samachara
www.samachara.com
ಅಯೋಧ್ಯೆ ಭೂ ವಿವಾದ: ಮಧ್ಯಸ್ಥಿಕೆ ಮೂಲಕ ಪರಿಹಾರ; ತೀರ್ಪು ಕಾಯ್ದಿರಿಸಿದ ಸುಪ್ರಿಂ ಕೋರ್ಟ್
ಸುದ್ದಿ ಸಾರ

ಅಯೋಧ್ಯೆ ಭೂ ವಿವಾದ: ಮಧ್ಯಸ್ಥಿಕೆ ಮೂಲಕ ಪರಿಹಾರ; ತೀರ್ಪು ಕಾಯ್ದಿರಿಸಿದ ಸುಪ್ರಿಂ ಕೋರ್ಟ್

ಭೂತಕಾಲವನ್ನು ನಿಯಂತ್ರಿಸುವಷ್ಟು ಶಕ್ತಿ ನಮ್ಮಲ್ಲಿಲ್ಲ. ಮೊಘಲ್ ದೊರೆ ಬಾಬರ್ ಮಾಡಿದ ದಾಳಿಯನ್ನು ನಾವೀಗ ರದ್ದು ಮಾಡಲು ಸಾಧ್ಯವಿಲ್ಲ. ಆ ಕುರಿತ ಚಿಂತೆಯೂ ನಮಗಿಲ್ಲ ಎಂದು ಹಿಂದೂ ಮಹಾಸಭಾ ವಕೀಲನ ವಿರುದ್ಧ ಹರಿಹಾಯ್ದರು ಜಸ್ಟೀಸ್‌ ಬೊಬ್ಡೆ. 

ರಾಮಜನ್ಮ ಭೂಮಿ-ಬಾಬರಿ ಮಸೀದಿ ಭೂ ವಿವಾದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದ್ದು, ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹಿಂದೂ ಮಹಾಸಭಾ ಹಾಗೂ ಸುನ್ನಿ ವಕ್ಫ್‌ ಮಂಡಳಿಗೆ ಸೂಚಿಸಿದೆ.

ಅಯೋಧ್ಯೆ ವಿವಾದದ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠ, “ಇದು ಕೇವಲ ಭೂಮಿಯ ಒಡೆತನಕ್ಕೆ ಮಾತ್ರ ಸೀಮಿತವಾದ ಪ್ರಕರಣವಲ್ಲ, ಬದಲಿಗೆ ಭಾವನೆ ಹಾಗೂ ನಂಬಿಕೆಗೆ ಸಂಬಂಧ ಪಟ್ಟ ವಿಚಾರವಾಗಿದ್ದು, ಈ ವಿವಾದಕ್ಕೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ಸಂಧಾನ ಸಮಿತಿ ನೇಮಿಸಿ ಆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ,” ಎಂದು ಸಲಹೆ ನೀಡಿತು.

ಆದರೆ ಈ ಸಲಹೆಯನ್ನು ಹಿಂದೂ ಮಹಾಸಭಾ ತಿರಸ್ಕರಿಸಿದೆ.

ತರಾಟೆ ತೆಗೆದುಕೊಂಡ ಕೋರ್ಟ್

ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಹಿಂದೂ ಮಹಾಸಭಾ ವಕೀಲರು, ಮೊಘಲ್ ದೊರೆ ಬಾಬರ್ ಹೆಸರನ್ನು ಉಲ್ಲೇಖಿಸಿ ವಾದವನ್ನು ಮಂಡಿಸಿದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಜಸ್ಟೀಸ್‌ ಎಸ್‌. ಎ. ಬೊಬ್ಡೆ, “ಇತಿಹಾಸ ಬಗ್ಗೆ ನಮಗೆ ಹೇಳಬೇಡಿ. ನಮಗೂ ಇತಿಹಾಸದ ಅರಿವಿದೆ. ಭೂತಕಾಲವನ್ನು ನಿಯಂತ್ರಿಸುವಷ್ಟು ಶಕ್ತಿ ನಮ್ಮಲ್ಲಿಲ್ಲ. ಮೊಘಲ್ ದೊರೆ ಬಾಬರ್ ಮಾಡಿದ ದಾಳಿಯನ್ನು ನಾವೀಗ ರದ್ದು ಮಾಡಲು ಸಾಧ್ಯವಿಲ್ಲ. ಆ ಕುರಿತ ಚಿಂತೆಯೂ ನಮಗಿಲ್ಲ,” ಎಂದರು.

ಸಂಧಾನ ಸಾಧ್ಯತೆಗಳನ್ನು ಮುಂದಿಟ್ಟ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ಅಯೋಧ್ಯೆ ಪ್ರಕರಣದ ಕುರಿತ ತೀರ್ಪು ದೇಶದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಬೀರಬಹುದಾದ ಪರಿಣಾಮದ ಕುರಿತ ಅರಿವು ನಮಗಿದೆ. ಹೀಗಾಗಿ ಸಂಧಾನ ಪ್ರಯತ್ನ ನಡೆಸಲು ನ್ಯಾಯಾಲಯ ತೀರ್ಮಾನಿಸಿದೆ. ಸಂಧಾನ ಸಮಿತಿಯಲ್ಲಿ ಯಾರೆಲ್ಲಾ ಇರಬಹುದು ಎನ್ನುವ ಬಗ್ಗೆ ನಿಮ್ಮ ಸಲಹೆ ನೀಡಿ ಎಂದು ಹಿಂದೂ ಮಹಾಸಭಾ ಪರ ವಕೀಲರ ಅಭಿಪ್ರಾಯ ಕೇಳಿದರು.

ಸಂಧಾನ ಸಾಧ್ಯವಿಲ್ಲವೆಂದ ಮಹಾಸಭಾ

ನ್ಯಾಯಾಲಯದ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದ ಹಿಂದೂ ಮಹಾಸಭಾ ವಕೀಲರು, “ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನ ಸಮಿತಿ ರಚಿಸುವ ನ್ಯಾಯಾಲಯದ ತೀರ್ಮಾನವನ್ನು ಜನಸಾಮಾನ್ಯರು ಒಪ್ಪಿಕೊಳ್ಳಲಾರರು. ಇದು ಹಿಂದೂಗಳ ಭಾವನಾತ್ಮಕ ವಿಚಾರವಾಗಿದ್ದು, ಇದರಲ್ಲಿ ಮತ್ತೊಬ್ಬರು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಏಳು ದಶಕಗಳಿಂದ ನಾವು ಈ ತೀರ್ಪಿಗಾಗಿ ಕಾಯುತ್ತಿದ್ದೇವೆ” ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಆದರೆ, ಹಿಂದೂ ಮಹಾಸಭಾ ವಾದವನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಎಸ್‌. ಎ. ಬೊಬ್ಡೆ, “ ಒಂದು ಪ್ರಯತ್ನ ಆರಂಭವಾಗುವುದಕ್ಕೆ ಮೊದಲೇ ಅದರ ಫಲಿತಾಂಶದ ಕುರಿತು ನೀವು ಏಕೆ ಮೊದಲೇ ತೀರ್ಪು ನೀಡುತ್ತಿದ್ದೀರಿ? ಯಾವುದೇ ವಿಚಾರವನ್ನು ಮೊದಲೇ ಊಹಿಸಬೇಡಿ. ಪ್ರಯತ್ನ ಮಾಡದೆ ನ್ಯಾಯಾಲಯದ ಸಲಹೆಯನ್ನು ತಿರಸ್ಕರಿಸುವುದು ಎಷ್ಟು ಸರಿ?” ಎಂದು ಪ್ರಶ್ನೆ ಮಾಡಿದರು.

ಅಲ್ಲದೆ “ನ್ಯಾಯಾಲಯವೇ ಮಧ್ಯಸ್ಥಿಕೆಗೆ ಅವಕಾಶ ಸಿಗಬೇಕು ಎಂದು ಅಭಿಪ್ರಾಯ ಪಟ್ಟಾಗ ಅದನ್ನು ಗೌರವಿಸುವುದು ನಿಮ್ಮ ಕರ್ತವ್ಯ” ಎಂದು ತಾಕೀತು ಮಾಡಿದರು.

ಒಪ್ಪಿಗೆ ಸೂಚಿಸಿದ ಮುಸ್ಲಿಂ ಪಾರ್ಟಿ

ಮಧ್ಯಸ್ಥಿಕೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಸುಪ್ರಿಂ ಕೋರ್ಟ್ ಸಲಹೆಗೆ ಮುಸ್ಲಿಂ ಪಾರ್ಟಿ ಪರ ವಕೀಲ ರಾಜೀವ್ ಧವನ್ ಸಮ್ಮತಿ ಸೂಚಿಸಿದರು. ಆದರೆ, ಇಂತಹ ಮಧ್ಯಸ್ಥಿಕೆಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಭಂಧಿಸಬೇಕು ಎಂದು ಅಭಿಪ್ರಾಯಪಟ್ಟರು.

