samachara
www.samachara.com
ಮಹಿಳಾ ಮೀಸಲಾತಿ ದಾಳ ಉರುಳಿಸಿದ ನವೀನ್‌ ಪಟ್ನಾಯಕ್‌, ಇಕ್ಕಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್‌
ಸುದ್ದಿ ಸಾರ

ಮಹಿಳಾ ಮೀಸಲಾತಿ ದಾಳ ಉರುಳಿಸಿದ ನವೀನ್‌ ಪಟ್ನಾಯಕ್‌, ಇಕ್ಕಟ್ಟಿನಲ್ಲಿ ಬಿಜೆಪಿ-ಕಾಂಗ್ರೆಸ್‌

ನವೀನ್‌ ಪಟ್ನಾಯಕ್‌ ನಿರ್ಧಾರದ ಪ್ರಕಾರ ಇದೀಗ ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಬಿಜೆಡಿ ಕಣಕ್ಕಿಳಿಸಬೇಕಾಗಿದೆ.

ಲೋಕಸಭಾ ಚುನಾವಣಾ ಅಖಾಡದಲ್ಲಿ ಯಾರೂ ಊಹಿಸದ ‘ಮಾದರಿ ನಡೆ’ ಇಟ್ಟಿರುವ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ವಿಪಕ್ಷಗಳನ್ನು ಇಕ್ಕಟ್ಟಿಗೆ ತಳ್ಳಿದ್ದಾರೆ. ಸರಕಾರಿ ನಿಯಮಗಳಾಚೆಗೆ ಮಹಿಳೆಯರಿಗೆ ಶೇಕಡಾ 33 ಲೋಕಸಭಾ ಸ್ಥಾನಗಳನ್ನು ಮೀಸಲಿಡುವ ಅವರ ಏಕಪಕ್ಷೀಯ ನಿರ್ಧಾರದಿಂದ ಉಳಿದ ಪಕ್ಷಗಳೀಗ ದಾರಿ ಕಾಣದಂತಾಗಿವೆ.

ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಒಡಿಶಾದ 21 ಸ್ಥಾನಗಳಲ್ಲಿ ಶೇಕಡಾ 33 ಸ್ಥಾನಗಳನ್ನು ಬಿಜು ಜನತಾ ದಳ (ಬಿಜೆಡಿ) ಮಹಿಳೆಯರಿಗೆ ಮೀಸಲಿಡಲಿದೆ ಎಂದು ನವೀನ್‌ ಪಟ್ನಾಯಕ್‌ ಭಾನುವಾರ ಘೋಷಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ‘ದೇಶದ ರಾಜಕೀಯ ಇತಿಹಾಸದಲ್ಲಿ ಮಹಿಳಾ ಸಬಲೀಕರಣದ ಹೊಸ ಮಾನದಂಡ’ ಎಂದು ಅವರು ಕರೆದಿದ್ದಾರೆ.

ಕೇಂದ್ರಪಾರದಲ್ಲಿ ಭಾನುವಾರ ತಮ್ಮ ನಿರ್ಧಾರ ಘೋಷಿಸಿರುವ ಅವರು, "ಭಾರತ ಜಾಗತಿಕವಾಗಿ ಮುನ್ನಡೆ ಸಾಧಿಸಬೇಕಾದರೆ, ಅಮೆರಿಕಾ ಮತ್ತು ಚೀನಾದಂತ ದೇಶಗಳ ಜತೆ ಸ್ಪರ್ಧೆಗಿಳಿದು ಮುಂದುವರಿದ ದೇಶವಾಗಬೇಕಾದರೆ ಅದಕ್ಕಿರುವುದು ಒಂದೇ ದಾರಿ; ಮಹಿಳೆಯರ ಕಲ್ಯಾಣ," ಎಂದಿದ್ದಾರೆ.

ಅವರದೇ ನಿರ್ಧಾರದ ಪ್ರಕಾರ ಇದೀಗ ಒಡಿಶಾದ 21 ಲೋಕಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಬಿಜೆಡಿ ಕಣಕ್ಕಿಳಿಸಬೇಕಾಗಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 21 ರಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಡಿ ಗೆಲುವು ಸಾಧಿಸಿತ್ತು. ಮತ್ತು ಇದರಲ್ಲಿ ಮೂವರು ಮಹಿಳೆಯರಿದ್ದರು.

