samachara
www.samachara.com
ಅಯೋಧ್ಯೆ ಭೂ ವಿವಾದಕ್ಕೆ ಸುಪ್ರೀಂ ಸಂಧಾನದ ಸೂತ್ರ, ಮಧ್ಯಸ್ಥಿಕೆ ತಂಡದಲ್ಲಿ ರವಿಶಂಕರ್‌ಗೆ ಸ್ಥಾನ
ಸುದ್ದಿ ಸಾರ

ಅಯೋಧ್ಯೆ ಭೂ ವಿವಾದಕ್ಕೆ ಸುಪ್ರೀಂ ಸಂಧಾನದ ಸೂತ್ರ, ಮಧ್ಯಸ್ಥಿಕೆ ತಂಡದಲ್ಲಿ ರವಿಶಂಕರ್‌ಗೆ ಸ್ಥಾನ

ಸಮಿತಿ ಸದಸ್ಯರು ಉತ್ತರ ಪ್ರದೇಶದ ಫೈಝಾಬಾದ್‌ನಲ್ಲಿ ಎಲ್ಲಾ ಅರ್ಜಿದಾರರನ್ನು ಭೇಟಿಯಾಗಲಿದ್ದಾರೆ. ಈ ಸಮಿತಿಗೆ ಒಂದು ತಿಂಗಳ ಸಮಯವಕಾಶ ನೀಡಲಾಗಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ.

ದೇಶದ ಸುದೀರ್ಘ ‘ರಾಮ ಜನ್ಮಭೂಮ-ಬಾಬರಿ ಮಸೀದಿ ಭೂ ವಿವಾದ’ಕ್ಕೆ ಮಧ್ಯಸ್ಥಿಕೆಯಲ್ಲಿ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಈ ಸಂಬಂಧ ಶುಕ್ರವಾರ ಮೂವರು ಸದಸ್ಯರ ತಂಡವನ್ನು ಅದು ರಚನೆ ಮಾಡಿದೆ.

ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಫ್‌ಎಂ ಇಬ್ರಾಹಿಂ ಖಲೀಫುಲ್ಲಾ ಮತ್ತು ಧಾರ್ಮಿಕ ನಾಯಕ ಶ್ರೀ ಶ್ರೀ ರವಿಶಂಕರ್‌ ತಂಡದಲ್ಲಿದ್ದು, “ಇವರುಗಳು ಉತ್ತರ ಪ್ರದೇಶದ ಫೈಝಾಬಾದ್‌ನಲ್ಲಿ ಎಲ್ಲಾ ಅರ್ಜಿದಾರರನ್ನು ಭೇಟಿಯಾಗಲಿದ್ದಾರೆ. ಈ ಸಮಿತಿಗೆ ಒಂದು ತಿಂಗಳ ಸಮಯವಕಾಶ ನೀಡಲಾಗಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ,” ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ಹೇಳಿದೆ.

"ಮಧ್ಯಸ್ಥಿಕೆ ನಡೆಯಲಿದ್ದು, ಇದಕ್ಕೆ ಯಾವುದೇ ಕಾನೂನಾತ್ಮಕ ಅಡ್ಡಿಗಳು ನಮಗೆ ಕಾಣಿಸುತ್ತಿಲ್ಲ," ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಆದೇಶದಲ್ಲಿ ತಿಳಿಸಿದ್ದಾರೆ. ಮಧ್ಯಸ್ಥಿಕೆಯ ಪ್ರಕ್ರಿಯೆಗಳು ಗೌಪ್ಯವಾಗಿರಲಿದ್ದು, ಈ ಸಂಬಂಧ ಯಾವುದೇ ಮಾಧ್ಯಮಗಳು ವರದಿ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ನಿವೃತ್ತ ನ್ಯಾಯಮೂರ್ತಿ ಖಲೀಫುಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದು, ಹಿರಿಯ ವಕೀಲ ಶ್ರೀರಾಮ್‌ ಪಂಚು ಇದರ ಮೂರನೇ ಸದಸ್ಯರಾಗಿ ಇರಲಿದ್ದಾರೆ. ಒಂದೊಮ್ಮೆ ಅಗತ್ಯ ಬಿದ್ದರೆ ಇವರುಗಳು ಹೆಚ್ಚಿನ ಸದಸ್ಯರನ್ನು ಸಮಿತಿಯೊಳಗೆ ಸೇರಿಸಿಕೊಳ್ಳಬಹುದು ಎಂಬುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಹಾಗೆ ನೋಡಿದರೆ ಸಂಧಾನಕ್ಕೆ ಹೆಚ್ಚಿನ ಅರ್ಜಿದಾರರು ವಿರೋಧ ವ್ಯಕ್ತಪಡಿಸಿದ್ದರು. ಹೀಗಿದ್ದೂ ನ್ಯಾಯಾಲಯ ಸಂಧಾನದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡಿದೆ. ವಿಚಾರಣೆ ವೇಳೆ ಸಾಂವಿಧಾನಿಕ ಪೀಠ, ಇದು ಆಸ್ತಿಯ ಪ್ರಕರಣವಲ್ಲ. ಬದಲಿಗೆ, "ಮನಸ್ಸು, ನಂಬಿಕೆ ಮತ್ತು ಸೌಹಾರ್ಧಯುತ ಪರಿಹಾರದ ವಿಷಯ," ಎಂದು ವ್ಯಾಖ್ಯಾನಿಸಿತ್ತು. ಮತ್ತು ನ್ಯಾಯಾಲಯದ ಆದೇಶವೇನಿದ್ದರೂ ಕೊನೆಯ ಆಯ್ಕೆ ಎಂದು ಸ್ಪಷ್ಟಪಡಿಸಿತ್ತು.

ಅಯೋಧ್ಯೆಯಲ್ಲಿರುವ 2.77 ಎಕರೆ ಜಾಗದಲ್ಲಿ 16ನೇ ಸತಮಾನದ ಮಸೀದಿ ಇದೆ. ಮೊಘಲ್‌ ರಾಜ ಬಾಬರ್‌ ಇದನ್ನು ನಿರ್ಮಿಸಿದ ಎನ್ನಲಾಗಿದೆ. ಇದು ರಾಮನ ಜನ್ಮ ಸ್ಥಾನವಾಗಿದ್ದು, ಇಲ್ಲಿ ಇದ್ದ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬುದಾಗಿ ಬಹುಪಾಲು ಹಿಂದೂಗಳ ನಂಬಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಇದೊಂದು ಜಾಗದ ಮೇಲೆ ಕಣ್ಣಿಟ್ಟು ಕಳೆದ 6 ದಶಕದಿಂದ ನಿರಂತರ ಹೋರಾಟ ನಡೆಯುತ್ತಲೇ ಬಂದಿದೆ.

ಇದರ ನಡುವೆ 1992ರ ಡಿಸೆಂಬರ್‌ 6ರಂದು ಮಸೀದಿಯೊಳಗೆ ನುಗ್ಗಿದ್ದ ಕರ ಸೇವಕರು ಅದರ ಅರ್ಧ ಭಾಗ ಕೆಡವಿದ್ದರು. ಇದಾದ ನಂತದ ದೇಶದಲ್ಲಿ ನಡೆದಿದ್ದ ಕೋಮುಗಲಭೆಯಲ್ಲಿ 2,000 ಕ್ಕೂ ಹೆಚ್ಚು ಜನರು ಅಸು ನೀಗಿದ್ದರು. ಬಳಿಕ ಈ ಹೋರಾಟ ನ್ಯಾಯಾಲಯದಲ್ಲಿ ನಡೆಯುತ್ತಾ ಬಂದಿತ್ತು. ಇದೀಗ ಅಂತಿಮವಾಗಿ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ವಿವಾದ ಹೋಗಿ ತಲುಪಿದೆ.