samachara
www.samachara.com
ಮಧ್ಯರಾತ್ರಿಯ ಕಾರ್ಯಾಚರಣೆ: ಗೋವಾ ಸಿಎಂ ಗಾದಿಗೆ ಸ್ಪೀಕರ್‌ ಪ್ರಮೋದ್‌ ಸಾವಂತ್‌
ಸುದ್ದಿ ಸಾರ

ಮಧ್ಯರಾತ್ರಿಯ ಕಾರ್ಯಾಚರಣೆ: ಗೋವಾ ಸಿಎಂ ಗಾದಿಗೆ ಸ್ಪೀಕರ್‌ ಪ್ರಮೋದ್‌ ಸಾವಂತ್‌

ಸೋಮವಾರ ಸಂಜೆ ಮಿತ್ರ ಪಕ್ಷಗಳ ಜೊತೆಗೆ ಸಭೆ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೋವಾ ಸ್ಪೀಕರ್ ಪ್ರಮೋದ್ ಸಾವಂತ್ ಅವರನ್ನು ಮನೋಹರ್ ಪರಿಕ್ಕರ್ ಅವರ ಉತ್ತರಾಧಿಕಾರಿಯಾಗಿ ಘೋಷಿಸಿದರು. 

Team Samachara

ಗೋವಾದ 13ನೇ ಮುಖ್ಯಮಂತ್ರಿಯಾಗಿ ಪ್ರಮೋದ್‌ ಸಾವಂತ್‌ ಮಂಗಳವಾರ ಮುಂಜಾನೆ ಎರಡು ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಭಾನುವಾರ ಸಂಜೆ ಸಾವನ್ನಪ್ಪುತ್ತಿದ್ದಂತೆ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ನಡುವೆ ಅಧಿಕಾರಕ್ಕಾಗಿ ಹಗ್ಗ ಜಗ್ಗಾಟಕ್ಕೆ ಆರಂಭವಾಗಿತ್ತು. ಅದರಲ್ಲೂ ಸೋಮವಾರ ಸಂಜೆ ಪರಿಕ್ಕರ್ ಅಂತ್ಯ ಸಂಸ್ಕಾರ ಸರಕಾರಿ ಗೌರವಗಳೊಂದಿಗೆ ಪೂರ್ಣಗೊಳ್ಳುತ್ತಿದ್ದಂತೆ ಎರಡೂ ಪಕ್ಷಗಳು ರಾಜ್ಯಪಾಲರ ಮುಂದೆ ಸರಕಾರ ರಚನೆಗೆ ಪೆರೇಡ್‌ ನಡೆಸಿದ್ದವು.

ಹೀಗಾಗಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಗೊಂದಲ ನಿರ್ಮಾಣವಾಗಿತ್ತು. ಇನ್ನೊಂದು ಕಡೆ ಬಿಜೆಪಿಯೊಳಗೆ ಮಿತ್ರ ಪಕ್ಷಗಳು ಅಪಸ್ವರ ಎತ್ತಿದ್ದವು. ಸಿಎಂ ಹುದ್ದೆಗಾಗಿ ಹಲವು ಆಕಾಂಕ್ಷಿಗಳು ದಾಳ ಉರುಳಿಸಲು ಆರಂಭಿಸಿದ್ದರು. ಇದಕ್ಕೆ ಮಧ್ಯ ರಾತ್ರಿಯ ಬೆಳವಣಿಗೆಯಲ್ಲಿ ತೆರೆ ಎಳೆದಿರುವ ಬಿಜೆಪಿ, ಅಧ್ಯಕ್ಷ ಅಮಿತ್‌ ಶಾ ಮತ್ತು ನಿತಿನ್‌ ಗಡ್ಕರಿ ಮಧ್ಯಸ್ಥಿಕೆಯಲ್ಲಿ ಮಿತ್ರ ಪಕ್ಷಗಳನ್ನು ಜತೆಗಿಟ್ಟುಕೊಂಡು ಸರಕಾರ ರಚನೆ ಶಾಸ್ತ್ರ ಮಾಡಿ ಮುಗಿಸಿದೆ.

ಮಧ್ಯರಾತ್ರಿ 1.50ಕ್ಕೆ ನಿಗದಿಯಾದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಗೋವಾ ರಾಜ್ಯಪಾಲೆ ಮೃದುಲಾ ಸಿಂಗ್ ಅಲ್ಲಿನ ವಿಧಾನಸಭೆಯ ಸ್ಪೀಕರ್‌ ಆಗಿದ್ದ ಪ್ರಮೋದ್‌ ಸಾವಂತ್‌ಗೆ ಪ್ರಮಾಣವಚನ ಬೋಧಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಮಿತ್ರ ಪಕ್ಷಗಳಾದ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ), ಹಾಗೂ ಮಹಾರಾಷ್ಟ್ರ ಗೋಮಂತಕ್ ಪಕ್ಷ (ಎಂಜಿಪಿ) ಗಳಿಗೆ ಬಿಜೆಪಿ ತಲಾ ಒಂದು ಉಪಮುಖ್ಯಮಂತ್ರಿ ಹುದ್ದೆ ನೀಡಿದೆ.

