samachara
www.samachara.com
ಪಾಕಿಸ್ತಾನಕ್ಕೂ ಕನ್ನಡ ಕಲಿಸಿದ ಯಡಿಯೂರಪ್ಪ; ಇಂಟರ್‌ನ್ಯಾಷನಲ್‌ ಫೇಮಸ್‌ ಆದ BSY!
ಸುದ್ದಿ ಸಾರ

ಪಾಕಿಸ್ತಾನಕ್ಕೂ ಕನ್ನಡ ಕಲಿಸಿದ ಯಡಿಯೂರಪ್ಪ; ಇಂಟರ್‌ನ್ಯಾಷನಲ್‌ ಫೇಮಸ್‌ ಆದ BSY!

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಗುರುವಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವ ಮೂಲಕ ಬಿಜೆಪಿಗೆ ಭಾರೀ ಇರುಸು ಮುರುಸು ತಂದಿದ್ದಾರೆ.

'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು'.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಗುರುವಾರ ಸರಣಿ ಟ್ವೀಟ್‌ ಮಾಡುತ್ತಿದ್ದರೂ ಬುಧವಾರ ಆಡಿರುವ ಮಾತು ದೇಶ- ಭಾಷೆಗಳ ಗಡಿ ಮೀರಿ ಹಬ್ಬುತ್ತಿದೆ!

ಭಾರತೀಯ ಸೇನೆಯ ಪ್ರತೀಕಾರದ ಕ್ರಮ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 22 ಸೀಟ್‌ಗಳನ್ನು ಗೆಲ್ಲಲು ಅನುಕೂಲ ಮಾಡಿಕೊಡಲಿದೆ ಎಂದಿದ್ದ ಯಡಿಯೂರಪ್ಪ ಮಾತು ಪಾಕಿಸ್ತಾನದ ಮಾಧ್ಯಮಗಳಲ್ಲಿ ಗುರುವಾರ ದೊಡ್ಡ ಸುದ್ದಿಯಾಗಿದೆ.

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷ ಕೂಡಾ ಎನ್‌ಡಿಟಿವಿ ಬಿತ್ತರಿಸಿರುವ, ಯಡಿಯೂರಪ್ಪ ಕನ್ನಡದಲ್ಲಿ ಮಾತನಾಡಿರುವ ವಿಡಿಯೊ ಕ್ಲಿಪ್‌ ಅನ್ನು ಟ್ವೀಟ್‌ ಮಾಡಿದೆ.

Also read: 22 ಸೀಟ್‌ ಲೆಕ್ಕಾಚಾರ: ಯೋಧರ ತ್ಯಾಗವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆಯೇ ಬಿಜೆಪಿ?

ಪಾಕಿಸ್ತಾನದ ಸುದ್ದಿ ವಾಹಿನಿಗಳು ಈ ವಿಡಿಯೊ ಕ್ಲಿಪ್‌ ಜತೆಗೆ ಭಾರತದಲ್ಲಿ ಬಿಜೆಪಿ ಯುದ್ಧದ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಸುದ್ದಿ ಮಾಡಿವೆ. ಈ ಮೂಲಕ ಬುಧವಾರ ಭಾರತದ ಮಟ್ಟಿಗೆ ರಾಷ್ಟ್ರೀಯ ಸುದ್ದಿಯಾಗಿದ್ದ ಯಡಿಯೂರಪ್ಪ ಮಾತು ಗುರುವಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

ಇತ್ತ ಯಡಿಯೂರಪ್ಪ ಬುಧವಾರ ಕನ್ನಡದಲ್ಲಿ ಆಡಿರುವ ಮಾತಿಗೆ ಗುರುವಾರ ಇಂಗ್ಲಿಷ್‌ನಲ್ಲಿ ಸ್ಪಷ್ಟೀಕರಣದ ಸರಣಿ ಟ್ವೀಟ್‌ಗಳನ್ನು ಹರಿಬಿಡುತ್ತಾ ಡ್ಯಾಮೇಜ್‌ ಕಂಟ್ರೋಲ್‌ಗೆ ಪರದಾಡುತ್ತಿದ್ದಾರೆ. ಆದರೆ, ಅವರ ಸ್ಪಷ್ಟೀಕರಣದ ಟ್ವೀಟ್‌ಗಳಿಗಿಂತ ಹೆಚ್ಚು ಗಮನ ಸೆಳೆಯುತ್ತಿರುವುದು ಪಾಕಿಸ್ತಾನದಲ್ಲೂ ‘ಕನ್ನಡದ ಕಂಪು ಹರಡಿದ’ ಅವರ 22 ಸೀಟ್‌ ಮಾತು!