samachara
www.samachara.com
ಸಂಝೋತಾ ಎಕ್ಸ್‌ಪ್ರೆಸ್‌ ಬಾಂಬ್‌ ಸ್ಫೋಟ, ಸ್ವಾಮಿ ಅಸೀಮಾನಂದ ಸೇರಿ ನಾಲ್ವರು ನಿರ್ದೋಷಿ
ಸುದ್ದಿ ಸಾರ

ಸಂಝೋತಾ ಎಕ್ಸ್‌ಪ್ರೆಸ್‌ ಬಾಂಬ್‌ ಸ್ಫೋಟ, ಸ್ವಾಮಿ ಅಸೀಮಾನಂದ ಸೇರಿ ನಾಲ್ವರು ನಿರ್ದೋಷಿ

ತನಿಖೆ ಆರಂಭಿಸಿದ ಎನ್‌ಐಎ 2011ರ ಜೂನ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಇದರಲ್ಲಿ 8 ಜನರನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ಇದೀಗ ವಿಚಾರಣೆ ನಡೆದು ನಾಲ್ವರು ಆರೋಪಿಗಳು ನಿರ್ದೋಷಿಗಳು ಎಂಬ ತೀರ್ಪು ಹೊರ ಬಿದ್ದಿದೆ.

Team Samachara

ದೇಶದ ಹೈ ಪ್ರೊಫೈಲ್‌ ಭಯೋತ್ಪಾದಕ ಕೃತ್ಯ 2007ರ ಸಂಝೋತಾ ಎಕ್ಸ್‌ಪ್ರೆಸ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಸೇರಿ ನಾಲ್ವರನ್ನು ದೋಷಮುಕ್ತಗೊಳಿಸಿ ಹರ್ಯಾಣದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಆದೇಶ ನೀಡಿದೆ.

ದೆಹಲಿಯಿಂದ ಪಾಕಿಸ್ತಾನದ ಲಾಹೋರ್‌ಗೆ ಹೊರಟಿದ್ದ ಸಂಝೋತಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ 2007ರ ಫೆಬ್ರವರಿ 18ರಂದು ಬಾಂಬ್‌ ಸ್ಫೋಟ ನಡೆದಿತ್ತು. ಅಮೃತಸರದ ಅಟ್ಟಾರಿ ಗಡಿಯತ್ತ ತೆರಳುತ್ತಿರುವಾಗ ಪಾಣಿಪತ್‌ನಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಎರಡು ಕೋಚ್‌ಗಳು ಧ್ವಂಸವಾಗಿದ್ದವು.

ಈ ಪ್ರಕರಣದಲ್ಲಿ 68 ಜನರು ಸಾವನ್ನಪ್ಪಿದ್ದರು. ಇವರಲ್ಲಿ ಹೆಚ್ಚಿನವರು ಅಂದರೆ 43 ಜನರು ಪಾಕಿಸ್ತಾನಿ ಪ್ರಜೆಗಳಾಗಿದ್ದರು. ಆರಂಭದಲ್ಲಿ ಹರ್ಯಾಣ ಪೊಲೀಸರು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ನಂತರ 2010ರ ಜುಲೈನಲ್ಲಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲಾಗಿತ್ತು.

ಪ್ರಕರಣದ ತನಿಖೆ ಆರಂಭಿಸಿದ ಎನ್‌ಐಎ 2011ರ ಜೂನ್‌ನಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಇದರಲ್ಲಿ 8 ಜನರನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು. ಇದೀಗ ವಿಚಾರಣೆ ನಡೆದು ನಾಲ್ವರು ಆರೋಪಿಗಳು ನಿರ್ದೋಷಿಗಳು ಎಂಬ ತೀರ್ಪು ಹೊರ ಬಿದ್ದಿದೆ.

“ತನಿಖಾ ಸಂಸ್ಥೆ ಸಂಚಿನ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದೆ. ಹೀಗಾಗಿ ಅನುಮಾನದ ಲಾಭವನ್ನು ಪಡೆದುಕೊಳ್ಳಲು ಆರೋಪಿಗಳು ಅರ್ಹರಾಗಿದ್ದಾರೆ ಎಂಬುದಾಗಿ ಎನ್‌ಐಎ ವಿಶೇಷ ಕೋರ್ಟ್‌ ಆದೇಶ ನೀಡಿದೆ,” ಎಂದು ಎನ್‌ಐಎ ಪರ ವಕೀಲ ಆರ್‌. ಕೆ. ಹಂದ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಬ ಕುಮಾರ್‌ ಸರ್ಕಾರ್‌ ಅಲಿಯಾಸ್‌ ಸ್ವಾಮಿ ಅಸೀಮಾನಂದ, ಲೋಕೇಶ್‌ ಶರ್ಮಾ, ಕಮಲ್‌ ಚೌಹಾಣ್‌ ಮತ್ತು ರಾಜಿಂದರ್‌ ಚೌಧರಿ ಆರೋಪ ಮುಕ್ತರಾಗಿದ್ದಾರೆ. ಪ್ರಕರಣದ ಆರೋಪಿತ ಮಾಸ್ಟರ್‌ಮೈಂಡ್ ಎನ್ನಲಾದ ಸುನಿಲ್‌ ಜೋಶಿ 2007ರ ಡಿಸೆಂಬರ್‌ನಲ್ಲಿ ಸಾವಿಗೀಡಾಗಿದ್ದರು.

ಇನ್ನುಳಿದ ಮೂವರು ಆರೋಪಿಗಳಾದ ರಾಮಚಂದ್ರ ಕಲ್ಸಂಗ್ರ, ಸಂದೀಪ್‌ ದಂಗೆ ಮತ್ತು ಅಮಿತ್‌ ತಲೆ ಮರೆಸಿಕೊಂಡಿದ್ದಾರೆ.