samachara
www.samachara.com
ಸಮನ್ವಯ ಸಮಿತಿಯಲ್ಲಿ ಮೂಡದ ಒಮ್ಮತ, ಹೈಕಮಾಂಡ್‌ ವಿವೇಚನೆಗೆ ಸೀಟು ಹಂಚಿಕೆ
ಸುದ್ದಿ ಸಾರ

ಸಮನ್ವಯ ಸಮಿತಿಯಲ್ಲಿ ಮೂಡದ ಒಮ್ಮತ, ಹೈಕಮಾಂಡ್‌ ವಿವೇಚನೆಗೆ ಸೀಟು ಹಂಚಿಕೆ

ಫೊಟೋದಲ್ಲಿ ಕಾಣುತ್ತಿರುವ ಒಮ್ಮತ ಸೀಟು ಹಂಚಿಕೆಯಲ್ಲಿ ಕಂಡು ಬಂದಿಲ್ಲ ಎನ್ನುವುದು ಓದುಗರ ಅವಗಾಹನೆಗೆ...

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಲೋಕಸಭಾ ಚುನಾವಣಾ ಸೀಟು ಹಂಚಿಕೆಯೀಗ ದೆಹಲಿಗೆ ವರ್ಗಾವಣೆಯಾಗಿದೆ. ಸೋಮವಾರ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮಹತ್ವದ ಸಮನ್ವಯ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಸಂಬಂಧ ಉಭಯ ಪಕ್ಷಗಳು ತಮ್ಮ-ತಮ್ಮ ನಿಲುವಿಗೆ ಅಂಟಿಕೊಂಡ ಕಾರಣ ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದೆ, ನಿರ್ಧಾರವನ್ನು ವರಿಷ್ಠರಿಗೆ ಬಿಡಲಾಗಿದೆ.

ಸೋಮವಾರ ಬೆಳಿಗ್ಗೆ ಬೆಂಗಳೂರಿನ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಡಾ.ಜಿ. ಪರಮೇಶ್ವರ್, ಕೆ.ಸಿ. ವೇಣುಗೋಪಾಲ್, ಡ್ಯಾನಿಷ್ ಅಲಿ ಪಾಲ್ಗೊಂಡಿದ್ದರು.

ಕೇವಲ ನಾಮಕಾವಸ್ತೆಗೆ ಎಂಬಂತೆ 2 ಗಂಟೆ ನಡೆದ ಸಭೆಯಲ್ಲಿ, ಜೆಡಿಎಸ್ ತನ್ನ ಪಾಲಿಗೆ 12 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಪಟ್ಟಿ ನೀಡಿತು. ಅಲ್ಲದೆ, ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸುವುದೇ ಅನಗತ್ಯ ಎಂಬ ನಿಲುವಿನಿಂದ ಹಿಂದೆ ಸರಿಯಲಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಒಮ್ಮತದ ತೀರ್ಮಾನ ಸಾಧ್ಯವಾಗಲಿಲ್ಲ. ಅದರಲ್ಲೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಂದಷ್ಟೇ ವೇಗದಲ್ಲಿ ಸಭೆಯಿಂದ ನಿರ್ಗಮಿಸಿದ್ದು, ಸಭೆ ವಿಫಲವಾಗಿದೆ ಎಂಬುದನ್ನು ಸಾರಿ ಹೇಳುತ್ತಿತ್ತು.

ಸಭೆ ಆರಂಭವಾಗುತ್ತಿದ್ದಂತೆ ಕುಮಾರಸ್ವಾಮಿ ಉಮೇಶ್ ಜಾಧವ್ ರಾಜೀನಾಮೆ ವಿಚಾರ ಪ್ರಸ್ತಾಪ ಮಾಡಿದರು. ‘ರಮೇಶ್ ಜಾರಕಿಹೊಳಿ ಹಾಗೂ ನಾಗೇಂದ್ರ ಕತೆ ಏನಂತೆ?’ ಎಂದು ಕೇಳಿದರು. ಇದಕ್ಕೆ ಸಿದ್ದರಾಮಯ್ಯ, "ಅವರ ಬಗ್ಗೆನೂ ವಿಶ್ವಾಸ ಇಲ್ಲ ಬಿಡ್ರಿ. ಏನ್ಮಾಡ್ತಾರೆ ನೋಡೋಣ. ಅವರಿಂದೇನೂ ಸರ್ಕಾರಕ್ಕೆ ತೊಂದರೆಯಾಗಲ್ಲ ಬಿಡಿ," ಎಂದು ಹೇಳಿದರು. ಬಳಿಕ ಚರ್ಚೆ ಸೀಟು ಹಂಚಿಕೆಯತ್ತ ಹೊರಳಿತು.

