samachara
www.samachara.com
ಟ್ರಂಪ್‌, ಒಬಾಮಾಗೆ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ನ್ಯೂಜಿಲ್ಯಾಂಡ್‌ ಪಿಎಂ ಜೆಸಿಂದ
ಸುದ್ದಿ ಸಾರ

ಟ್ರಂಪ್‌, ಒಬಾಮಾಗೆ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ ನ್ಯೂಜಿಲ್ಯಾಂಡ್‌ ಪಿಎಂ ಜೆಸಿಂದ

ದೇಶದಲ್ಲಿ ಮುಂದೆಂದೂ ಭಯೋತ್ಪಾದನಾ ಕೃತ್ಯ ನಡೆಯಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಜೆಸಿಂದ ಆರ್ಡೆರ್ನ್ ವಿವರಿಸಿದ್ದಾರೆ.

Team Samachara

ಮುಂದುವರಿದ ದೇಶ ಅಮೆರಿಕಾವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಗಳಲ್ಲಿ ಬಂದೂಕು ಸಂಸ್ಕೃತಿಯೂ ಒಂದು. ಒಂದಿಲ್ಲೊಂದು ಕಡೆ ದೇಶದಲ್ಲಿ ಶೂಟೌಟ್‌ಗಳು ನಡೆಯುತ್ತಲೇ ಇರುತ್ತವೆ. ಪರವಾನಗಿ ಪಡೆದ ಬಂದೂಕುಗಳನ್ನೇ ಹಿಡಿದುಕೊಂಡು ಮಕ್ಕಳು, ಯುವಕರು ದಾಳಿಗಳನ್ನು ನಡೆಸುತ್ತಿರುತ್ತಾರೆ.

ಇದಕ್ಕೆ ನಿಯಂತ್ರಣ ಹೇರಲು ಅಲ್ಲಿನ ಹಲವು ಅಧ್ಯಕ್ಷರುಗಳು ಯತ್ನಿಸಿ ಸೋತಿದ್ದಾರೆ. ಅದರಲ್ಲೂ ಬರಾಕ್‌ ಒಬಾಮ ಮತ್ತು ಡೊನಾಲ್ಡ್‌ ಟ್ರಂಪ್‌ ಅಧಿಕಾರವಧಿಯಲ್ಲಿ ದೇಶದಲ್ಲಿ ಎಂದಿಗಿಂತ ಹೆಚ್ಚೇ ಬಂದೂಕು ಸದ್ದು ಮಾಡಿದಾಗ, ದೇಶದಲ್ಲಿ ಗನ್‌ಗಳಿಗೆ ನಿಷೇಧ ಹೇರಬೇಕು; ಕನಿಷ್ಟ ನಿಯಂತ್ರಣ ಹೇರಬೇಕು ಎಂಬ ಕೂಗು ಕೇಳಿ ಬಂದಿತ್ತು.

ಆದರೆ ರಾಜಕೀಯ ಕ್ಷೇತ್ರದ ಮೇಲೆ ಬಂದೂಕು ಉತ್ಪಾದಕರು ಹೊಂದಿರುವ ಅಸಾಧಾರಣ ಹಿಡಿತ ಇದಕ್ಕೆಲ್ಲಾ ತಡೆಯಾಗಿ ನಿಂತುಕೊಂಡಿತ್ತು.

ಆದರೆ ನ್ಯೂಜಿಲ್ಯಾಂಡ್‌ ಪ್ರಧಾನಿ ಜೆಂಸಿಂದ ಆರ್ಡೆರ್ನ್ ಈ ಯಾವ ಪ್ರಭಾವಕ್ಕೂ ಒಳಗಾಗದೆ ದೇಶದ ಬಂದೂಕು ಸಂಸ್ಕೃತಿಗೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಕಳೆದ ವಾರ ಇಲ್ಲಿನ ಕ್ರೈಸ್ಟ್‌ಚರ್ಚ್‌ನಲ್ಲಿರುವ ಮಸೀದಿಯಲ್ಲಿ ಬಲಪಂಥೀಯ ಉಗ್ರನೊಬ್ಬ ನಡೆಸಿದ ಗುಂಡಿನ ದಾಳಿಗೆ 50 ಜನರು ಸಾವನ್ನಪ್ಪಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಪ್ರಧಾನಿ ಇಂತಹ ಕಠಿಣ ತೀರ್ಮಾನಕ್ಕೆ ಬಂದಿದ್ದಾರೆ.

ದೇಶದಲ್ಲಿ ಅಸಾಲ್ಟ್‌ ರೈಫಲ್‌ ಮತ್ತು ಸೆಮಿ ಅಟೋಮ್ಯಾಟಿಕ್‌ ಬಂದೂಕುಗಳ ಮಾರಾಟವನ್ನು ನಿಷೇಧಿಸುವ ತೀರ್ಮಾನ ಪ್ರಕಟಿಸಿರುವ ಅವರು, ‘ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಮತ್ತು ಭದ್ರತೆಯ ಕಾರಣಕ್ಕೆ ಈ ತೀರ್ಮಾನ ತೆಗೆದುಕೊಳ್ಳುತ್ತಿರುವುದಾಗಿ’ ಹೇಳಿದ್ದಾರೆ.

