samachara
www.samachara.com
ಕಾಶ್ಮೀರದಲ್ಲಿ ಗ್ರೆನೇಡ್ ಸ್ಫೋಟಕ್ಕೆ ಓರ್ವ ಬಲಿ, 32 ಜನರಿಗೆ ಗಾಯ
ಸುದ್ದಿ ಸಾರ

ಕಾಶ್ಮೀರದಲ್ಲಿ ಗ್ರೆನೇಡ್ ಸ್ಫೋಟಕ್ಕೆ ಓರ್ವ ಬಲಿ, 32 ಜನರಿಗೆ ಗಾಯ

ಮೇಲ್ನೋಟಕ್ಕೆ ಇದು ಉಗ್ರಗಾಮಿಗಳು ನಡೆಸಿರುವ ದಾಳಿಯಂತೆ ಕಂಡರೂ, ಈವರೆಗೆ ದಾಳಿಯ ಹೊಣೆಯನ್ನು ಯಾವ ಉಗ್ರಗಾಮಿ ಸಂಘಟನೆಗಳೂ ಹೊತ್ತುಕೊಂಡಿಲ್ಲ.

ಫೆಬ್ರವರಿ 14 ರಂದು ಪುಲ್ವಾಮದಲ್ಲಿ ನಡೆದ ಆತ್ಮಹುತಿ ದಾಳಿಗೆ 44 ಸಿಆರ್‌ಪಿಎಫ್ ಯೋಧರು ಮೃತಪಟ್ಟ ಘಟನೆ ಜನ ಮಾನಸದಿಂದ ಮಾಸುವ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಗ್ರೆನೇಡ್ ದಾಳಿ ನಡೆದಿದೆ.

ಇಂದು ಬೆಳಗ್ಗೆ 11.30 ರ ಸುಮಾರಿಗೆ ಜಮ್ಮುವಿನ ಪ್ರಮುಖ ಬಸ್ ನಿಲ್ದಾಣದಲ್ಲಿ ಗ್ರೆನೇಡ್‌ ದಾಳಿ ನಡೆದಿದ್ದು ದಾಳಿಯಲ್ಲಿ ಒರ್ವ ಸಾವನ್ನಪ್ಪಿದ್ದು, 32 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ 5 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಮೇಲ್ನೋಟಕ್ಕೆ ಇದು ಉಗ್ರಗಾಮಿಗಳು ನಡೆಸಿರುವ ದಾಳಿಯಂತೆ ಕಂಡರೂ, ಈವರೆಗೆ ದಾಳಿಯ ಹೊಣೆಯನ್ನು ಯಾವ ಉಗ್ರಗಾಮಿ ಸಂಘಟನೆಗಳೂ ಹೊತ್ತುಕೊಂಡಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಮನೀಶ್ ಕುಮಾರ್ ಸಿನ್ಹಾ, “ನಗರದ ಮಧ್ಯ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲೇ ಗ್ರೆನೇಡ್ ದಾಳಿ ನಡೆದಿದೆ. ನಿಲುಗಡೆಯಾಗಿದ್ದ ಬಸ್‌ನ ಕೆಳಗೆ ಬಾಂಬ್ ಅಳವಡಿಸಿರುವ ಸಾಧ್ಯತೆ ಇದೆ. ಸ್ಫೋಟದ ವೇಳೆ ಬಸ್‌ನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ. ಗ್ರೆನೇಡ್ ದಾಳಿ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಘಟನೆಗೆ ಕಾರಣರಾದವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು” ಎಂದು ತಿಳಿಸಿದ್ದಾರೆ.

ಕಳೆದೊಂದು ವರ್ಷದಲ್ಲಿ ಜಮ್ಮುವಿನ ಜನನಿಬಿಡ ಪ್ರದೇಶಗಳಲ್ಲಿ ಗ್ರೆನೇಡ್ ದಾಳಿ ನಡೆಯುತ್ತಿರುವುದು ಇದು ಮೂರನೇ ಬಾರಿ ಎಂಬುದು ಉಲ್ಲೇಖಾರ್ಹ.

ಪುಲ್ವಾಮ ದಾಳಿಯ ನಂತರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರಗಳನ್ನು ಗುರಿಯಾಗಿಸಿ ಭಾರತೀಯ ವಾಯುಪಡೆ ಬಾಲಾಕೋಟ್‌ನಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಇನ್ನೂ ಗೊಂದಲಗಳಿವೆ. ಈ ನಡುವೆ ಉಗ್ರರು ಕಣಿವೆ ರಾಜ್ಯದಲ್ಲಿ ಮತ್ತಷ್ಟು ದಾಳಿ ಸಂಘಟಿಸಲು ಯೋಜನೆ ರೂಪಿಸಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.

ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಬೆನ್ನಿಗೆ ಜಮ್ಮುವಿನ ಜನನಿಬಿಡ ಪ್ರದೇಶದಲ್ಲಿ ಮತ್ತೊಂದು ಗ್ರೆನೇಡ್ ದಾಳಿ ನಡೆದಿರುವುದು ಆತಂಕಕ್ಕೀಡು ಮಾಡಿದೆ.