samachara
www.samachara.com
7 ಹಂತಗಳಲ್ಲಿ ಲೋಕ ಸಮರ; ಕಾಶ್ಮೀರದಲ್ಲಿಲ್ಲ ವಿಧಾನಸಭೆ ಚುನಾವಣೆ
ಸುದ್ದಿ ಸಾರ

7 ಹಂತಗಳಲ್ಲಿ ಲೋಕ ಸಮರ; ಕಾಶ್ಮೀರದಲ್ಲಿಲ್ಲ ವಿಧಾನಸಭೆ ಚುನಾವಣೆ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ತಲಾ 14ರಂತೆ ಏ.18 ಮತ್ತು 23ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾಘಟಬಂಧನ ನಡುವಿನ ಜಿದ್ದಾಜಿದ್ದಿಯೆಂದೇ ಬಿಂಬಿತವಾಗಿರುವ 17ನೇ ಲೋಕಸಭಾ ಚುನಾವಣೆ ಏ.11ರಿಂದ ಮೇ.19ರವರೆಗೆ 7 ಹಂತದಲ್ಲಿ ನಡೆಯಲಿದ್ದು, ಮೇ. 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ತಲಾ 14ರಂತೆ ಏ.18 ಮತ್ತು 23ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ಲೋಕಸಭೆ ಚುನಾವಣೆಯ ಜತೆಗೆ ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆಗಳಿಗೂ ಚುನಾವಣೆ ನಡೆಯಲಿದೆ. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುತ್ತಿಲ್ಲ.

ಭಾನುವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ಆಯುಕ್ತರಾದ ಅಶೋಕ್‌ ಲಾವಾಸ ಮತ್ತು ಸುಶೀಲ್ ಚಂದ್ರ ಈ ಮಾಹಿತಿ ನೀಡಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯೊಂದಿಗೆ ಭಾನುವಾರದಿಂದಲೇ ನೀತಿ ಸಂಹಿತೆ ದೇಶದಾದ್ಯಂತ ಜಾರಿಯಾಗಿದ್ದು, ಇನ್ನು ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತದಾರರಿಗೆ ಆಮಿಷ ಒಡ್ಡುವಂತಹ ಯಾವುದೇ ರೀತಿಯ ಆಶ್ವಾಸನೆಗಳನ್ನು ನೀಡುವಂತಿಲ್ಲ.

ದೇಶದ 29 ರಾಜ್ಯ, 6 ಕೇಂದ್ರಾಡಳಿತ ಪ್ರದೇಶ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸೇರಿದಂತೆ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 90 ಕೋಟಿ ಜನರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಈ ಬಾರಿ ಸುಮಾರು 8.6 ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇದರಲ್ಲಿ 18 ರಿಂದ 19 ವರ್ಷದೊಳಗಿನ ಸುಮಾರು 1.5 ಕೋಟಿ ಮತದಾರರಿದ್ದಾರೆ ಎಂದು ಸುನೀಲ್‌ ಅರೋರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಘೋಷಿಸಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ.
ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆ ಚುನಾವಣೆಯ ದಿನಾಂಕ ಘೋಷಿಸಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ.
/ಹಿಂದೂಸ್ಥಾನ್‌ ಟೈಮ್ಸ್‌

ಮತದಾನಕ್ಕಾಗಿ ದೇಶಾದ್ಯಂತ ಒಟ್ಟು 10 ಲಕ್ಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಮತದಾನಕ್ಕೆ ಅನುಕೂಲವಾಗಲೆಂದು ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನೂ ಅಳವಡಿಸಲಾಗುತ್ತಿದೆ. ಎಲ್ಲಾ ಮತಯಂತ್ರಗಳ ಜತೆ ವಿವಿಪ್ಯಾಟ್‌ ಇರಲಿದ್ದು ಮತದಾರರು ತಮ್ಮ ಮತಗಳ ಖಾತರಿಯನ್ನು ಪಡೆದುಕೊಳ್ಳಬಹುದಾಗಿದೆ. ಜತೆಗೆ ನೋಟಾ ಮತ ಚಲಾವಣೆಗೂ ಅವಕಾಶ ಇರಲಿದೆ.

ಎಂದಿನಂತೆ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರಚಾರಕ್ಕೆ ಧ್ವನಿವರ್ಧಕಗಳ ಬಳಕೆ ನಿಷೇಧಿಸಲಾಗಿದೆ. ಈ ಬಾರಿ ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯಕ್ತರು ಮಾಹಿತಿ ನೀಡಿದ್ದಾರೆ.

