samachara
www.samachara.com
22 ಸೀಟ್‌ ಲೆಕ್ಕಾಚಾರ: ಯೋಧರ ತ್ಯಾಗವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆಯೇ ಬಿಜೆಪಿ?
ಸುದ್ದಿ ಸಾರ

22 ಸೀಟ್‌ ಲೆಕ್ಕಾಚಾರ: ಯೋಧರ ತ್ಯಾಗವನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆಯೇ ಬಿಜೆಪಿ?

ಭಾರತದ ಪೈಲಟ್‌ ಒಬ್ಬರು ಈಗ ಪಾಕಿಸ್ತಾನದ ವಶದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜತಾಂತ್ರಿಕ ಮಾರ್ಗದಲ್ಲಿ ನಡೆಯದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ವಿಚಾರ ಬಿಜೆಪಿಗೆ ತಿರುಗುಬಾಣವಾಗುವ ಸಾಧ್ಯತೆಯೂ ಇದೆ.

“ಸೈನಿಕರು ಹುತಾತ್ಮರಾದರು, ಒಂದೊಂದು ತೊಟ್ಟು ರಕ್ತಕ್ಕೂ ನಾನು ಸೇಡು ತೀರಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ಹೇಳಿದ್ದರು. ಅದನ್ನು ಮಾಡಿ ತೋರಿಸುತ್ತಿದ್ದಾರೆ. ಇಡೀ ದೇಶದ ಜನ ಇದನ್ನ ಸ್ವಾಗತ ಮಾಡಿದ್ದಾರೆ. ಸರ್ವ ಪಕ್ಷಗಳೂ ಸ್ವಾಗತ ಮಾಡಿವೆ. ಯುವಕರು ಕುಣಿದು ಸಂಭ್ರಮಿಸುತ್ತಿದ್ದಾರೆ. ಇದೆಲ್ಲದರ ಪರಿಣಾಮ ನಾಳೆ 22ಕ್ಕೂ ಹೆಚ್ಚು ಲೋಕಸಭಾ ಸೀಟ್‌ ಗೆಲ್ಲೋದಕ್ಕೆ ನಮಗೆ ಅನುಕೂಲ ಆಗುತ್ತೆ

ಭಾರತದ ವಾಯುಪಡೆಯ ಪೈಲಟ್‌ ಅಭಿನಂದನ್‌ ಅತ್ತ ಪಾಕಿಸ್ತಾನ ಸೇನೆಯ ವಶಕ್ಕೆ ಸಿಲುಕಿದ್ದರೆ, ಇತ್ತ ರಾಜ್ಯದ ಚಿತ್ರದುರ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೀಟು ಗೆಲ್ಲುವ ಲೆಕ್ಕಾಚಾರದ ಮಾತನಾಡಿದ್ದರು.

ಪುಲ್ವಾಮ ಘಟನೆಯ ದಿನದಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಕಳೆದ ನಾಲ್ಕು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ವಾಯುಪಡೆ ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಪಾಕಿಸ್ತಾನ ಸೇನೆ ಪ್ರತಿದಾಳಿ ನಡೆಸಿತ್ತು. ಬುಧವಾರ ಎರಡೂ ರಾಷ್ಟ್ರಗಳ ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿದ್ದು ಅಘೋಷಿತ ಯುದ್ಧ ಈಗಾಗಲೇ ಆರಂಭವಾಗಿದೆ.

ಈ ನಡುವೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಘೋಷಿಸಿದೆ. ಅಭಿನಂದನ್‌ ಸುರಕ್ಷಿತವಾಗಿ ವಾಪಸ್‌ ಬರಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದೇಶದ ಜನತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ರಾಜ್ಯ ಬಿಜೆಪಿ ನಾಯಕರು ಈ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ನೇರವಾದ ಮಾತುಗಳನ್ನೇ ಆಡಿದ್ದಾರೆ.