ಮನೋಹರ್‌ ಪರಿಕ್ಕರ್ ಸಂಪುಟವನ್ನು ಸಂಪೂರ್ಣ ವಿಸರ್ಜನೆಗೊಳಿಸಲಾಗಿದ್ದು, ಹೊಸದಾಗಿ 12 ಜನ ಸಚಿವರು ಸಾವಂತ್‌ ಜತೆಯಲ್ಲಿ ಮಧ್ಯರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎಂಜಿಪಿಯಿಂದ ಮನೋಹರ್‌ ಅಜ್ಗಾವ್‌ಕರ್‌, ಜಿಎಫ್‌ಪಿಯಿಂದ ಜಯೇಶ್‌ ಸಲಗಾವ್ಕರ್‌, ಬಿಜೆಪಿಯಿಂದ ಮೌವಿನ್ ಗೊಡಿನ್ಹೋ, ವಿಶ್ವಜಿತ್‌ ರಾಣೆ, ಮಿಲಿಂದ್‌ ನಾಯಕ್‌, ನೀಲೇಶ್‌ ಕ್ಯಾಬ್ರಲ್‌ ಮತ್ತು ಪಕ್ಷೇತರ ಶಾಸಕರಾದ ಗೋವಿಂದ ಗೌಡೆ ಹಾಗೂ ವಿನೋದ್‌ ಪಲ್ಯೇಕರ್‌ ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖ ಸಚಿವರಾಗಿದ್ದಾರೆ.

40 ವಿಧಾನಸಭಾ ಸದಸ್ಯರನ್ನು ಹೊಂದಿರುವ ಗೋವಾದಲ್ಲಿ ಸದ್ಯ 4 ಸ್ಥಾನಗಳು ಖಾಲಿ ಇವೆ. ಹೀಗಾಗಿ ಬಹುಮತಕ್ಕೆ 19 ಸ್ಥಾನಗಳು ಅಗತ್ಯವಾಗಿದೆ. ಕಾಂಗ್ರೆಸ್‌ ಬಳಿಯಲ್ಲಿ 14 ಸ್ಥಾನಗಳಿದ್ದರೆ ಎನ್‌ಸಿಪಿಯ ಒಬ್ಬರು ಶಾಸಕರು ಕೈ ಪಕ್ಷದ ಜತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ 12 ಸ್ಥಾನಗಳನ್ನು ಹೊಂದಿದೆ. ಬಿಜೆಪಿಗೆ ಎಂಜಿಪಿ ಮತ್ತು ಎಎಫ್‌ಪಿಯ ತಲಾ ಮೂವರು ಹಾಗೂ ಮೂವರು ಪಕ್ಷೇತರ ಶಾಸಕರ ಬೆಂಬಲ ನೀಡಿದ್ದು 21 ಸದಸ್ಯರ ಬೆಂಬಲದೊಂದಿಗೆ ಸರಕಾರ ರಚಿಸಿದೆ.

ಯಾರೀ ಪ್ರಮೋದ್ ಸಾವಂತ್ ?

1973 ಏಪ್ರಿಲ್ 24ರಂದು ಗೋವಾದ ಕೋಥಂಬಿಯಲ್ಲಿ ಪಾಂಡುರಂಗ್ ಹಾಗೂ ಪದ್ಮಿನಿ ಸಾವಂತ್ ಅವರ ಮಗನಾಗಿ ಜನಿಸಿದವರೇ ಪ್ರಮೋದ್ ಸಾವಂತ್. ಗೋವಾದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಮಹಾರಾಷ್ಟ್ರದ ಕೋಲ್ಹಾಪುರದ ಗಂಗಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಿಂದ ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿಯಲ್ಲಿ ಪದವಿ ಪಡೆದುಕೊಂಡರು.

ನಂತರ ಪುಣೆಯಲ್ಲಿರುವ ತಿಲಕ್ ಮಹಾರಾಷ್ಟ್ರ ವಿಶ್ವವಿದ್ಯಾಲಯದಿಂದ ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಾವಂತ್‌ ರಾಜಕೀಯದತ್ತ ಮುಖ ಮಾಡಿದರು. ಬಿಜೆಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಶಾಸನಸಭೆ ಪ್ರವೇಶಿಸಿದ ಅವರು 2017ರಲ್ಲಿ ಸ್ಪೀಕರ್‌ ಹುದ್ದೆಗೇರಿದರು. ಇದೀಗ ಪರಿಕ್ಕರ್‌ ನಿಧನದಿಂದ ಖಾಲಿಯಾದ ಮುಖ್ಯಮಂತ್ರಿ ಕುರ್ಚಿ 45 ವರ್ಷದ ಸಾವಂತ್‌ ಪಾಲಾಗಿದೆ.

ಇವರ ಪತ್ನಿ ಸಲಕ್ಷಣ ಗೋವಾದ ಬಿಕೊಲಿಮ್‌ನಲ್ಲಿರುವ ಶ್ರೀ ಶಾಂತಾದುರ್ಗ ಉನ್ನತ ಮಾಧ್ಯಮಿಕ ಶಾಲೆಯಲ್ಲಿ ರಸಾಯನಶಾಸ್ತ್ರ ಶಿಕ್ಷಕಿಯಾಗಿದ್ದು, ಪ್ರಸ್ತುತ ಗೋವಾದ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷರಾಗಿದ್ದಾರೆ.