samachara
www.samachara.com
ಒಂದು ಕೆಟ್ಟ ಸುದ್ದಿ; ಪಾಕಿಸ್ತಾನಕ್ಕಿಂತಲೂ ಭಾರತೀಯರು ಹೆಚ್ಚು ದುಃಖಿತರು!
ಸುದ್ದಿ ಸಾರ

ಒಂದು ಕೆಟ್ಟ ಸುದ್ದಿ; ಪಾಕಿಸ್ತಾನಕ್ಕಿಂತಲೂ ಭಾರತೀಯರು ಹೆಚ್ಚು ದುಃಖಿತರು!

ಈ ಸಂತೋಷ ಸೂಚಿಯನ್ನು ಲೆಕ್ಕ ಹಾಕುವ ಮಾನದಂಡಗಳ ಹೊಣೆ ಸರಕಾರದ ವ್ಯಾಪ್ತಿಗೆ ಬರುತ್ತವೆ ಮತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹೀಗೊಂದು ಭಾರಿ ಕುಸಿತ ನಡೆದಿದೆ.

Team Samachara

ಇದು ನಿಜವಾಗಿಯೂ ದುಃಖದ ಸಂಗತಿ. ಜಾಗತಿಕ ಸಂತೋಷ ಸೂಚಿ (ವರ್ಲ್ಟ್‌ ಹ್ಯಾಪಿನೆಸ್‌ ಇಂಡೆಕ್ಸ್‌) ಪಟ್ಟಿಯಲ್ಲಿ ಭಾರತ ಹಿಂದೆಂದಿಗಿಂತಲೂ ಹೆಚ್ಚು ಕೆಳಕ್ಕಿಳಿದಿದ್ದು 156 ದೇಶಗಳಲ್ಲಿ 140ನೇ ಸ್ಥಾನ ಪಡೆದುಕೊಂಡಿದೆ.

ಈ ಮೂಲಕ ಕಾಕತಾಳಿಯ ಎಂಬಂತೆ ನರೇಂದ್ರ ಮೋದಿ ಪಾಲಿಗೆ ಚುನಾವಣೆಗೂ ಮೊದಲು ಮತ್ತೊಂದು ಕಹಿ ಸುದ್ದಿ ಸಿಕ್ಕಿದೆ.

ಯಾಕೆ?

ವಿಶ್ವ ಸಂಸ್ಥೆ ಹಲವು ಮಾನದಂಡಗಳನ್ನು ಇಟ್ಟುಕೊಂಡು ಜಾಗತಿಕ ಸಂತೋಷ ಸೂಚಿಯನ್ನು ತಯಾರಿಸುತ್ತದೆ.

ದೇಶದ ಪ್ರತಿ ವ್ಯಕ್ತಿಯ ಜಿಡಿಪಿ, ಆರೋಗ್ಯಕರ ಜೀವನದ ನಿರೀಕ್ಷೆ, ಜೀವನದ ಆಯ್ಕೆಯ ಸ್ವಾತಂತ್ರ್ಯ, ಸಾಮಾಜಿಕ ಬೆಂಬಲ, ಭ್ರಷ್ಟಾಚಾರದ ಗ್ರಹಿಕೆ, ಪೂರಕ ವಾತಾವರಣದ ಆಧಾರದ ಮೇಲೆ ಈ ಸಂತೋಷ ಸೂಚಿಯನ್ನು ಲೆಕ್ಕ ಹಾಕಲಾಗುತ್ತದೆ.

2013ರಲ್ಲಿ ಹೀಗೆ ಜಾಗತಿಕ ಸಂತೋಷ ಸೂಚಿಯನ್ನು ಬಿಡುಗಡೆ ಮಾಡಿದಾಗ ಭಾರತ 117ನೇ ಸ್ಥಾನದಲ್ಲಿತ್ತು. ಮುಂದೆ 2016ರಲ್ಲಿ 118ನೇ ಸ್ಥಾನ, 2017ರಲ್ಲಿ 122ನೇ ಸ್ಥಾನ, 2018ರಲ್ಲಿ 133ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಮತ್ತೆ ಕುಸಿತ ಕಂಡು 2019ರ ಹೊತ್ತಿಗೆ 140ನೇ ಸ್ಥಾನಕ್ಕೆ ಬಂದು ನಿಂತಿದೆ.

