samachara
www.samachara.com
ಮಸೂದ್ ಬಿಟ್ಟು ಕಳುಹಿಸಿದ ನೆನಪು; ಕನಿಷ್ಠ ವೇತನದ ಭರವಸೆ: ಹಾವೇರಿಯಲ್ಲಿ ರಾಹುಲ್ ಪ್ರಚಾರ ಭಾಷಣ
ಸುದ್ದಿ ಸಾರ

ಮಸೂದ್ ಬಿಟ್ಟು ಕಳುಹಿಸಿದ ನೆನಪು; ಕನಿಷ್ಠ ವೇತನದ ಭರವಸೆ: ಹಾವೇರಿಯಲ್ಲಿ ರಾಹುಲ್ ಪ್ರಚಾರ ಭಾಷಣ

ಎನ್‍ಡಿಎ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಮಸೂದ್‌ನನ್ನು ವಿಮಾನದಲ್ಲಿ ರಾಜಾತಿಥ್ಯ ನೀಡಿ ಕಂದಹಾರ್‌ಗೆ ಕರೆದುಕೊಂಡು ಹೋಗಿದ್ದರು - ರಾಹುಲ್‌ ಗಾಂಧಿ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಪ್ರತಿಯೊಬ್ಬ ನಾಗರೀಕರಿಗೂ ಕನಿಷ್ಠ ವೇತನ ಒದಗಿಸುವ ಯೋಜನೆಯನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭರವಸೆ ನೀಡಿದರು.

ಶನಿವಾರ ಹಾವೇರಿಯ ಮುನ್ಸಿಪಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪರಿವರ್ತನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ತಮ್ಮ ಭಾಷಣದುದ್ದಕ್ಕೂ ನಿರುದ್ಯೋಗ, ರಫೇಲ್ ಹಗರಣ, ಅನಿಲ್ ಅಂಬಾನಿ, ನೀರವ್ ಮೋದಿ, ಆರ್‍ಎಸ್‍ಎಸ್ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕನಿಷ್ಠ ವೇತನ ಯೋಜನೆ ಜಾರಿ:

"ದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮರು ದಿನವೇ ದೇಶದ ನಾಗರಿಕರು ಗೌರವಯುತ ಜೀವನ ನಿರ್ವಹಣೆ ಮಾಡಲು ಬಡ ಮತ್ತು ಮಧ್ಯಮ ವರ್ಗದವರಿಗೆ ಕನಿಷ್ಠ ವೇತನ ಯೋಜನೆಯನ್ನು ಅನು‍‍ಷ್ಠಾನಕ್ಕೆ ತರಲಿದ್ದೇವೆ. ಈಗಾಗಲೇ ಛತ್ತೀಸ್‍ಘಡದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು ಯಶಸ್ವಿಯಾಗಿದೆ. ದೇಶಾದ್ಯಂತ ಇದನ್ನು ಕಾರ್ಯರೂಪಕ್ಕೆ ತರುವ ಗುರಿಯನ್ನು ಕಾಂಗ್ರೆಸ್ ಇಟ್ಟುಕೊಂಡಿದೆ," ಎಂಬುದಾಗಿ ರಾಹುಲ್ ತಿಳಿಸಿದರು.

ರೈತರ ಖಾತೆಗಳಿಗೆ ನೇರವಾಗಿ ಹಣ ಹಾಕುವ ಯೋಜನೆಯನ್ನು ಜಾರಿ ಮಾಡಲಿದ್ದೇವೆ. ಅಷ್ಟೇ ಅಲ್ಲದೆ, "ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹೂಲ್ ಚೋಕ್ಸಿ ಮೊದಲಾದವರಿಗೆ ನರೇಂದ್ರ ಮೋದಿ ಕೊಟ್ಟಿರುವ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಲಾಗುವುದು. ನಾವು ಅಧಿಕಾರಕ್ಕೆ ಬಂದರೆ ಇವರೆಲ್ಲರನ್ನು ಜೈಲಿಗೆ ಹಾಕುತ್ತೇವೆ. ನರೇಂದ್ರ ಮೋದಿ ಸರ್ಕಾರದ ಭ್ರಷ್ಟಾಚಾರವನ್ನು ದೇಶದ ಜನತೆಯ ಮುಂದಿಡುವವರೆಗೂ ವಿರಮಿಸುವುದಿಲ್ಲ," ಎಂದು ಶಪಥ ಮಾಡಿದರು.

