samachara
www.samachara.com
ಕಾಂಗ್ರೆಸ್‌ 20+ ಜೆಡಿಎಸ್‌ 8 = 28; ಕೊನೆಗೂ ಬಗೆ ಹರಿದ ಮೈತ್ರಿ ಪಕ್ಷಗಳ ಸೀಟು ಹಂಚಿಕೆ
ಸುದ್ದಿ ಸಾರ

ಕಾಂಗ್ರೆಸ್‌ 20+ ಜೆಡಿಎಸ್‌ 8 = 28; ಕೊನೆಗೂ ಬಗೆ ಹರಿದ ಮೈತ್ರಿ ಪಕ್ಷಗಳ ಸೀಟು ಹಂಚಿಕೆ

ಕಾಂಗ್ರೆಸ್‌ನ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಕಾಂಗ್ರೆಸ್‌ ಪಟ್ಟು ಹಿಡಿದಿತ್ತಾದರೂ ಕೊನೆ ಕ್ಷಣದಲ್ಲಿ ತುಮಕೂರು ಕ್ಷೇತ್ರವನ್ನು ಪಡೆದುಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದೋಸ್ತಿ ಪಕ್ಷಗಳ ನಡುವೆ ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಸೀಟು ಹಂಚಿಕೆ ಬಿಕ್ಕಟ್ಟು ಕೊನೆಗೂ ಬಗೆಹರಿದಿದೆ. ಅಂತಿಮ ತೀರ್ಮಾನದಂತೆ ಕಾಂಗ್ರೆಸ್ ಇಪ್ಪತ್ತು ಹಾಗೂ ಜೆಡಿಎಸ್‌ಗೆ ಎಂಟು ಕ್ಷೇತ್ರಗಳಲ್ಲಿ ಸ್ಫರ್ಧೆ ಮಾಡಲಿದೆ.

ಮಂಡ್ಯ, ಹಾಸನ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಉತ್ತರ, ವಿಜಯಪುರ ಕ್ಷೇತ್ರಗಳು ಪ್ರಾದೇಶಿಕ ಪಕ್ಷ ಜೆಡಿಎಸ್
ಗೆ ಪಾಲಾಗಿದ್ದರೆ ಉಳಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ ಮಾಡಲಿದೆ.

ಕಾಂಗ್ರೆಸ್‌ನ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವುದಿಲ್ಲ ಎಂದು ಕಾಂಗ್ರೆಸ್‌ ಪಟ್ಟು ಹಿಡಿದಿತ್ತಾದರೂ ಕೊನೆ ಕ್ಷಣದಲ್ಲಿ ತುಮಕೂರು ಕ್ಷೇತ್ರವನ್ನು ಪಡೆದುಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. 2014ರಲ್ಲಿ ನರೇಂದ್ರ ಮೋದಿ ಪ್ರಬಲ ಅಲೆಯ ನಡುವೆಯೂ ಇಲ್ಲಿ ಕಾಂಗ್ರೆಸ್‌ನ ಮುದ್ದಹನುಮೇಗೌಡ ಜಯ ಸಾಧಿಸಿದ್ದರು.

ಇನ್ನು ಚುನಾವಣೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರವೂ ಜೆಡಿಎಸ್‌ ಪಾಲಾಗಿದೆ. ಹೀಗಾಗಿ ಇಲ್ಲಿ ಚಿತ್ರನಟ ದಿ. ಅಂಬರೀಶ್ ಪತ್ನಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ನಿಚ್ಚಳವಾಗಿದೆ.

ಕಳೆದ ಮೂರು ದಿನಗಳಿಂದ ಸೀಟು ಹಂಚಿಕೆ ಸಂಬಂಧ ಬಿರುಸಿನ ಚರ್ಚೆಗಳು ನಡೆಯುತ್ತಿದ್ದವು. ಆದರೆ ಹಂಚಿಕೆ ಸೂತ್ರವೊಂದನ್ನು ಕಂಡುಕೊಳ್ಳಲು ಎರಡೂ ಪಕ್ಷಗಳು ವಿಫಲವಾಗಿದ್ದವು. ಅಂತಿಮವಾಗಿ ಇಂದು ಬುಧವಾರ ಕೇರಳದ ಕೊಚ್ಚಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಭೇಟಿಯಾಗಿ ಸೀಟು ಹಂಚಿಕೆಗೆ ಅಂತಿಮ ಮುದ್ರೆ ಒತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ಧಾರಾಮಯ್ಯ ಮೇಲುಗೈ:

ಎಂದಿನಂತೆ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ.

ಹಳೆ ಮೈಸೂರಿನ ಗಟ್ಟಿ ಕ್ಷೇತ್ರ ಮೈಸೂರಿನ ಮೇಲೆ ಕಣ್ಣಿಟ್ಟಿದ್ದ ಜೆಡಿಎಸ್‌ಗೆ ಸಿದ್ದರಾಮಯ್ಯ ನಿರಾಸೆ ಮೂಡಿಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಬಂದಿರುವ ವಿಜಯ್‌ ಶಂಕರ್‌ ಪರ ಸಿದ್ದರಾಮಯ್ಯ ಬ್ಯಾಟ್‌ ಬೀಸುತ್ತಾ ಬಂದಿದ್ದರು. ಹಾಗಾಗಿ ಅವರೇ ಇಲ್ಲಿ ಕಣಕ್ಕಿಳಿಯುವುದು ಬಹುತೇಕ ನಿಕ್ಕಿಯಾಗಿದೆ.

