samachara
www.samachara.com
ಉಡುಪಿಯಲ್ಲಿ ಬೂದಿ ಮಳೆ ಬರಿಸಿದ ಅದಾನಿ ವಿದ್ಯುತ್‌ ಸ್ಥಾವರಕ್ಕೆ 5 ಕೋಟಿ ರೂ. ದಂಡ
ಸುದ್ದಿ ಸಾರ

ಉಡುಪಿಯಲ್ಲಿ ಬೂದಿ ಮಳೆ ಬರಿಸಿದ ಅದಾನಿ ವಿದ್ಯುತ್‌ ಸ್ಥಾವರಕ್ಕೆ 5 ಕೋಟಿ ರೂ. ದಂಡ

ಕಳೆದ ಮಳೆಗಾಲದಲ್ಲಿ ಉಡುಪಿ ಪರಿಸರದಲ್ಲಿ ಬೂದಿ ಮಳೆ ಬರಿಸಿದ ಕುಖ್ಯಾತಿಯನ್ನು ಯುಪಿಸಿಎಲ್‌ ಹೊಂದಿದ್ದು, ಪರಿಸರದ ಮೇಲೆ ಎಸಗಿದ ಹಾನಿಗೆ ಪರಿಹಾರ ರೂಪದಲ್ಲಿ 5 ಕೋಟಿ ರೂ. ದಂಡ ಪಾವತಿಸಲು ನ್ಯಾಯಾಧಿಕರಣ ಆದೇಶ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಆಪ್ತ ಗೌತಮ್‌ ಅದಾನಿ ಒಡೆತನದ ‘ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಯುಪಿಸಿಎಲ್)’ ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 5 ಕೋಟಿ ರೂಪಾಯಿಗಳ ಮಧ್ಯಂತರ ದಂಡ ವಿಧಿಸಿದೆ.

ಕಳೆದ ಮಳೆಗಾಲದಲ್ಲಿ ಉಡುಪಿ ಪರಿಸರದಲ್ಲಿ ಬೂದಿ ಮಳೆ ಬರಿಸಿದ ಕುಖ್ಯಾತಿಯನ್ನು ಯುಪಿಸಿಎಲ್‌ ಹೊಂದಿದ್ದು, ಪರಿಸರದ ಮೇಲೆ ಎಸಗಿದ ಹಾನಿಗೆ ಪರಿಹಾರ ರೂಪದಲ್ಲಿ ಈ ದಂಡ ಪಾವತಿಸಲು ನ್ಯಾಯಾಧಿಕರಣ ಆದೇಶ ನೀಡಿದೆ.

ವಿದ್ಯುತ್‌ ಉತ್ಪಾದನಾ ಸ್ಥಾವರದಿಂದ ಈಗಾಗಲೇ ಪರಿಸರದ ಮೇಲೆ ಉಂಟಾಗಿರುವ ಹಾನಿಯನ್ನು ತಗ್ಗಿಸಲು ಮತ್ತು ಮುಂದಿನ ದಿನಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ನಿಯಮಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುವುದನ್ನು ಖಾಸರಿ ಪಡಿಸಲು ಸಂಸ್ಥೆಗೆ ಈ ದಂಡ ಹಾಕಲಾಗಿದೆ.

ಸದ್ಯ ನ್ಯಾಯಾಧಿಕರಣ ವಿಧಿಸಿರುವುದು ಮಧ್ಯಂತರ ದಂಡವಾಗಿದ್ದು, ಪರಿಸರದ ಮೇಲಾಗಿರುವ ಹಾನಿಯ ಪ್ರಮಾಣವನ್ನು ಅಂದಾಜಿಸಿ ಅಂತಿಮ ಪರಿಹಾರದ ಮೊತ್ತವನ್ನು ಲೆಕ್ಕ ಹಾಕಲು ಇದೇ ಸಂದರ್ಭದಲ್ಲಿ ಮೂವರು ತಜ್ಞರ ಸಮಿತಿಯನ್ನು ರಚಿಸಿದೆ. ಈ ಸಮಿತಿಯ ವರದಿ ನೀಡುವ ಮೊದಲೇ 5 ಕೋಟಿ ರೂಪಾಯಿ ಮಧ್ಯಂತರ ಪರಿಹಾರದ ಹಣವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಗೆ ಪಾವತಿ ಮಾಡುವಂತೆ ಸೂಚಿಸಿದೆ.

ಈ ಪರಿಹಾರದ ಮೊತ್ತವನ್ನು ಒಂದು ತಿಂಗಳ ಒಳಗೆ ಪಾವತಿ ಮಾಡುವಂತೆ ಕಂಪನಿಗೆ ಸೂಚನೆ ನೀಡಲಾಗಿದ್ದು, ಈ ಹಣವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರದ ಮರು ಸ್ಥಾಪನೆಗೆ ಬಳಸಿಕೊಳ್ಳಬೇಕು ಎಂದು ಅದು ಹೇಳಿದೆ. ಸ್ಥಾವರದಿಂದ ಸಂಭವನೀಯ ತೊಂದರೆಗೆ ಒಳಗಾಗಿರುವ ಜನರತ್ತಲೂ ಗಮನ ಹರಿಸುವಂತೆ ಮಂಡಳಿಗೆ ಆದೇಶದಲ್ಲಿ ತಿಳಿಸಲಾಗಿದೆ.

UPCL Padubidri Judgment by Samachara on Scribd

ಹಸಿರು ಪೀಠ ಯುಪಿಸಿಎಲ್ ವಿರುದ್ಧ ನೀಡಿರುವ ತೀರ್ಪಿನ ಮುಖ್ಯಾಂಶಗಳು ಇಲ್ಲಿವೆ,

 1. ಯೋಜನೆ ಆರಂಭದಿಂದಲೂ ನಿಯಮಗಳನ್ನು ಉಲ್ಲಂಘಿಸುತ್ತಾ ಬಂದಿದ್ದು, ಗ್ರಾಮಸ್ಥರು, ಅರ್ಜಿದಾರರ ಕಳವಳಗಳಿಗೆ ಸರ್ಕಾರ ಸೇರಿದಂತೆ ಯಾರೂ ಗಮನ ನೀಡಿಲ್ಲ. ಸದರಿ ಯೋಜನೆಗೆ ಸಂಬಂಧಿಸಿದಂತೆ ಹಲವಾರು ದೂರುಗಳು ದಾಖಲಾಗಿರುವುದೇ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ಮತ್ತು 20-03-1997ರಂದು ಯಾವುದೇ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದೆ ಯೋಜನೆಗೆ ಪರಿಸರ ಅನುಮತಿ ನೀಡಲಾಗಿದೆ.
 2. ಯೋಜನೆಗೆ 16-04-2002ರಂದು ಪರಿಸರ ಅನುಮತಿ ವಿಸ್ತರಣೆ ನೀಡಲಾಯಿತಾದರೂ 2004ರ ಅಕ್ಟೋಬರ್‌ 5ನೇ ತಾರೀಕು ಕಳೆದರೂ ಕೆಲಸ ಆರಂಭವಾಗದ ಹಿನ್ನೆಲೆಯಲ್ಲಿ ನೀಡಿದ್ದ ಅನುಮತಿಯನ್ನು ಸರ್ಕಾರ ಹಿಂದೆಗೆದುಕೊಂಡಿತ್ತು. ಬಳಿಕ ಆಕ್ಷೇಪಾರ್ಹ ರೀತಿಯಲ್ಲಿ 31-01-2005ರಂದು ಪತ್ರವೊಂದರ ಮೂಲಕ ಈ ಹಿಂದೆಗೆತವನ್ನು ರದ್ದು ಮಾಡಲಾಯಿತು. ಇದಾದ ಮೇಲೆ ಯೋಜನೆಯನ್ನು ಎರಡು ಬಾರಿ ಕಂಪನಿಯ ಕೋರಿಕೆಯ ಮೇರೆಗೆ ವಿಸ್ತರಿಸಲಾಯಿತು. ಆದರೆ ಈ ವಿಸ್ತರಣೆಗಳಿಗೆ ಸಾರ್ವಜನಿಕ ಅಹವಾಲು ಕೋರಿಕೆ ಸಹಿತ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ನಿಯಮಗಳನ್ನೆಲ್ಲ ಗಾಳಿಗೆ ತೂರಲಾಯಿತು. ಹಿಂದಿನ ಪರಿಸರ ಅನುಮತಿಗಳಲ್ಲಿ ಮತ್ತು ವಿಸ್ತರಣೆಯ ಅನುಮತಿಗಳಲ್ಲಿ ಮಾಡಲಾಗಿರುವ ನಿಯಮಗಳನ್ನು ಅನುಸರಿಸದಿರುವ ತಪ್ಪುಗಳನ್ನು ಮರೆಮಾಚಲು ಯುಪಿಸಿಎಲ್ ಮಂದಿ ನೀಡಿದ ಮಾಹಿತಿಗಳನ್ನಷ್ಟೇ ಆಧರಿಸಿ ಸಮಗ್ರ ಪರಿಸರ ಅನುಮತಿ ನೀಡಿದಂತಿದೆ.
