samachara
www.samachara.com
ಡಿಆರ್‌ಡಿಒ ಗೂಢಾಚಾರಿಕೆ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಇಸ್ರೋ 
ಸುದ್ದಿ ಸಾರ

ಡಿಆರ್‌ಡಿಒ ಗೂಢಾಚಾರಿಕೆ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಇಸ್ರೋ 

436 ಕೆಜಿ ತೂಕದ ಉಪಗ್ರಹ ಎಮಿಸ್ಯಾಟ್‌ ಶತ್ರು ದೇಶಗಳ ರಾಡಾರ್‌ಗಳನ್ನು ಪತ್ತೆ ಹಚ್ಚಲಿದೆ, ಈ ಮೂಲಕ ಸೇನೆಗೆ ನೆರವಾಗಲಿದೆ.

Team Samachara

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಗುಪ್ತಚರ ಉಪಗ್ರಹ ಎಮಿಸ್ಯಾಟ್‌ನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 436 ಕೆಜಿ ತೂಕದ ಈ ಉಪಗ್ರಹ ಶತ್ರು ದೇಶಗಳ ರಾಡಾರ್‌ಗಳನ್ನು ಪತ್ತೆ ಹಚ್ಚಲಿದೆ, ಈ ಮೂಲಕ ಸೇನೆಗೆ ನೆರವಾಗಲಿದೆ.

ಎಮಿಸ್ಯಾಟ್‌, 28 ವಿದೇಶಿ ಉಪಗ್ರಹಗಳು ಮತ್ತು ಮೂರು ವೈಜ್ಞಾನಿಕ ಉಪಕರಣಗಳನ್ನು ಹೊತ್ತ ಇಸ್ರೋದ ಉಪಗ್ರಹ ಉಡಾವಣಾ ವಾಹಕ 'ಪಿಎಸ್‌ಎಲ್‌ವಿ-ಸಿ45' ಇಂದು ಬೆಳಿಗ್ಗೆ 9.27ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ನಭಕ್ಕೆ ಜಾರಿತು. ಹಾರಿದ 17 ನಿಮಿಷಗಳಲ್ಲೇ 753.6 ಕಿಲೋಮೀಟರ್‌ ಎತ್ತರದ ಕಕ್ಷೆಗೆ ಎಮಿಸ್ಯಾಟ್‌ ಉಪಗ್ರಹವನ್ನು ಕೂರಿಸಿತು. ಇದೇ ವೇಳೆ ಅಮೆರಿಕಾದ 24, ಲಿಥುಯೇನಿಯಾ 2, ಸ್ಪೇನ್‌ 1 ಮತ್ತು ಸ್ವಿಟ್ಜರ್ಲಾಂಡ್‌ನ 1 ಉಪಗ್ರಹಗಳನ್ನು ಯಶಸ್ವಿಯಾಗಿ ಬೇರೆ ಬೇರೆ ಕಕ್ಷೆಗಳಿಗೆ ಕೂರಿಸಿದೆ.

ಪಿಎಸ್‌ಎಲ್‌ವಿಯ ಈ 47ನೇ ಉಪಗ್ರಹ ಉಡಾವಣಾ ವಾಹಕ ಅತ್ಯಂತ ದೀರ್ಘಾವಧಿಯ ರಾಕೆಟ್ ಎಂಬ ದಾಖಲೆಯನ್ನೂ ಬರೆದಿದೆ. ಮೂರು ಬೇರೆ ಬೇರೆ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸಬೇಕಾಗಿದ್ದರಿಂದ ಸುಮಾರು 3 ಗಂಟೆ ಈ ವಾಹಕ ಕೆಲಸ ಮಾಡಿದೆ. ಈ ಹಿಂದೆ 2018ರ ಜನವರಿಯಲ್ಲಿ ಉಡಾವಣೆ ಮಾಡಿದ ಪಿಎಸ್‌ಎಲ್‌ವಿ-ಸಿ40 ಎರಡು ಗಂಟೆ 21 ನಿಮಿಷಗಳ ಯೋಜನೆಯಾಗಿತ್ತು.

'ಪಿಎಸ್‌ಎಲ್‌ವಿ-ಸಿ45' ಯೋಜನೆಯಲ್ಲಿ ಹಲವು ಹಂತಗಳನ್ನು ಇಸ್ರೋ ಅನುಸರಿಸಿದೆ. ಇಂಜಿನ್‌ಗಳನ್ನು ಹೊತ್ತಿ ಉರಿಸಿ ಹಲವು ಬಾರಿ ಸ್ಥಗಿತಗೊಳಿಸಲಾಗಿದ್ದು, ಈ ಮೂಲಕ ಬೇರೆ ಬೇರೆ ಕಕ್ಷೆಯಲ್ಲಿ ಉಪಗ್ರಹಗಳನ್ನು ಕೂರಿಸಲಾಗಿದೆ. ಈ ಹಿಂದೆಯೂ ನಾಲ್ಕು ಬಾರಿ ಇಂಥಹ ತಂತ್ರಜ್ಞಾನವನ್ನು ಇಸ್ರೋ ಯಶಸ್ವಿಯಾಗಿ ಪ್ರಯೋಗಿಸಿತ್ತು.

ರಾಕೆಟ್‌ನಲ್ಲಿರುವ ನಾಲ್ಕನೇ ಮತ್ತು ಕೊನೆಯ ಭಾಗ ಮೂರು ವೈಜ್ಞಾನಿಕ ಉಪಕರಣಗಳೊಂದಿಗೆ ಆರು ತಿಂಗಳ ಕಾಲ ಆಕಾಶದಲ್ಲೇ ಇರಲಿದೆ. ಈ ಉಪಕರಣಗಳು ಅಲ್ಲಿಂದಲೇ ಅಗತ್ಯ ಮಾಹಿತಿಯನ್ನು ಕಲೆ ಹಾಕಿ ಭೂಮಿ ಮೇಲಿರುವ ಕೇಂದ್ರಗಳಿಗೆ ಅವುಗಳನ್ನು ರವಾನಿಸಲಿವೆ. ಇದರಲ್ಲಿ ಒಂದು ಇಸ್ರೋ ತಯಾರಿಸಿದ ಸಮುದ್ರದ ಅಧ್ಯಯನಕ್ಕೆ ಸಂಬಂಧಿಸಿದ ಉಪಕರಣವಾದರೆ, ಇನ್ನೊಂದನ್ನು ರೇಡಿಯೋ ಹವ್ಯಾಸಿ ಉಪಗ್ರಹ ನಿಗಮ ತಯಾರಿಸಿದೆ, ಇನ್ನೊಂದು ಉಪಕರಣವನ್ನು ಇಂಡಿಯನ್‌ ಇನ್ಸ್‌ಟ್ಯೂಟ್‌ ಆಫ್‌ ಸ್ಪೇಸ್‌ ಸೈನ್ಸ್‌ ಆಂಡ್‌ ಟೆಕ್ನಾಲಜಿ (ಐಐಎಸ್‌ಟಿ) ತಯಾರಿಸಿದೆ.