ಮೊಬೈಲ್‍ನಲ್ಲಿ ದೂರು ಸಲ್ಲಿಕೆ:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ಮೊಬೈಲ್‍ ಆಧಾರಿತ ದೂರು ಸಲ್ಲಿಸುವ ವ್ಯವಸ್ಥೆಯನ್ನು ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಬಳಕೆಗೆ ತರಲಾಗುತ್ತಿದೆ. ಹಣ ಹಂಚಿಕೆ ಸೇರಿದಂತೆ ವಿವಿಧ ದೂರುಗಳನ್ನು ಟೋಲ್‌ ಫ್ರೀ ಸಂಖ್ಯೆ 1950ಗೆ ಕರೆ ಮಾಡಿ ನೀಡಬಹುದಾಗಿದೆ. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಏಳು ಹಂತಗಳು:

 • ಹಂತ 1: ಏ. 1 - 91 ಲೋಕಸಭಾ ಕ್ಷೇತ್ರ (20 ರಾಜ್ಯ)
 • ಹಂತ 2: ಏ. 18 - 97 ಲೋಕಸಭಾ ಕ್ಷೇತ್ರ (13 ರಾಜ್ಯ)
 • ಹಂತ 3: ಏ. 23 - 115 ಲೋಕಸಭಾ ಕ್ಷೇತ್ರ (14 ರಾಜ್ಯ)
 • ಹಂತ 4: ಏ. 29 - 71 ಲೋಕಸಭಾ ಕ್ಷೇತ್ರ (9 ರಾಜ್ಯ)
 • ಹಂತ 5: ಮೇ. 6 - 51 ಲೋಕಸಭಾ ಕ್ಷೇತ್ರ (7 ರಾಜ್ಯ)
 • ಹಂತ 6: ಮೇ. 12 - 59 ಲೋಕಸಭಾ ಕ್ಷೇತ್ರ (7 ರಾಜ್ಯ)
 • ಹಂತ 7: ಮೇ. 9- 59 ಲೋಕಸಭಾ ಕ್ಷೇತ್ರ (8 ರಾಜ್ಯ)

ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ನಾಗಾಲ್ಯಾಂಡ್, ಮಿಜೋರಾಂ, ಪಂಜಾಬ್, ಸಿಕ್ಕಿಂ, ಕೇರಳ, ತಮಿಳುನಾಡು, ಉತ್ತರಾಖಂಡ್, ಅಂಡಮಾನ್ ನಿಕೋಬಾರ್, ದಾದರ್ ಅಂಡ್ ನಗರ ಹಾವೇಲಿ, ದಿಯು ಮತ್ತು ದಮನ್, ಲಕ್ಷದ್ವೀಪ, ದೆಹಲಿ, ಪಾಂಡಿಚೇರಿ ಮತ್ತು ಚಂಡಿಗಢದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಕರ್ನಾಟಕ, ಮಣಿಪುರ, ರಾಜಸ್ಥಾನ್, ತ್ರಿಪುರಗಳಲ್ಲಿ 2 ಹಂತದಲ್ಲಿ ಚುನಾವಣೆ ನಡೆದರೆ, ಅಸ್ಸಾಂ ಮತ್ತು ಛತ್ತೀಸ್‍ಗಢದಲ್ಲಿ 3 ಹಂತಗಳಲ್ಲಿ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಒಡಿಶಾದಲ್ಲಿ 4 ಹಂತಗಳಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ 5 ಹಂತಗಳಲ್ಲಿ, ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಒಟ್ಟು ಕ್ಷೇತ್ರಗಳು -543

