samachara
www.samachara.com
ಜಿಲ್ಲಾಡಳಿತ ಇಟ್ಟ ಡೈನಾಮೈಟ್‌ಗೆ ನೀರವ್ ಮೋದಿ ಐಶಾರಾಮಿ ಬಂಗಲೆ ನಿರ್ನಾಮ
ಸುದ್ದಿ ಸಾರ

ಜಿಲ್ಲಾಡಳಿತ ಇಟ್ಟ ಡೈನಾಮೈಟ್‌ಗೆ ನೀರವ್ ಮೋದಿ ಐಶಾರಾಮಿ ಬಂಗಲೆ ನಿರ್ನಾಮ

ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೇಹುಲ್ ಚೋಕ್ಸಿ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13000 ಕೋಟಿ ವಂಚಿಸಿರುವ ಪ್ರಕರಣವಿದೆ. ಪ್ರಸ್ತುತ ಇಬ್ಬರೂ ದೇಶ ಬಿಟ್ಟು ಪಲಾಯನ ಮಾಡಿದ್ದು ಇವರನ್ನು ಆರ್ಥಿಕ ಅಪರಾಧಿಗಳು ಎಂದು ಘೋಷಿಸಲಾಗಿದೆ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 13 ಸಾವಿರ ಕೋಟಿ ವಂಚಿಸಿ ಪ್ರಸ್ತುತ ವಿದೇಶದಲ್ಲಿರುವ ಗುಜರಾತ್ ಮೂಲದ ವಜ್ರದ ಉದ್ಯಮಿ ನೀರವ್ ಮೋದಿಗೆ ಸೇರಿದ 100 ಕೋಟಿ ಮೌಲ್ಯದ ಐಶಾರಾಮಿ ಬಂಗಲೆಯನ್ನು ಅಲಿಭಾಗ್ ಜಿಲ್ಲಾಡಳಿತ ಇಂದು ಧ್ವಂಸಗೊಳಿಸಿದೆ.

ಮುಂಬೈನ ಅಲಿಬಾಗ್‌ನ ಕಡಲ ತೀರದಲ್ಲಿ ಕರಾವಳಿ ನಿಯಂತ್ರಣ ವಲಯಕ್ಕೆ ಸಂಬಂಧಿಸಿದ ರಾಜ್ಯದ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಉದ್ಯಮಿ ನೀರವ್ ಮೋದಿ ಬಂಗಲೆ ನಿರ್ಮಿಸಿದ್ದರು. ಕಾನೂನು ಬಾಹಿರವಾಗಿ ಕಟ್ಟಿದ 33 ಸಾವಿರ ಚದರ ಅಡಿ ವಿಸ್ತಾರದಲ್ಲಿ ಐಶಾರಾಮಿ ಬಂಗಲೆ ಇದಾಗಿತ್ತು. 2009ರಲ್ಲಿ ಶಂಭುರಾಜೆ ಯುವ ಕ್ರಾಂತಿ ಸಂಸ್ಥೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಕಳೆದ ತಿಂಗಳು ಈ ಅರ್ಜಿಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ನೀರವ್ ಮೋದಿ ಒಡೆತನದ ಬಂಗಲೆ ಸೇರಿದಂತೆ ಅಲಿಬಾಗ್ ಕಡಲ ತೀರದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಲಾಗಿರುವ ಎಲ್ಲಾ ಬಂಗಲೆಗಳು, ಹೋಟೆಲ್ ಹಾಗೂ ರೆಸಾರ್ಟ್‌ಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿತ್ತು.

ಧ್ವಂಸಕ್ಕೆ ಸ್ಫೋಟಕ ಬಳಕೆ

ಉದ್ಯಮಿ ನೀರವ್ ಮೋದಿ ಒಡೆತನದ ಐಶಾರಾಮಿ ಬಂಗಲೆಯನ್ನು ತೆರವುಗೊಳಿಸುತ್ತಿರುವುದು.
ಉದ್ಯಮಿ ನೀರವ್ ಮೋದಿ ಒಡೆತನದ ಐಶಾರಾಮಿ ಬಂಗಲೆಯನ್ನು ತೆರವುಗೊಳಿಸುತ್ತಿರುವುದು.
/ ನ್ಯೂಸ್‌18