ಮಾತು ಆರಂಭಿಸಿದ ಕುಮಾರಸ್ವಾಮಿ, ‘ಮೈತ್ರಿ ಪ್ರಕಾರ ಮಂಡ್ಯ ಜೆಡಿಎಸ್‌ಗೆ ಎಂದು ಹೇಳಿಯಾಗಿದೆ. ಹಾಗಾಗಿ ನೇರವಾಗಿ ಇತರೆ ಕ್ಷೇತ್ರಗಳ ಬಗ್ಗೆ ಚರ್ಚಿಸೋಣ’ ಎಂದರು. ಇದಕ್ಕೆ ಡ್ಯಾನಿಶ್ ಅಲಿ ಕೂಡ ದನಿಗೂಡಿಸಿದರು.

ಈ ಮೊದಲು ಜೆಡಿಎಸ್‍ಗೆ 9 ಕ್ಷೇತ್ರ ಬಿಟ್ಟು ಕೊಡಲು ಕಾಂಗ್ರೆಸ್ ಮನಸ್ಸು ಮಾಡಿತ್ತು. ಆದರೆ ಕುಮಾರಸ್ವಾಮಿ 12 ಕ್ಷೇತ್ರಗಳಿಗೆ ಬೇಡಿಕೆ ಇಡುವ ಮೂಲಕ ಕಾಂಗ್ರೆಸ್ಸಿಗರನ್ನು ಸಭೆಯಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, "ಏಕಾಏಕಿ ಹೀಗೆ ಕೇಳಿದ್ರೆ ಹೇಗೆ? ಹಾಸನ, ಮಂಡ್ಯ, ಶಿವಮೊಗ್ಗ, ಬೆಂಗಳೂರು ಉತ್ತರದ ಬಗ್ಗೆ ಬೇಕಿದ್ದರೆ ತೀರ್ಮಾನ ಮಾಡಬಹುದು. ಉಳಿದಂತೆ ಹೈಕಮಾಂಡ್ ತೀರ್ಮಾನ ಮಾಡಲಿ. ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ಅಂತಿಮ ತೀರ್ಮಾನ," ಎಂದು ಸ್ಪಷ್ಟಪಡಿಸಿದರು.

ಇದೇ ಮಾತನ್ನು ಮುಂದುವರಿಸಿದ ಪರಮೇಶ್ವರ್ ಹಾಗೂ ಕೆ.ಸಿ.ವೇಣುಗೋಪಾಲ್ ನೀವು ಬೇಡಿಕೆ ಇಟ್ಟ ಬಗ್ಗೆ ಹಾಗೂ ಸಭೆಯಲ್ಲಿ ಚರ್ಚೆಯಾದ ವಿಚಾರದ ಬಗ್ಗೆ ನಾವು ನಮ್ಮ ಹೈಕಮಾಂಡ್ ಗಮನಕ್ಕೆ ತರುತ್ತೇವೆ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು ಎಂಬುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದವರೊಬ್ಬರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ “ಹಾಗೇ ಆಗ್ಲಿ. ನಮ್ಮ ವರಿಷ್ಠರಾದ ದೇವೇಗೌಡರು ನಿಮ್ಮ ಹೈಕಮಾಂಡ್ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಿ ಬಿಡಿ," ಎಂದು ಹೇಳಿ ಕುಮಾರಸ್ವಾಮಿ ಅವರು ಸಭೆಯಿಂದ ಎದ್ದು ಹೊರನಡೆದರು ಎಂದು ಗೊತ್ತಾಗಿದೆ. ಹೀಗಾಗಿ ಸೀಟು ಸಂಚಿಕೆ ಸಂಬಂಧ ಎರಡೂ ಪಕ್ಷಗಳ ನಾಯಕರ ನಡುವೆ ಸುದೀರ್ಘ ಚರ್ಚೆಯಾಯಿತೇ ಹೊರತು ಸಹಮತ ಮೂಡಲಿಲ್ಲ.

