samachara
www.samachara.com
ಭಾರತದ ವಿರುದ್ಧ ‘ಪರಿಸರ ಭಯೋತ್ಪಾದನೆ’ ಆರೋಪ, ವಿಶ್ವಸಂಸ್ಥೆ ಮೆಟ್ಟಿಲೇರಲು ಪಾಕ್‌ ತೀರ್ಮಾನ!
ಸುದ್ದಿ ಸಾರ

ಭಾರತದ ವಿರುದ್ಧ ‘ಪರಿಸರ ಭಯೋತ್ಪಾದನೆ’ ಆರೋಪ, ವಿಶ್ವಸಂಸ್ಥೆ ಮೆಟ್ಟಿಲೇರಲು ಪಾಕ್‌ ತೀರ್ಮಾನ!

ಭಾರತದ ವಿರುದ್ಧ ‘ಪರಿಸರ ಭಯೋತ್ಪಾದನೆ’ಯ ದೂರನ್ನು ದಾಖಲಿಸಲು ಪಾಕಿಸ್ತಾನ ತೀರ್ಮಾನಿಸಿದೆ ಎಂದು ಅಲ್ಲಿನ ಹವಾಮಾನ ಬದಲಾವಣೆ ಸಚಿವ ಮಲಿಕ್ ಅಮಿನ್ ಅಸ್ಲಾಂ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ ಎಂದು ಹೇಳುತ್ತಿರುವ ಭಾರತದ ವಿರುದ್ಧವೇ ‘ಭಯೋತ್ಪಾದನೆ’ಯ ದೂರು ದಾಖಲಿಸಲು ಪಾಕಿಸ್ತಾನ ಮುಂದಾಗಿದೆ.

ಹೇಗೆ ಅಂತೀರಾ?

ಮಂಗಳವಾರ ಮುಂಜಾನೆ ಗಡಿ ನಿಯಂತ್ರಣ ರೇಖೆಯಿಂದ 40 ಕಿಲೋಮಿಟರ್‌ ದೂರದಲ್ಲಿರುವ ಪಾಕಿಸ್ತಾನದ ಬಾಲಕೋಟ್‌ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿತ್ತು. ಇಲ್ಲಿದ್ದ ಜೈಷ್‌-ಎ-ಮೊಹಮ್ಮದ್‌ನ ತರಬೇತಿ ಶಿಬಿರವನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದು ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್‌ ಗೋಖಲೆ ಅಂದೇ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು. ಈ ಘಟನೆಯಲ್ಲಿ ದೊಡ್ಡ ಸಂಖ್ಯೆಯ ಉಗ್ರರು, ತರಬೇತುದಾರರು ಮತ್ತು ಹಿರಿಯ ಕಮಾಂಡರ್‌ಗಳು ಅಸು ನೀಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದರು.

ಆದರೆ ಈ ಸುದ್ದಿಯನ್ನು ಪಾಕಿಸ್ತಾನ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ನಿರಾಕರಿಸುತ್ತಲೇ ಬಂದಿವೆ. ಬಾಂಬ್‌ ದಾಳಿಯಿಂದ ಬಾಲಕೋಟ್‌ ಹೊರಭಾಗದ ಜಬಾ ಪ್ರದೇಶದಲ್ಲಿ ದೇವದಾರು ಮರಗಳು ನಾಶವಾಗಿದ್ದು, ಒಂದಷ್ಟು ಕಂದಕಗಳು ನಿರ್ಮಾಣವಾಗಿವೆ ಅಷ್ಟೇ. ಯಾರೂ ಸತ್ತಿಲ್ಲ ಎಂಬುದಾಗಿ ಪಾಕಿಸ್ತಾನ ಹೇಳಿದೆ.

ಇದೀಗ ಇದನ್ನೇ ಆಧಾರವಾಗಿಟ್ಟುಕೊಂಡು ಭಾರತದ ವಿರುದ್ಧ ‘ಪರಿಸರ ಭಯೋತ್ಪಾದನೆ’ಯ ದೂರನ್ನು ದಾಖಲಿಸಲು ಪಾಕಿಸ್ತಾನ ತೀರ್ಮಾನಿಸಿದೆ ಎಂದು ಅಲ್ಲಿನ ಹವಾಮಾನ ಬದಲಾವಣೆ ಸಚಿವ ಮಲಿಕ್ ಅಮಿನ್ ಅಸ್ಲಾಂ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿರುವ ಮಲಿಕ್, “ಭಾರತೀಯ ವಾಯುಪಡೆ ಮೀಸಲು ಅರಣ್ಯ ಪ್ರದೇಶದ ಮೇಲೆ ದಾಳಿ ನಡೆಸಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಿದೆ. 15 ಕ್ಕೂ ಹೆಚ್ಚು ಪೈನ್ ಮರಗಳು ನೆಲಕ್ಕುರುಳಿವೆ. ಇದು ಪರಿಸರದ ಮೇಲಿನ ಭಯೋತ್ಪಾದನೆಯಾಗಿದ್ದು, ಪಾಕಿಸ್ತಾನದ ಸರಕಾರ ಈ ಹಾನಿಯ ಕುರಿತು ಮೌಲ್ಯಮಾಪನ ನಡೆಸಲಿದೆ. ಇದರ ಆಧಾರದ ಮೇಲೆ ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪ್ರಕರಣ ದಾಖಲಿಸಲಿದ್ದೇವೆ” ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ತೆರಳಿದ ಇಬ್ಬರು ರಾಯ್ಟರ್ಸ್‌ ಪತ್ರಕರ್ತರು ಕೂಡ, ಭಾರತೀಯ ವಾಯುಪಡೆಗಳ ದಾಳಿಯಿಂದಾಗಿ 15 ಕ್ಕೂ ಹೆಚ್ಚು ಪೈನ್ (ದೇವದಾರು) ಮರಗಳು ನೆಲಕ್ಕುರುಳಿವೆ, ಬಾಂಬ್ ದಾಳಿಯಿಂದಾಗಿ 4 ದೊಡ್ಡ ಕಂದಕಗಳು ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯ 47/37 ರ ಪ್ರಕಾರ ಸೇನಾ ಕಾರ್ಯಾಚರಣೆಗಳ ಮೂಲಕ ಪರಿಸರ ನಾಶಕ್ಕೆ ಕಾರಣವಾಗುವುದು ಅಪರಾಧವಾಗಿದೆ. ಹೀಗಾಗಿ ಇದೇ ಎಳೆಯನ್ನು ಹಿಡಿದುಕೊಂಡಿರುವ ಪಾಕಿಸ್ತಾನ ಭಾರತದ ವಿರುದ್ಧ ದೂರು ದಾಖಲಿಸಲು ಮುಂದಾಗಿದೆ. ಈ ಮೂಲಕ ತನ್ನ ನೆಲದ ಮೇಲಿನ ಭಯೋತ್ಪಾದಕ ಕೇಂದ್ರಗಳ ಮೇಲೆ ನಡೆದ ದಾಳಿಯ ಗಮನವನ್ನು ಬೇರೆಡೆ ಸೆಳೆಯಲು ಈ ವಿಚಿತ್ರ ತಂತ್ರ ಹೆಣೆದಿದೆ.