ಈ ಸಂತೋಷ ಸೂಚಿಯನ್ನು ಲೆಕ್ಕ ಹಾಕುವ ಮಾನದಂಡಗಳ ಹೊಣೆ ಸರಕಾರದ ವ್ಯಾಪ್ತಿಗೆ ಬರುತ್ತವೆ ಮತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹೀಗೊಂದು ಭಾರಿ ಕುಸಿತ ನಡೆದಿದೆ. ಹೀಗಾಗಿ ಚುನಾವಣೆಗೂ ಮೊದಲು ಇದು ಮೋದಿ ಪಾಲಿಗೆ ಒದಗಿ ಬಂದ ಕಹಿ ಸುದ್ದಿಯಾಗಿದೆ.

ಪಾಕಿಸ್ತಾನಕ್ಕಿಂತಲೂ ಹೆಚ್ಚು ದುಃಖಿತರು:

ಮತ್ತೊಂದು ಬೇಸರದ ಸಂಗತಿ ಎಂದರೆ ಇಂಡೆಕ್ಸ್‌ನಲ್ಲಿ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳು ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ; ಅಫ್ಘಾನಿಸ್ತಾನವೊಂದನ್ನು ಬಿಟ್ಟು.

  1. ಪಾಕಿಸ್ತಾನ – 67
  2. ಭೂತಾನ್ – 95
  3. ನೇಪಾಳ – 100
  4. ಬಾಂಗ್ಲಾದೇಶ - 125
  5. ಶ್ರೀಲಂಕಾ – 130
  6. ಭಾರತ – 140
  7. ಅಫ್ಘಾನಿಸ್ತಾನ - 157

ಸದ್ಯ ಪಟ್ಟಿಯಲ್ಲಿ ಭಾರತಕ್ಕಿಂತ ಕೆಳಗಿರುವ ದೇಶವೆಂದರೆ ಯುದ್ಧಪೀಡಿತ ಅಫ್ಘಾನಿಸ್ತಾನ ಮಾತ್ರ. ಇದು 157ನೇ ಸ್ಥಾನದಲ್ಲಿದ್ದು ಭಾರತವೀಗ ಅಫ್ಘಾನಿಸ್ತಾನದ ಜತೆ ಸ್ಪರ್ಧಿಸುವ ಹಂತಕ್ಕೆ ಬಂದಿದೆ.

ಟಾಪ್‌ 10 ದೇಶಗಳು:

ಟಾಪ್‌ 10 ಸಂತೋಷದಾಯಕ ದೇಶಗಳಲ್ಲಿ ಯುರೋಪ್‌ನ ದೇಶಗಳು ಪಾರುಪತ್ಯ ಮೆರೆದಿವೆ. ಮೊದಲ ಸ್ಥಾನದಲ್ಲಿ ಫಿನ್ಲೆಂಡ್‌ ಇದ್ದರೆ, ಎರಡನೇ ಸ್ಥಾನದಲ್ಲಿ ಡೆನ್ಮಾರ್ಕ್‌ ಮತ್ತು ಮೂರನೇ ಸ್ಥಾನದಲ್ಲಿ ನಾರ್ವೆ ಇದೆ. ಐಸ್‌ಲ್ಯಾಂಡ್‌, ನೆದರ್‌ಲ್ಯಾಂಡ್ಸ್‌, ಸ್ವಿಟ್ಜರ್ಲಾಂಡ್‌, ಸ್ವೀಡನ್‌ ನಂತರದ ಸ್ಥಾನದಲ್ಲಿವೆ.

ಇತ್ತೀಚೆಗೆ ಭಯೋತ್ಪಾದಕ ದಾಳಿಗೆ ಗುರಿಯಾಗಿದ್ದ ನ್ಯೂಜಿಲ್ಯಾಂಡ್‌ 8ನೇ ಸ್ಥಾನದಲ್ಲಿದ್ದರೆ, ಕೆನಡಾ 9 ಮತ್ತು ಆಸ್ಟ್ರೀಯಾ 10ನೇ ಸ್ಥಾನದಲ್ಲಿವೆ. ವಿಶ್ವದ ಪ್ರಬಲ ದೇಶಗಳಾದ ಬ್ರಿಟನ್‌ 15, ಅಮೆರಿಕಾ 19, ರಷ್ಯಾ 68, ಚೀನಾ 93ನೇ ಸ್ಥಾನದಲ್ಲಿದೆ.