ಆದರೆ ವಿಜಯಪುರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದೆಂದು ಗೃಹ ಸಚಿವ ಎಂ.ಬಿ. ಪಾಟೀಲ್ ಮಾಡಿಕೊಂಡ ಮನವಿಗೆ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಈ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಬಿದ್ದಿದೆ.

ಇದರ ಜತೆಗೆ ಬಿಜೆಪಿಯ ಭದ್ರಕೋಟೆ ಎನಿಸಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಅಚ್ಚರಿಯ ರೀತಿಯಲ್ಲಿ ತೆನೆಹೊತ್ತ ಮಹಿಳೆಯ ಪಾಲಾಗಿದೆ. ಈ ಕ್ಷೇತ್ರವನ್ನು ಉಳಿಸಿಕೊಂಡು ತಮ್ಮ ಪುತ್ರ ಪ್ರಶಾಂತ್‌ ದೇಶಪಾಂಡೆಯನ್ನು ಕಣಕ್ಕಿಳಿಸಲ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮುಂದಾಗಿದ್ದರು. ಅವರಿಗೆ ಈಗ ನಿರಾಶೆಯಾಗಿದೆ.

ಬಿಜೆಪಿಯ ಮತ್ತೊಂದು ಭದ್ರ ಕೋಟೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಉಳಿದಂತೆ ಮಂಡ್ಯ, ಹಾಸನ, ‌ಶಿವಮೊಗ್ಗ, ಬೆಂಗಳೂರು ಉತ್ತರ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ.

ಇನ್ನು ತಮ್ಮ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯ್ಲಿ, ಕೋಲಾರ ಸಂಸದ ಕೆ.ಎಚ್‌. ಮುನಿಯಪ್ಪ ಯಶಸ್ವಿಯಾಗಿದ್ದಾರೆ.

ಜೆಡಿಎಸ್ ಕ್ಷೇತ್ರಗಳಲ್ಲಿ ಸಂಭವನೀಯ ಅಭ್ಯರ್ಥಿಗಳು ಹೀಗಿದ್ದಾರೆ,

 • ಉತ್ತರ ಕನ್ನಡ: ಅನಂದ್ ಅಸ್ನೋಟಿಕರ್
 • ಉಡುಪಿ – ಚಿಕ್ಕಮಗಳೂರು: ವೈಎಸ್ ವಿ ದತ್ತ
 • ಶಿವಮೊಗ್ಗ: ಮಧು ಬಂಗಾರಪ್ಪ
 • ತುಮಕೂರು: ರಮೇಶ್ ಬಾಬು
 • ಹಾಸನ: ಪ್ರಜ್ವಲ್ ರೇವಣ್ಣ
 • ಮಂಡ್ಯ: ನಿಖಿಲ್ ಕುಮಾರಸ್ವಾಮಿ
 • ಬೆಂಗಳೂರು ಉತ್ತರ: ಹೆಚ್.ಡಿ. ದೇವೇಗೌಡ
 • ವಿಜಯಪುರ -

ಕಾಂಗ್ರೆಸ್ ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯುವ ಸಾಂಭಾವ್ಯ ಅಭ್ಯರ್ಥಿಗಳು ಹೀಗಿದ್ದಾರೆ,

 • ಚಿಕ್ಕೋಡಿ: ಪ್ರಕಾಶ್ ಹುಕ್ಕೇರಿ
 • ಬಾಗಲಕೋಟೆ: ವೀಣಾ ಕಾಶಪ್ಪನವರ್
 • ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ
 • ರಾಯಚೂರು: ಬಿ.ವಿ.ನಾಯಕ್
 • ಬೀದರ್
  : ಈಶ್ವರ್ ಖಂಡ್ರೆ
 • ಬಳ್ಳಾರಿ: ವಿ.ಎಸ್. ಉಗ್ರಪ್ಪ
 • ಚಿತ್ರದುರ್ಗ: ಡಿ.ಬಿ. ಚಂದ್ರಪ್ಪ
 • ಮೈಸೂರು: ಸಿ. ಎಚ್. ವಿಜಯ ಶಂಕರ್
 • ಚಾಮರಾಜನಗರ: ಧ್ರುವನಾರಾಯಣ
 • ಚಿಕ್ಕಬಳ್ಳಾಪುರ: ವೀರಪ್ಪ ಮೊಯ್ಲಿ
 • ಕೋಲಾರ: ಕೆ.ಎಚ್. ಮುನಿಯಪ್ಪ.
 • ಬೆಂಗಳೂರು ಗ್ರಾಮಾಂತರ: ಡಿ.ಕೆ.ಸುರೇಶ್
 • ಬೆಂಗಳೂರು ಕೇಂದ್ರ: ರೋಷನ್ ಬೇಗ್/ರಿಜ್ವನ್ ಅರ್ಷದ್
 • ಬೆಂಗಳೂರು ದಕ್ಷಿಣ: ಪ್ರಿಯಕೃಷ್ಣ

ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದು ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.