samachara
www.samachara.com
ಚುನಾವಣಾ ಅಧಿನಿಯಮ 49P ಪ್ರಚಾರಕ್ಕೆ ಮುಂದಾದ ಚುನಾವಣಾ ಆಯೋಗ; ಏನಿದು ‘ಕಳ್ಳ ಓಟಿ’ನ ಕಾನೂನು?
ಸುದ್ದಿ ಸಾರ

ಚುನಾವಣಾ ಅಧಿನಿಯಮ 49P ಪ್ರಚಾರಕ್ಕೆ ಮುಂದಾದ ಚುನಾವಣಾ ಆಯೋಗ; ಏನಿದು ‘ಕಳ್ಳ ಓಟಿ’ನ ಕಾನೂನು?

ಕಳ್ಳ ಓಟಿನ ಮೂಲಕ ಮತ ಕಳೆದುಕೊಂಡವರಿಗೆ ಅವರ ಹಕ್ಕನ್ನು ಹಿಂದಿರುಗಿಸುವ ಸಲುವಾಗಿ 1961 ಲ್ಲೇ ಈ ಕಾನೂನನ್ನು ಚುನಾವಣಾ ಆಯೋಗ ಜಾರಿಗೆ ತಂದಿತ್ತು.

ಲೋಕಸಭಾ ಚುನಾವಣೆ-2019ಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಭಾರತೀಯ ಚುನಾವಣಾ ಆಯೋಗ ಜನರಿಗೆ 49 P ಎಂಬ ಕಾನೂನಿನ ಕುರಿತು ಅರಿವು ಮೂಡಿಸಲು ಮುಂದಾಗಿದೆ.

ಭಾರತೀಯ ಚುನಾವಣಾ ಆಯೋಗ ಸಾಮಾನ್ಯವಾಗಿ ಸಾರ್ವಜನಿಕ ಚುನಾವಣೆಗಳು ಹತ್ತಿರಾಗುತ್ತಿದ್ದಂತೆ ಮತದಾನದ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಸಾಮಾನ್ಯ. ಆದರೆ, ಈ ಬಾರಿ ಮತದಾನದ ಜೊತೆಗೆ 49 P ಎಂಬ ಕಾನೂನಿನ ಕುರಿತು ಜನರಿಗೆ ಅರಿವು ಮೂಡಿಸಲು ಮುಂದಾಗಿದೆ. ಇದಕ್ಕೆ ತಮಿಳಿನ ‘ಸರ್ಕಾರ್’ ಚಿತ್ರ ಪ್ರೇರಣೆಯಾಗಿರುವುದು ವಿಶೇಷ.

ತಮಿಳಿನ ಖ್ಯಾತ ನಟ ವಿಜಯ್ ಅಭಿನಯಿಸಿ ಕಳೆದ ವರ್ಷ ಬಿಡುಗಡೆಯಾಗಿ ದೊಡ್ಡ ಮಟ್ಟದ ರಾಜಕೀಯ ಚರ್ಚೆಗೆ ಕಾರಣವಾಗಿದ್ದ ಸರ್ಕಾರ್ ಚಿತ್ರದಲ್ಲಿ ಚುನಾವಣಾ ನೀತಿ ಸಂಹಿತೆಯಲ್ಲಿರುವ 49 P ಎಂಬ ಕಾನೂನಿನ ಕುರಿತು ಮಾತನಾಡಲಾಗಿತ್ತು. ಇಡೀ ಚಿತ್ರ ಕಳ್ಳ ಓಟು ಹಾಗೂ 49 P ಎಂಬ ಕಾನೂನಿನ ಸುತ್ತಲೇ ಚಿತ್ರಿಸಲಾಗಿತ್ತು.

ಈ ಚಿತ್ರ ಬಿಡುಗಡೆಯಾಗುವವರೆಗೆ ಈ ಕಾನೂನಿನ ಕುರಿತು ಮಾಹಿತಿ ಇಲ್ಲದವರೂ ಕೂಡ ಚಿತ್ರ ಬಿಡುಗಡೆಯಾದ ನಂತರ ಈ ಕುರಿತು ಮಾತನಾಡುವಂತಾಗಿತ್ತು. #49P ಎಂಬ ಹ್ಯಾಷ್‌ ಟ್ಯಾಗ್‌ ಆರಂಭವಾಗಿ ಟ್ವಿಟರ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿತ್ತು.

ಪರಿಣಾಮ 6 ದಶಕಗಳ ಹಿಂದೆಯೇ ಜಾರಿಯಾದ ಈ ವಿಶಿಷ್ಠ ಕಾನೂನಿನ ಕುರಿತು ಚುನಾವಣಾ ಆಯೋಗ ಈಗ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದೆ. ಹಾಗಾದರೆ ಏನದು 49 P ಕಾನೂನು?

