samachara
www.samachara.com
ಬಲಕ್ಕೆ ಯಶ್, ಎಡಕ್ಕೆದರ್ಶನ್: ಮಂಡ್ಯ ಹಾದಿಯಲ್ಲಿ ಸುಮಲತಾ ‘ಜೋಡು ಎತ್ತಿನ ಗಾಡಿ’
ಸುದ್ದಿ ಸಾರ

ಬಲಕ್ಕೆ ಯಶ್, ಎಡಕ್ಕೆದರ್ಶನ್: ಮಂಡ್ಯ ಹಾದಿಯಲ್ಲಿ ಸುಮಲತಾ ‘ಜೋಡು ಎತ್ತಿನ ಗಾಡಿ’

ಈ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ದಿವಂಗತ ಅಂಬರೀಶ್ ಅವರ ಪತ್ನಿ ನಟಿ ಸುಮಲತಾ ನಡುವಿನ ಜಿದ್ದಾಜಿದ್ದಿ ಕಣಕ್ಕೆ ಮಂಡ್ಯ ಸಾಕ್ಷಿಯಾಗಲಿದೆ.

Team Samachara

ಕಳೆದ ಒಂದು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ಸುದ್ದಿ ಕೇಂದ್ರದಲ್ಲಿದ್ದ ಮಂಡ್ಯ ಜಿಲ್ಲೆ ಕೊನೆಗೂ ಅಧಿಕೃತವಾಗಿ ಜೆಡಿಎಸ್ ಹಾಗೂ ಚಿತ್ರ ನಟಿ ಸುಮಲತಾ ಅಂಬರೀಶ್ ಅವರ ಜಿದ್ದಾ ಜಿದ್ದಿ ಕಣಕ್ಕೆ ವೇದಿಕೆಯಾಗಲಿದೆ.

ಅಂಬರೀಶ್ ಅವರ ಮರಣದ ನಂತರ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದ್ದರು. ಆದರೆ, ಮೈತ್ರಿ ಸೂತ್ರಕ್ಕೆ ಕಟ್ಟುಬಿದ್ದ ಕಾಂಗ್ರೆಸ್ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಹೀಗಾಗಿ ಸುಮಲತಾ ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸನ್ನಿವೇಶ ಎದುರಾಗಿದೆ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಮಾಡಿರುವ ಸುಮಲತಾ ಮಾರ್ಚ್ 20 ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸುವುದಾಗಿ ಅಧಿಕೃತವಾಗಿ ಘೋಷಿಸುವ ಮೂಲಕ ಮೈತ್ರಿ ಸರಕಾರದಲ್ಲೂ ಗೊಂದಲ ಶುರುವಾಗಿದೆ.

ಮಂಡ್ಯದ ಪ್ರೀತಿಗಾಗಿ ಸ್ಪರ್ಧೆ

ಮಂಡ್ಯ ಕ್ಷೇತ್ರದಿಂದ ತಾವು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿರುವ ಕುರಿತು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟಣೆ ನೀಡಿದ ಸುಮಲತಾ, “ನಮ್ಮ ಕುಟುಂಬಕ್ಕೆ ರಾಜಕಾರಣ ಅನಿವಾರ್ಯವಲ್ಲ. ಅಂಬರೀಶ್ ಇದ್ದಾಗ ನಾವ್ಯಾರು ಆ ಕುರಿತು ತಲೆಕೆಡಿಸಿಕೊಂಡವರಲ್ಲ. ಅಲ್ಲದೆ ನಮ್ಮ ಕುಟುಂಬದಿಂದ ಯಾರೂ ರಾಜಕಾರಣಕ್ಕೆ ಪ್ರವೇಶ ಮಾಡಬಾರದು ಎಂಬುದು ಅವರ ಅಭಿಲಾಷೆಯಾಗಿತ್ತು. ಆದರೆ, ಈಗ ಮಂಡ್ಯ ಜನತೆ ಅಂಬರೀಶ್ ಅವರ ಮೇಲೆ ಇಟ್ಟ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯನ್ನು ಉಳಿಸಿಕೊಳ್ಳವ ಹೊಣೆ ನಮ್ಮ ಮೇಲಿದೆ. ಹೀಗಾಗಿ ಹಲವಾರು ಒತ್ತಡಗಳ ನಡುವೆಯೂ ಜನತೆ ನಮ್ಮ ಮೇಲೆ ಇಟ್ಟಿರುವ ಪ್ರೀತಿಗೆ ತಲೆಬಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ” ಎಂದು ಅವರು ಸ್ಪಷ್ಟಣೆ ನೀಡಿದರು.