ಹಾಗಂತ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಪ್ರಾತಿನಿಧ್ಯ ನೀಡಲಿದ್ದೇವೆ ಎಂಬ ಮಾತನ್ನು ಪಟ್ನಾಯಕ್‌ ಹೇಳಿಲ್ಲ. ಸದ್ಯ 147 ಸದಸ್ಯಬಲದ ಒಡಿಶಾ ವಿಧಾನಸಭೆಯಲ್ಲಿ ಕೇವಲ 12 ಮಹಿಳಾ ಶಾಸಕಿಯರಿದ್ದಾರೆ. ಲೋಕಸಭೆ ಚುನಾವಣೆ ಜತೆಗೆ ಇಲ್ಲಿನ ವಿಧಾನಸಭೆಗೂ ಚುನಾವಣೆ ನಡೆಯಲಿದೆ.

ಕಳೆದ ವರ್ಷ ವಿಧಾನ ಮಂಡಲ ಮತ್ತು ಸಂಸತ್‌ನಲ್ಲಿ ಮಹಿಳೆಯರಿಗೆ ಶೇಕಡಾ 33 ಮೀಸಲಾತಿ ನೀಡುವ ವಿಧೇಯಕಕ್ಕೆ ಒಡಿಶಾ ವಿಧಾನಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ನೀಡಲಾಗಿತ್ತು. ಈ ಸಂಬಂಧ ತಾನು ಎಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಿದ್ದೆ ಎಂದು ನವೀನ್‌ ಪಟ್ನಾಯಕ್‌ ತಿಳಿಸಿದ್ದಾರೆ.

ಒಂದೊಮ್ಮೆ ರಾಷ್ಟ್ರೀಯ ಪಕ್ಷಗಳು ತಮ್ಮ ಮಾತಿಗೆ ಬದ್ಧರಾಗಿದ್ದಲ್ಲಿ ತುರ್ತಾಗಿ ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಎಂದು ನವೀನ್‌ ಪಟ್ನಾಯಕ್‌ ಒತ್ತಾಯಿಸಿದ್ದಾರೆ. ಈ ಹಿಂದೆ ನನ್ನ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಮಹಿಳೆಯರಿಗೆ ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಸರಕಾರಿ ನೌಕರಿಗಳಲ್ಲಿ ಶೇಕಡಾ 33ರಷ್ಟು ಮೀಸಲಾತಿ ಜಾರಿಗೆ ತಂದಿದ್ದರು ಎಂಬುದಾಗಿಯೂ ಅವರು ಸ್ಮರಿಸಿದ್ದಾರೆ.

ಮುಂದೆ 2012ರಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿ ಪ್ರಮಾಣವನ್ನು ಶೇಕಡಾ 50ಕ್ಕೆ ಹೆಚ್ಚಿಸಲಾಗಿತ್ತು.

ಆದರೆ, ಪಟ್ನಾಯಕ್‌ ತೀರ್ಮಾನವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಚುನಾವಣಾ ಗಿಮಿಕ್‌ ಎಂದು ಬಣ್ಣಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್‌, ಮಹಿಳೆಯರಿಗೆ ಮೀಸಲಾತಿ ನೀಡುವ ತೀರ್ಮಾನ ಸ್ವಾಗತಾರ್ಹ. ಆದರೆ ಸಮಯ ಸಂದರ್ಭ ನೋಡಿದರೆ ಇದೊಂದು ಹುಸಿ ಭರವಸೆಯಂತೆ ಕಾಣಿಸುತ್ತಿದೆ ಎಂದು ತಿಳಿಸಿದ್ದಾರೆ. ಇದೇ ರೀತಿಯ ಮಾತುಗಳನ್ನು ಕಾಂಗ್ರೆಸ್‌ ನಾಯಕರೂ ಹೇಳಿದ್ದಾರೆ.

ಆದರೆ ಬಿಜೆಡಿಯನ್ನು ವಿರೋಧಿಸುತ್ತಲೇ ಮಹಿಳೆಯರನ್ನು ಓಲೈಸಬೇಕಾದ ಅನಿವಾರ್ಯತೆ ಈಗ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಸೃಷ್ಟಿಯಾಗಿದೆ. ಹಾಗಂತ ಮೀಸಲಾತಿ ನೀಡುವ ಪರಿಸ್ಥಿಯಲ್ಲಿ ಎರಡೂ ಪಕ್ಷಗಳಿಲ್ಲ. ಜತೆಗೆ ಬಿಜೆಡಿ ಒಡಿಶಾದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ಒಂದೊಮ್ಮೆ ಬಿಜೆಪಿ ಮತ್ತು ಕಾಂಗ್ರೆಸ್‌ ಮೀಸಲಾತಿ ನೀಡಿದರೆ ದೇಶವ್ಯಾಪಿ ನೀಡಬೇಕಾಗುತ್ತದೆ. ಹೀಗಾಗಿ ನವೀನ್‌ ಪಟ್ನಾಯಕ್‌ ತೀರ್ಮಾನವೀಗ ಎರಡೂ ಪಕ್ಷಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.