ಚುನಾವಣಾ ಅಧಿನಿಯಮ 49P ಕುರಿತ ಮಾಹಿತಿಯನ್ನು ನೀಡಿದ ತಮಿಳಿನ ‘ಸರ್ಕಾರ್’ ಚಿತ್ರದ ಪೋಸ್ಟರ್.
ಚುನಾವಣಾ ಅಧಿನಿಯಮ 49P ಕುರಿತ ಮಾಹಿತಿಯನ್ನು ನೀಡಿದ ತಮಿಳಿನ ‘ಸರ್ಕಾರ್’ ಚಿತ್ರದ ಪೋಸ್ಟರ್.
/ಇಂಡಿಯಾ ಗ್ಲಿಟ್ಜ್.

ಏನಿದು 49 P?

ಭಾರತೀಯ ಚುನಾವಣಾ ಇತಿಹಾಸದಲ್ಲಿ ಕಳ್ಳ ಓಟು ಸಾಮಾನ್ಯ ಎಂಬ ಮಾತಿದೆ. 1952 ರಿಂದ ಈವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಳ್ಳ ಓಟುಗಳನ್ನು ಹಾಕಲಾಗಿದೆ. ಯಾವ ಚುನಾವಣೆಯಲ್ಲಿ ಎಷ್ಟು ಮತಗಳನ್ನು ಹೀಗೆ ಹಾಕಲಾಗಿದೆ ಎಂಬ ಕುರಿತು ಯಾವುದೇ ಅಂಕಿಅಂಶಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿಲ್ಲ. ಹಾಗೆಂದು ಭಾರತೀಯ ಚುನಾವಣೆಗಳಲ್ಲಿ ಕಳ್ಳ ಓಟುಗಳು ಈಗಲೂ ಚಾಲ್ತಿಯಲ್ಲಿವೆ ಎಂಬ ವಿಚಾರವನ್ನು ಮಾತ್ರ ನಾವು ತಳ್ಳಿಹಾಕಲು ಸಾಧ್ಯವಿಲ್ಲ.

ಚುನಾವಣೆಯಲ್ಲಿ ಹೀಗೆ ಅನಧಿಕೃತ ವ್ಯಕ್ತಿ ಚಲಾಯಿಸುವ ಕಳ್ಳ ಓಟುಗಳನ್ನು ನಿಯಂತ್ರಿಸುವ ಸಲುವಾಗಿಯೇ ಭಾರತೀಯ ಚುನಾವಣಾ ಪ್ರಾಧಿಕಾರ ಇವಿಎಂ ಯಂತ್ರಗಳನ್ನು ಪರಿಚಯಿಸಿತು.

ಭಾರತದ ಚುನಾವಣೆಗೆ ಇವಿಎಂ ಮೆಷಿನ್‌ಗಳನ್ನು ಮೊದಲು ಪರಿಚಯಿಸಿದ್ದು ಎಂ. ಎಸ್. ಗಿಲ್. 1996ರಿಂದ 2001ರ ಅವಧಿಯಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಕೆಲಸ ನಿರ್ವಹಿಸಿದ್ದ ಎಂ. ಎಸ್. ಗಿಲ್ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಮೊದಲ ಬಾರಿಗೆ ಪರಿಚಯಿಸಿದ್ದರು.

ಇವಿಎಂ ಯಂತ್ರಗಳ ಮೂಲಕ ಕಳ್ಳ ಓಟುಗಳನ್ನು ನಿಯಂತ್ರಿಸಬಹುದು ಹಾಗೂ ಮತದಾನ ಕೇಂದ್ರದಲ್ಲಿ ಮತದಾರರು ತಮ್ಮ ಸರದಿಗೆ ಕಾಯುವ ಅವಧಿಯನ್ನು ಕಡಿಮೆ ಮಾಡಬಹುದು ಎಂಬುದು ಅವರ ನಿಲುವಾಗಿತ್ತು. ಆದರೆ ಇವಿಎಂ ಮೆಷಿನ್‌ಗಳು ಚಾಲ್ತಿಗೆ ಬಂದ ನಂತರವೂ ಕಳ್ಳ ಓಟುಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಅಷ್ಟೇ ಕಹಿ ಸತ್ಯ.

ಇದಲ್ಲದೆ ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯೂ ಇದೆ ಎಂಬ ವಾದವೂ ಆಗಿಂದಾಗ್ಗೆ ಚಾಲ್ತಿಗೆ ಬರುತ್ತಲೇ ಇರುತ್ತದೆ.

