samachara
www.samachara.com
ಮಸೂದ್‌ಗೆ ಮೂತ್ರಪಿಂಡದ ಸಮಸ್ಯೆ ಎಂದ ಪಾಕ್ ಸಚಿವ; ಪುಸ್ತಕದ ಬಿಡುಗಡೆಗಾಗಿ ಸಿದ್ಧವಾಗಿದ್ದಾನೆ ಉಗ್ರ
ಸುದ್ದಿ ಸಾರ

ಮಸೂದ್‌ಗೆ ಮೂತ್ರಪಿಂಡದ ಸಮಸ್ಯೆ ಎಂದ ಪಾಕ್ ಸಚಿವ; ಪುಸ್ತಕದ ಬಿಡುಗಡೆಗಾಗಿ ಸಿದ್ಧವಾಗಿದ್ದಾನೆ ಉಗ್ರ

ಈತನನ್ನು ಭಾರತಕ್ಕೆ ಹಸ್ತಾಂತರಿಸಲು ಕೋರಿ ಪಾಕಿಸ್ತಾನಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಾಕ್ಷ್ಯಾಧಾರಗಳ ಕೊರತೆ ನೆಪವೊಡ್ಡಿ ಈತನನ್ನು ಹಸ್ತಾಂತರಿಸಲು ಪಾಕಿಸ್ತಾನ ಹಿಂದೇಟು ಹಾಕುತ್ತಲೇ ಬಂದಿದೆ.

ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಸಂಸ್ಥಾಪಕ ಮೌಲಾನ ಮಸೂದ್ ಅಝರ್ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು ಮನೆಯಿಂದಲೂ ಹೊರಗೆ ಕಾಲಿಡಲಾಗದ ಸ್ಥಿತಿಯಲ್ಲಿದ್ದಾನೆ ಎಂದು ಸ್ವತಃ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಭಾರತೀಯ ಅಧಿಕಾರಿಗಳು, ಉಗ್ರ ಮಸೂದ್ ಅಝರ್ ಇತ್ತೀಚೆಗೆ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದು, ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಿದ್ದಾರೆ. ಇಲ್ಲಿಯೇ ಈತ ನಿರಂತರವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಗುರುವಾರ ಮಾತನಾಡಿದ್ದ ಖುರೇಷಿ, “ನಮಗಿರುವ ಮಾಹಿತಿಯ ಪ್ರಕಾರ ಮೌಲಾನ ಮಸೂದ್ ಅಝರ್ ಪಾಕಿಸ್ತಾನದಲ್ಲೇ ಇದ್ದಾನೆ. ಆದರೆ ಆತನ ಆರೋಗ್ಯ ಹದಗೆಟ್ಟಿದ್ದು ಮನೆಬಿಟ್ಟು ಹೊರಬರಲಾದ ಸ್ಥಿತಿಯಲ್ಲಿದ್ದಾನೆ” ಎಂಬ ವಿಚಾರವನ್ನು ಖಚಿತಪಡಿಸಿದ್ದರು. ಈ ಬಗ್ಗೆ ಇನ್ನಷ್ಟು ವಿಷಯಗಳನ್ನು ಕಲೆ ಹಾಕಿರುವ ಭಾರತೀಯ ಅಧಿಕಾರಿಗಳು ಆತ ಸೇನಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ಆಘಾತಕಾರಿ ವಿಚಾರ ಬಹಿರಂಗಪಡಿಸಿದ್ದಾರೆ.

ಅಲ್‌ಖೈದಾ ಉಗ್ರ ಸಂಘಟನೆಯ ಸಂಸ್ಥಾಪಕ ಒಸಾಮ ಬಿನ್ ಲಾಡೆನ್ ಆಪ್ತನಾಗಿದ್ದ ಮೌಲಾನ ಮಸೂದ್ ಅಝರ್‌ನನ್ನು ಭಾರತದ ಸೇನೆ 1994 ರಲ್ಲಿ ಬಂಧಿಸಿತ್ತು. ಆದರೆ ಈತನ ಬಿಡುಗಡೆಗೆ ಒತ್ತಾಯಿಸಿ ಉಗ್ರರು 1999 ರಲ್ಲಿ ಭಾರತದ ವಿಮಾನವನ್ನು ಹೈಜಾಕ್ ಮಾಡಿದ್ದರು. ಪರಿಣಾಮ ಭಾರತ ಸರಕಾರ ಈತನನ್ನು ಬಿಡುಗಡೆ ಮಾಡಿತ್ತು.

ಭಾರತೀಯ ಸಂಸತ್‌ ಮೇಲೆ 2001ರಲ್ಲಿ ನಡೆದ ಉಗ್ರರ ದಾಳಿಯಿಂದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಯವರೆಗೆ ಎಲ್ಲಾ ಪ್ರಮುಖ ಉಗ್ರರ ದಾಳಿಗಳಲ್ಲಿ ಈತನ ಕೈವಾಡವಿರುವುದು ದೃಢಪಟ್ಟಿದೆ. ಹೀಗಾಗಿ ಈತನನ್ನು ಭಾರತಕ್ಕೆ ಹಸ್ತಾಂತರಿಸಲು ಕೋರಿ ಪಾಕಿಸ್ತಾನಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸಾಕ್ಷ್ಯಾಧಾರಗಳ ಕೊರತೆ ನೆಪವೊಡ್ಡಿ ಈತನನ್ನು ಹಸ್ತಾಂತರಿಸಲು ಪಾಕಿಸ್ತಾನ ಹಿಂದೇಟು ಹಾಕುತ್ತಲೇ ಬಂದಿದೆ.

