samachara
www.samachara.com
ರಂಗೇರಿದ ಬೆಂಗಳೂರು ಕೇಂದ್ರ; ನಾಮಪತ್ರ ಸಲ್ಲಿಸಿದ ಪ್ರಕಾಶ್ ರಾಜ್, ಪಿ. ಸಿ. ಮೋಹನ್
ಸುದ್ದಿ ಸಾರ

ರಂಗೇರಿದ ಬೆಂಗಳೂರು ಕೇಂದ್ರ; ನಾಮಪತ್ರ ಸಲ್ಲಿಸಿದ ಪ್ರಕಾಶ್ ರಾಜ್, ಪಿ. ಸಿ. ಮೋಹನ್

ನಾಮಪತ್ರ ಸಲ್ಲಿಸುವ ಮುನ್ನ ಎಲ್ಲಾ ರಾಜಕಾರಣಿಗಳಂತೆ ತಾವೂ ರೋಡ್ ಶೋ ಮಾಡುವ ಪ್ರಕಾಶ್ ರಾಜ್ ಗಮನ ಸೆಳೆದರು.

Team Samachara

ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಬೆಂಗಳೂರು ಕೇಂದ್ರದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ. ಮೋಹನ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರಾಜ್‌ ಒಟ್ಟಿಗೆ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.

ಬಿಜೆಪಿಯ ಅಭ್ಯರ್ಥಿಯಾಗಿ ಕಳೆದ ಎರಡು ಅವಧಿಗೆ ಬೆಂಗಳೂರು ಕೇಂದ್ರವನ್ನು ಪ್ರತಿನಿಧಿಸಿದ ಪಿಸಿ ಮೋಹನ್ ಒಂದೆಡೆಯಾದರೆ, ಕಳೆದ ಎರಡು ವರ್ಷಗಳಿಂದ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸುತ್ತಾ ಬಂದಿರುವ ಪ್ರಕಾಶ್ ರಾಜ್‌ ಮತ್ತೊಂದೆಡೆ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ಘೋಷಣೆಯಾಗಬೇಕಿದ್ದು, ಜಿದ್ದಾಜಿದ್ದಿಯ ಹೋರಾಟಕ್ಕೆ ಬೆಂಗಳೂರು ಕೇಂದ್ರ ಸಾಕ್ಷಿಯಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿವೆ.

ಪ್ರಕಾಶ್ ರಾಜ್ ರೋಡ್ ಶೋ:

ತಮ್ಮ ಪತ್ನಿ ಪೋನಿ ವರ್ಮ ಹಾಗೂ ಬೆಂಬಲಿಗರ ಜೊತೆಗೆ ನಾಮಪತ್ರ ಸಲ್ಲಿಸುತ್ತಿರುವ ನಟ ಪ್ರಕಾಶ್ ರಾಜ್‌.
ತಮ್ಮ ಪತ್ನಿ ಪೋನಿ ವರ್ಮ ಹಾಗೂ ಬೆಂಬಲಿಗರ ಜೊತೆಗೆ ನಾಮಪತ್ರ ಸಲ್ಲಿಸುತ್ತಿರುವ ನಟ ಪ್ರಕಾಶ್ ರಾಜ್‌.

