samachara
www.samachara.com
ಅಗ್ದಿ ಬಡವರ ಖಾತೆಗೆ ವರ್ಷಕ್ಕೆ 72,000 ರೂ.; ರಾಹುಲ್‌ ಚುನಾವಣಾ ಘೋಷಣೆ
ಸುದ್ದಿ ಸಾರ

ಅಗ್ದಿ ಬಡವರ ಖಾತೆಗೆ ವರ್ಷಕ್ಕೆ 72,000 ರೂ.; ರಾಹುಲ್‌ ಚುನಾವಣಾ ಘೋಷಣೆ

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಶೇಕಡಾ 20 ಕಡು ಬಡ ಕುಟುಂಬಗಳ ಖಾತೆಗೆ ವಾರ್ಷಿಕ 72 ಸಾವಿರ ರೂಪಾಯಿಗಳನ್ನು ಜಮೆ ಮಾಡುವುದಾಗಿ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.

Team Samachara

ಚುನಾವಣೆಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಮಾಸಿಕ ಆದಾಯ ಖಾತ್ರಿ ಯೋಜನೆಯ ವಿವರಗಳನ್ನು ಕಾಂಗ್ರೆಸ್‌ ಬಹಿರಂಗಗೊಳಿಸಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಯೋಜನೆಯ ರೂಪುರೇಷೆಗಳನ್ನು ಸ್ವತಃ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಿಡುಗಡೆ ಮಾಡಿದ್ದು ಹಲವರ ಹುಬ್ಬೇರಿಸಿದೆ. ಇದಕ್ಕೆ ಕಾರಣ ಅವರು ಹೇಳಿರುವ ಮೊತ್ತ.

ರೈತರ ಖಾತೆಗೆ ವರ್ಷಕ್ಕೆ ಜುಜುಬಿ 6,000 ರೂಪಾಯಿಗಳನ್ನು ಬಿಡುಗಡೆ ಮಾಡುವ ನರೇಂದ್ರ ಮೋದಿ ಸರಕಾರದ ಕಿಸಾನ್‌ ಸಮ್ಮಾನ್‌ ಯೋಜನೆಗಿಂತ 12 ಪಟ್ಟು ಹೆಚ್ಚಿನ ಮೊತ್ತವನ್ನು ಕಾಂಗ್ರೆಸ್‌ ಪ್ರಸ್ತಾಪಿಸಿದೆ. ಒಂದೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡ ಕುಟುಂಬಗಳಿಗೆ ತಿಂಗಳಿಗೆ 6,000 ರೂಪಾಯಿಗಳ ಕನಿಷ್ಠ ಆದಾಯದ ಭದ್ರತೆ ನೀಡುವುದಾಗಿ ಅದು ಹೇಳಿದೆ.

ತನ್ನ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವನ್ನು ಬಹಿರಂಗಗೊಳಿಸಿರುವ ರಾಹುಲ್‌ ಗಾಂಧಿ, ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಶೇಕಡಾ 20 ಕಡು ಬಡ ಕುಟುಂಬಗಳ ಖಾತೆಗೆ ವಾರ್ಷಿಕ 72 ಸಾವಿರ ರೂಪಾಯಿಗಳನ್ನು ಜಮೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ತೀರ್ಮಾನವನ್ನು ಅವರು ಐತಿಹಾಸಿಕ ಕ್ರಮ ಎಂದು ಕರೆದಿದ್ದಾರೆ.

“21ನೇ ಶತಮಾನದಲ್ಲಿಯೂ ಭಾರತದಲ್ಲಿ ಬಡತನ ಇದೆ ಎಂಬುದನ್ನು ಕಾಂಗ್ರೆಸ್‌ನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಬಡತನದ ವಿರುದ್ಧದ ಅಂತಿಮ ಪ್ರಹಾರ ಆರಂಭಗೊಂಡಿದೆ,” ಎಂದು ಅವರು ತಮ್ಮ ತೀರ್ಮಾನಕ್ಕೆ ವ್ಯಾಖ್ಯಾನಿಸಿದ್ದಾರೆ.

ದೇಶದ ಶೇಕಡಾ 20ರಷ್ಟು ಕಡು ಬಡವರ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಹೇಳಿರುವ ಅವರು ಯೋಜನೆಯಿಂದ 5 ಕೋಟಿ ಕುಟುಂಬಗಳು ಅಥವಾ ದೇಶದ 25 ಕೋಟಿ ಜನರಿಗೆ ಉಪಯೋಗವಾಗಲಿದೆ ಎಂಬ ಲೆಕ್ಕ ಮುಂದಿಟ್ಟಿದ್ದಾರೆ.

ಯೋಜನೆಗೆ ‘ನ್ಯೂನತಮ್‌ ಆಯ್‌ ಯೋಜನಾ’ ಅಥವಾ ಸಂಕ್ಷಿಪ್ತವಾಗಿ ‘ನ್ಯಾಯ್‌ (NYAY)‘ ಯೋಜನೆ ಎಂದು ಹೆಸರಿಡಲಾಗಿದೆ.

“ಆರ್ಥಿಕವಾಗಿ ಈ ಯೋಜನೆ ಕಾರ್ಯಸಾಧುವಾಗಿದೆ. ನಾಲ್ಕರಿಂದ ಐದು ತಿಂಗಳು ನಾವು ಈ ಯೋಜನೆಯನ್ನು ಅಧ್ಯಯನ ನಡೆಸಿದ್ದೇವೆ. ನಾವು ನರೇಗಾಕ್ಕೆ ಬದ್ಧರಾಗಿದ್ದೆೆವು, ಅದರಂತೆ ನರೇಗಾ ಜಾರಿಗೊಳಿಸಿದ್ದೇವೆ. ಈಗ ನಾವು ಬಡವರಿಗೆ ನ್ಯಾಯ್‌(ಯ)ದ ಭರವಸೆ ನೀಡುತ್ತಿದ್ದೇವೆ,” ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

ಅವರು ಇದನ್ನು "ಅತ್ಯಂತ ಶಕ್ತಿಯುತ ಮತ್ತು ಕ್ರಿಯಾತ್ಮಕ ಕಲ್ಪನೆಯ ಮೂಲಕ ಹುಟ್ಟಿಕೊಂಡ ಉತ್ತಮ-ಚಿಂತನೆಯ ಯೋಜನೆ," ಎಂದು ಬಣ್ಣಿಸಿದ್ದಾರೆ.

ಡಿಮಾನಟೈಸೇಷನ್‌ ಮತ್ತು ನಿರುದ್ಯೋಗ ಸಮಸ್ಯೆಯ ಕಾರಣಕ್ಕೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಬಂದಿರುವ ಕಾಂಗ್ರೆಸ್‌ ಇದೀಗ ನ್ಯಾಯ್‌ ಯೋಜನೆಯನ್ನೇ ತನ್ನ ಪ್ರಚಾರದ ಪ್ರಮುಖ ಅಜೆಂಡಾವಾಗಿ ಬಳಸಿಕೊಳ್ಳಲಿದೆ.

ನ್ಯಾಯ್‌ ಮಾತ್ರವಲ್ಲದೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಿಡಿಪಿಯ ಶೇಕಡಾ 6ರಷ್ಟು ಮೊತ್ತವನ್ನು ಶಿಕ್ಷಣಕ್ಕೆ ಮೀಸಲಿಡಲಿದೆ. ಜತೆಗೆ ಸರಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನೀಡುವುದಾಗಿ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ.