samachara
www.samachara.com
 702 ಕಡೆ ನಾಕಾಬಂಧಿ; ನಗದು ಸಾಗಣೆಗೆ ನಿಯಮ: ಫೀಲ್ಡ್‌ಗೆ ಇಳಿದ ಚುನಾವಣಾ ಆಯೋಗ
ಸುದ್ದಿ ಸಾರ

702 ಕಡೆ ನಾಕಾಬಂಧಿ; ನಗದು ಸಾಗಣೆಗೆ ನಿಯಮ: ಫೀಲ್ಡ್‌ಗೆ ಇಳಿದ ಚುನಾವಣಾ ಆಯೋಗ

ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯದಲ್ಲಿ 1,512 ಪ್ಲೇಯಿಂಗ್ ಸ್ಕ್ವಾರ್ಡ್ ಮತ್ತು 1837 ಸ್ಟಾರ್ಟಿಂಗ್ ಸರ್ವಲೆನ್ಸ್ ತಂಡಗಳನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಚುನಾವಣೆಗಾಗಿ ರಾಜ್ಯಾದ್ಯಂತ ಸುಮಾರು 702 ನಾಕಾಬಂಧಿಗಳನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಚುನಾವಣಾ ಪೂರ್ವಸಿದ್ಧತೆ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತಮಾಡಿದ ಅವರು, “ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯದಲ್ಲಿ ನಾಕಾಬಂಧಿಗಳ ಜೊತೆಗೆ 1,512 ಪ್ಲೇಯಿಂಗ್ ಸ್ಕ್ವಾರ್ಡ್ ಮತ್ತು 1837 ಸ್ಟಾರ್ಟಿಂಗ್ ಸರ್ವಲೆನ್ಸ್ ತಂಡಗಳನ್ನು ಸ್ಥಾಪಿಸಲಾಗಿದೆ,” ಎಂದಿದ್ದಾರೆ.

“ವಾಹನ ಮತ್ತು ಲಗೇಜ್‍ಗಳನ್ನು ತಪಾಸಣೆಗೊಳಪಡಿಸಿದಾಗ ಸಾರ್ವಜನಿಕರು ಸಹಕರಿಸಬೇಕು. ಒಂದು ವೇಳೆ ಅಗತ್ಯ ದಾಖಲೆಗಳಿದ್ದರೂ ಅನಗತ್ಯವಾಗಿ ಚೆಕ್‍ಪೋಸ್ಟ್‌ಗಳಲ್ಲಿ ತೊಂದರೆ ನೀಡಿದರೆ, ಅಂತಹ ಪ್ರಕರಣಗಳನ್ನು ಪರಿಶೀಲಿಸಲು ಪ್ರತಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಬಾಧಿತ ಸಾರ್ವಜನಿಕರು ಈ ಸಮಿತಿಗೆ ದೂರು ಸಲ್ಲಿಸಿ ನ್ಯಾಯಪಡೆಯಬಹುದು,” ಎಂದು ಮಾಹಿತಿ ನೀಡಿದ್ದಾರೆ.

“ರಾಜಕೀಯೇತರ ಕಾರ್ಯಕ್ರಮಗಳಾದ ಮದುವೆ, ಹುಟ್ಟುಹಬ್ಬ ಸೇರಿದಂತೆ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಚುನಾವಣಾ ಆಯೋಗದ ಅನುಮತಿಯ ಅಗತ್ಯವಿಲ್ಲ. ರಾಜಕೀಯ ವ್ಯಕ್ತಿಗಳು ಭಾಗವಹಿಸದಿರುವ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ಸಾರ್ವಜನಿಕರು ಆಯೋಜಿಸಬಹುದು. ಆದರೂ, ಸಾರ್ವಜನಿಕರು ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ಮಾದರಿ ನೀತಿ ಸಂಹಿತೆ ಜಾರಿ ದಳದ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ,” ಎಂದು ಅವರು ಸೂಚಿಸಿದ್ದಾರೆ.

ದಾಖಲೆ ಇಲ್ಲದ ಹಣ ಹುಷಾರ್!

ರಾಜಕೀಯ ನಾಯಕರು ಮತದಾರರನ್ನು ಒಲಿಸಲು ಯಾವುದೇ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದರೆ ಅಂಥವರ ವಿರುದ್ಧ ಆಯೋಗವು ಕಾನೂನು ರೀತಿ ಕ್ರಮ ಕೈಗೊಳ್ಳುತ್ತದೆ. ಅಲ್ಲದೆ ದಾಖಲೆಗಳಿಲ್ಲದೆ 50,000ಕ್ಕಿಂತ ಹೆಚ್ಚು ಹಣವನ್ನು ಪ್ರಯಾಣದ ವೇಳೆ ಸಾರ್ವಜನಿಕರು ತಮ್ಮ ಬಳಿ ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

10,000ಕ್ಕಿಂತ ಕಡಿಮೆ ಮೌಲ್ಯದ ಉಡುಗೊರೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ದಾಖಲೆಗಳ ಅವಶ್ಯಕತೆ ಇಲ್ಲ. ಆದರೆ, ಇದಕ್ಕಿಂತ ಮೇಲ್ಪಟ್ಟ ಮೊತ್ತವಾಗಿದ್ದರೆ ಸಾರ್ವಜನಿಕರು ಅಧಿಕಾರಿಗಳ ಬಳಿ ಸೂಕ್ತ ದಾಖಲೆಗಳನ್ನು ಹಾಜರು ಪಡಿಸಬೇಕಾಗುತ್ತದೆ.

“ಬ್ಯಾಂಕಿನ ಸೂಚನೆ ಮೇರೆಗೆ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನಗದು ಕೊಂಡೊಯ್ಯುವ ಅಥವಾ ಎಟಿಎಂಗಳಿಗೆ ನಗದು ತುಂಬಿಸಲು ಸಹ ಅಗತ್ಯ ದಾಖಲೆಗಳಿರಬೇಕು,” ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗೋಡೆಬರಹ, ಬ್ಯಾನರ್ ಹಾಗೂ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ 1,91,810 ದೂರಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.