"ಮೋದಿ ಸರ್ಕಾರ ತಮ್ಮ ಬಜೆಟ್‌ನಲ್ಲಿ ರೈತರಿಗೆ 2 ಸಾವಿರ ರೂ. ನೀಡಿದೆ. ಅಂದರೆ ದಿನಕ್ಕೆ ರೈತರಿಗೆ ಮೂರುವರೆ ರೂಪಾಯಿ ನೀಡುತ್ತಿದ್ದಾರೆ. ಅದೇ ಅಂಬಾನಿ, ಅದಾನಿಗೆ 30 ಸಾವಿರ ಕೋಟಿ ರೂಪಾಯಿ ನೀಡುತ್ತಾರೆ. ಇದು ಯಾವ ಲೆಕ್ಕ?" ಎಂದು ರಾಹುಲ್‌ ಪ್ರಶ್ನಿಸಿದರು. ನಾವು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುವುದಿಲ್ಲ. ಕನಿಷ್ಠ ಮಾಸಿಕ ವೇತನವನ್ನು ನೀಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಬಿಜೆಪಿ ಸರಕಾರದ ನೋಟ್ ಬ್ಯಾನ್, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗಳನ್ನು ಟೀಕಿಸಿದ ಅವರು, ಜಿಎಸ್‍ಟಿಯನ್ನು ಇನಷ್ಟು ಸರಳಗೊಳಿಸುವ ಭರವಸೆಯನ್ನು ನಾವು ನೀಡುತ್ತಿದ್ದೇವೆ ಎಂದರು.

ಈ ಹಿಂದೆ 'ಕರ್ನಾಟಕದ ಸರ್ಕಾರ ರೈತರಿಗೆ ಲಾಲಿಪಾಪ್ ನೀಡುತ್ತಿದೆ' ಎಂದು ಪ್ರಧಾನಿ ಹೇಳಿದ್ದರು. ಸರ್ಕಾರ ರಚನೆಯಾದ ಮೇಲೆ ಮೈತ್ರಿ ಸರಕಾರ 11 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ ಎಂದು ಅವರು ಲೆಕ್ಕ ಮುಂದಿಟ್ಟರು.

ಮೋದಿ ಸರಕಾರದ ನಿರ್ಧಾರಗಳನ್ನು ತರಾಟೆಗೆ ತೆಗೆದುಕೊಂಡ ಅವರು, ನೋಟು ನಿಷೇಧದಿಂದ ನಿಮ್ಮೆಲ್ಲರನ್ನು ಸರದಿಯಲ್ಲಿ ನಿಲ್ಲುವಂತೆ ಮಾಡಿದರು. ಕೇಳಿದರೆ ಅದಕ್ಕೆ ಕಪ್ಪು ಹಣದ ನಿಯಂತ್ರಣ ಅಂದರು. ಆದರೆ ಸೂಟು ಬೂಟು ಧರಿಸಿದ ವ್ಯಕ್ತಿಗಳು ಸರದಿಯಲ್ಲಿ ನಿಲ್ಲಲಿಲ್ಲ. ರಫೇಲ್ ಹಗರಣದಿಂದ 30 ಸಾವಿರ ಕೋಟಿ ರೂಪಾಯಿಯನ್ನು ಕದ್ದು ಅನಿಲ್‌ ಅಂಬಾನಿಯ ಜೇಬಿಗೆ ಹಾಕಿದರು. ಸಿಬಿಐ ಅಧಿಕಾರಿಯನ್ನು ರಾತ್ರೋ ರಾತ್ರಿ ಹುದ್ದೆಯಿಂದ ಕೆಳಗೆ ಇಳಿಸಿದರು ಎಂಬುದಾಗಿ ಕೇಂದ್ರದ ವಿಫಲ ನಿರ್ಧಾರಗಳ ಪಟ್ಟಿಯನ್ನು ಇಡುತ್ತಲೇ ಸಾಗಿದರು.

ಐದು ವರ್ಷದಿಂದ ಯುವ ಜನಾಂಗಕ್ಕೆ ಉದ್ಯೋಗ ನೀಡುತ್ತೇವೆ ಎಂದು ಭಾಷಣದಲ್ಲಿ ಹೇಳುತ್ತಾ ಬಂದ್ರಿ. ಆದರೆ ಮೋದಿ ಕಾಲದಲ್ಲಿಯೇ ಅತ್ಯಂತ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದ್ದು, 45 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂಬ ಅಂಕಿ ಅಂಶಗಳನ್ನು ರಾಹುಲ್‌ ಗಾಂಧಿ ವೇದಿಕೆಯಿಂದ ನೀಡಿದರು.

ಅಜರ್ ಮಸೂದ್ ಬಿಟ್ಟಿದ್ದು ಯಾರು?

ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿಯನ್ನು ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ಜೈಷ್ -ಇ-ಮೊಹಮ್ಮದ್ ಸಂಘಟನೆಯ ಸಂಸ್ಥಾಪಕ ಅಜರ್ ಮಸೂದ್‍ನನ್ನು ಪಾಕಿಸ್ತಾನಕ್ಕೆ ಬಿಟ್ಟಿದ್ದು ಯಾರು? ಎಂದು ಬಿಜೆಪಿ ಸರಕಾರವನ್ನು ಪ್ರಶ್ನಿಸಿದರು. "ಈ ಹಿಂದೆ ಅಧಿಕಾರದಲ್ಲಿದ್ದ ಎನ್‍ಡಿಎ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಮಸೂದ್‌ನನ್ನು ವಿಮಾನದಲ್ಲಿ ರಾಜಾತಿಥ್ಯ ನೀಡಿ ಕಂದಹಾರ್‌ಗೆ ಕರೆದುಕೊಂಡು ಹೋಗಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಇದಕ್ಕೆ ಸಂಧಾನಕಾರರಾಗಿದ್ದರು.
ಅಂದೇ ಮಸೂದ್ ವಿರುದ್ಧ ಉಗ್ರ ಕ್ರಮ ಕೈಗೊಂಡಿದ್ದರೆ ಇಂದು ಈ ಘಟನೆ ನಡೆಯುತ್ತಿರಲಿಲ್ಲ,” ಎಂದು ತರಾಟೆಗೆ ತೆಗೆದುಕೊಂಡರು. ಜತೆಗೆ ಕಾಂಗ್ರೆಸ್ ಎಂದಿಗೂ ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ಬಿಜೆಪಿಯಂತೆ ಚೆಲ್ಲಾಟವಾಡಿಲ್ಲ ಎಂದು ವಿವರಿಸಿದರು.

ಕೇಂದ್ರ ಸರಕಾರದ ವಿದೇಶಾಂಗ ನೀತಿಗಳನ್ನು ಟೀಕಿಸಿದ ಅವರು, "ಚೀನಾ ಅಧ್ಯಕ್ಷರ ಜತೆ ನರೇಂದ್ರ ಮೋದಿ ಗುಜರಾತ್‌ನಲ್ಲಿ ಉಯ್ಯಾಲೆ ಆಡುತ್ತಿದ್ದರೆ, ಅಲ್ಲಿ ಅವರ ಸೈನಿಕರು ಅರುಣಾಚಲ ಪ್ರದೇಶದ ಧೋಕ್ಲಂ ಬಳಿ ಭಾರತದೊಳಗೆ ನುಸುಳಲು ಮುಂದಾಗಿದ್ದರು. 56 ಇಂಚಿನ ಎದೆ ಆಗ ಏನು ಮಾಡುತ್ತಿತ್ತು?” ಎಂದು ಕುಟುಕಿದರು.

ಗಿಡಕ್ಕೆ ನೀರೆರೆಯುವ ಮೂಲಕ ಪರಿವರ್ತನಾ ರ್ಯಾಲಿಗೆ ಚಾಲನೆ ನೀಡಿದ ರಾಹುಲ್‌ ಗಾಂಧಿ.
ಗಿಡಕ್ಕೆ ನೀರೆರೆಯುವ ಮೂಲಕ ಪರಿವರ್ತನಾ ರ್ಯಾಲಿಗೆ ಚಾಲನೆ ನೀಡಿದ ರಾಹುಲ್‌ ಗಾಂಧಿ.
/ಐಎನ್‌ಸಿ ಕರ್ನಾಟಕ, ಫೇಸ್ಬುಕ್

ಎರಡು ಹಿಂದೂಸ್ಥಾನ:

ನರೇಂದ್ರ ಮೋದಿ ಅವರ ಈಗಿನ ಸರ್ಕಾರದಲ್ಲಿ ಎರಡು ಭಾರತಗಳಿವೆ. ನೀರವ್ ಮೋದಿ, ವಿಜಯ್‍ ಮಲ್ಯ, ಮೆಹುಲ್ ಚೋಕ್ಸಿ , ಅನಿಲ್ ಅಂಬಾನಿಯಂತಹ ಭ್ರಷ್ಟರನ್ನು ರಕ್ಷಣೆ ಮಾಡಲು ನರೇಂದ್ರ ಮೋದಿ ಒಂದು ಭಾರತವನ್ನು ನಿರ್ಮಿಸಿದ್ದಾರೆ. ಇನ್ನೊಂದೆಡೆ ಬಡವರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ದೀನದಲಿತರು, ಕಾರ್ಮಿಕರನ್ನೊಳಗೊಂಡ ಸಮಗ್ರ ಭಾರತವಿದೆ. ಮೋದಿ ಭಾರತದ ಕಳ್ಳರಿಗೆ ಸಹಾಯ ಮಾಡಿದರೆ, ಕಾಂಗ್ರೆಸ್ ಬಡವರಿಗಾಗಿ ಕೆಲಸ ಮಾಡುತ್ತದೆ ಎಂದು ನೆರೆದ ಜನಸ್ತೋಮಕ್ಕೆ ಭರವಸೆ ನೀಡಿದರು.

ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಸರ್ಕಾರ ರಚನೆ ಮಾಡಿದ್ದು, ಎರಡು ಪಕ್ಷಗಳು ಜೊತೆಯಾಗಿ ದೇಶದ ಏಳಿಗೆಗಾಗಿ ಕೆಲಸ ಮಾಡಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚುನಾಯಿತ ಪ್ರತಿನಿಧಿ ಸ್ಥಾನಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಜಾರಿ ಮಾಡುವುದಾಗಿಯೂ ತಿಳಿಸಿದರು.