 3. ಯೆಲ್ಲೂರು ಪಂಚಾಯತಿ ವ್ಯಾಪ್ತಿಯಲ್ಲಿ ಪರಿಣತರು 2012ರಲ್ಲಿ ನಡೆಸಿದ ಅಧ್ಯಯನದಲ್ಲಿ ನೀರು, ಮಣ್ಣು, ಗಾಳಿ, ಜೈವಿಕ ಪರಿಸರಕ್ಕೆ ಗಮನಾರ್ಹ ಹಾನಿ ಆಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಪ್ಲಾಂಟ್‌ನ ತಂಪುಕಾರಕ ಟವರ್‌ಗಳು ಹೊರಸೂಸುವ ಉಪ್ಪುಸಹಿತ ತೇವಾಂಶ ಕಾರಣವಾಗಿದ್ದು, ಅದು ಎರಡು ಕಿ.ಮೀ ತನಕ ಹಬ್ಬುತ್ತದೆ ಎಂಬುದೂ ಸಾಬೀತಾಗಿದೆ. ಯುಪಿಸಿಎಲ್ ಪ್ಲಾಂಟ್‌ನ ಎರಡು ಕಿ.ಮೀ ಪರಿಧಿಯಲ್ಲಿ ಯೋಜನೆಯ ನಿರ್ಲಕ್ಶದ ಕಾರಣಕ್ಕೆ ವಿವಿಧ ಮಾಲಿನ್ಯಗಳಿಂದ ವ್ಯಾಪಕ ಹಾನಿ ಆಗಿರುವುದು ಸಾಬೀತಾಗಿದೆ.
 4. ಇರುವ ಯೋಜನೆಯಲ್ಲೇ ಇಷ್ಟೊಂದು ಪರಿಸರ ಸಮಸ್ಯೆಗಳಿರುವಾಗ ಅದನ್ನು ಅದರ ದುಪ್ಪಟ್ಟು ಗಾತ್ರಕ್ಕೆ ವಿಸ್ತರಿಸುವ ತೀರ್ಮಾನ ಪರಿಸರಕ್ಕೆ ಹಾನಿ ಕಾರಕ ಆಗುವುದರಲ್ಲಿ ಸಂಶಯವೇ ಇಲ್ಲ. ಈ ವಿಚಾರವನ್ನು ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ನೋಡಬೇಕಿದೆ.
 5. ಇಡೀ ಪ್ರಕರಣದಲ್ಲಿ ಕೇಂದ್ರ ಪರಿಸರ ಇಲಾಖೆಯ ಪಾತ್ರ ನಿಷ್ಪಕ್ಷಪಾತವಾಗಿಲ್ಲದಿರುವ ಕುರಿತು ನ್ಯಾಯಮಂಡಳಿ ಆಕ್ರೋಶ ವ್ಯಕ್ತಪಡಿಸುತ್ತದೆ.
 6. ಯುಪಿಸಿಎಲ್ ಯೋಜನೆಯ ಒಂದನೇ ಹಂತ ಈಗ ಪೂರ್ಣಗೊಂಡಿದ್ದು, ವಿದ್ಯುತ್ ಉತ್ಪಾದನೆ ಆಗುತ್ತಿದೆ. “ಆಗಿ ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ” ಎಂಬ ಸ್ಥಿತಿಯನ್ನು ನ್ಯಾಯಾಲಯ ಒಪ್ಪದು, ಆದರೂ ಈಗ ಅಂತಹದೊಂದು ಸ್ಥಿತಿ ಎದುರಾಗಿದೆ. ಹಾಗಾದರೆ ನ್ಯಾಯಮಂಡಳಿ ಅಸಹಾಯಕವೇ ಎಂಬ ಪ್ರಶ್ನೆ ಎದ್ದಿದೆ.
 7. ನಾವು ಈಗಾಗಲೇ ಈ ತನಕದ ಎಲ್ಲ ಪರಿಸರ ಅನುಮತಿಗಳು ಅಕ್ರಮ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಹಾಗಾಗಿ, ಈ ಯೋಜನೆಯನ್ನು ರದ್ದುಪಡಿಸಿ ಪರಿಸರವನ್ನು ಮೊದಲಿನಂತೆ ಏರ್ಪಡಿಸಿ ಎಂದು ಹೇಳಬೇಕಾಗುತ್ತದೆ. ಆದರೆ ಈಗಾಗಲೇ ಆಗಿರುವ ವಿಳಂಬ, ಆಗಿಹೋಗಿರುವ ಸಂಗತಿಗಳ ಹಿನ್ನೆಲೆಯಲ್ಲಿ ಯೋಜನೆ ರದ್ದುಪಡಿಸುವ ಆದೇಶದಿಂದ ಸಾರ್ವಜನಿಕರ ಹಿತಾಸಕ್ತಿ ರಕ್ಷಣೆ ಆಗದು. ಹಾಗಾಗಿ, ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸುವ ಮತ್ತು ಇನ್ನು ಮುಂದೆ ಪ್ಲಾಂಟ್ ಪರಿಸರದ ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡುವುದನ್ನು