ನಾಮಪತ್ರ ಸಲ್ಲಿಸುವ ಮುನ್ನ ಎಲ್ಲಾ ರಾಜಕಾರಣಿಗಳಂತೆ ತಾವೂ ರೋಡ್ ಶೋ ಮಾಡುವ ಮೂಲಕ ಪ್ರಕಾಶ್ ರಾಜ್‌ ಗಮನ ಸೆಳೆದರು. ಶುಕ್ರವಾರ ಬೆಳಗ್ಗೆ 10 ಗಂಟೆ ಹೊತ್ತಿಗೆ ಪ್ರಕಾಶ್‌ ರಾಜ್‌ ಅಲಸೂರಿನ ಗಣೇಶ ದೇವಾಲಯ, ದರ್ಗಾ ಹಾಗೂ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಶಾಂತಿನಗರ ವಿಧಾನ ಸಭಾ ಕ್ಷೇತ್ರದ ಆಸ್ಟಿನ್ ಟೌನ್ ಮೈದಾನದಿಂದ ಪ್ರಕಾಶ್ ರಾಜ್ ಫೌಂಡೇಷನ್ ಬೆಂಬಲಿಗರ ಜತೆ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ಆರಂಭಿಸಿದರು. ನಂತರ ಹಡ್ಸನ್ ವೃತ್ತದಲ್ಲಿರುವ ಬಿಬಿಎಂಪಿ ಮುಖ್ಯ ಕಚೇರಿಗೆ ಆಗಮಿಸಿ ತಮ್ಮ ಪತ್ನಿ ಪೋನಿ ವರ್ಮ ಜೊತೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ರಾಜ್, “ಸಮಾಜದಲ್ಲಿ ಮತದಾರರ ಜವಾಬ್ದಾರಿ ಬಹಳ ಇದೆ. ಮತದಾರರು ಪ್ರಜ್ಞಾವಂತರಾಗಬೇಕು. ಚುನಾವಣೆ ಎಂಬುದು ರಾಷ್ಟ್ರೀಯ ಹಬ್ಬವಾಗಬೇಕು. ರಾಜಕೀಯ ಪಕ್ಷಗಳನ್ನು ನೋಡಿ ಮತ ಹಾಕೋದಕ್ಕಿಂತ ಅಭ್ಯರ್ಥಿಗಳನ್ನು ನೋಡಿ ಮತಹಾಕುವುದು ಮುಖ್ಯ. ಜನಪರ ಕೆಲಸ ಮಾಡುವವರು ಯಾವುದೇ ಪಕ್ಷದಲ್ಲಿದ್ದರೂ ಗೆಲ್ಲಬೇಕು. ಜನರು ತಾವು ಆರಿಸಿ ಕಳಿಸಿದವರು ಏನು ಕೆಲಸ ಮಾಡಿದ್ದಾರೆ? ನಿಂತು ಸೋತವರು ಏನು ಮಾಡಿದ್ದಾರೆ? ಎನ್ನುವುದನ್ನು ತಿಳಿದುಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು.

ಇನ್ನೂ ಪ್ರಕಾಶ್ ರಾಜ್‌ ನಾಮಪತ್ರ ಸಲ್ಲಿಸುವಾಗ ರ್ಯಾಲಿಗೆ ವಿರುದ್ಧವಾಗಿ ಕೆಲವು ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್, “ಸಾವಿನ ಮನೆಯಲ್ಲಿಯೂ ಮೋದಿ ಅಂತಾರೆ. ಭಾಷಣ ಮಾಡಿದ್ರೂ ಮೋದಿ ಅಂತಾರೆ. ನನಗೆ ಯಾರೂ ವಿರೋಧಿಗಳಿಲ್ಲ; ನನಗ್ಯಾವ ಪಕ್ಷವೂ ವಿರೋಧವಲ್ಲ. ಆದರೆ, ಮೋದಿ ಮೋದಿ ಎಂದು ಘೋಷಣೆ ಹಾಕುವುದಕ್ಕಿಂತ ಅವರ ಸಾಧನೆ ಏನು ಎಂಬುದನ್ನು ಪಟ್ಟಿ ಮಾಡುವುದು,” ಸೂಕ್ತ ಎಂದರು.

ತಮ್ಮ ಪ್ರಚಾರದ ಕುರಿತು ಪ್ರತಿಕ್ರಿಯಿಸಿದ ಅವರು, “ಸಂಘ ಸಂಸ್ಥೆಗಳು, ಆಪ್ ಕಾರ್ಯಕರ್ತರು, ಮಹಿಳಾ ಸಂಘಟನೆಗಳು ಹಾಗೂ ಆಟೋ ಚಾಲಕರು ಸೇರಿದಂತೆ ಅನೇಕರ ಬೆಂಬಲ ನನಗಿದೆ. ನನಗೆ ಸ್ಟಾರ್ ಕ್ಯಾಂಪೇನ್ ಅಗತ್ಯವಿಲ್ಲ. ನಾನು ಯಾರನ್ನೂ ಪ್ರಚಾರಕ್ಕೆ ಕರೆಯೋದಿಲ್ಲ. ವ್ಯಕ್ತಿತ್ವದ ಮೂಲಕ ಜನರನ್ನು ಗೆಲ್ಲಬೇಕು. ಪ್ರತಿನಿಧಿಸುವುದು ಮುಖ್ಯವೇ ಹೊರತು ಸೋಲು ಗೆಲುವಲ್ಲ. ದುಡ್ಡು ಕೊಟ್ಟು ಮತ ಖರೀದಿಸುವ ಪರಿಸ್ಥಿತಿ ನನಗಿಲ್ಲ. ಲಾರಿ ಬಸ್ಸುಗಳಲ್ಲಿ ಜನರನ್ನು ಕರೆಸುವುದಿಲ್ಲ,” ಎಂದು ಸ್ಪಷ್ಟನೆ ನೀಡಿದರು.