ಪುಸ್ತಕ ಬರೀತಾನಂತೆ ಮಸೂದ್

ಒಂದೆಡೆ ಮೌಲಾನ ಮಸೂದ್ ಅಝರ್‌ಗೆ ಆರೋಗ್ಯ ಹದಗೆಟ್ಟಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮೂದ್ ಖುರೇಶಿ ಮಾಹಿತಿ ನೀಡಿದರೆ, ಮತ್ತೊಂದೆಡೆ ಆತ ತನ್ನ ಪುಸ್ತಕ ಹೊರತರುವ ಕೆಲಸದಲ್ಲಿ ಮಗ್ನನಾಗಿದ್ದಾನೆ ಎನ್ನುವ ವಿಚಾರವೂ ಗೊತ್ತಾಗಿದೆ.

‘ಅಲ್ ಕ್ವಲಾಂ’ ಎಂಬ ಆನ್‌ಲೈನ್ ಮಾಸಿಕವನ್ನು ಜೆಇಎಂ ಹೊರ ತರುತ್ತಿದ್ದು ಇದರಲ್ಲಿ ಅಝರ್‌ ಪುಸ್ತಕ ಬರೆಯುತ್ತಿರುವುದರ ಬಗ್ಗೆ ಉಲ್ಲೇಖಗಳಿವೆ. ಪ್ರಚೋದನಕಾರಿ ಮತ್ತು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಲೇಖನಗಳಿಗೆ ಈ ಪತ್ರಿಕೆ ಕುಖ್ಯಾತಿ ಪಡೆದಿದ್ದು, ಅಝರ್‌ ಈ ಹಿಂದೆ ಬರೆದ ಪುಸ್ತಕವನ್ನು ಮತ್ತಷ್ಟು ಅಪ್ಡೇಟ್‌ ಮಾಡುತ್ತಿದ್ದಾನೆ ಎಂದು ಇದರಲ್ಲಿ ಬರೆಯಲಾಗಿದೆ.

ಪತ್ರಿಕೆ 683ನೇ ಸಂಚಿಕೆಯಲ್ಲಿ ಭಾರತ ಮತ್ತು ಕಾಶ್ಮೀರದ ಬಗ್ಗೆ ಹಲವು ಲೇಖನಗಳಿದ್ದು, ಒಂದು ಲೇಖನ ‘ಆರ್ಟಿಕಲ್‌ 35-ಎ’ ಎಂದರೆ ಏನು ಎಂಬುದನ್ನು ವಿವರಿಸುತ್ತದೆ. ಇದರಲ್ಲೇ ಒಂದು ಲೇಖನದಲ್ಲಿ ಭಾರತವನ್ನು ವ್ಯಂಗ್ಯ ಮಾಡಲಾಗಿದ್ದು, ‘ಬೆಟ್ಟದ ಮೇಲೆ ಬಾಂಬ್‌ ಹಾಕಿ ಜೈಷ್‌ ನಾಯಕತ್ವದ ಮೇಲೆ ದಾಳಿ ನಡೆಸಿದಂತೆ ಭಾರತ ವಾದಿಸುತ್ತಿದೆ’ ಎಂಬ ಅರ್ಥದ ತಲೆ ಬರಹ ನೀಡಲಾಗಿದೆ. ಇದರ ಆರಂಭಿಕ ಪುಟಗಳಲ್ಲಿ ಭಾರತ ಗುಪ್ತಚರ ಇಲಾಖೆಯನ್ನು, ಮಾಹಿತಿ ಇಲ್ಲದ ಸಂಸ್ಥೆ ಎಂದು ಕರೆದಿರುವುದಲ್ಲದೆ, ಭಾರತದ ಮಾಧ್ಯಮಗಳನ್ನು ಸುಳ್ಳುಕೋರರು, ನಾಯಕತ್ವವನ್ನು ಮೋಸಗಾರರು, ಸೇನೆಯನ್ನು ಹೇಡಿಗಳು ಎಂದೆಲ್ಲಾ ದಾಷ್ಟ್ಯ ಮೆರೆಯಲಾಗಿದೆ.

ಹೀಗಿದ್ದೂ ಶಾಂತಿ ದೂತ ಎಂದು ತನ್ನ ಬೆನ್ನನ್ನೇ ತಾನು ತಟ್ಟಿಕೊಳ್ಳುತ್ತಿರುವ ಪಾಕಿಸ್ತಾನ ಈತನನ್ನು ತನ್ನ ಸೇನೆಯ ಕೇಂದ್ರ ಕಚೇರಿಯಲ್ಲೇ ಸಲಹುತ್ತಿದೆ. ಅದರಲ್ಲೂ ಬುಧವಾರ ಭಾರತ ಪುಲ್ವಾಮ ದಾಳಿಗೆ ಜೈಷ್‌ ಎ ಮೊಹಮ್ಮದ್‌ ಕಾರಣ ಎನ್ನುವ ಸಾಕ್ಷ್ಯಗಳನ್ನು ಅಲ್ಲಿನ ಸರಕಾರಕ್ಕೆ ನೀಡಿದೆ. ಹೀಗಿದ್ದರೂ ಇಮ್ರಾನ್‌ ಖಾನ್‌ ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ.