samachara
www.samachara.com
ಫೀಲ್ಡಿಗಿಳಿದ ಐಟಿ ಇಲಾಖೆ, ಚುನಾವಣೆಗಾಗಿ ಹಾವೇರಿ ಇಂಜಿನಿಯರ್‌ ಸಂಗ್ರಹಿಸಿದ್ದ 2 ಕೋಟಿ ರೂ. ವಶ
ಸುದ್ದಿ ಸಾರ

ಫೀಲ್ಡಿಗಿಳಿದ ಐಟಿ ಇಲಾಖೆ, ಚುನಾವಣೆಗಾಗಿ ಹಾವೇರಿ ಇಂಜಿನಿಯರ್‌ ಸಂಗ್ರಹಿಸಿದ್ದ 2 ಕೋಟಿ ರೂ. ವಶ

ಗುತ್ತಿಗೆದಾರರಿಂದ ಸಂಗ್ರಹಿಸಿದ 2 ಕೋಟಿ ರೂಪಾಯಿ ಹಣವನ್ನು ಪ್ರಮುಖರೊಬ್ಬರಿಗೆ ತಲುಪಿಸುವುದಕ್ಕಾಗಿ ಹಾವೇರಿಯಿಂದ ಬಂದಿದ್ದ ನಾರಾಯಣಗೌಡ ಬೆಂಗಳೂರಿನ ಮೌರ್ಯ ವೃತ್ತದಲ್ಲಿರುವ ರಾಜ್‍ಮಹಲ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು.

ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಫೀಲ್ಡಿಗಿಳಿದಿರುವ ಐಟಿ ಅಧಿಕಾರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜಿನಿಯರ್ ಒಬ್ಬರು ಚುನಾವಣಾ ಖರ್ಚಿಗಾಗಿ ಗುತ್ತಿಗೆದಾರರಿಂದ ಸಂಗ್ರಹಿಸಿದ್ದ 2 ಕೋಟಿ ರೂಪಾಯಿ ಹಣವನ್ನು ಪತ್ತೆಹಚ್ಚಿದ್ದಾರೆ.

ಹಾವೇರಿಯಿಂದ ಬೆಂಗಳೂರು ನಗರಕ್ಕೆ ಆಗಮಿಸಿ ಆನಂದರಾವ್ ವೃತ್ತದ ಸಮೀಪದಲ್ಲಿರುವ ರಾಜ್‍ಮಹಲ್ ಹೋಟೆಲ್‍ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಕಾರ್ಯಪಾಲಕ ಅಭಿಯಂತರ ನಾರಾಯಣಗೌಡ ಬಿ.ಪಾಟೀಲ ತಂಗಿದ್ದರು. ಖಚಿತ ಮಾಹಿತಿ ಮೇರೆಗೆ ಹೊಟೇಲ್‌ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಅವರ ಬಳಿ ಇದ್ದ 2 ಕೋಟಿಗೂ ಅಧಿಕ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಐಟಿ ಅಧಿಕಾರಿಗಳಿಗೆ ಹಣ ಸಿಕ್ಕಿದ ಕೂಡಲೇ ಬಂಧನದ ಭೀತಿಯಿಂದ ಭ್ರಷ್ಟ ಅಧಿಕಾರಿ ನಾರಾಯಣಗೌಡ ತಲೆಮರೆಸಿಕೊಂಡು ಪರಾರಿಯಾಗಿದ್ದಾರೆ. ಅವರಿಗೆ ಸೇರಿದ ಕೆಎ25-ಪಿ2774 ಇನೋವಾ ಕಾರು ಹಾಗೂ ಚಾಲಕನನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಾರಾಯಣಗೌಡರ ಹಾವೇರಿಯ ನಂದಿ ಲೇಔಟ್‍ನಲ್ಲಿರುವ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಮನೆಯಲ್ಲಿದ್ದ 25 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಎಫೆಕ್ಟ್‌:

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಐಟಿ ತಂಡ ಕೆಲವು ಇಲಾಖೆಯ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಡಲು ಆರಂಭಿಸಿದೆ. ಅದರಲ್ಲೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಲೋಕೋಪಯೋಗಿ, ಇಂಧನ, ಬೃಹತ್ ನೀರಾವರಿ, ಕಂದಾಯ, ಬೃಹತ್ ಕೈಗಾರಿಕೆ ಸೇರಿದಂತೆ ಹೆಚ್ಚಿನ ಆದಾಯ ತರುವ ಇಲಾಖೆಯ ಅಧಿಕಾರಿಗಳ ಚಲನವಲನಗಳ ಮೇಲೆ ನಿಗಾವಹಿಸಿದ್ದರು.

ಐಟಿ ವಿಭಾಗದ ಗುಪ್ತಚರ ಅಧಿಕಾರಿಗಳು ಕೆಲವು ಗುತ್ತಿಗೆದಾರರಿಂದಲೂ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದು, ಅವರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ನಾರಾಯಣಗೌಡ ಬಿ.ಪಾಟೀಲ್ ಕಳೆದ ಹಲವು ದಿನಗಳಿಂದ ಹಣ ಸಂಗ್ರಹಿಸಿರುವುದು ಗೊತ್ತಾಗಿತ್ತು.

ಸಂಗ್ರಹಿಸಿದ್ದ ಈ ಹಣವನ್ನು ಪ್ರಮುಖರೊಬ್ಬರಿಗೆ ತಲುಪಿಸುವುದಕ್ಕಾಗಿಯೇ ಹಾವೇರಿಯಿಂದ ಬಂದಿದ್ದ ಅವರು ಬೆಂಗಳೂರಿನ ಮೌರ್ಯ ವೃತ್ತದಲ್ಲಿರುವ ರಾಜ್‍ಮಹಲ್ ಹೋಟೆಲ್‍ನಲ್ಲಿ ನಿನ್ನೆಯಿಂದ ಎರಡು ಕೊಠಡಿಗಳನ್ನು ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದರು.

ಈ ಬಗ್ಗೆ ಗುಪ್ತಚರ ವಿಭಾಗದಿಂದ ಖಚಿತ ಮಾಹಿತಿ ಪಡೆದ ಐಟಿ ತಂಡ ನಾರಾಯಣಗೌಡ ಬಿ.ಪಾಟೀಲ್ ತಂಗಿದ್ದ ಹೋಟೆಲ್‍ಗೆ ಇಂದು ಸದ್ದಿಲ್ಲದೆ ದಾಳಿ ನಡೆಸಿ ಎರಡು ಕೋಟಿ ನಗದು, ಲ್ಯಾಪ್‍ಟಾಪ್, ಮೊಬೈಲ್ ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಒಂದು ಕೊಠಡಿಯಲ್ಲಿ ನಗದು ಸಂಗ್ರಹಿಸಿ ಇಟ್ಟಿದ್ದರೆ, ಮತ್ತೊಂದು ಕೊಠಡಿಯಲ್ಲಿ ನಾರಾಯಣಗೌಡ ಬಿ.ಪಾಟೀಲ್ ತಂಗಿದ್ದರು. ಹಣ ವಶಪಡಿಸಿಕೊಳ್ಳುತ್ತಿದ್ದಂತೆ ಬಂಧನ ಭೀತಿಯಿಂದ ನಾರಾಯಣಗೌಡ ಹೋಟೆಲ್‌ನಿಂದ ಕಾಲ್ಕಿತ್ತಿದ್ದಾರೆ.

(ಸಾಂದರ್ಭಿಕ ಚಿತ್ರ)