 • ಆಂಧ್ರ ಪ್ರದೇಶ - 25
 • ಅರುಣಾಚಲ ಪ್ರದೇಶ - 02
 • ಅಸ್ಸಾಂ - 14
 • ಬಿಹಾರ - 40
 • ಛತ್ತೀಸ್‍ಘಡ - 11
 • ಗೋವಾ - 02
 • ಗುಜರಾತ್ - 26
 • ಹರಿಯಾಣ - 10
 • ಹಿಮಾಚಲ ಪ್ರದೇಶ - 04
 • ಜಮ್ಮು ಮತ್ತು ಕಾಶ್ಮೀರ - 06
 • ಜಾರ್ಖಂಡ್ - 14
 • ಕರ್ನಾಟಕ - 28
 • ಕೇರಳ - 20
 • ಮಹಾರಾಷ್ಟ್ರ - 48
 • ಮೇಘಾಲಯ - 02
 • ಮಿಜೋರಾಂ - 01
 • ನಾಗಲ್ಯಾಂಡ್ - 01
 • ಒಡಿಶಾ - 21
 • ಪಂಜಾಬ್ - 13
 • ರಾಜಸ್ಥಾನ - 25
 • ಸಿಕ್ಕಿಂ - 01
 • ತಮಿಳುನಾಡು - 39
 • ತೆಲಂಗಾಣ - 17
 • ತ್ರಿಪುರ - 02
 • ಉತ್ತರ ಪ್ರದೇಶ - 80
 • ಉತ್ತರಾಖಂಡ್ - 05
 • ಪಶ್ಚಿಮ ಬಂಗಾಳ - 42
 • ಅಂಡಮಾನ್ ಮತ್ತು ನಿಕೋಬಾರ್ - 1
 • ದಿಯು ಮತ್ತು ದಮನ್ - 1
 • ಲಕ್ಷ್ಯದ್ವೀಪ - 1

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ:

ಕರ್ನಾಟಕದ ದೋಸ್ತಿ ಸರ್ಕಾರ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿರುವ 28 ಲೋಕಸಭೆ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ.

ಏಪ್ರಿಲ್18 ರಂದು ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಿಗೆ ಹಾಗೂ ಏಪ್ರಿಲ್ 23ರಂದು ಮೂರನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೊದಲ ಹಂತದ ಚುನಾವಣೆಗೆ ಮಾರ್ಚ್‌ 19ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮಾರ್ಚ್‌ 26ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 27ರಂದು ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಮಾರ್ಚ್‌ 29ರಂದು ಕೊನೆಯ ದಿನವಾಗಿದೆ. ಏಪ್ರಿಲ್‌ 18ರಂದು ಮತದಾನ ನಡೆಯಲಿದೆ.

ಎರಡನೇ ಹಂತಕ್ಕೆ ಮಾರ್ಚ್‌ 28ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್‌ 4ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 5ರಂದು ಪರಿಶೀಲನೆ, 8ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ. ಏಪ್ರಿಲ್‌ 23ರಂದು ಮತದಾನ ನಡೆಯಲಿದೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ, ಜೆಡಿಎಸ್‌ 2 ಮತ್ತು ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮುಂದೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕೈಯಲ್ಲಿದ್ದ ಬಳ್ಳಾರಿ ಕಾಂಗ್ರೆಸ್‌ ಪಾಲಾಗಿತ್ತು. ಹೀಗಾಗಿ ಬಿಜೆಪಿ ಬಲ 16ಕ್ಕೆ ಕುಸಿದರೆ ಕಾಂಗ್ರೆಸ್‌ ಬಲ 10 ಸ್ಥಾನಗಳಿಗೆ ಏರಿಕೆಯಾಗಿತ್ತು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗಿಲ್ಲ ಚುನಾವಣೆ:

ಲೋಕಸಭೆ ಚುನಾವಣೆಯ ಜತೆಗೆ ನಾಲ್ಕು ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಒಡಿಶಾ, ಆಂಧ್ರ ಪ್ರದೇಶ, ಸಿಕ್ಕಿ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಾಗಿವೆ.

ಆದರೆ ಅಚ್ಚರಿಯ ರೀತಿಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುತ್ತಿಲ್ಲ. ಸದ್ಯ ಇಲ್ಲಿ ರಾಜ್ಯಪಾಲರ ಆಳ್ವಿಕೆ ಇದ್ದು ಲೋಕಸಭೆ ಚುನಾವಣೆಯ ಜತೆಗೇ ವಿಧಾನಸಭೆ ಚುನಾವಣೆ ನಡೆಯಬೇಕಾಗಿತ್ತು. ಆದರೆ 1992ರ ನಂತರ ಇದೇ ಮೊದಲ ಬಾರಿಗೆ ನಿಗದಿತ ಅವಧಿಯೊಳಗೆ ಇಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿಲ್ಲ. ಇದಕ್ಕೆ ಭದ್ರತಾ ಕಾರಣವನ್ನು ಚುನಾವಣಾ ಆಯೋಗ ಮುಂದಿಟ್ಟಿದೆ.

ಚುನಾವಣಾ ಆಯೋಗದ ಈ ತೀರ್ಮಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಸೇರಿದಂತೆ ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರ ಕೃಪೆ: ಮನಿ ಕಂಟ್ರೋಲ್‌