ಅತೃಪ್ತರ ಮೇಲೆ ಕಣ್ಣಿಡಲು ಸೂಚನೆ:

ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಕರೆಸಿಕೊಂಡ ವೇಣುಗೋಪಾಲ್, ಜಾಧವ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ್‌ ಕುಮಟಳ್ಳಿ ಮೇಲೆ ನಿಗಾ ಇಡುವಂತೆ ಸೂಚನೆ ನೀಡಿದರು. ಇವರನ್ನು ಹೊರತುಪಡಿಸಿ ಬೇರೆಯವರೂ ರಾಜೀನಾಮೆ ಕೊಡಬಹುದು. ಅಂತಹವರ ಮೇಲೆಯೂ ನಿಗಾವಹಿಸುವಂತೆ ಸೂಚನೆ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರು ತಿಳಿಸಿದ್ದಾರೆ.

ಸಭೆ ನಂತರ ಕೆ.ಸಿ. ವೇಣುಗೋಪಾಲ್ ಮಾತನಾಡಿ, “ಜೆಡಿಎಸ್ 12 ಸೀಟು ಕೇಳಿದೆ. ಸೀಟು ಕೇಳುವ ಹಕ್ಕು ಅವರಿಗೆ ಇದೆ, ಅದರಂತೆ ಕೇಳಿದ್ದಾರೆ. ಎಲ್ಲದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಮೂರ್ನಾಲ್ಕು ದಿನದಲ್ಲಿ ಎಲ್ಲವೂ ತೀರ್ಮಾನವಾಗುತ್ತದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೀಟು ಹಂಚಿಕೆ ಬಗ್ಗೆ "ಜೆಡಿಎಸ್ ವರಿಷ್ಠರಾದ ದೇವೇಗೌಡರು ಮತ್ತು ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಚರ್ಚೆಯನ್ನು ಅಂತಿಮಗೊಳಿಸುತ್ತೇವೆ. ಹಲವು ಸೂತ್ರಗಳು ನಮ್ಮ ಮುಂದಿವೆ. ಬಿಜೆಪಿಯನ್ನು ಶಕ್ತಿಗುಂದಿಸುವುದಕ್ಕೆ ಇವು ಸಾಕು," ಎಂದು ಜನತಾದಳದ ವಕ್ತಾರ ಡ್ಯಾನಿಷ್‌ ಅಲಿ ಸಭೆಯ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದರು.

ಇವರಿಬ್ಬರ ಮಾತನ್ನು ಮುಂದುವರಿಸಿದ ಸಿದ್ದರಾಮಯ್ಯ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಮತ್ತು ಜೆಡಿಎಸ್ ಜಂಟಿಯಾಗಿ ಬಿಜೆಪಿಯನ್ನು ಎದುರಿಸಲು ನಿರ್ಧರಿಸಿದ್ದೇವೆ. ನಾವು ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಮಾರ್ಚ್ 10ರೊಳಗೆ ಸೀಟು ಹಂಚಿಕೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ವಿವರಿಸಿದರು.

ಚಿಂಚೋಳಿ ಶಾಸಕ ಜಾದವ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, "ಜಾದವ್ ರಾಜೀನಾಮೆ ಕೊಟ್ಟ ವಿಚಾರ ತಿಳಿಯಿತು. ರಾಜೀನಾಮೆ ನೀಡಲು ಜಾದವ್ ಸರ್ವ ಸ್ವತಂತ್ರರು. ಆದರೆ, ಅದಕ್ಕೂ ಮೊದಲು ಅವರ ವಿರುದ್ಧದ ಅನರ್ಹತೆ ದೂರು ಬಾಕಿ ಇದೆ. ಅವರು ಇನ್ನೂ ನಮ್ಮ ಪಕ್ಷದಲ್ಲೇ ಉಳಿಯುವ ವಿಶ್ವಾಸ ನನಗಿದೆ," ಎಂದು ಹೇಳಿ ಅಚ್ಚರಿ ಮೂಡಿಸಿದರು.