ಧವನ್ ಅವರ ಅಭಿಪ್ರಾಯಕ್ಕೆ ಒಮ್ಮತ ಸೂಚಿಸಿದ ಜಸ್ಟೀಸ್‌ ಎಸ್. ಎ. ಬೊಬ್ಡೆ, ರಾಮಜನ್ಮ ಭೂಮಿ-ಬಾಬರಿ ಮಸೀದಿ ವಿವಾದದ ಮಧ್ಯಸ್ಥಿಕೆಯನ್ನು ಮಾಧ್ಯಮಗಳು ವರದಿ ಮಾಡಬಾರದು ಹಾಗೂ ಈ ಕುರಿತು ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಧ್ಯ ಪ್ರವೇಶಸಿದ ಮತ್ತೊಬ್ಬ ನ್ಯಾಯಮೂರ್ತಿ ಜಸ್ಟೀಸ್ ಚಂದ್ರಚೂಡ್, "ಇದು ಇಬ್ಬರ ನಡುವಿನ ವ್ಯಾಜ್ಯವಲ್ಲ. ಎರಡು ಸಮುದಾಯಗಳ ನಡುವಿನ ವ್ಯಾಜ್ಯ. ಮಧ್ಯಸ್ಥಿಕೆ ಮೂಲಕ ನಾವು ಹೇಗೆ ಲಕ್ಷಾಂತರ ಜನರನ್ನು ಒಂದಾಗಿಸಲು ಇದು ಸಾಧ್ಯವೇ?” ಎಂದು ಅನುಮಾನ ವ್ಯಕ್ತಪಡಿಸಿದರು.

ತಮ್ಮದೇ ಪೀಠದ ಸದಸ್ಯರ ಅನುಮಾನವನ್ನು ತಿರಸ್ಕರಿಸಿದ ಜಸ್ಟೀಸ್‌ ಎಸ್‌. ಎ. ಬೊಬ್ಡೆ, “ಸಂಧಾನ ಎಂದರೆ ಹೊಂದಾಣಿಕೆ ಎಂದು ಅರ್ಥವಲ್ಲ. ವಿವಾದವನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಂಧಾನದ ಒಂದು ಉತ್ತಮ ಮಾರ್ಗ. ಇದು ನ್ಯಾಯಾಲಯ ಕಾರ್ಯ ನಿರ್ವಹಿಸುವ ವಿಧಾನವೂ ಹೌದು. ಯಾವುದೇ ಕಕ್ಷೀದಾರರು ಒಂದು ಧರ್ಮವನ್ನು ಪ್ರತಿನಿಧಿಸುವಾಗ ಮಧ್ಯಸ್ಥಿಕೆ ಮೂಲಕ ಸಮಸ್ಯೆಗೆ ಪರಿಹಾರ ಸೂಚಿಸುವುದು ಉತ್ತಮ” ಎಂದರು.

ನ್ಯಾಯಾಲಯ ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿದೆ. ಮಧ್ಯಸ್ಥಿಕೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಕೇವಲ ಶೇ. 1ರಷ್ಟು ಅವಕಾಶವಿದ್ದರೂ ಸಹ ಎರಡೂ ಕಕ್ಷೀದಾರರೂ ಮಧ್ಯಸ್ಥಿಕೆಗೆ ಮುಂದಾಗಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯ್‌, ಜಸ್ಟೀಸ್ ಎಸ್‌. ಎ. ಬೊಬ್ಡೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಎಸ್‌. ಎ. ಸಜೀರ್ ವಿಚಾರಣೆ ವೇಳೆ ಉಪಸ್ಥಿತರಿದ್ದರು.

ರಾಮ ಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ತೀರ್ಪು ನೀಡಿದ್ದ ಅಲಹಾಬಾದ್ ನ್ಯಾಯಾಲಯ, ಅಯೋಧ್ಯೆಯಲ್ಲಿರುವ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್‌ ಬೋರ್ಡ್, ನಿರ್ಮೋಹಿ ಅಖಾರ ಹಾಗೂ ರಾಮ್ ಲಲ್ಲಾ ಮಂಡಳಿಗೆ ಸಮಾನವಾಗಿ ಹಂಚುವಂತೆ ಆದೇಶಿಸಿತ್ತು. ಈ ಕುರಿತು ಸಲ್ಲಿಕೆಯಾದ ಮೇಲ್ಮನವಿಯನ್ನೀಗ ಸುಪ್ರಿಂ ಕೋರ್ಟ್‌ನ ಪಂಚ ಸದಸ್ಯರ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ.