samachara
www.samachara.com
ಗುಜರಾತ್‌ ಕಾಂಗ್ರೆಸ್‌ಗೆ ಯುವನಾಯಕ: ‘ಕೈ’ ಹಿಡಿದ ಪಾಟೀದಾರ್‌ ಹಾರ್ದಿಕ್ ಪಟೇಲ್
ಸುದ್ದಿ ಸಾರ

ಗುಜರಾತ್‌ ಕಾಂಗ್ರೆಸ್‌ಗೆ ಯುವನಾಯಕ: ‘ಕೈ’ ಹಿಡಿದ ಪಾಟೀದಾರ್‌ ಹಾರ್ದಿಕ್ ಪಟೇಲ್

ಗುಜರಾತ್‌ನಲ್ಲಿ ಪಾಟೀದಾರ್ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಹಾರ್ದಿಕ್ ಪಟೇಲ್ ಸೇರ್ಪಡೆ ಕಾಂಗ್ರೆಸ್‌ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಗುಜರಾತ್‌ನ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ನಂತರ ಗಾಂಧಿ ನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಮಾತನಾಡಿದ ಹಾರ್ದಿಕ್ ಪಟೇಲ್‌, “ಬ್ರಿಟೀಷರನ್ನು ವಿರೋಧಿಸಿ ಮಹಾತ್ಮಾ ಗಾಂಧಿ ದಂಡಿ ಯಾತ್ರೆ ಕೈಗೊಂಡ ದಿನ ನಾನು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದೇನೆ. ಈ ಹಿಂದೆ ಸುಭಾಷ್ ಚಂದ್ರ ಬೋಸ್, ಪಂಡಿತ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯಂತಹ ನಾಯಕರು ಕಾಂಗ್ರೆಸ್ ಪಕ್ಷದಿಂದ ದೇಶ ಸೇವೆ ಸಲ್ಲಿಸಿ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದ್ದಾರೆ,” ಎಂದು ಸಂತಸ ವ್ಯಕ್ತಪಡಿಸಿದರು.

“ಕಾಂಗ್ರೆಸ್ ಫೆಬ್ರವರಿ 28 ರಂದೇ ಗುಜರಾತ್‌ನ ಗಾಂಧಿನಗರದಲ್ಲಿ ರ್ಯಾಲಿ ಆಯೋಜಿಸಿತ್ತು. ಆದರೆ ಪುಲ್ವಾಮದಲ್ಲಿ ಉಗ್ರರ ದಾಳಿಯ ನಂತರ ಈ ರ್ಯಾಲಿಯನ್ನು ಮಾರ್ಚ್ 12 ಕ್ಕೆ ಮುಂದೂಡಲಾಗಿತ್ತು. ಆದರೆ ಈ ದಾಳಿಯ ನಂತರವೂ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ,” ಎಂದು ಅವರು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದರು.

25 ವರ್ಷದ ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಕಳೆದ ಮೂರು ವರ್ಷಗಳಿಂದ ಗುಜರಾತ್‌ನ ಪಟೇಲ್ ಸಮುದಾಯಕ್ಕೆ ಮೀಸಲಾತಿ ಕೋರಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇವರ ಹೋರಾಟಕ್ಕೆ ಈವರೆಗೆ ಕೇಂದ್ರ ಸರಕಾರ ಮನ್ನಣೆ ನೀಡಿಲ್ಲ. ಹೀಗಾಗಿ ಹಾರ್ದಿಕ್ ಪಟೇಲ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಾಮ್‌ನಗರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಗುಜರಾತ್‌ನಲ್ಲಿ ಪಾಟೀದಾರ್ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಹಾರ್ದಿಕ್ ಪಟೇಲ್ ಸೇರ್ಪಡೆ ಕಾಂಗ್ರೆಸ್‌ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅನಿಲ್ ಅಂಬಾನಿಗೆ ಪೇಪರ್ ವಿಮಾನವೂ ಮಾಡಿದವರಲ್ಲ: ರಾಹುಲ್

ಇದೇ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅನಿಲ್‌ ಅಂಬಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ರಫೇಲ್ ಯುದ್ಧ ವಿಮಾನಗಳ ತಯಾರಿಕ ಕಂಪೆನಿ ಡಸಾಲ್ಟ್‌ ಭಾರತೀಯ ಪಾಲುದಾರನಾಗಿ ಅನಿಲ್ ಅಂಬಾನಿ ಆಯ್ದುಕೊಂಡಿದೆ. ಆದರೆ “ಅನಿಲ್‌ ಅಂಬಾನಿ ತನ್ನ ಜೀವಮಾನದಲ್ಲಿ ಒಂದೇ ಒಂದು ಕಾಗದದ ವಿಮಾನವನ್ನು ತಯಾರಿಸಿದವರಲ್ಲ,” ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದರು.

