samachara
www.samachara.com
ದೀಪದ ಕೆಳಗೆ ಕತ್ತಲು; ಸರ್ದಾರ್‌ ಪ್ರತಿಮೆ ನಿರ್ವಹಣೆ ಸಿಬ್ಬಂದಿಗಳಿಗೆ 4  ತಿಂಗಳಿಂದ ಸಂಬಳವಿಲ್ಲ!
ಸುದ್ದಿ ಸಾರ

ದೀಪದ ಕೆಳಗೆ ಕತ್ತಲು; ಸರ್ದಾರ್‌ ಪ್ರತಿಮೆ ನಿರ್ವಹಣೆ ಸಿಬ್ಬಂದಿಗಳಿಗೆ 4  ತಿಂಗಳಿಂದ ಸಂಬಳವಿಲ್ಲ!

ಅಕ್ಟೋಬರ್‌ 31, 2018ರಂದು ಸರ್ದಾರ್‌ ಪಟೇಲ್ ಪ್ರತಿಮೆ ಉದ್ಘಾಟನೆಯಾಗಿತ್ತು. ಇದಾಗಿ ನಾಲ್ಕು ತಿಂಗಳು ಕಳೆದಿದೆ ಅಷ್ಟೆ. ಅಷ್ಟರಲ್ಲೇ ಇಲ್ಲಿನ ಸಿಬ್ಬಂದಿಗಳ ಸಂಬಳದಲ್ಲಿ ವ್ಯತ್ಯಯ ಆರಂಭವಾಗಿದೆ.

ಹೆಸರಿಗೆ ಅದು ಜಗತ್ತಿನ ಅತೀ ಎತ್ತರದ ಪ್ರತಿಮೆ; 182 ಮೀಟರ್‌. ದೇಶದ ಹೆಮ್ಮೆಯ ಪ್ರತೀಕ. ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತೆ ಸರ್ದಾರ್‌ ವಲ್ಲಭಭಾಯಿ ಪಟೇಲರ ‘ಏಕತಾ ಪ್ರತಿಮೆ’ ಕೆಳಗೆ ಅದರ ನಿರ್ವಹಣೆಯ ಕೆಲಸ ಮಾಡುವ ಸಿಬ್ಬಂದಿಗಳು ಸಂಬಳಕ್ಕಾಗಿ ಪರದಾಡುತ್ತಿದ್ದಾರೆ.

ಸರ್ದಾರ್‌ ಪಟೇಲರ ಪ್ರತಿಮೆ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯಾಗಿತ್ತು. 2,989 ಕೋಟಿ ರೂಪಾಯಿ ವೆಚ್ಚದ ಈ ಮೂರ್ತಿ ನಿರ್ಮಾಣಕ್ಕೆ ಹಲವು ಸಾರ್ವಜನಿಕ ರಂಗದ ಸಂಸ್ಥೆಗಳು ತಮ್ಮ ಸಿಎಸ್‌ಆರ್‌ ಫಂಡ್‌ನಿಂದ ಹಣ ಎತ್ತಿಕೊಟ್ಟಿದ್ದವು.

ಪ್ರತಿಮೆ ನಿರ್ಮಾಣದ ವೇಳೆಯೇ ನರ್ಮದಾ ನದಿ ಪಾತ್ರದಿಂದ ಹೊರದಬ್ಬಲ್ಪಟ್ಟ ಸ್ಥಳೀಯರು ಪರಿಹಾರಕ್ಕಾಗಿ ಪ್ರತಿಭಟನೆಗಳನ್ನು ನಡೆಸಿದ್ದರು. ಹಾಗೂ ಹೀಗೂ ಪ್ರತಿಮೆ ಪೂರ್ಣಗೊಂಡಿತ್ತು. ಅಕ್ಟೋಬರ್‌ 31, 2018ರಂದು ಸ್ವತಃ ನರೇಂದ್ರ ಮೋದಿ ಈ ಪ್ರತಿಮೆಯನ್ನು ಉದ್ಘಾಟಿಸಿದ್ದರು.

ಇದೆಲ್ಲಾ ಆಗಿ ನಾಲ್ಕು ತಿಂಗಳು ಕಳೆದಿದೆ ಅಷ್ಟೆ. ಅಷ್ಟೊತ್ತಿಗಾಗಲೇ ಪ್ರತಿಮೆ ನಿರ್ವಹಣೆ ಕೆಲಸ ಮಾಡುವ ಸಿಬ್ಬಂದಿಗಳ ಸಂಬಳದಲ್ಲಿ ವ್ಯತ್ಯಯ ಆರಂಭವಾಗಿದೆ.

