samachara
www.samachara.com
ಬಿಜೆಪಿ ಜಾಲತಾಣಕ್ಕೆ ಕನ್ನ ಕೊರೆದ ಹ್ಯಾಕರ್ಸ್‌; ಪ್ರತಿಪಕ್ಷ ಲೇವಡಿ
ಸುದ್ದಿ ಸಾರ

ಬಿಜೆಪಿ ಜಾಲತಾಣಕ್ಕೆ ಕನ್ನ ಕೊರೆದ ಹ್ಯಾಕರ್ಸ್‌; ಪ್ರತಿಪಕ್ಷ ಲೇವಡಿ

“ವೆಬ್‌ಸೈಟನ್ನೇ ರಕ್ಷಿಸಿಕೊಳ್ಳಲಾಗದವರು ದೇಶವನ್ನು ರಕ್ಷಿಸಿಕೊಳ್ಳುತ್ತಾರಾ?” ಎಂಬ ಪ್ರಶ್ನೆಯನ್ನು ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ಸಂಚಾಲಕ ಝೋಹೆಬ್‌ ಟ್ಟೀಟ್‌ ಮಾಡಿ ಬಿಜೆಪಿಯ ಕಾಲೆಳೆದಿದ್ದಾರೆ.

ಸೈಬರ್‌ ಯುಗದಲ್ಲಿ ಬಿಜೆಪಿಯ ಅಧಿಕೃತ ವೆಬ್‌ಸೈಟ್‌ ಹ್ಯಾಕ್‌ ಆಗಿದೆ.

bjp.org ಖಾತೆಗೆ ಕನ್ನ ಹಾಕಿರುವ ಹ್ಯಾಕರ್‌ಗಳು ಸ್ವತಃ ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದ ‘ಅಶ್ಲೀಲ ಮೀಮ್ಸ್‌’ಗಳನ್ನು ಹರಿಯಬಿಟ್ಟಿದ್ದರು.

ಟ್ರೋಲ್‌ ಆರ್ಮಿ, ಸೋಷಿಯಲ್‌ ಮೀಡಿಯಾ ವಾರ್‌ಗಳ ಮೂಲಕ ಭಾರತದ ಚುನಾವಣಾ ಅಖಾಡದಲ್ಲಿ ಧೂಳೆಬ್ಬಿಸಿದ ಪಕ್ಷ ಬಿಜೆಪಿ. ಇದೀಗ ಅದೇ ಪಕ್ಷದ ಅಧಿಕೃತ ವೆಬ್‌ಸೈಟ್‌ ಹ್ಯಾಕರ್‌ಗಳ ಕೈಚಳಕಕ್ಕೆ ಒಳಗಾಗಿರುವುದು ವಿರೋಧಿಗಳ ನಗೆಪಾಟಲಿಗೆ ಗುರಿಯಾಗಿದೆ.

ಮೊದಲಿಗೆ ಟ್ಟೀಟ್‌ ಮಾಡುವ ಮೂಲಕ ಈ ವಿಚಾರವನ್ನು ಹೊರ ಜಗತ್ತಿನ ಗಮನಕ್ಕೆ ತಂದ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ಮುಖ್ಯಸ್ಥೆ ರಮ್ಯಾ, ‘ಈಗ ನೀವು ಬಿಜೆಪಿಯ ವೆಬ್‌ಸೈಟ್‌ ನೋಡದಿದ್ದರೆ ಅಮೂಲ್ಯ ಕ್ಷಣವನ್ನು ಕಳೆದುಕೊಳ್ಳುತ್ತೀರಿ’ ಎಂಬ ಅರ್ಥದಲ್ಲಿ ಪೋಸ್ಟ್‌ ಹಾಕಿ ಬಿಜೆಪಿಗರನ್ನು ಕೆಣಕಿದ್ದಾರೆ.

ಇದಕ್ಕೆ ಮತ್ತೊಂದಷ್ಟು ಜನರು ದನಿಗೂಡಿಸಿದ್ದು, “ವೆಬ್‌ಸೈಟನ್ನೇ ರಕ್ಷಿಸಿಕೊಳ್ಳಲಾಗದವರು ದೇಶವನ್ನು ರಕ್ಷಿಸಿಕೊಳ್ಳುತ್ತಾರಾ?” ಎಂಬ ಪ್ರಶ್ನೆಯನ್ನು ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ ಸಂಚಾಲಕ ಝೋಹೆಬ್‌ ಟ್ಟೀಟ್‌ ಮಾಡಿ ಬಿಜೆಪಿಯ ಕಾಲೆಳೆದಿದ್ದಾರೆ.

"ಇವಿಎಂ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದಿದ್ದ ಐಟಿ ತಜ್ಞ ಇದೀಗ ಅವರದ್ದೇ ಪಕ್ಷದ ವೆಬ್‌ಸೈಟ್‌ ಹ್ಯಾಕ್‌ ಆಗಿದ್ದನ್ನು ನೋಡುತ್ತಿದ್ದಾರೆ. ಆದರೆ ಇದಕ್ಕೆ ಸಾಕ್ಷಿ ಕೇಳಬೇಡಿ,” ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರ ಸೌರಬ್‌ ಭಾರದ್ವಜ್‌ ವ್ಯಂಗ್ಯವಾಡಿದ್ದಾರೆ.

ಈ ಬೆಳವಣಿಗೆಯಿಂದ ಮುಜುಗರಕ್ಕೀಡಾಗಿರುವ ಬಿಜೆಪಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಬಿಜೆಪಿ ತನ್ನ ವೆಬ್‌ಸೈಟ್‌ನ್ನು ಮರಳಿ ತೆಕ್ಕೆಗೆ ತೆಗೆದುಕೊಂಡಿದ್ದು, ಸದ್ಯದಲ್ಲೇ ಬರಲಿದ್ದೇವೆ ಎಂಬ ಸಂದೇಶವನ್ನು ಅಡ್ಮಿನ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ದಾಳಿಯ ಹೊಣೆಯನ್ನು ಯಾವುದೇ ಹ್ಯಾಕರ್‌ಗಳೂ ಹೊತ್ತುಕೊಂಡಿಲ್ಲ. ನಿನ್ನೆಯಷ್ಟೇ ಭಾರತದ 70ಕ್ಕೂ ಹೆಚ್ಚು ಸರಕಾರಿ ವೆಬ್‌ಸೈಟ್‌ಗಳು ಹ್ಯಾಕ್‌ ಆಗಿವೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.