samachara
www.samachara.com
ಲಂಡನ್‌ನಲ್ಲಿ ನೀರವ್‌ ಮೋದಿ ಬಂಧನ; ಜಾಮೀನಿನ ಮೇಲೆ ಸದ್ಯದಲ್ಲೇ ಬಿಡುಗಡೆ ಸಾಧ್ಯತೆ
ಸುದ್ದಿ ಸಾರ

ಲಂಡನ್‌ನಲ್ಲಿ ನೀರವ್‌ ಮೋದಿ ಬಂಧನ; ಜಾಮೀನಿನ ಮೇಲೆ ಸದ್ಯದಲ್ಲೇ ಬಿಡುಗಡೆ ಸಾಧ್ಯತೆ

ನ್ಯಾಯಾಲಯಕ್ಕೆ ಹಾಜರಾದ ಬೆನ್ನಿಗೆ ಅವರ ಮೇಲೆ ಕೋರ್ಟ್‌ ಆರೋಪಗಳನ್ನು ಹೊರಿಸಲಿದೆ. ಅದಾದ ನಂತರ ನೀರವ್‌ ಮೋದಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಬಿಡುಗಡೆಯಾಗಲಿದ್ದಾರೆ ಎಂದುಕೊಳ್ಳಲಾಗಿದೆ.

Team Samachara

ದೇಶ ಭ್ರಷ್ಟ ಕೋಟ್ಯಾಧಿಪತಿ ಆಭರಣ ಉದ್ಯಮಿ ನೀರವ್‌ ಮೋದಿ ಲಂಡನ್‌ನಲ್ಲಿ ಬಂಧಿತರಾಗಿದ್ದಾರೆ. ಭಾರತದ ಮನವಿ ಮೇರೆಗೆ ಅವರನ್ನು ನಿನ್ನೆ ಬಂಧಿಸಲಾಗಿದೆ ಎಂದು ಬ್ರಿಟೀಷ್‌ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಆಗಸ್ಟ್‌ನಲ್ಲಿ ನೀರವ್‌ ಮೋದಿಯನ್ನು ಹಸ್ತಾಂತರಿಸುವಂತೆ ಭಾರತ ಬ್ರಿಟನ್‌ಗೆ ಮನವಿ ಮಾಡಿಕೊಂಡಿತ್ತು. ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ 14,000 ಕೋಟಿ ರೂಪಾಯಿ ವಂಚಿಸಿದ ಸಂಬಂಧ ಈ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಅವರು ಎಲ್ಲೂ ಪತ್ತೆಯಾಗಿರಲಿಲ್ಲ.

ಕಳೆದ ವಾರ ಮೋದಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್‌ನ ಪತ್ರಿಕೆ ‘ದಿ ಟೆಲಿಗ್ರಾಫ್‌’ ವರದಿಗಾರರು ಅವರನ್ನು ಪತ್ತೆ ಹಚ್ಚಿ ವಿಡಿಯೋ ಸಹಿತ ವರದಿ ಮಾಡಿದ್ದರು. ಬೆನ್ನಿಗೆ ನೀರವ್‌ ಮೋದಿ ಬಂಧನ ಬೇಡಿಕೆ ಮತ್ತಷ್ಟು ಚುರುಕಾಗಿತ್ತು.

ಇದೀಗ 48 ವರ್ಷದ ನೀರವ್‌ ಮೋದಿಯನ್ನು ಕೇಂದ್ರ ಲಂಡನ್‌ನ ಹೆಲ್ಬೊರ್ನ್‌ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೆಳವಣಿಗೆಯನ್ನು ಜಾರಿ ನಿರ್ದೇಶನಾಲಯ ಕೂಡ ಖಚಿತಪಡಿಸಿದೆ.

ಅವರನ್ನು ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ಸ್‌ ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಇದೇ ನ್ಯಾಯಾಲಯ ಮೋದಿಗೆ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿತ್ತು.

ನ್ಯಾಯಾಲಯಕ್ಕೆ ಹಾಜರಾದ ಬೆನ್ನಿಗೆ ಅವರ ಮೇಲೆ ಕೋರ್ಟ್‌ ಆರೋಪಗಳನ್ನು ಹೊರಿಸಲಿದೆ. ಅದಾದ ನಂತರ ನೀರವ್‌ ಮೋದಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದು, ಬಿಡುಗಡೆಯಾಗಲಿದ್ದಾರೆ ಎಂದುಕೊಳ್ಳಲಾಗಿದೆ.

ಈ ಹಿಂದೆ ವಿಜಯ್‌ ಮಲ್ಯ ಪ್ರಕರಣದಲ್ಲಿಯೂ ಇದೇ ರೀತಿ ನಡೆದಿತ್ತು. 2017ರ ಏಪ್ರಿಲ್‌ನಲ್ಲಿ ಹಸ್ತಾಂತರ ವಾರಂಟ್‌ ಮೇಲೆ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಇದರ ಕ್ರೆಡಿಟ್‌ನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡುವ ಬೆಳವಣಿಗೆ ನಡೆದಿತ್ತು. ಆದರೆ ಇದೆಲ್ಲಾ ಆಗಿ ಎರಡು ವರ್ಷ ಸಮೀಪಿಸುತ್ತಿದ್ದರೂ ಮಲ್ಯ ಇನ್ನೂ ಭಾರತಕ್ಕೆ ಬಂದಿಲ್ಲ. ಸದ್ಯ ಅವರು ಬ್ರಿಟನ್‌ ಗೃಹ ಕಾರ್ಯದರ್ಶಿಗೆ ಹಸ್ತಾಂತರ ಪ್ರಕ್ರಿಯೆ ಕೈ ಬಿಡುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದು, ಅಂತಿಮ ಹಂತದಲ್ಲಿದೆ.

ವಾಸ್ತವದಲ್ಲಿ ನೀರವ್‌ ಮೋದಿ ಹಸ್ತಾಂತರ ಪ್ರಕ್ರಿಯೆಯಲ್ಲೂ ಇದೇ ನಿಯಮಗಳು ಅನ್ವಯವಾಗಲಿವೆ. ಸುದೀರ್ಘ ನ್ಯಾಯಾಂಗ ಪ್ರಕ್ರಿಯೆಗಳು ಪೂರ್ಣಗೊಂಡು ಒಂದೊಮ್ಮೆ ಅಲ್ಲಿನ ನ್ಯಾಯಾಲಯ ಮತ್ತು ಗೃಹ ಇಲಾಖೆ ಅನುಮತಿ ನೀಡಿದರೆ ಮಾತ್ರ ಅವರು ಭಾರತಕ್ಕೆ ಬಂದಿಳಿಯಲಿದ್ದಾರೆ. ಸದ್ಯಕ್ಕೆ ಅವರು ಭಾರತಕ್ಕೆ ಬರುವ ಸಾಧ್ಯತೆಗಳಿಲ್ಲ.