Also read: ವೈಮಾನಿಕ ದಾಳಿಗೆ ಭಾರತದ ಸಂಭ್ರಮ; ಮೋದಿಗೆ ಚುನಾವಣಾ ‘ಲಾಭ’ದ ಮುನ್ಸೂಚನೆ

ಪುಲ್ವಾಮ ಘಟನೆಯನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಬುಧವಾರ ಸಂಜೆಯ ಹೊತ್ತಿಗೆ ಪ್ರತಿಪಕ್ಷಗಳು ಸಣ್ಣದಾಗಿ ಉಸುರಿವೆ. ಅಷ್ಟೊತ್ತಿಗಾಗಲೇ ಯಡಿಯೂರಪ್ಪ 22 ಸೀಟ್‌ಗಳ ಮಾತನ್ನು ಆಡಿ ಆಗಿತ್ತು. ಯಡಿಯೂರಪ್ಪ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಇದಕ್ಕಾಗಿ ಯಡಿಯೂರಪ್ಪ ಗುರುವಾರ ಬೆಳಿಗ್ಗೆ ಡ್ಯಾಮೇಜ್‌ ಕಂಟ್ರೋಲಿಂಗ್ ಟ್ವೀಟ್‌ ಒಂದನ್ನು ಮಾಡಿದ್ದಾರೆ.

ಯಡಿಯೂರಪ್ಪ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, “ಗಡಿಯಲ್ಲಿ ಫೈಟ್ ಮಾಡೋರು ಯೋಧರು, ವೋಟು ಕೇಳೋರು ನಾವು. ಅವರು ಗಡಿಯಲ್ಲಿ ಪ್ರಾಣ ಒತ್ತೆಯಿಟ್ಟು ಹೋರಾಡೋದನ್ನು ನಾವು ವೋಟಿಗಾಗಿ ಉಪಯೋಗಿಸಿಕೊಳ್ಳಬಾರದು. ರಾಜಕೀಯ ನಾಯಕರ ಇಂತಹ ನಡವಳಿಕೆ ಅಪರಾಧ” ಎಂದಿದ್ದಾರೆ.

“ಯೋಧರಿಗೆ ಇಡೀ ದೇಶ ನಮನ ಸಲ್ಲಿಸಬೇಕು. ಅವರ ಕುಟುಂಬಗಳ ಬೆಂಬಲಕ್ಕೆ ನಿಲ್ಲಬೇಕು. ದೇಶದ ಜನರಿಗಾಗಿ ಯೋಧರು ಗಡಿಯಲ್ಲಿ ಪ್ರಾಣದ ಹಂಗುಬಿಟ್ಟು ಹೋರಾಟ ನಡೆಸುತ್ತಾರೆ. ಆದರೆ ನಾವೇ ಅಲ್ಲಿ ಬಟ್ಟೆ ಬಿಚ್ಚಿ ಹೋರಾಟ ಮಾಡಿದ್ವಿ ಎಂಬ ರೀತಿಯಲ್ಲಿ ಯೋಧರ ಕಾರ್ಯಾಚರಣೆಯನ್ನು ರಾಜಕೀಯವಾಗಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಬಳಸುವುದು ಶುದ್ಧ ಅವಿವೇಕಿತನ” ಎಂದು ರಮೇಶ್‌ ಕುಮಾರ್‌ ಹೇಳಿದ್ದಾರೆ.