ಇವರೆಲ್ಲಾ ಖಾಸಗಿ ‘ಕಂಪನಿ ಅಪ್‌ಡೇಟರ್‌ ಸರ್ವೀಸಸ್‌ ಲಿ.’ ಹೆಸರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡವರಾಗಿದ್ದಾರೆ. ಸರ್ದಾರ್‌ ಪಟೇಲ್‌ ಪ್ರತಿಮೆಯ ಭದ್ರತೆ, ಉದ್ಯಾನ ನಿರ್ವಹಣೆ, ಕಸಗುಡಿಸುವುದು, ಲಿಫ್ಟ್‌ ಆಪರೇಟ್‌ ಮಾಡುವುದು, ಟಿಕೆಟ್‌ ಪರಿಶೀಲನೆ ಹೀಗೆ ಹಲವಾರು ವೃತ್ತಿಗಳನ್ನು ಇವರುಗಳು ಇಲ್ಲಿ ನಡೆಸುತ್ತಿದ್ದಾರೆ.

ಈ ಕಂಪನಿ ಸರಕಾರದ ಅನುದಾನದಲ್ಲಿ ನಡೆಯುತ್ತಿದ್ದು, ಇದರ ಅಡಿಯಲ್ಲಿ ನೂರಕ್ಕೂ ಹೆಚ್ಚು ಜನ ಏಕತಾ ಪ್ರತಿಮೆಯಲ್ಲಿ ಕೆಲಸ ಮಾಡುತ್ತಾರೆ. ಇವರಲ್ಲಿ ಕೆಲವರ ಸಂಬಳ ತಿಂಗಳಿಗೆ 8-10 ಸಾವಿರ ರೂಪಾಯಿ ಇದ್ದರೆ, ಮೇಲುಸ್ತುವಾರಿ ನೋಡಿಕೊಳ್ಳುವವರಿಗೆ 14 ಸಾವಿರ ರೂಪಾಯಿವರೆಗೆ ಸಂಬಳ ಇದೆ.

“ಇವರು ಯಾರಿಗೂ ಸುಮಾರು 4 ತಿಂಗಳಿನಿಂದ ಸಂಬಳವಾಗಿಲ್ಲ,” ಎನ್ನುತ್ತಾರೆ ಗುಜರಾತ್‌ ಸಿಐಟಿಯು ಪ್ರತಿನಿಧಿ ಅರುಣ್‌ ಮೆಹ್ತಾ.

‘ನ್ಯೂಸ್‌ಕ್ಲಿಕ್‌’ಗೆ ಪ್ರತಿಕ್ರಿಯೆ ನೀಡಿರುವ ಅವರು ಈಗಾಗಲೇ ಸಿಬ್ಬಂದಿಗಳು ಸರಕಾರದ ಗಮನ ಸೆಳೆಯಲು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಆದರೆ ಅವರೆಲ್ಲರೂ ಗುತ್ತಿಗೆ ಸಿಬ್ಬಂದಿಗಳಾಗಿರುವುದರಿಂದ ಹೆಚ್ಚು ಆಕ್ರಮಣಕಾರಿ ಪ್ರತಿಭಟನೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ವಿವರಿಸುತ್ತಾರೆ ಅವರು.

ಒಂದು ಕಡೆ ಸರಕಾರ ಪ್ರತಿಮೆಯಿಂದ ಭಾರಿ ಲಾಭವಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. ಇನ್ನೊಂದು ಕಡೆಯಲ್ಲಿ ಸಿಬ್ಬಂದಿಗಳಿಗೆ ಸಂಬಳ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾರೆ ಅವರು.

ಈ ಹಿಂದೆ ಸಂಸತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಕೆಜೆ ಅಲ್ಫೋನ್ಸ್‌, ನವೆಂಬರ್ 2018ರಿಂದ ಜನವರಿ 2019ರ ಅವಧಿಯಲ್ಲಿ ಏಕತಾ ಪ್ರತಿಮೆಗೆ 19.47 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎಂದು ಹೇಳಿದ್ದರು. ಆದರೆ ಇಷ್ಟೊಂದು ಆದಾಯ ಇದ್ದೂ ಸಿಬ್ಬಂದಿಗಳಿಗೆ ವೇತನ ನೀಡದಿರುವುದೇ ಅಚ್ಚರಿ ಹುಟ್ಟಿಸುತ್ತದೆ.

ಬಿಎಸ್‌ಎನ್‌ಎಲ್‌ ಸಿಬ್ಬಂದಿಗಳಿಗೂ ಸಂಬಳವಿಲ್ಲ!

ಇನ್ನೊಂದು ಕಡೆ ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌ ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡಲಾಗದೆ ಒದ್ದಾಡುತ್ತಿದೆ. ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 1.76 ಲಕ್ಷ ಸಿಬ್ಬಂದಿಗಳಿಗೆ ವೇತನ ಬಾಕಿ ಉಳಿದಿದೆ. ಅರ್ಧ ಮಾರ್ಚ್‌ ತಿಂಗಳು ಕಳೆದರೂ ಇನ್ನೂ ಫೆಬ್ರವರಿಯ ಸಂಬಳವೇ ಸಿಬ್ಬಂದಿಗಳಿಗೆ ಕೈ ತಲುಪಿಲ್ಲ.