samachara
www.samachara.com
ಕಾಶ್ಮೀರದ ನಿನ್ನೆಯ ಬಾಂಬ್ ದಾಳಿ ನಡೆಸಿದ್ದು 16ರ ಬಾಲಕ; ಬಯಲಾದ ಸ್ಫೋಟಕ ಮಾಹಿತಿ
ಸುದ್ದಿ ಸಾರ

ಕಾಶ್ಮೀರದ ನಿನ್ನೆಯ ಬಾಂಬ್ ದಾಳಿ ನಡೆಸಿದ್ದು 16ರ ಬಾಲಕ; ಬಯಲಾದ ಸ್ಫೋಟಕ ಮಾಹಿತಿ

ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರು ಮಕ್ಕಳನ್ನು ತಮ್ಮ ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 

ಜಮ್ಮು-ಕಾಶ್ಮೀರದ ಬಸ್‌ ನಿಲ್ದಾಣದಲ್ಲಿ ಗುರುವಾರ ಸಂಭವಿಸಿದ್ದ ಗ್ರೆನೇಡ್ ದಾಳಿ ಆತಂಕದ ವಿಚಾರವೊಂದನ್ನು ಮುನ್ನೆಲೆಗೆ ತಂದಿದೆ. ದಾಳಿಗೆ ಕಾರಣ 16 ವರ್ಷ ಬಾಲಕ ಎಂಬುದು ಇದಕ್ಕೆ ಆಲೋಚನೆಗೆ ಈಡು ಮಾಡುವಂತಿದೆ.

ಕಾಶ್ಮೀರದ ಜನನಿಬಿಡ ಬಸ್‌ ನಿಲ್ದಾಣದಲ್ಲಿ ನಿನ್ನೆ ಮಧ್ಯಾಹ್ನ 11.30ರ ಸುಮಾರಿಗೆ ನಡೆದಿದ್ದ ಬಾಂಬ್ ದಾಳಿ ಇದು. ಇಬ್ಬರ ಸಾವನ್ನಪ್ಪಿದರೆ, 31 ಜನ ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 10 ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಮೂರನೇ ದಾಳಿಯಿದು.

ಆದರೆ, ದಾಳಿಯ ಬೆನ್ನತ್ತಿದ ಪೊಲೀಸರಿಗೆ ವಿಚಾರಣೆಯ ವೇಳೆ ಈ ದಾಳಿಯನ್ನು ನಡೆಸಿದ ವ್ಯಕ್ತಿ ಕೇವಲ 16 ವರ್ಷದ 9ನೇ ತರಗತಿಯ ಬಾಲಕ ಎಂಬುದು ಗೊತ್ತಾಗಿದೆ ಎಂದು ವರದಿಗಳು ಹೇಳುತ್ತಿವೆ. ಆತನನ್ನು ಮಾಧ್ಯಮಗಳ ಮುಂದೆ ಮುಸುಕು ಹೊಚ್ಚಿ ತೋರಿಸಿಲಾಗಿದೆ ಕೂಡ.

ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯಿಂದ 50,000 ರೂ. ಹಣ ಪಡೆದಿದ್ದ ಬಾಲಕ ಬಸ್ ನಿಲ್ದಾಣದಲ್ಲಿ ಗ್ರೆನೇಡ್ ದಾಳಿ ನಡೆಸಲು ಒಪ್ಪಿಕೊಂಡಿದ್ದ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.

ಗ್ರೆನೇಡ್ ಬಾಂಬ್ ದಾಳಿ ನಡೆಸಲಾಗಿದ್ದ ಬಸ್ ನಿಲ್ದಾಣ.
ಗ್ರೆನೇಡ್ ಬಾಂಬ್ ದಾಳಿ ನಡೆಸಲಾಗಿದ್ದ ಬಸ್ ನಿಲ್ದಾಣ.
/ಇಂಡಿಯಾ ಟುಡೆ.

ದಾಳಿಕೋರ ಬಾಲಾಪರಾಧಿ:

ಶ್ರೀನಗರದ ಬಸ್‌ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆದು ಕೇವಲ 24 ಗಂಟೆಯ ಒಳಗಾಗಿ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಆತ ಬಾಲಾಪರಾಧಿ. ವಿಚಾರಣೆಯ ವೇಳೆ ಆತ ಬಾಯ್ಬಿಟ್ಟ ಕೆಲವು ವಿಚಾರಗಳು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.

ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟ ಬಾಲಾಪರಾಧಿ, “ನಾನು 50 ಸಾವಿರ ಹಣಕ್ಕಾಗಿ ಈ ಕೆಲಸ ಮಾಡಲು ಒಪ್ಪಿಕೊಂಡಿದ್ದೆ. ಕುಲ್ಗಾಮ್‌ನ ಹುಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಮಖ್ಯಸ್ಥ ಪಯಾಜ್ ನನಗೆ ಗ್ರೆನೇಡ್ ತಲುಪಿಸಿದರು. ಅಲ್ಲದೆ ಜನನಿಬಿಡ ಪ್ರದೇಶದಲ್ಲಿ ಅದನ್ನು ಸ್ಪೋಟಿಸುವಂತೆ ಸೂಚನೆ ನೀಡಿದ್ದರು. ಇದಕ್ಕೂ ಮೊದಲೆ ನನಗೆ ಗ್ರೆನೇಡ್ ಸ್ಫೋಟಿಸುವ ಕುರಿತು ತರಬೇತಿ ನೀಡಲಾಗಿತ್ತು” ಎಂಬ ಸ್ಫೋಟಕ ಮಾಹಿತಿ ನೀಡಿದ್ದಾನೆ.

ಈತನ ವಯಸ್ಸನ್ನು ಖಚಿತಪಡಿಸಿಕೊಳ್ಳುವುದಕ್ಕೋಸ್ಕರ ಪೊಲೀಸ್ ಅಧಿಕಾರಿಗಳು ಶಾಲಾ ದಾಖಲೆಗಳು, ಆಧಾರ್ ಕಾರ್ಡ್ ಮಾಹಿತಿ ಸೇರಿದಂತೆ ಆತನ ಕುರಿತ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ದಾಖಲೆಗಳ ಪ್ರಕಾರ ಈತ ಮಾರ್ಚ್ 12, 2003 ರಲ್ಲಿ ಜನಿಸಿದ್ದು ಇದೇ ಮಾರ್ಚ್ 12 ಕ್ಕೆ ಆತನಿಗೆ 16 ವರ್ಷ ತುಂಬಲಿದೆ.

ಈತ ಮನೆಯ ಮೂರು ಮಂದಿ ಮಕ್ಕಳ ಪೈಕಿ ಹಿರಿಯನಾಗಿದ್ದು 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ. ಈತನ ತಂದೆ ಪೇಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಾಲಾಪರಾಧಿಯ ಬಂಧನದ ಕುರಿತು ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಐಜಿಪಿ ಎಂ.ಕೆ.ಸಿನ್ಹಾ , “ಸಿಸಿಟಿವಿಗಳ ಆಧಾರದ ಮೇಲೆ ಬಾಲಾಪರಾಧಿಯನ್ನು ಬಂಧಿಸಲಾಗಿದೆ. ಬಂಧಿತ ಬಾಲಾಕನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಗೆ ಗ್ರೆನೇಡ್ ಕೊಟ್ಟವರು ಯಾರು ಎಂದು ಗುರುತಿಸುವುದಾಗಿ ಆತ ತಿಳಿಸಿದ್ದಾನೆ. ಆದರೆ ಕಾನೂನಿನ ನಿಯಮದಂತೆ ಬಾಲಾಪರಾಧಿಯನ್ನು ಠಾಣೆಯಲ್ಲಿ ಇರಿಸುವಂತಿಲ್ಲ. ಹೀಗಾಗಿ ಆತನನ್ನು ಬಾಲಗೃಹಕ್ಕೆ ದಾಖಲಿಸಲಾಗುವುದು,” ಎಂದಿದ್ದಾರೆ.

ಹೀಗಾಗಿ “ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಆತನ ವಿಚಾರಣೆಗೆ ಅನುಮತಿ ಕೋರಿ ರಾಜ್ಯ ಸರಕಾರದ ಮೂಲಕ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿ ನಂತರ ಪೊಲೀಸ್ ವಶಕ್ಕೆ ಪಡೆದು ಆತನ ವಿಚಾರಣೆ ಮುಂದುವರೆಸಲಾಗುವುದು” ಎಂದು ತಿಳಿಸಿದ್ದಾರೆ.

ಕಾನೂನಿನ ಅಡಿಯಲ್ಲಿ ಬಾಲಾಪರಾಧಿಗಳ ಶಿಕ್ಷೆಯ ಪ್ರಮಾಣ ತೀರಾ ಕಡಿಮೆಯಿರುವ ಕಾರಣ ಹಾಗೂ ತಾವು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಉಗ್ರಗಾಮಿಗಳು ತಮ್ಮ ಭವಿಷ್ಯದ ಭಯೋತ್ಪಾದಕ ಕೆಲಸಗಳಿಗೆ ಮಕ್ಕಳನ್ನು ಬಳಸಿಕೊಳ್ಳಲಿದ್ದಾರೆಯೇ? ಎಂಬ ಅನುಮಾನಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಆದರೆ, ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರು ಮಕ್ಕಳನ್ನು ತಮ್ಮ ವಿಧ್ವಂಸಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ.

