samachara
www.samachara.com
 ಗುಜರಾತ್‌ನಲ್ಲೀಗ ‘ಆಪರೇಷನ್‌ ಕಮಲ’ದ ಸೀಸನ್; 4  ದಿನದಲ್ಲಿ 3 ಕಾಂಗ್ರೆಸ್‌ ಶಾಸಕರ ರಾಜೀನಾಮೆ
ಸುದ್ದಿ ಸಾರ

ಗುಜರಾತ್‌ನಲ್ಲೀಗ ‘ಆಪರೇಷನ್‌ ಕಮಲ’ದ ಸೀಸನ್; 4  ದಿನದಲ್ಲಿ 3 ಕಾಂಗ್ರೆಸ್‌ ಶಾಸಕರ ರಾಜೀನಾಮೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ತನ್ನ ಕೈ ಬಲ ಪಡಿಸಲು ಕಾಂಗ್ರೆಸ್‌ ಸಜ್ಜಾಗಿದ್ದರೆ, ಪಕ್ಷದ ಶಾಸಕರು ಮಾತ್ರ ಸರಣಿಯಾಗಿ ರಾಜೀನಾಮೆ ಕೊಟ್ಟು ಹೊರ ನಡೆಯುತ್ತಿದ್ದಾರೆ. ಇದು ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಗುಜರಾತ್‌ನ ಜಾಮ್ ನಗರ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಲ್ಲಭ್ ಧರಾವಿಯಾ ಸೋಮವಾರ ತಮ್ಮ ಶಾಸಕ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಈ ಮೂಲಕ ಕಳೆದ ಒಂದು ವಾರದ ಅಂತರದಲ್ಲಿ ಕಾಂಗ್ರೆಸ್‌ನ 4 ಜನ ಶಾಸಕರು ಬಿಜೆಪಿ ಸೇರ್ಪಡೆಯಾದಂತಾಗಿದೆ.

ಈ ಬೆಳವಣಿಗೆಯೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯಬಲ 71 ಸ್ಥಾನಗಳಿಗೆ ಇಳಿಕೆಯಾಗಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅದಾದ ನಂತರ ಇಬ್ಬರು ಕಾಂಗ್ರೆಸ್‌ ಹಾರಿದ್ದರು. ಇದೀಗ ಮತ್ತೆ ನಾಲ್ವರು ಪಕ್ಷ ತೊರೆದಿದ್ದು ಒಟ್ಟು 6 ಜನರ ಬಿಜೆಪಿ ಆಪರೇಷನ್‌ಗೆ ಬಲಿಯಾದಂತಾಗಿದೆ.

ಆಪರೇಷನ್‌ ಕಮಲ:

ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರುವ ಬೆಳವಣಿಗೆಗಳು 2018ರ ಜುಲೈನಲ್ಲಿ ಆರಂಭಗೊಂಡಿದ್ದವು. ಮೊದಲಿಗೆ ಹಿರಿಯ ನಾಯಕ ಕುನ್ವರ್ಜೀ ಬವಾಲಿಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷಾಂತರ ಪರ್ವಕ್ಕೆ ಚಾಲನೆ ನೀಡಿದ್ದರು. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದ ಬಿಜೆಪಿ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿ ಮತ್ತಷ್ಟು ಕಾಂಗ್ರೆಸ್‌ ಶಾಸಕರನ್ನು ಪಕ್ಷಕ್ಕೆ ಆಹ್ವಾನಿಸಿತ್ತು. ಬಳಿಕ ಕಳೆದ ತಿಂಗಳು ಮೆಹ್ಸಾನ ಶಾಸಕಿ ಆಶಾ ಪಟೇಲ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಬಿಜೆಪಿಗೆ ಜಿಗಿದಿದ್ದರು.