“ಯೋಧರ ತ್ಯಾಗವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಆಘಾತಕಾರಿ ಹಾಗೂ ಅರ್ಥಮಾಡಿಕೊಳ್ಳಲಾಗದ ಅಸಹ್ಯಕರ ಬೆಳವಣಿಗೆ. ಮಡಿದ ಸೈನಿಕರ ನೋವು ಮಾಸುವ ಮುನ್ನವೇ ಬಿಜೆಪಿ ಸೀಟುಗಳ ಲೆಕ್ಕಾಚಾರದಲ್ಲಿ ತೊಡಗಿರುವುದು ದುರದೃಷ್ಟಕರ. ಯಾವ ದೇಶಭಕ್ತರು ಯೋಧರ ಸಾವಿನ ಲಾಭ ಪಡೆಯಲು ಮುಂದಾಗುವುದಿಲ್ಲ. ದೇಶದ್ರೋಹಿಗಳು ಮಾತ್ರ ಇಂತಹ ಕೆಲಸಕ್ಕೆ ಮುಂದಾಗುತ್ತಾರೆ” ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

“ಉಗ್ರಗಾಮಿಗಳ ವಿರುದ್ಧ ಹೋರಾಡಲು ಇಡೀ ದೇಶ ಒಂದಾಗಿ ಸೇನೆ ಹಾಗೂ ಕೇಂದ್ರ ಸರಕಾರದ ಬೆಂಬಲಕ್ಕೆ ನಿಂತಿದೆ. ಆದರೆ ರಾಜ್ಯದ ಬಿಜೆಪಿ ನಾಯಕರು ಮಾತ್ರ ಉಗ್ರರ ದಾಳಿ ಹಾಗೂ ಯುದ್ಧದ ವಿಚಾರಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಎಂಪಿ ಸೀಟುಗಳ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯೋಧರ ತ್ಯಾಗವನ್ನು ಬಿಜೆಪಿ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ” ಎಂದಿದ್ದಾರೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ.

ಯೋಧರ ಹೆಸರಿನಲ್ಲಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ ವೋಟ್‌ ಬೆಳೆ ತೆಗೆಯಲು ಮುಂದಾಗಿದೆ. ಆದರೆ, ಬಿಜೆಪಿ ನಾಯಕರು ಈ ಆರೋಪವನ್ನು ಕಾಂಗ್ರೆಸ್‌ ತಲೆಗೆ ಕಟ್ಟಲು ಟ್ವೀಟ್‌ ಸಮರ ಸಾರಿದ್ದಾರೆ. #CongressPakistanUnited ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಬಿಜೆಪಿ ನಾಯಕರು ಕಾಂಗ್ರೆಸ್‌ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲುತ್ತಿದೆ ಎಂಬ ಆರೋಪದಲ್ಲಿ ತೊಡಗಿದ್ದಾರೆ.

ದೇಶದ ಕೃಷಿ ಬಿಕ್ಕಟ್ಟು, ನಿರುದ್ಯೋಗ, ನೋಟು ರದ್ದು, ಆರ್ಥಿಕ ಸಮಸ್ಯೆಗಳನ್ನೆಲ್ಲಾ ಚುನಾವಣೆಯಲ್ಲಿ ಎದುರುಗೊಳ್ಳಲು ಕಷ್ಟವಾಗುವ ಕಾರಣಕ್ಕೆ ಹೊಸದೇ ‘ರಣತಂತ್ರ’ಗಳನ್ನು ಮಾಡಬೇಕಾದ ಅನಿರ್ವಾಯತೆ ಬಿಜೆಪಿಗೂ ಇತ್ತು. ದಿನದಿಂದ ದಿನಕ್ಕೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಆದರೆ, ಭಾರತದ ಪೈಲಟ್‌ ಒಬ್ಬರು ಈಗ ಪಾಕಿಸ್ತಾನದ ವಶದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ರಾಜತಾಂತ್ರಿಕ ಮಾರ್ಗದಲ್ಲಿ ನಡೆಯದಿದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ವಿಚಾರ ಬಿಜೆಪಿಗೆ ತಿರುಗುಬಾಣವಾಗುವ ಸಾಧ್ಯತೆಯೂ ಇದೆ.

Also read: ಪಾಕ್‌ ವಶದಲ್ಲಿ ಭಾರತದ ಸೈನಿಕ; ಆಂಕರ್‌ಗಳು, ರಾಜಕಾರಣಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