ಜಮ್ಮು-ಕಾಶ್ಮೀರ ಪ್ರವಾಸಿಗರ ಸ್ವರ್ಗ. ಪ್ರವಾಸಿಗರ ಹೊರತಾಗಿ ಇಲ್ಲಿ ಮತ್ತೊಂದು ದೊಡ್ಡ ಉದ್ಯಮ ಇಲ್ಲ. ಪ್ರವಾಸಿಗಳು ಆಗಮಿಸಿದರೆ ಮಾತ್ರ ಸ್ಥಳೀಯರಿಗೆ ದುಡಿಮೆ. ಚಳಿ ಹಾಗೂ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಶ್ಮೀರ ಹಿಮದ ಹೊದಿಕೆಯಿಂದ ಮುಚ್ಚಲ್ಪಟ್ಟಿರುತ್ತದೆ. ಇದೇ ಕಾರಣಕ್ಕೆ ಈ ಕಾಲಮಾನಗಳಲ್ಲಿ ಈ ಭಾಗಕ್ಕೆ ಆಗಮಿಸುವ ಪ್ರವಾಸಿಗಳ ಸಂಖ್ಯೆ ತೀರಾ ಕಡಿಮೆ.

ಪರಿಣಾಮ ಬಡತನ ಎಂಬುದು ಇಡೀ ಕಾಶ್ಮೀರದಲ್ಲಿ ಹಾಸುಹೊಕ್ಕಾಗಿದೆ. ಕಾಶ್ಮೀರಿಗಳ ಬಡತನವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಉಗ್ರಗಾಮಿಗಳು ದಶಕಗಳ ಹಿಂದೆಯೇ ಮಕ್ಕಳ ಕೈಲಿ ಭಯೋತ್ಪಾದಕ ಕೆಲಸ ಮಾಡಿಸಲು ಮುಂದಾಗಿದ್ದರು.

2000-2001 ರಲ್ಲಿ ಕಣಿವೆ ರಾಜ್ಯದಲ್ಲಿ ಸಕ್ರಿಯವಾಗಿದ್ದ ಭಯೋತ್ಪಾದಕ ಸಂಘಟನೆಗಳು 18 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ಭಯೋತ್ಪಾದಕ ಕೃತ್ಯಕ್ಕಾಗಿ ಹಣ ಕೊಟ್ಟು ಖರೀದಿ ಮಾಡುತ್ತಿದ್ದರು. ಹೀಗೆ ಖರೀದಿಸಲಾದ ಮಕ್ಕಳ ಕೈನಲ್ಲಿ ಗ್ರೇನೆಡ್‌ಗಳನ್ನು ಕೊಟ್ಟು ಗಡಿಯಲ್ಲಿ ಕಾವಲು ನಿರತ ಯೋಧರು ಹಾಗೂ ರಕ್ಷಣಾ ಪಡೆಗಳ ಮೇಲೆ ಎಸೆಯುವಂತೆ ಪ್ರೇರೇಪಿಸುತ್ತಿದ್ದರು.

ಉಗ್ರಗಾಮಿಗಳ ಈ ನಡವಳಿಕೆಯ ವಿರುದ್ಧ ಕಾರ್ಯಾಚರಣೆಗೆ ಮುಂದಾದ ಸೇನಾಪಡೆ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಅಲ್ಲದೆ ಸರಕಾರ ಮಕ್ಕಳ ಪಾಲಕರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಅವರ ಭವಿಷ್ಯದ ಕುರಿತು ಅರಿವು ಮೂಡಿಸಿತ್ತು. ಪರಿಣಾಮ 2009ರ ನಂತರ ಇಂತಹ ಹೇಯ ಕೃತ್ಯಗಳಿಗೆ ಕೊಂಚ ಕಡಿವಾಣ ಬಿದ್ದಂತಾಗಿತ್ತು.

ಆದರೆ, ಈಗ ಮತ್ತೆ ಮಕ್ಕಳನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸುವ ಸಂಪ್ರದಾಯ ಕಣಿವೆ ರಾಜ್ಯದಲ್ಲಿ ತಲೆ ಎತ್ತಿದೆ. ನಿನ್ನೆ ಬಸ್ ನಿಲ್ದಾಣದಲ್ಲಿ 16 ವರ್ಷದ ಹುಡುಗ ಗ್ರೆನೇಡ್ ದಾಳಿ ನಡೆಸಿರುವುದು ಮುಂದಿನ ದಿನಗಳಲ್ಲಿ ನಡೆಯಬಹುದಾದ ಇಂತಹದ್ದೇ ಅಹಿತಕರ ಘಟನೆಗಳ ಎಚ್ಚರಿಕೆ ಗಂಟೆಯಂತಿದೆ.