀಕರಣ ಮಾಡುವುದು ಬಿಟ್ಟು ಬೇರೊಂದನ್ನು ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ. ಹಾಗಾಗಿ ವಿಡಿಯೋಗ್ರಾಫರ್ ವಿರುದ್ದ ಎಫ್‍ಐಆರ್ ದಾಖಲಿಸಿರುವುದು ಸರಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನಮೂನೆ ಸಂಖ್ಯೆ 26ರಲ್ಲಿ ತುಸು ಯಡವಟ್ಟಾದಾಗ ಪರಿಷ್ಕೃತ ನಮೂನೆಯನ್ನು ಸಲ್ಲಿಸಲು ಚುನಾವಣಾಧಿಕಾರಿಗಳು ಅವಕಾಶ ಕಲ್ಪಿಸಿದ್ದರು. ಹೀಗಾಗಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಿಂಧುಗೊಳಿಸಿರುವುದು ಸರಿಯಾಗಿದೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ರಾಜಕೀಯ ಪ್ರೇರಿತ:

ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರ ಚುನಾವಣಾ ಏಜೆಂಟ್ ಮದನ್‍ಕುಮಾರ್ ರಾಜಕೀಯ ಪ್ರೇರಿತವಾಗಿ ಜಿಲ್ಲಾಧಿಕಾರಿ ವಿರುದ್ಧ ದೂರು ನೀಡಿದ್ದಾರೆ. ಅವರು ನೀಡಿರುವ ದೂರಿನಲ್ಲಿ ಸತ್ಯಾಂಶವಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.