samachara
www.samachara.com
ನ್ಯಾ. ಪಿನಾಕಿ ಚಂದ್ರ ಘೋಷ್: ಇವರೇ ನೋಡಿ ನಮ್ಮ ಮೊದಲ ಲೋಕಪಾಲರು
ಸುದ್ದಿ ಸಾರ

ನ್ಯಾ. ಪಿನಾಕಿ ಚಂದ್ರ ಘೋಷ್: ಇವರೇ ನೋಡಿ ನಮ್ಮ ಮೊದಲ ಲೋಕಪಾಲರು

ಘೋಷ್‌ ಕೊಲ್ಕೊತ್ತಾದವರು. ತಲೆ ತಲಾಂತರದಿಂದ ಇವರ ಕುಟುಂಬ ವಕೀಲ ವೃತ್ತಿಯನ್ನೇ ನಿರ್ವಹಿಸುತ್ತಾ ಬಂದಿದೆ. ಇದೇ ಹಾದಿಯಲ್ಲಿ 5ನೇ ತಲೆಮಾರಿನ ವ್ಯಕ್ತಿಯಾಗಿ ಪಿ.ಸಿ. ಘೋಷ್‌ ಕೂಡ ಕಾನೂನು ವೃತ್ತಿಯಲ್ಲಿದ್ದಾರೆ.

Team Samachara

ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್‌ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನ್ಯಾ. ಘೋಷ್‌ ಅವರಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಪ್ರತಿಜ್ಞಾ ವಿಧಿ ಬೋಧಿಸಿದರು.

ಯಾರಿವರು ಪಿ.ಸಿ. ಘೋಷ್‌?

ಘೋಷ್‌ ಕೊಲ್ಕೊತ್ತಾದವರು. ತಲೆ ತಲಾಂತರದಿಂದ ಇವರ ಕುಟುಂಬ ವಕೀಲ ವೃತ್ತಿಯನ್ನೇ ನಿರ್ವಹಿಸುತ್ತಾ ಬಂದಿದೆ. ಘೋಷ್‌ ತಂದೆ ನ್ಯಾ. ಸಂಭಿ ಚಂದ್ರ ಘೋಷ್‌ ಆಗಿನ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಇದೇ ಹಾದಿಯಲ್ಲಿ ತಮ್ಮ ಕುಟುಂಬದ ಐದನೇ ತಲೆಮಾರಿನ ವ್ಯಕ್ತಿಯಾಗಿ ಪಿ.ಸಿ. ಘೋಷ್‌ ಕೂಡ ಕಾನೂನು ಶಿಕ್ಷಣ ಪಡೆದಿದ್ದರು. ನಂತರ 1976ರಲ್ಲಿ ಆಗಿನ ಕಲ್ಕತ್ತಾ ಹೈಕೋರ್ಟ್‌ನ ಬಾರ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿ ವಕೀಲಿ ಅಭ್ಯಾಸ ಆರಂಭಿಸಿದ್ದರು. ಮುಂದೆ 1997ರಲ್ಲಿ ಅವರು ಬಾರ್‌ನಿಂದ ಬೆಂಚ್‌ಗೆ ಪದೋನ್ನತಿ ಹೊಂದಿ ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಅಲ್ಲಿಂದ ಅವರು ಹೈದರಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದರು.

2012ರ ಡಿಸೆಂಬರ್‌ನಲ್ಲಿ ಹೈದರಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅವರನ್ನು ನೇಮಕಗೊಳಿಸಲಾಯಿತು. ಮುಂದೆ 2013ರ ಮಾರ್ಚ್‌ 8ರಂದು ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಭಡ್ತಿ ಪಡೆದುಕೊಂಡರು.

ನಾಲ್ಕು ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಅವರು ಸಲ್ಲಿಸಿದ ಸೇವೆ ಸ್ಮರಣೀಯವಾದುದು.

ಇವುಗಳಲ್ಲಿ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅವರು ನೀಡಿದ ಆದೇಶ ಹೆಚ್ಚು ಜನಪ್ರಿಯವಾದುದು. ಆದರೆ ಅಷ್ಟೊತ್ತಿಗೆ ಜಯಲಲಿತಾ ಮಾತ್ರ ಸಾವನ್ನಪ್ಪಿದ್ದರು. ಇನ್ನು ಜಲ್ಲಿಕಟ್ಟು ಮತ್ತು ಎತ್ತಿನಗಾಡಿ ಓಟವನ್ನು ನಿಷೇಧಗೊಳಿಸಿದವರೂ ಇದೇ ಘೋಷ್‌. ಇದಲ್ಲದೆ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಶಿಕ್ಷೆ ಕಡಿತಗೊಳಿಸಲು ರಾಜ್ಯ ಸರಕಾರಕ್ಕೆ ಹಕ್ಕಿಲ್ಲ ಎಂಬ ತೀರ್ಪು ನೀಡಿದ ಪೀಠದಲ್ಲಿಯೂ ಅವರಿದ್ದರು.

ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ನಂತರ ಯಥಾಸ್ಥಿತಿ ಕಾಪಾಡುವಂತೆ ಸಾಂವಿಧಾನಿಕ ಪೀಠ ಆದೇಶ ನೀಡಿತ್ತು. ಇದರಲ್ಲಿಯೂ ಘೋಷ್‌ ಓರ್ವ ಸದಸ್ಯರಾಗಿದ್ದರು. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ್‌ ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ್‌ ಸಿಂಗ್‌ ವಿರುದ್ದ ಕ್ರಿಮಿನಲ್‌ ಸಂಚಿನ ಪ್ರಕರಣ ದಾಖಲಿಸಲು ಆದೇಶ ನೀಡಿದ ಪೀಠದಲ್ಲಿಯೂ ಅವರು ಸದಸ್ಯರಾಗಿದ್ದರು.

ಹೀಗೆ ಜನಮಾನಸದಲ್ಲಿ ನೆನಪಿನಲ್ಲಿ ಉಳಿಯುವ ತೀರ್ಪು ನೀಡಿ ಮೇ 27, 2017ರಂದು ಪಿನಾಕಿ ಚಂದ್ರ ಘೋಷ್‌ ಸೇವೆಯಿಂದ ನಿವೃತ್ತರಾಗಿದ್ದರು. ಅಲ್ಲಿಂದ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇದೀಗ ಮಹತ್ವದ ಲೋಕಪಾಲ ಸಂಸ್ಥೆಯ ಮುಖ್ಯಸ್ಥ ಜವಾಬ್ದಾರಿಯನ್ನು 66 ವರ್ಷದ ಪಿನಾಕಿ ಚಂದ್ರ ಘೋಷ್‌ ಹೊತ್ತುಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಷ್ಟೇ ಸಂಬಳ ಮತ್ತು ಸೌಲಭ್ಯಗಳನ್ನು ಪಡೆಯಲಿರುವ ಅವರು ಹಾಲಿ ಮತ್ತು ಮಾಜಿ ಅಧಿಕಾರಿಗಳು, ಜನಪ್ರತಿನಿಧಿಗಳನ್ನು ತನಿಖೆಗೆ ಒಳಪಡಿಸುವ ಅಧಿಕಾರವನ್ನು ಹೊಂದಿದ್ದಾರೆ.

ಇವರ ಜತೆಗೆ ಬೇರೆ ಬೇರೆ ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ದಿಲೀಪ್‌ ಬಿ ಭೋಸಲೆ, ಪ್ರದೀಪ್‌ ಕುಮಾರ್‌ ಮೊಹಾಂತಿ, ಅಭಿಲಾಶಾ ಕುಮಾರಿ, ಹಾಲಿ ಛತ್ತೀಸ್‌ಗಢ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಜಯ್‌ ಕುಮಾರ್‌ ತ್ರಿಪಾಠಿ ಲೋಕಪಾಲ ಸಂಸ್ಥೆಯಲ್ಲಿದ್ದಾರೆ.

ಸಶಸ್ತ್ರ ಸೀಮಾ ಬಲದ ಮೊದಲ ಮಹಿಳಾ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್‌ ಕುಮಾರ್‌ ಜೈನ್‌, ಮಾಜಿ ಐಆರ್‌ಎಸ್‌ ಅಧಿಕಾರಿ ಮಹೇಂದರ್‌ ಸಿಂಗ್‌, ಗುಜರಾಜ್‌ ಕೇಡರ್‌ ಐಪಿಎಸ್‌ ಅಧಿಕಾರಿ ಇಂದ್ರಜೀತ್‌ ಪ್ರಸಾದ್‌ ಗೌತಮ್‌ ಲೋಕಪಾಲ ಸಂಸ್ಥೆಯಲ್ಲಿರುವ ನ್ಯಾಯಾಂಗದ ಹೊರತಾದ ಇತರ ಸದಸ್ಯರಾಗಿದ್ದಾರೆ.

70 ವರ್ಷ ತುಂಬುವವರೆಗೆ ಅಥವಾ ಐದು ವರ್ಷಗಳ ಕಾಲ (ಇದರಲ್ಲಿ ಯಾವುದು ಮೊದಲೋ ಅದು) ಪಿನಾಕಿ ಚಂದ್ರ ಘೋಷ್‌ ಈ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.