samachara
www.samachara.com
ಕುಪ್ವಾರ ಎನ್‌ಕೌಂಟರ್‌: 60 ಗಂಟೆಗಳಲ್ಲಿ ಐವರು ಭದ್ರತಾ ಸಿಬ್ಬಂದಿ ಬಲಿ
ಸುದ್ದಿ ಸಾರ

ಕುಪ್ವಾರ ಎನ್‌ಕೌಂಟರ್‌: 60 ಗಂಟೆಗಳಲ್ಲಿ ಐವರು ಭದ್ರತಾ ಸಿಬ್ಬಂದಿ ಬಲಿ

“ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಇದೀಗ ಗುಂಡಿನ ಚಕಮಕಿ ಕೊನೆಗೊಂಡಿದ್ದು ಹುಡುಕಾಟ ಮುಂದುವರಿದಿದೆ,” ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಬಂಡುಕೋರರ ವಿರುದ್ಧ ಸೇನೆ ನಡೆಸಿದ ಎನ್‍ಕೌಂಟರ್ ಕಾರ್ಯಾಚರಣೆಯಲ್ಲಿ ಕಳೆದ 60 ಗಂಟೆಗಳ ಅಂತರದಲ್ಲಿ ಐವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಓರ್ವ ನಾಗರೀಕ ಕೂಡ ಅಸುನೀಗಿದ್ದು, 8 ಜನರ ಭದ್ರತಾ ಸಿಬ್ಬಂದಿಗಳಿಗೆ ಗಾಯಗಳಾಗಿವೆ.

ಭಾರತೀಯ ಸೇನೆ ಶುಕ್ರವಾರ ಕುಪ್ವಾರ ಜಿಲ್ಲೆಯಲ್ಲಿ ಎನ್ಕೌಂಟರ್‌ ಕಾರ್ಯಾಚರಣೆ ಆರಂಭಿಸಿತ್ತು. ಸತತ 60 ಗಂಟೆ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಸಿಆರ್‌ಪಿಎಫ್‌ ಯೋಧರು, ಇಬ್ಬರು ಪೊಲೀಸರು ಶುಕ್ರವಾರ ಸಾವನ್ನಪ್ಪಿದ್ದರು. ಶನಿವಾರ ಇನ್ನೊಬ್ಬರು ಸೈನಿಕರು ಗಾಯಗೊಂಡಿದ್ದರು. ಅವರು ಇಂದು ಅಸುನೀಗುವುದರೊಂದಿಗೆ ಒಟ್ಟು ಐವರು ಭದ್ರತಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪ್ರಾಣ ತೆತ್ತಿದ್ದಾರೆ.

ಇಲ್ಲಿಯವರೆಗಿನ “ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಇದೀಗ ಗುಂಡಿನ ಚಕಮಕಿ ಕೊನೆಗೊಂಡಿದ್ದು ಹುಡುಕಾಟ ಮುಂದುವರಿದಿದೆ,” ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್‌ ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ. ಸಾವನ್ನಪ್ಪಿರುವ ಉಗ್ರರ ಗುರುತು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕುಪ್ವಾರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೂ ಎಷ್ಟು ಜನ ಬಂಡುಕೋರರು ಉಳಿದುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಪೊಲೀಸ್‌ ಮೂಲಗಳು ಹೇಳಿವೆ. ಹೀಗಾಗಿ ಬದಗುಂಡ್ ಗ್ರಾಮದ ಮನೆ ಮನೆಗಳಿಗೆ ತೆರಳಿ ಶಸ್ತ್ರ ಸಜ್ಜಿತ ಬಂಡುಕೋರರನ್ನು ಹುಡುಕಲಾಗುತ್ತಿದೆ.

ಇಬ್ಬರು ಬಂಡುಕೋರರನ್ನು ದಾಳಿಯಲ್ಲಿ ಕೊಲ್ಲಲಾಗಿದೆ ಎಂದು ಭದ್ರತಾ ಪಡೆಗಳು ಶುಕ್ರವಾರ ಹೇಳಿಕೊಂಡಿದ್ದವು. ಆದರೆ ಇದಾಗಿ ಸ್ವಲ್ಪ ಹೊತ್ತಿನಲ್ಲೇ ಸಿಆರ್‌ಪಿಎಫ್‌ ಯೋಧರ ಮೇಲೆ ಮನೆಗಳಲ್ಲಿ ಅಡಗಿಕೊಂಡಿದ್ದವರು ಗುಂಡು ಹಾರಿಸಲು ಆರಂಭಿಸಿದ್ದರು. ಹೀಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇದೀಗ ಇನ್ನೂ ಕೆಲವು ಬಂಡುಕೋರರು ಮನೆಗಳಲ್ಲಿ ಅಡಗಿ ಕುಳಿತಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಬಂಡುಕೋರರು ಇದ್ದ ಎರಡು ಮನೆಗಳನ್ನು ಭದ್ರತಾ ಸಿಬ್ಬಂದಿ ಧ್ವಂಸ ಮಾಡಿದ್ದಾರೆ. ಇದೇ ವೇಳೆ ಕಾರ್ಯಾಚರಣೆಯಿಂದ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ಭದ್ರತಾ ಪಡೆಗಳ ಮೇಲೆ ಆರೋಪಿಸಿದ್ದಾರೆ. ಜತೆಗೆ ಕಾರ್ಯಾಚರಣೆಯ ಕಾರಣಕ್ಕೆ ಊರು ಬಿಡಬೇಕಾಗಿದೆ ಎಂದು ದೂರಿದ್ದಾರೆ.

ಸಿಆರ್‌ಪಿಎಫ್‌ ಯೋಧರು ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಸ್ಥಳೀಯ ವ್ಯಕ್ತಿಯೂ ಸಾವನ್ನಪ್ಪಿದ್ದು, ಸಾಕಷ್ಟು ಜನ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಗಳ ನಡುವೆ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಶನಿವಾರ ಭಾರತ-ಪಾಕ್ ನಡುವಿನ ಅಂತಾರಾಷ್ಟ್ರೀಯ ಗಡಿ ಭಾಗ ಹಾಗೂ ಗಡಿ ನಿಯಂತ್ರಣ ರೇಖೆ ಬಳಿ ತೆರಳೀ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದ್ದಾರೆ.