“36 ರಫೇಲ್ ವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು ಪ್ರಧಾನಿ ನರೇಂದ್ರ ಮೋದಿ ಈ ಭ್ರಷ್ಟಾಚಾರದ ಮೊದಲ ಆರೋಪಿಯಾಗಿದ್ದಾರೆ. ಮೋದಿ ಭಾರತೀಯ ವಾಯುಪಡೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ 30,000 ಕೋಟಿ ಹಣವನ್ನು ವಾಯುಪಡೆಯ ಪೈಲಟ್‌ಗಳ ಜೇಬಿನಿಂದಲೇ ಕದ್ದು ಅನಿಲ್‌ ಅಂಬಾನಿಗೆ ನೀಡಿದ್ದೇನೆ ಎಂದು ಅವರು ಎಲ್ಲೂ ಹೇಳುವುದಿಲ್ಲ” ಎಂದು ಅವರು ವ್ಯಂಗ್ಯವಾಡಿದರು.

“ ಮೋಧಿ ಫ್ರಾನ್ಸ್‌ಗೆ ತೆರಳುವಾಗ ತಮ್ಮ ಜೊತೆಗೆ ಅನಿಲ್ ಅಂಬಾನಿಯನ್ನೂ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ಅವರೇ ಫ್ರಾನ್ಸ್ ಅಧ್ಯಕ್ಷರಿಗೆ ಖುದ್ದಾಗಿ ಹೇಳಿ ಈ ಒಪ್ಪಂದವನ್ನು ಅನಿಲ್ ಅಂಬಾನಿಗೆ ಕೊಡಿಸಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಮೊದಲ ಭಾಷಣದಲ್ಲೇ ಮೋದಿ ಟಾರ್ಗೆಟ್‌ ಮಾಡಿದ ಪ್ರಿಯಾಂಕ:

ಇನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ ನಂತರ ತಾವು ಮಾಡುತ್ತಿರುವ ಮೊದಲ ಸಾರ್ವಜನಿಕ ಭಾಷಣದಲ್ಲೇ ಪ್ರಿಯಾಂಕ ವಾದ್ರಾ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಏಪ್ರಿಲ್-ಮೇ ನಡೆಯಲಿರುವ ಲೋಕಸಭಾ ಚುನಾವಣೆ ಭಾರತದ ಮತ್ತೊಂದು ಸ್ವಾತಂತ್ರ್ಯ ಹೋರಾಟ ಎಂದು ಬಣ್ಣಿಸಿದ ಅವರು, “ನಿಮಗೆ ಉದ್ಯೋಗದ ಭರವಸೆ ನೀಡಿದವರು ಯಾರು? ನಿಮ್ಮ ಖಾತೆಗೆ 15 ಲಕ್ಷ ಹಣ ಹಾಕುವ ಭರವಸೆ ನೀಡಿದವರು ಯಾರು? ದೇಶದಲ್ಲಿ ಮಹಿಳೆಯರ ರಕ್ಷಣೆ ಪರಿಸ್ಥಿತಿ ಈಗ ಹೇಗಿದೆ? ಇವನ್ನೆಲ್ಲ ಯೋಚಿಸಿ ಮತ ಚಲಾಯಿಸಿ,” ಎಂದು ಮೋದಿ ಹೆಸರು ಹೇಳದೆ ಅವರು ಪ್ರಧಾನಿಯನ್ನು ಟೀಕಿಸಿದರು.

ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬ ಸ್ಪರ್ಧಿಸುವ ಅಮೇಠಿ ಹಾಗೂ ರಾಯ್ ಬರೇಲಿ ಕ್ಷೇತ್ರದ ಹೊರಗೆ ಪ್ರಿಯಾಂಕ ಗಾಂಧಿ ಮಾಡಿದ ಮೊದಲ ಸಾರ್ವಜನಿಕ ಭಾಷಣ ಇದಾಗಿದೆ. ಹೀಗೆ ತಮ್ಮ ಮೊದಲ ಭಾಷಣದಲ್ಲೇ ಪ್ರಧಾನಿಯನ್ನು ಗುರಿಯಾಗಿಸಿ ದಾಳಿ ನಡೆಸಿರುವ ಪ್ರಿಯಾಂಕ ವಾದ್ರಾ ಚುನಾವಣಾ ಪ್ರಚಾರಕ್ಕೆ ಭರ್ಜರಿ ಆರಂಭ ನೀಡಿದ್ದಾರೆ.