ಇವರ ಬೆನ್ನಿಗೆ ಕಳೆದ ಶುಕ್ರವಾರ ಮನವದರ್ ಕ್ಷೇತ್ರದ ಶಾಸಕ ಜವಾಹರ್ ಚಾವ್ಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಮರುದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇವರ ಬೆನ್ನಿಗೆ ಮೋರ್ಬಿ ಜಿಲ್ಲೆಯ ಧರಂಗಧ್ರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪರ್ಶೋತ್ತಮ್‌ ಸಬರಿಯಾ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಇಂದು ವಲ್ಲಭ್ ಧರಾವಿಯಾ ಜತೆಗೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇವರ ನಡುವೆ ಕಾಂಗ್ರೆಸ್‌ ಶಾಸಕ ಭಗವಾನ್‌ ಬರಾದ್‌ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗುವುದರೊಂದಿಗೆ ಶಾಸಕ ಸ್ಥಾನ ಕಳೆದುಕೊಂಡಿದ್ದರು. ಹೀಗೆ ಒಟ್ಟು ನಾಲ್ವರು ಶಾಸಕರನ್ನು ವಾರಗಳ ಅಂತರದಲ್ಲಿ ಕಾಂಗ್ರೆಸ್‌ ಕಳೆದುಕೊಂಡಿದೆ. ಹೀಗೆ ಸದ್ಯ ಗುಜರಾತ್‌ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕರ ಬಲ 71ಕ್ಕೆ ಕುಸಿತವಾಗಿದೆ.

ಶಕ್ತಿ ಪ್ರದರ್ಶನಕ್ಕೂ ಮುನ್ನ ಕಾಂಗ್ರೆಸ್‌ಗೆ ಹಿನ್ನಡೆ:

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ತನ್ನ ಬಲ ಪ್ರದರ್ಶನಕ್ಕೆ ಕಾಂಗ್ರೆಸ್‌ ಮುಂದಾಗಿದ್ದರೆ ಅದರ ನಡುವೆ ನಡೆಯುತ್ತಿರುವ ಈ ರಾಜೀನಾಮೆ ಪರ್ವ ಕೈ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ.

ಮಂಗಳವಾರ ಗಾಂಧಿನಗರದಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕಾರಿ ಸಮಿತಿ ಸಭೆ ಹಮ್ಮಿಕೊಂಡಿದೆ. 1961ರ ನಂತರ 58 ವರ್ಷ ಬಿಟ್ಟು ಗುಜರಾತ್‌ನಲ್ಲಿ ನಡೆಯುತ್ತಿರುವ ಮೊದಲ ಕಾರ್ಯಕಾರಿ ಸಮಿತಿ ಸಭೆ ಇದಾಗಿದೆ. ಈ ಸಭೆ ವೇಳೆ ಪಾಟೀದಾರ್‌ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ.

ಸಭೆ ಬಳಿಕ ಗಾಂಧಿನಗರದ ಅದಲಾಜ್‌ ನಗರದಲ್ಲಿ ಬೃಹತ್‌ ರ್ಯಾಲಿ ನಡೆಯಲಿದ್ದು ಇದರಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಜತೆಗೆ ಸಹೋದರಿ ಪ್ರಿಯಾಂಕ ವಾದ್ರಾ ಸಹ ಭಾಗವಹಿಸಲಿದ್ದಾರೆ. ಪ್ರಿಯಾಂಕ ವಾದ್ರಾ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದ ನಂತರ ಅವರು ಗುಜರಾತ್‌ನಲ್ಲಿ ನಡೆಸುತ್ತಿರುವ ಮೊದಲ ರ್ಯಾಲಿ ಇದಾಗಿದೆ.

ಹೀಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ತನ್ನ ಕೈ ಬಲ ಪಡಿಸಲು ಕಾಂಗ್ರೆಸ್‌ ಸಜ್ಜಾಗಿದ್ದರೆ, ಪಕ್ಷದ ಶಾಸಕರು ಮಾತ್ರ ಸರಣಿಯಾಗಿ ರಾಜೀನಾಮೆ ಕೊಟ್ಟು ಹೊರ ನಡೆಯುತ್ತಿದ್ದಾರೆ. ಇದು ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.