samachara
www.samachara.com
ಲಾಡೆನ್ ಪುತ್ರನಿಗಾಗಿ ಅಮೆರಿಕಾ ಹುಡುಕಾಟ, ಮಾಹಿತಿ ನೀಡಿದವರಿಗೆ 7 ಕೋಟಿ ರೂ. ಬಹುಮಾನ 
ಸುದ್ದಿ ಸಾರ

ಲಾಡೆನ್ ಪುತ್ರನಿಗಾಗಿ ಅಮೆರಿಕಾ ಹುಡುಕಾಟ, ಮಾಹಿತಿ ನೀಡಿದವರಿಗೆ 7 ಕೋಟಿ ರೂ. ಬಹುಮಾನ 

ಇತ್ತೀಚೆಗೆ ತನ್ನ ಆಡಿಯೋ ಹಾಗೂ ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿದ್ದ ಹಮ್ಜಾ ಬಿನ್ ಲಾಡೆನ್ ತಂದೆಯ ಸಾವಿಗೆ ಪ್ರತೀಕಾರವಾಗಿ ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ದಾಳಿ ಮಾಡಲು ತನ್ನ ಅನುಯಾಯಿಗಳಿಗೆ ಕರೆ ನೀಡಿದ್ದ.

ಅಲ್‌ಖೈದಾ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಒಸಾಮ ಬಿನ್ ಲಾಡೆನ್ ಮಗ ಹಮ್ಜಾ ಬಿನ್ ಲಾಡೆನ್ ತಲೆಗೆ ಅಮೆರಿಕಾ ಸರಕಾರ ಬರೋಬ್ಬರಿ 1 ಮಿಲಿಯನ್ ಡಾಲರ್ (ಸುಮಾರು 7 ಕೋಟಿ ರೂಪಾಯಿ) ಬಹುಮಾನ ಘೋಷಿಸಿದೆ.

ಅಲ್‌ಖೈದಾ ಉಗ್ರ ಸಂಘಟನೆ 2001ರ ಸೆಪ್ಟೆಂಬರ್‌ 11ರಂದು ಅಮೆರಿಕಾದ ಡಬ್ಲ್ಯೂಟಿಸಿ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆಸಿ 2,996 ಜನರ ಸಾವಿಗೆ ಕಾರಣವಾದ ನಂತರ ಒಸಾಮ ಬಿನ್ ಲಾಡೆನ್ ಎಂಬ ಹೆಸರು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು.

ಈ ಬೆಳವಣಿಗೆ ನಂತರ ಆತನ ಹೆಡೆಮುರಿ ಕಟ್ಟಲು ಅಮೆರಿಕಾ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಕೊನೆಗೆ ಮೊನ್ನೆ ಭಾರತ ದಾಳಿ ನಡೆಸಿದ ಬಾಲಕೋಟ್‌ಗೆ ಸಮೀಪದಲ್ಲಿರುವ ಅಬೊಟ್ಟಾಬಾದ್‌ನಲ್ಲಿ ಒಸಾಮ ಬಿನ್‌ ಲಾಡೆನ್‌ ಇದ್ದಾನೆ ಎನ್ನುವ ಮಾಹಿತಿ ಅಮೆರಿಕಾಗೆ ಸಿಕ್ಕಿತ್ತು. ಈ ಮಾಹಿತಿ ಮೇರೆಗೆ 2011ರ ಮೇ 1ರಂದು ದಾಳಿ ನಡೆಸಿದ ಅಮೆರಿಕಾದ ವಿಶೇಷ ಪಡೆ 40 ನಿಮಿಷದ ಕಾರ್ಯಾಚರಣೆಯಲ್ಲಿ ಬಿನ್ ಲಾಡೆನ್ ಹತ್ಯೆಗೈದಿತ್ತು.

ಲಾಡೆನ್‌ ಸಾವಿನ ನಂತರ ಅಲ್‌ಖೈದಾ ಸೂಕ್ತ ನಾಯಕತ್ವವಿಲ್ಲದೆ ಸ್ವಲ್ಪ ಮಟ್ಟಿಗೆ ಶಾಂತವಾಗಿತ್ತು. ಈಜಿಪ್ಟ್‌ ಮೂಲದ ಅಯ್ಮನ್‌ ಅಜ್‌ಜವಾಹಿರಿ ನೇತೃತ್ವದಲ್ಲಿ ಸಂಘಟನೆ ಬಸವಳಿದಿತ್ತು. ಆದರೆ ಈಗ ಈ ಉಗ್ರ ಸಂಘಟನೆಗೆ ಹೊಸ ನಾಯಕನ ಆಗಮನವಾಗಿದೆ. ಆತನೇ ಹಮ್ಜಾ ಬಿನ್ ಲಾಡೆನ್.

ಯಾರೀತ ಹಮ್ಜಾ ಬಿನ್ ಲಾಡೆನ್?