ಖಾತರಿಪಡಿಸುವ ಕ್ರಮಗಳನ್ನು ಸೂಚಿಸಬೇಕಾಗಿದೆ. ಹಾಗಾಗಿ ಹಸಿರು ನ್ಯಾಯಪೀಠ ಕಾಯಿದೆ 2010ರ “ ಮಾಲಿನ್ಯ ಮಾಡಿದವರು ಪಾವತಿಸಬೇಕು” ನಿಯಮದಡಿ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ ಗೆ ಪರಿಸರ ಪರಿಹಾರ ದಂಡ ನೀಡಬೇಕೆಂದು ಸೂಚಿಸುತ್ತಿದ್ದೇವೆ. ಮೂವರು ಪರಿಣತರ ಸಮಿತಿ ( 1. ಹಿರಿಯ ವಿಜ್ಞಾನಿ, ಸಿಪಿಸಿಬಿ; 2. ಹಿರಿಯ ಪ್ರತಿನಿಧಿ, ಐಐಟಿ ಚೆನ್ನೈ; 3. ಹಿರಿಯ ವಿಜ್ಞಾನಿ, ಐಐಟಿ, ಬೆಂಗಳೂರು) ಮೂರು ತಿಂಗಳ ಒಳಗೆ ಪರಿಸರಕ್ಕಾಗಿರುವ ಹಾನಿಯನ್ನು ಅಂದಾಜಿಸಬೇಕು.
 8. ಅವರ ವರದಿ ಬರುವ ತನಕ ಮುಂಗಡವಾಗಿ ಯುಪಿಸಿಎಲ್ ಕಂಪನಿಯು 5 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಒಂದು ತಿಂಗಳೊಳಗೆ ಸಿಪಿಸಿಬಿಗೆ ನೀಡಬೇಕು. ಈ ಮೊತ್ತವನ್ನು ಸಿಪಿಸಿಬಿ ಪರಿಸರ ಹಾನಿಗಳ ನಿವಾರಣೆ, ಜನರ ಸಂಕಷ್ಟಗಳ ನಿವಾರಣೆಗೆ ಬಳಸಬೇಕು. ಈ ಹಣ ಅವರ ‘ಸಿಎಸ್‌ಆರ್‌’ (ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ) ನಿಧಿಯಿಂದ ಹೊರತಾಗಿರುತ್ತದೆ.
 9. 01-08-2017ರಂದು ನೀಡಿದ ಯುಪಿಸಿಎಲ್ ಘಟಕ ವಿಸ್ತರಣೆಯ ಪರಿಸರ ಅನುಮತಿ ಸರಿಯಾದುದಲ್ಲ ಎಂಬ ಹಿನ್ನೆಲೆಯಲ್ಲಿ, ಅಂತಹ ಯಾವುದೇ ವಿಸ್ತರಣೆಗಳಿಗೆ ಅನುಮತಿಯನ್ನು ನಿರಾಕರಿಸಲಾಗಿದೆ.
 10. ಆ ನಿಟ್ಟಿನಲ್ಲಿ ಮುಂದುವರಿಯುವ ಮುನ್ನ ಯುಪಿಸಿಎಲ್ ತನ್ನ ಘಟಕದಿಂದ ಪರಿಸರದ ಮೇಲಾಗುವ ಹೆಚ್ಚುವರಿ ಪರಿಣಾಮದ ಬಗ್ಗೆ ಅಧ್ಯಯನವನ್ನು ನಡೆಸಿ, ಮೂರು ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕು. ಇವೆಲ್ಲ ಕ್ರಮಬದ್ಧವಾಗಿ ಮುಗಿದ ಬಳಿಕವೇ ಪರಿಸರ ಇಲಾಖೆ ಯುಪಿಸಿಎಲ್ ಗೆ ಪರಿಸರ ಅನುಮತಿ ನೀಡಬಹುದು. ಅಲ್ಲಿಯ ತನಕ ಪರಿಸರ ಇಲಾಖೆ ನೀಡಿದ 01-08-2017ರ ಆದೇಶ ಅಮಾನತಿನಲ್ಲಿರುತ್ತದೆ.
 11. ಅರ್ಜಿದಾರರಿಗೆ ದಾವಾ ಖರ್ಚಿನ ಬಾಬ್ತು ಯುಪಿಸಿಎಲ್ ಒಂದು ಲಕ್ಷ ರೂ. ನೀಡಬೇಕು.

ಪೂರಕ ಮಾಹಿತಿ: ರಾಜಾರಾಂ ತಲ್ಲೂರು, ಚಿತ್ರ ಕೃಪೆ: ಅದಾನಿ ಪವರ್‌

Also read: ಉಡುಪಿಯಲ್ಲಿ ಬೂದಿ ಮಳೆ: ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೆ 7 ಪ್ರಶ್ನೆಗಳು