ದೇಶದಲ್ಲಿ ಮುಂದೆಂದೂ ಭಯೋತ್ಪಾದನಾ ಕೃತ್ಯ ನಡೆಯಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ವಿವರಿಸಿದ್ದಾರೆ. ಏಪ್ರಿಲ್‌ 11ರಿಂದ ದೇಶದಲ್ಲಿ ಈ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ತಿಳಿಸಿರುವ ಆರ್ಡೆರ್ನ್, ನಿಷೇಧಗೊಂಡ ಶಸ್ತ್ರಾಸ್ತ್ರಗಳಿಗೆ ವಿನಿಮಯ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಕ್ರೈಸ್ಟ್‌ಚರ್ಚ್‌ ಮಸೀದಿ ಮೇಲೆ ದಾಳಿ ನಡೆಸಿದಾತ ಬಂದೂಕುಗಳನ್ನು ಕಾನೂನಾತ್ಮಕವಾಗಿಯೇ ಪಡೆದುಕೊಂಡಿದ್ದ ಮತ್ತು ಅದರ ಸಾಮರ್ಥ್ಯವನ್ನು 30 ರೌಂಡ್‌ ಮ್ಯಾಗಜೀನ್‌ಗಳಿಗೆ ಹೆಚ್ಚಿಸಿಕೊಂಡಿದ್ದ. ಸರಳ ಆನ್‌ಲೈನ್‌ ವಹಿವಾಟಿನ ಮೂಲಕ ಈ ಖರೀದಿ ಪ್ರಕ್ರಿಯೆ ನಡೆದಿತ್ತು ಎಂಬುದಾಗಿ ಪ್ರಧಾನಿ ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸೆಮಿ ಅಟೋಮ್ಯಾಟಿಕ್‌ ಬಂದೂಕುಗಳು, ಇವುಗಳ ಸಾಮರ್ಥ್ಯ ವೃದ್ಧಿಸುವ ಬಿಡಿಭಾಗಗಳನ್ನು ನಿಷೇಧಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ನ್ಯೂಜಿಲ್ಯಾಂಡ್‌ನ ರೈತರಿಗೆ ಮಾತ್ರ ಈ ಹೊಸ ನೀತಿಯಿಂದ ಸ್ವಲ್ಪ ಮಟ್ಟಿಗೆ ವಿನಾಯಿತಿ ನೀಡಲಾಗಿದೆ.

ಹಾಗೆ ನೋಡಿದರೆ ನ್ಯೂಜಿಲ್ಯಾಂಡ್‌ ಅತ್ಯಂತ ಶಾಂತಿ ಪ್ರಿಯ ದೇಶ. ಇಲ್ಲಿ ಸೆಮಿ ಅಟೋಮ್ಯಾಟಿಕ್‌, ಸೇನಾ ಶೈಲಿಯ ಬಂದೂಕುಗಳನ್ನು ಹೊಂದುವ ಅವಕಾಶ ಸಾಮಾನ್ಯ ಜನರಿಗೆ ಇದ್ದಾಗಲೂ ಇಲ್ಲಿ ಭಯೋತ್ಪಾದನಾ ಚಟುವಟಿಕೆಯಾಗಲಿ, ಶೂಟೌಟ್‌ಗಳಾಗಿ ನಡೆದ ಉದಾಹರಣೆಗಳೇ ಇಲ್ಲ. ಈ ಹಿಂದೆ 1990ರಲ್ಲೊಮ್ಮೆ ಈ ರೀತಿಯ ನಡೆದಿತ್ತು ಅಷ್ಟೆ. ಜನರೂ ಎಂತಹ ಸಾಧುಗಳೆಂದರೆ ಇಲ್ಲಿನ ಪೊಲೀಸರಿಗೂ ಬಂದೂಕುಗಳನ್ನು ಜತೆಗೊಯ್ಯುವ ಅಭ್ಯಾಸಗಳಿಲ್ಲ.

ಹೀಗಿದ್ದೂ ಇಲ್ಲಿನ ಬಂದೂಕು ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತರುವಂತೆ 1997ರಲ್ಲೇ ಸಮಿತಿಯೊಂದು ಶಿಫಾರಸ್ಸು ಮಾಡಿತ್ತು. ಆದರೆ ನಂತರ ಬಂದ ಎಲ್ಲಾ ಸರಕಾರಗಳೂ ಇದನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದ್ದವು. ಇದೀಗ ಜೆಸಿಂದ ಆರ್ಡೆರ್ನ್‌ ಆ ಧೈರ್ಯ ಪ್ರದರ್ಶಿಸಿದ್ದಾರೆ.

ಕ್ರೈಸ್ಟ್‌ಚರ್ಚ್‌ ದಾಳಿ ನಂತರ ನ್ಯೂಜಿಲ್ಯಾಂಡ್‌ ಪ್ರಧಾನಿ ನಡೆದುಕೊಂಡ ರೀತಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಬಂದೂಕು ಸಂಸ್ಕೃತಿಗೂ ಮೂಗುದಾರ ತೊಡಿಸಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಚಿತ್ರ ಕೃಪೆ: ದಿ ಲಿಲ್ಲಿ