ಕುಖ್ಯಾತ ಅಲ್‌ಖೈದಾ ಉಗ್ರ ಸಂಘಟನೆಯ ಸಂಸ್ಥಾಪಕ ಒಸಾಮ ಬಿನ್ ಲಾಡೆನ್ 24 ಮಕ್ಕಳ ಪೈಕಿ ಹಮ್ಜಾ ಬಿನ್ ಲಾಡೆನ್ ಕೂಡ ಒಬ್ಬ. ತನ್ನ ಮರಣದ ನಂತರ ತನ್ನ ಮಕ್ಕಳ್ಯಾರೂ ಈ ಉಗ್ರಗಾಮಿ ಸಂಘಟನೆಗಳ ಭಾಗವಾಗಬಾರದು ಎಂಬುದಾಗಿ ಲಾಡೆನ್ ತನ್ನ ಉಯಿಲಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದ.

ಆದರೆ ಆತನ ಮಗ 30ರ ಹರೆಯದ ಹಮ್ಜಾ ಬಿನ್ ಲಾಡೆನ್ ಇದೀಗ ತಂದೆಯ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಸಮಾಧಿ ಸ್ಥಿತಿಯಲ್ಲಿದ್ದ ಅಲ್‌ಖೈದಾ ಉಗ್ರಗಾಮಿ ಸಂಘಟನೆಗೆ ಮರು ಜೀವ ನೀಡಲು ಮುಂದಾಗಿದ್ದಾನೆ. ಈ ಮಾಹಿತಿಗಳು ಅಮೆರಿಕಾ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿದ್ದು ಅವರೀಗ ಈತನನ್ನು ಹಡೆಮುರಿ ಕಟ್ಟಲು ಹೊರಟಿದ್ದಾರೆ.

2001 ರಲ್ಲಿ ವಿಮಾನಗಳನ್ನು ಹೈಜಾಕ್ ಮಾಡಿ ಅಮೆರಿಕಾದ ಅವಳಿ ಕಟ್ಟಡಗಳನ್ನು ಹೊಡೆದುರುಳಿಸಿದ ಮೊಹಮ್ಮದ್ ಅಟ್ಟಾ ಎಂಬವನ ಮಗಳನ್ನೇ ಈ ಹಮ್ಜಾ ಮದುವೆಯಾಗಿದ್ದಾನೆ. ಲಾಡೆನ್ ಸಾವಿನ ನಂತರ ಪಾಕಿಸ್ತಾನವನ್ನು ತೊರೆದು ತನ್ನ ತಾಯಿಯ ಜೊತೆಗೆ ಇರಾನ್‌ನಲ್ಲಿ ವಾಸವಾಗಿದ್ದ ವೇಳೆ ಈತನ ಮದುವೆ ನಡೆದಿತ್ತು. ನಂತರ ಈತ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಸಿರಿಯಾದಲ್ಲೂ ಕೆಲ ವರ್ಷಗಳ ಕಾಲ ವಾಸವಾಗಿದ್ದ ಎಂಬ ಮಾಹಿತಿಗಳಿವೆ.

“ಸದ್ಯ ಈತ ಅಫ್ಘಾನ್‌-ಪಾಕಿಸ್ತಾನದ ಗಡಿಯಲ್ಲಿರಬಹುದು ಎಂದು ನಾವು ನಂಬಿದ್ದೇವೆ. ಆತ ಇರಾನ್‌ಗೂ ಹೋಗುತ್ತಿರುತ್ತಾನೆ. ಆದರೆ ಆತನ ದಕ್ಷಿಣ ಏಷ್ಯಾದಲ್ಲಿ ಎಲ್ಲಾದರೂ ಇರಬಹುದು,” ಎನ್ನುತ್ತಾರೆ ಅಮೆರಿಕಾದ ರಾಜತಾಂತ್ರಿಕ ಭದ್ರತಾ ಕಾರ್ಯದರ್ಶಿ ಮೈಖಲ್‌ ಇವನೋಫ್‌.

ಇತ್ತೀಚೆಗೆ ತನ್ನ ಆಡಿಯೋ ಹಾಗೂ ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿದ್ದ ಹಮ್ಜಾ ಬಿನ್ ಲಾಡೆನ್ ತಂದೆಯ ಸಾವಿಗೆ ಪ್ರತೀಕಾರವಾಗಿ ಪಾಶ್ಚಾತ್ಯ ರಾಷ್ಟ್ರಗಳ ಮೇಲೆ ದಾಳಿ ಮಾಡಲು ತನ್ನ ಅನುಯಾಯಿಗಳಿಗೆ ಕರೆ ನೀಡಿದ್ದ. ಆ ಮೂಲಕ ಅಲ್‌ಖೈದಾ ಉಗ್ರ ಸಂಘಟನೆಗೆ ಹಮ್ಜಾ ಮರು ಜೀವ ತುಂಬಲು ಮುಂದಾಗಿರುವುದು ಬಹಿರಂಗವಾಗಿತ್ತು.

ಈ ಬೆಳವಣಿಗೆ ಅಮೆರಿಕಾ ಸರಕಾರಕ್ಕೆ ಆತಂಕ ಮೂಡಿಸಿದ್ದು ಈತನ ಕುರಿತು ಯಾರೇ ಮಾಹಿತಿ ನೀಡಿದರೂ ಅವರಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕಾ ಉಗ್ರಗಾಮಿಯೊಬ್ಬನ ತಲೆಗೆ ಘೋಷಿಸಿರುವ ಅತ್ಯಂತ ದೊಡ್ಡ ಮೊತ್ತ ಇದಾಗಿದೆ.