ಹಾಗಾದ್ರೆ ನಾವು ಮತಗಟ್ಟೆಗೆ ಹೋಗಿ ನಮ್ಮ ಮತವನ್ನು ಚಲಾಯಿಸುವ ಮುನ್ನ ಬೇರೊಬ್ಬರು ನಮಗೆ ಬದಲಾಗಿ ಮತ ಚಲಾಯಿಸಿದ್ದರೆ (ಕಳ್ಳ ಓಟು) ಏನು ಮಾಡಬೇಕು? ಮತ್ತೆ ನಾವು ನಮ್ಮ ಮತವನ್ನು ಹಿಂಪಡೆಯುವುದು ಸಾಧ್ಯವೇ? ಈ ಕುರಿತ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿರುವುದೆ 49 P ಎಂಬ ಕಾನೂನು.

ಮತವನ್ನು ಹಿಂಪಡೆಯಬಹುದು

ನಾವು ಮತ ಚಲಾಯಿಸುವ ಮುನ್ನ ನಮ್ಮ ಮತವನ್ನು ಬೇರೆ ಯಾರಾದರೂ ಹಾಕಿದ್ದರೆ ಚುನಾವಣಾ ನೀತಿ ಸಂಹಿತಿ 49 P ಪ್ರಕಾರ ಈ ವಿಚಾರವನ್ನು ಮತಗಟ್ಟೆಯ ಚುನಾವಣಾ ಅಧಿಕಾರಿಯ ಗಮನಕ್ಕೆ ತಂದು ಆ ಮೂಲಕ ಮತ ಚಲಾಯಿಸುವ ಹಕ್ಕನ್ನು ನಾವು ಹಿಂಪಡೆಯಬಹುದು. ಸಂಬಂಧಪಟ್ಟ ಅಧಿಕಾರಿ ನೀತಿ ಸಂಹಿತೆ 17 B ಪ್ರಕಾರ ಮತ್ತೊಂದು ಬ್ಯಾಲೆಟಿನ್ ಪೇಪರ್ ಮೂಲಕ ಮತ ಚಲಾಯಿಸಲು ಅನುಮತಿ ನೀಡುತ್ತಾರೆ.

ಬ್ಯಾಲೆಟಿನ್ ಪೇಪರ್‌ನಲ್ಲಿ ಮತ ಚಲಾಯಿಸುವ ಕಾಲದಲ್ಲಿ ಕಳ್ಳ ಓಟು ನಿಯಂತ್ರಣ ಮೀರಿ ಬೆಳೆದಿತ್ತು. ಪ್ರತಿ ಮತಗಟ್ಟೆಯಲ್ಲಿ ಹೀಗೆ ಅನೇಕರು ತಮ್ಮ ಮತವನ್ನು ಕಳೆದುಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಹೀಗಾಗಿ ಕಳ್ಳ ಓಟಿನ ಮೂಲಕ ಮತ ಕಳೆದುಕೊಂಡವರಿಗೆ ಅವರ ಹಕ್ಕನ್ನು ಹಿಂದಿರುಗಿಸುವ ಸಲುವಾಗಿ 1961ರಲ್ಲೇ ಈ ಕಾನೂನನ್ನು ಚುನಾವಣಾ ಆಯೋಗ ಜಾರಿಗೆ ತಂದಿತ್ತು.

ಆದರೆ, ಈ ಕಾನೂನು ಜಾರಿಯಾಗಿ 6 ದಶಕಗಳೇ ಕಳೆದರು ಈವರೆಗೆ ಈ ಕಾನೂನಿನ ಕುರಿತ ಅರಿವು ಜನ ಸಾಮಾನ್ಯ ಇಲ್ಲಂತೆ ನೋಡಿಕೊಳ್ಳಲಾಗಿದೆ. ಆ ವಿಚಾರವನ್ನು 6 ದಶಕಗಳ ನಂತರ ಒಂದು ಚಿತ್ರದ ಮೂಲಕ ಜನ ತಿಳಿದುಕೊಳ್ಳುವಂತಾಗಿದೆ ಎಂದರೆ ಈವರೆಗೆ ಚುನಾವಣೆ ಆಯೋಗ ಏಕೆ ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂಬ ಪ್ರಶ್ನೆ ಮೂಡುತ್ತದೆ.

ಸದ್ಯ, ಈಗಲಾದರೂ ಚುನಾವಣಾ ಪ್ರಾಧಿಕಾರ ಎಚ್ಚೆತ್ತುಕೊಂಡು 49 P ಕಾನೂನಿನ ಕುರಿತು ಜನರಿಗೆ ಅರಿವು ಮೂಡಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಅಂದಹಾಗೆ, ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಹೆಸರಿನಲ್ಲಿ ಮತದಾನ ನಡೆದಿದ್ದರೂ, ಮತ್ತೊಂದು ಮತ ಹಾಕುವ ಅವಕಾಶವನ್ನು ನೀವು ಬಳಸಿಕೊಳ್ಳಬಹುದು.