“ಅಂಬರೀಷ್ ಅಗಲಿದ ಬಳಿಕ ನನಗೆ ಎರಡು ದಾರಿ ಕಾಣಿಸುತ್ತಿತ್ತು. ನಾನು ಮತ್ತು ಅಭಿ ನಮ್ಮ ಪಾಡಿಗೆ ಆರಾಮಾಗಿ ಶಾಂತಿಯುತ ಜೀವನ ನಡೆಸುತ್ತಾ ಹೋಗುವುದು. ಅಥವಾ ರಾಜಕೀಯ ಪ್ರವೇಶಿಸುವುದು. ಎರಡನೇಯ ದಾರಿ ಅಷ್ಟು ಸುಲಭವಾದುದ್ದಲ್ಲ. ಅವಮಾನ, ಟೀಕೆಗಳನ್ನು ಎದುರಿಸಬೇಕು ಎನ್ನುವುದು ಗೊತ್ತಿದೆ. ಚುನಾವಣೆ ಎದುರಿಸಲು ಅಪಾರ ಆತ್ಮಸ್ಥೈರ್ಯ ಬೇಕು. ಆದರೆ, ಮಂಡ್ಯದ ಜನರ ಪ್ರೀತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅವರು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದರು, ಈವರೆಗೆ ಸುಮಲತಾ ಸ್ಪರ್ಧೆ ಖಚಿತವಾಗಿರಲಿಲ್ಲ. ಆದರೆ, ಇಂದು ಸುಮಲತಾ ತಮ್ಮ ರಾಜಕೀಯ ಪ್ರವೇಶದ ಕುರಿತು ಸ್ಪಷ್ಟಣೆ ನೀಡಿದ್ದು ಜೆಡಿಎಸ್ ಪಾಳಯದಲ್ಲಿ ಈಗಾಗಲೇ ತಳಮಳ ಶುರುವಾಗಿದೆ ಎನ್ನಲಾಗುತ್ತಿದೆ.

ಈ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ದಿವಂಗತ ಅಂಬರೀಶ್ ಅವರ ಪತ್ನಿ ನಟಿ ಸುಮಲತಾ ನಡುವಿನ ಜಿದ್ದಾಜಿದ್ದಿ ಕಣಕ್ಕೆ ಮಂಡ್ಯ ಸಾಕ್ಷಿಯಾಗಲಿದೆ.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿ ತಮ್ಮ ರಾಜಕೀಯ ಪ್ರವೇಶದ ಕುರಿತು ಚರ್ಚೆ ನಡೆಸಿದ್ದ ಸುಮಲತಾ ಇಬ್ಬರು ನಾಯಕರು ತನಗೆ ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಲ್ಲದೆ ಸುಮಲತಾ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾದರೆ ಬಿಜೆಪಿ ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಈಗಾಗಲೇ ರಾಜ್ಯ ಬಿಜೆಪಿ ಘಟಕ ಘೋಷಿಸಿದೆ.

ಈ ನಡುವೆ ಮಂಡ್ಯದ ಜನರ ಅಲೆ ಸುಮಲತಾ ಕಡೆಗೆ ತಿರುಗಿದ್ದು ಪರಿಣಾಮ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಕುಟುಂಬ ವಿಪರೀತ ಎನ್ನುವಷ್ಟರ ಮಟ್ಟಿಗೆ ಟ್ರೋಲ್‌ಗೆ ಒಳಗಾಗುತ್ತಿದೆ. ಇದರ ಜೊತೆಗೆ ಮಂಡ್ಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಚಿತ್ರ ನಟ ದರ್ಶನ್ ಹಾಗೂ ಯಶ್ ಸುಮಲತಾ ಪರ ಚುನಾವಣೆ ಪ್ರಚಾರ ಕೈಗೊಳ್ಳುವುದಾಗಿ ಘೋಷಿಸಿರುವುದು ಜೆಡಿಎಸ್‌ ಪಾಳಯದಲ್ಲಿ ಉರಿಯುತ್ತಿರುವ ದೀಪಕ್ಕೆ ತುಪ್ಪ ಸುರಿದಂತಾಗಿದೆ.

ಒಂದು ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದು ಬೀಳಲಿದೆಯೇ? ಎಂದು ರಾಜಕೀಯ ವಲಯದಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ.

ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, “ಸುಮಲತಾ ರಾಜಕೀಯ ಪ್ರವೇಶದ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ” ಎಂದಿದ್ದಾರೆ.