samachara
www.samachara.com
ಧಾರವಾಡ ಕಟ್ಟಡ ಕುಸಿತ: 4  ದಿನಗಳ ನಂತರ ಜೀವಂತ ನಡೆದು ಬಂದ ಸಂಗಮೇಶ!
ಸುದ್ದಿ ಸಾರ

ಧಾರವಾಡ ಕಟ್ಟಡ ಕುಸಿತ: 4 ದಿನಗಳ ನಂತರ ಜೀವಂತ ನಡೆದು ಬಂದ ಸಂಗಮೇಶ!

ಕಟ್ಟಡದಡಿಯಲ್ಲಿ ಸಿಲುಕಿಕೊಂಡಿದ್ದ ಸಂಗಮೇಶ್‌ ರಮಣಗೌಡರ್‌ರನ್ನು ಇಂದು ರಕ್ಷಿಸಲಾಗಿದೆ. 4 ದಿನಗಳ ನಂತರವೂ ಅವರು ನಡೆದುಕೊಂಡೇ ಹೋಗಿ ಅಂಬ್ಯುಲೆನ್ಸ್‌ ಹತ್ತಿದ್ದು ನೆರೆದಿದ್ದವರ ಹುಬ್ಬೇರಿಸಿದೆ.

Team Samachara

ಧಾರವಾಡದ ಬಹುಮಹಡಿ ಕಟ್ಟಡ ಕುಸಿದು ಇಂದಿಗೆ ನಾಲ್ಕನೇ ದಿನ ಕಾಲಿಟ್ಟಿದೆ. ಹೀಗಾಗಿ ಅವಶೇಷಗಳಡಿಯಲ್ಲಿ ಯಾರೂ ಬದುಕುಳಿದಿರಲಿಕ್ಕಿಲ್ಲ ಎಂದು ಅಂದುಕೊಳ್ಳುತ್ತಿರುವಾಗಲೇ ಶುಕ್ರವಾರ ಪವಾಡವೆಂಬಂತೆ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ. ಇದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡವರಿಗೆ ಹೊಸ ಹುರುಪು ನೀಡಿದೆ.

ಮಂಗಳವಾರ ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಸಂಜೆ ವೇಳೆಗೆ ಕುಸಿದು ಬಿದ್ದಿತ್ತು. ಈ ಸಂದರ್ಭದಲ್ಲಿ ಕಾರ್ಮಿಕರಾಗಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ತಳ ಮಹಡಿಯ ಅಂಗಡಿಗಳಲ್ಲಿದ್ದವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದರು.

ಅಗ್ನಿಶಾಮಕದಳದ ಸಿಬ್ಬಂದಿಗಳು, ವಿಶೇಷ ವಿಮಾನದಲ್ಲಿ ಬಂದಿಳಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರು ಹಗಲು ರಾತ್ರಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಪರಿಣಾಮ ಗುರುವಾರದ ಹೊತ್ತಿಗೆ ಒಂದನೇ ಮಹಡಿವರೆಗಿನ ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿತ್ತು. ತಳ ಅಂತಸ್ತು ಮತ್ತು ನೆಲ ಅಂತಸ್ತು ಮಾತ್ರ ರಕ್ಷಣಾ ಕಾರ್ಯಾಚರಣೆ ಬಾಕಿ ಉಳಿದಿತ್ತು.

ನಾಲ್ಕು ದಿನಗಳ ಕಳೆದಿದ್ದರಿಂದ ವ್ಯಕ್ತಿಗಳು ಜೀವಂತ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಜತೆಗೆ ಕಟ್ಟಡದ ಅಡಿಯಿಂದ ಕೊಳೆತ ಹೆಣದ ವಾಸನೆಯೂ ಬರಲು ಆರಂಭಿಸಿತ್ತು. ಹೀಗಾಗಿ ಇಂದು ಕೇವಲ ಅವಶೇಷಗಳನ್ನು ತೆರವುಗೊಳಿಸುವ ತೀರ್ಮಾನಕ್ಕೆ ರಕ್ಷಣಾ ತಂಡದವರು ಬಂದಿದ್ದರು ಎನ್ನಲಾಗಿದೆ.

ಆದರೆ ಇಂದು ಅಚ್ಚರಿಯ ರೀತಿಯಲ್ಲಿ ಕುಸಿದ ಕಟ್ಟಡದಡಿಯಲ್ಲಿ ಸಿಲುಕಿಕೊಂಡಿದ್ದ ಸಂಗಮೇಶ್‌ ರಮಣಗೌಡರ್‌ ಪತ್ತೆಯಾಗಿದ್ದಾರೆ. ಅವರನ್ನು ಹೊರತೆಗೆಯುತ್ತಿದ್ದಂತೆ 24 ವರ್ಷದ ಸಂಗಮೇಶ್‌ ನಡೆದುಕೊಂಡೇ ಹೋಗಿ ಅಂಬ್ಯುಲೆನ್ಸ್‌ ಹತ್ತಿ ನೆರೆದಿದ್ದವರ ಹುಬ್ಬೇರಿಸಿದ್ದಾರೆ. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಈ ವೇಳೆ ಸಂಗಮೇಶ್‌ ಇನ್ನೂ ಇಬ್ಬರು ವ್ಯಕ್ತಿಗಳು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿಯನ್ನು ರಕ್ಷಣಾ ತಂಡದವರಿಗೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ತೆರವು ಕಾರ್ಯಾಚರಣೆಯನ್ನು ಸದ್ಯಕ್ಕೆ ಬದಿಗೊತ್ತಿ ಬದುಕಿರುವವರಿಗಾಗಿ ಶೋಧ ಮುಂದುವರಿಸಲು ರಕ್ಷಣಾ ಸಿಬ್ಬಂದಿಗಳು ನಿರ್ಧರಿಸಿದ್ದಾರೆ.

ಇಲ್ಲಿಯವರೆಗೆ ಸಂಗಮೇಶ್‌ ಸೇರಿ ಒಟ್ಟು 58 ಜನರನ್ನು ರಕ್ಷಿಸಲಾಗಿದೆ. ಶುಕ್ರವಾರ ರಾತ್ರಿ ಮತ್ತೊಂದು ಶವವನ್ನು ಮೇಲೆತ್ತಲಾಗಿದ್ದು ಘಟನೆಯಲ್ಲಿ ಸತ್ತವರ ಸಂಖ್ಯೆ 13 ಕ್ಕೆ ತಲುಪಿದೆ.