ಇದೇ ಸಂದರ್ಭದಲ್ಲಿ ಅಭಿವೃದ್ಧಿಯ ಕುರಿತು ಮಾತನಾಡಿದ ರಾಜ್‌, "ರಾಜ್ಯದಲ್ಲಿ ಅಭಿವೃದ್ಧಿಗೆ ಅನುದಾನದ ಕೊರತೆಯಿಲ್ಲ. ಆದರೆ, ಜನಪ್ರತಿನಿಧಿಗಳಿಗೆ ಅಭಿವೃದ್ಧಿಯ ಕುರಿತಾದ ಇಚ್ಛಾ ಶಕ್ತಿಯೇ ಇಲ್ಲ. ಸಂಸದರು ವರ್ಷಕ್ಕೊಮ್ಮೆ ರಿಪೋರ್ಟ್ ಕಾರ್ಡ್ ಕೊಡಬೇಕು. ಆದರೆ, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ತಾವು ಮಾಡಿರುವ ಅಭಿವೃದ್ಧಿ ಕುರಿತು ರಿಪೋರ್ಟ್ ಕಾರ್ಡ್ ಕೊಡುವ ಪರಿಪಾಠವೇ ಇಲ್ಲ," ಎಂದು ಕಿಡಿಕಾರಿದರು. ಅಲ್ಲದೆ ," ನಾನು ಜನರ ಪರವಾಗಿರೋರ ಜತೆ, ಜಾತ್ಯಾತೀತರ ಜತೆ ಹೋಗುತ್ತೇನೆಯೇ ಹೊರತು, ಎಂದಿಗೂ ಬಿಜೆಪಿ ಜೊತೆ ಹೋಗೋದಿಲ್ಲ," ಎಂದು ಸ್ಪಷ್ಟಪಡಿಸಿದರು.

ರಾಜ್‌ಗೆ ಟಾಂಗ್ ಕೊಟ್ಟ ಮೋಹನ್:

ಮಾಜಿ ಉಪಮುಖ್ಯ ಮಂತ್ರಿ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಜೊತೆಗೆ ಆಗಮಿಸಿ ನಾಮತ್ರ ಸಲ್ಲಿಸಿದ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್.
ಮಾಜಿ ಉಪಮುಖ್ಯ ಮಂತ್ರಿ ಆರ್. ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಜೊತೆಗೆ ಆಗಮಿಸಿ ನಾಮತ್ರ ಸಲ್ಲಿಸಿದ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್.

ಪ್ರಕಾಶ್ ರಾಜ್‌ ನಾಮಪತ್ರ ಸಲ್ಲಿಸಿದ ಬೆನ್ನಿಗೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಸಹ ನಾಮಪತ್ರ ಸಲ್ಲಿಸಿದರು. ಎಂದಿನಂತೆ ತಮ್ಮ ಬೆಂಬಲಿಗರ ಜತೆಗೆ ಮೆರವಣಿಗೆ ಮೂಲಕ ಆಗಮಿಸಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಅವರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಪ್ರಕಾಶ್ ರಾಜ್‌ ರಾಜಕೀಯ ಪ್ರವೇಶದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮೋಹನ್, “ಚುನಾವಣಾ ಭ್ರಷ್ಟತೆ ಬಗ್ಗೆ, ಬಿಜೆಪಿ ಬಗ್ಗೆ ಮಾತನಾಡುವ ಇದೇ ಪ್ರಕಾಶ್ ರಾಜ್‌ ಚುನಾವಣೆಗೆ ನಿಲ್ಲುತ್ತೇನೆ ನನಗೆ ಬೆಂಬಲ ಕೊಡಿ ಎಂದು ಕಾಂಗ್ರೆಸ್ ಬಾಗಿಲಿನಲ್ಲಿ ನಿಂತದ್ದನ್ನು ನಾನು ನೋಡಿದ್ದೇನೆ,” ಎಂದು ಲೇವಡಿ ಮಾಡಿದರು.

“ಬಿಜೆಪಿ ಸರಕಾರ ಯುಪಿಎ ಅವಧಿಯಲ್ಲಾದ ಎಲ್ಲಾ ಹಗರಣಗಳನ್ನು ಬಯಲಿಗೆಳೆದಿದೆ. ಕಳೆದ ಐದು ವರ್ಷಗಳಿಂದ ಎಲ್ಲಾ ಕಾರ್ಯಕ್ರಮವನ್ನ ಬೆಂಗಳೂರಿಗೆ ತಲುಪಿಸಿದ್ದೇನೆ. ಜನ ಮತ್ತೆ ನನ್ನನ್ನು ಹರಸುವ ವಿಶ್ವಾಸವಿದೆ” ಎಂದರು.