samachara
www.samachara.com
ಬೆಳಿಗ್ಗೆ ಬೂಟಿನೇಟು, ಸಂಜೆ ಲಾಠಿಯೇಟು: ಯೋಗಿ ನಾಡಲ್ಲಿ ನ್ಯಾಯಕ್ಕಾಗಿ ಮೊರೆ ಇಟ್ಟ ಶಾಸಕ
ಸುದ್ದಿ ಸಾರ

ಬೆಳಿಗ್ಗೆ ಬೂಟಿನೇಟು, ಸಂಜೆ ಲಾಠಿಯೇಟು: ಯೋಗಿ ನಾಡಲ್ಲಿ ನ್ಯಾಯಕ್ಕಾಗಿ ಮೊರೆ ಇಟ್ಟ ಶಾಸಕ

ಬೂಟಿನೇಟು ತಿಂದಿದ್ದ ಶಾಸಕ ರಾಕೇಶ್‌ ಬಘೇಲ್‌ ಬುಧವಾರ ರಾತ್ರಿಯೇ ಧರಣಿ ಆರಂಭಿಸಿದ್ದರು. ಲಾಠಿ ಚಾರ್ಜ್‌ ಹಿಂದೆ ಇರುವ ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹವಾಗಿತ್ತು.

ಪರಸ್ಪರ ಹೊಡೆದಾಡಿಕೊಳ್ಳುವ ಮೂಲಕ ಬುಧವಾರ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದವರು ಉತ್ತರ ಪ್ರದೇಶದ ಸಂತ ಕಬೀರ್‌ ನಗರದ ಸಂಸದ ಶರದ್‌ ತ್ರಿಪಾಠಿ ಮತ್ತು ಮೆಹದಾವಲ್‌ ಶಾಸಕ ರಾಕೇಶ್‌ ಸಿಂಗ್ ಬಘೇಲ್‌.

ಬುಧವಾರ ಸಂಪುಟ ಸಚಿವ ಅಶುತೋಷ್ ಟಂಡನ್‌ ಸಮ್ಮುಖದಲ್ಲಿ ನಡೆಯುತ್ತಿದ್ದ ಸಂತ ಕಬೀರ್‌ ನಗರ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಈ ಘಟನೆ ನಡೆದಿತ್ತು. ಮೆಹದಾವಲ್ ಶಾಸಕ ಬಘೇಲ್‌ ಮೇಲೆ ಶರದ್‌ ತ್ರಿಪಾಠಿ ಬೂಟಿನಿಂದ ಹಲ್ಲೆ ನಡೆಸಿದ್ದರು.

ರಸ್ತೆಯೊಂದರ ಉದ್ಘಾಟನಾ ಫಲಕದಲ್ಲಿ ಹೆಸರು ಹಾಕುವ ಸಂಬಂಧ ಶಾಸಕರು ಮತ್ತು ಸಂಸದರ ನಡುವೆ ವಾಗ್ವಾದ ವಿಕೋಪಕ್ಕೆ ಹೋಗಿ ಅದು ಹಲ್ಲೆಯಲ್ಲಿ ಮುಕ್ತಾಯ ಕಂಡಿತ್ತು.

ಈ ಘಟನೆ ನಂತರ ಬಘೇಲ್‌ ಬೆಂಬಲಿಗರು ನಗರದಲ್ಲಿ ದಾಂಧಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಮತ್ತೆ ಅವರ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಬೀಸಿದ್ದರು. ಇದರಿಂದ ಬೂಟಿನೇಟು ತಿಂದಿದ್ದ ಶಾಸಕ ರಾಕೇಶ್‌ ಬಘೇಲ್‌ ರಾತ್ರಿಯೇ ಧರಣಿ ಆರಂಭಿಸಿದ್ದರು. ಲಾಠಿ ಚಾರ್ಜ್‌ ಹಿಂದೆ ಇರುವ ಜಿಲ್ಲಾಡಳಿತ ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಆಗ್ರಹವಾಗಿತ್ತು.

ಈ ಎಲ್ಲಾ ಘಟನೆಗಳು ಉತ್ತರ ಪ್ರದೇಶ ಬಿಜೆಪಿಯ ಕಣ್ಣು ಕೆಂಪಗಾಗಿಸಿದ್ದು, ಬಂದು ಭೇಟಿಯಾಗುವಂತೆ ದಾಳಿ ನಡೆಸಿದ ತ್ರಿಪಾಠಿ ಮತ್ತು ಬಘೇಲ್‌ ಇಬ್ಬರಿಗೂ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ನಾಥ್‌ ಪಾಂಡೆ ಬುಲಾವ್‌ ನೀಡಿದ್ದಾರೆ.

ಜತೆಗೆ ಯೋಗಿ ಆದಿತ್ಯನಾಥ್‌ ಶಾಸಕರ ಜತೆ ಮಾತನಾಡಿದ್ದು ಧರಣಿ ಕೈಬಿಡುವಂತೆ ಸೂಚಿಸಿದ್ದಾರೆ. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದರಿಂದ ಬಘೇಲ್‌ ಧರಣಿ ಕೈ ಬಿಟ್ಟು ಈಗ ರಾಜಧಾನಿ ಲಕ್ನೋದತ್ತ ಹೊರಟಿದ್ದಾರೆ.

“ಈ ಘಟನೆ ದುರದೃಷ್ಟಕರ ಮತ್ತು ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ. ಆದರೆ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ನಾಯಕತ್ವದ ಮುಂದೆ ನನ್ನ ವಿಚಾರಗಳನ್ನು ಇಡಲಿದ್ದೇನೆ. ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ," ಎಂದು ರಾಕೇಶ್ ಬಘೇಲ್‌ ‘ಮಿಲೇನಿಯಂ ಪೋಸ್ಟ್‌’ಗೆ ತಿಳಿಸಿದ್ದಾರೆ.

ಹೀಗೆ ಯೋಗಿ ನಾಡಿನ ಶಾಸಕರೊಬ್ಬರು ಬೂಟಿನೇಟು ತಿಂದು, ಲಾಠಿ ಏಟಿಗೂ ಗುರಿಯಾಗಿ ತಮ್ಮದೇ ಸರಕಾರದ ಆಡಳಿತದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.