ಕೋರ್ಟ್ ಸೂಚನೆಯಂತೆ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ಈ ಬಂಗಲೆಯನ್ನು ಕೆಡವಲು ಮುಂದಾಗಿದ್ದರು. ಆದರೆ ಈ ಬಂಗಲೆಗೆ ಹಾಕಲಾಗಿದ್ದ ಅಡಿಪಾಯ ಗಟ್ಟಿಮುಟ್ಟಾಗಿದ್ದ ಕಾರಣದ ಇದನ್ನು ಸುಲಭಕ್ಕೆ ಕೆಡವಲು ಸಾಧ್ಯವಾಗಿರಲ್ಲ. ಬೃಹತ್ ಯಂತ್ರಗಳನ್ನು ಬಳಸಿದರೂ ಕಳೆದ ಒಂದು ತಿಂಗಳಿನಿಂದ ಈ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸುವುದು ಅಧಿಕಾರಿಗಳಿಗೆ ಅಸಾಧ್ಯವಾಗಿತ್ತು.

ಕಟ್ಟಡವನ್ನು ತೆರವುಗೊಳಿಸುವ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದ್ದ ಪರಿಣಾಮ ಸ್ಫೋಟಕ ಬಳಸಿ ಕಟ್ಟವನ್ನು ಕೆಡವುವ ತೀರ್ಮಾನಕ್ಕೆ ಅಧಿಕಾರಿಗಳು ಬಂದರು. ಇದಕ್ಕಾಗಿ ಡೈನಮೈಟ್‌ನಂತಹ ಸುಧಾರಿತ ಸ್ಫೋಟಕಗಳನ್ನು ಮಹಡಿಯ ತಳಭಾಗದ ಕಮಾನುಗಳಿಗೆ ಜೋಡಿಸಿ ಸ್ಫೋಟಿಸುವ ಮೂಲಕ ಶುಕ್ರವಾರ ಕಟ್ಟಡವನ್ನು ಸಂಪೂರ್ಣ ಕೆಡವಲಾಗಿದೆ.

“ಕಡ್ಡಟ ಧ್ವಂಸ ಕಾರ್ಯಾಚರಣೆ ಯಶಸ್ವಿಯಾಗಿದೆ,” ಎಂದು ಅಲಿಭಾಗ್ ಜಿಲ್ಲಾಧಿಕಾರಿ ವಿಜಯ್ ಸೂರ್ಯವಂಶಿ ತಿಳಿಸಿದ್ದಾರೆ.

ವಜ್ರದ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೇಹುಲ್ ಚೋಕ್ಸಿ ವಿರುದ್ಧ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13000 ಕೋಟಿ ವಂಚಿಸಿರುವ ಪ್ರಕರಣವಿದೆ. ಪ್ರಸ್ತುತ ಇಬ್ಬರೂ ದೇಶ ಬಿಟ್ಟು ಪಲಾಯನ ಮಾಡಿದ್ದು ಇವರನ್ನು ಆರ್ಥಿಕ ಅಪರಾಧಿಗಳು ಎಂದು ಘೋಷಿಸಲಾಗಿದೆ.

ಕಳೆದ ತಿಂಗಳು ಅಲಿಭಾಗ್ ಕಡಲ ತೀರದಲ್ಲಿರುವ ಈ ಐಶಾರಾಮಿ ಕಟ್ಟಡವನ್ನು ತೆರವುಗೊಳಿಸುವಂತೆ ಮುಂಬೈ ಹೈಕೋರ್ಟ್ ತೀರ್ಪು ನೀಡಿದ್ದಾಗ, ಈ ಸ್ವತ್ತನ್ನು ಬ್ಯಾಂಕ್‌ಗೆ ಅಡಮಾನವಾಗಿ ಇಡಲಾಗಿದೆ. ಹೀಗಾಗಿ ಇದನ್ನು ಧ್ವಂಸಗೊಳಿಸದಂತೆ ಒತ್ತಾಯಿಸಿ ಉದ್ಯಮಿ ನೀರವ್ ಮೋದಿ ಪರ ವಕೀಲರು ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ನಂತರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಗಲೆಯ ಒಳಗಿದ್ದ ಎಲ್ಲಾ ಐಶಾರಾಮಿ ವಸ್ತುಗಳನ್ನು ತೆರವುಗೊಳಿಸಿ ಬಂಗಲೆಯನ್ನು ಜಿಲ್ಲಾಡಳಿತದ ವಶಕ್ಕೆ ನೀಡಿತ್ತು.